ಭಾನುವಾರ, ಏಪ್ರಿಲ್ 11, 2021
25 °C

ಹೊಸ ಯಳನಾಡಿಗೆ ಬೇಕು ಅಭಿವೃದ್ಧಿಯ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು ತಾಲ್ಲೂಕು ಕೇಂದ್ರದಿಂದ ಕೇವಲ ಹತ್ತು ಕಿ.ಮೀ. ದೂರದಲ್ಲಿರುವ ಹೊಸ ಯಳನಾಡು ಗ್ರಾಮದ ಹೆಸರಿನಲ್ಲಿ `ಹೊಸ~ ಎಂಬ ಪದವಿದ್ದರೂ ಸಮಸ್ಯೆಗಳು ಮಾತ್ರ ಹಳೆಯದ್ದೇ ಆಗಿವೆ.ಸುಮಾರು 400 ಮನೆಗಳನ್ನು ಹೊಂದಿರುವ ಈ ಗ್ರಾಮದಲ್ಲಿ 2,400 ಜನಸಂಖ್ಯೆ ಹೊಂದಿದೆ. ಈ ಗ್ರಾಮದಲ್ಲಿ ನಿರ್ಮಲ ಕರ್ನಾಟಕ ಯೋಜನೆ ಅಡಿ, ಶೌಚಾಲಯ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿತ್ತು. ಅದರಂತೆ ಕಾಮಗಾರಿ ಆರಂಭಿಸಲಾಯಿತು. ಕಾಮಗಾರಿ ಆರಂಭಗೊಂಡು ಮೂರ‌್ನಾಲ್ಕು ವರ್ಷ ಕಳೆದರೂ ಶೌಚಾಲಯಗಳಿಗೆ ಇನ್ನೂ ಬಾಗಿಲನ್ನೇ ಅಳವಡಿಸಿಲ್ಲ. ಹೊಸಯಳವನಾಡು ಗ್ರಾಮದ  ಪಕ್ಕದ ಆಲೂರಿನಲ್ಲಿ ಹಿಂದಿನ ವರ್ಷ ಶೌಚದ ಗುಂಡಿಯಲ್ಲಿ ಬಿದ್ದು ಮಗುವೊಂದು ಸಾವನ್ನಪ್ಪಿದ್ದು ನೆನಪಿನಲ್ಲಿದ್ದರೂ, ಈ ಊರಿನಲ್ಲಿ ಕೆಲವು ಕಡೆ ಶೌಚದ ಗುಂಡಿಗಳನ್ನು ಮುಚ್ಚದೇ ಬಿಟ್ಟಿರುವುದು ಹದಗೆಟ್ಟ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಜನತೆ ಶೌಚಕ್ಕೆ ಬಯಲಿಗೆ ಹೋಗುವುದು ಮಾತ್ರ ತಪ್ಪಿಲ್ಲ.ಗ್ರಾಮದ ಇತಿಹಾಸ

ಈ ಪ್ರದೇಶದಲ್ಲಿ `ಯಳವರು~ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದರಿಂದ `ಯಳೂರು~, `ಯಳಯೂರು~ ಎಂಬ ಹೆಸರು ಬಂದಿದೆ. ನಂತರ ಬಾಯಿಂದ ಬಾಯಿಗೆ ಹೆಸರು ಹರಡಿ ಯಳನಾಡು ಆಗಿ ಬದಲಾಗಿರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ. ಹಳೇ ಯಳನಾಡು ಗ್ರಾಮ ವೇದಾವತಿ ನದಿಗೆ ಹೊಂದಿಕೊಂಡಿತ್ತು. ಅಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದ್ದರಿಂದ, ಗ್ರಾಮಸ್ಥರು ನದಿಯಿಂದ 2 ಕಿ.ಮೀ. ದೂರದಲ್ಲಿದ್ದ ದಿಬ್ಬದ ಪ್ರದೇಶಕ್ಕೆ ಬಂದು ಹೊಸ ಊರು ಕಟ್ಟಿಕೊಂಡರು. ತದನಂತರ ಒಂದೇ ಆಗಿದ್ದ ಯಳನಾಡು, ಹಳೇ ಯಳನಾಡು ಮತ್ತು ಹೊಸ ಯಳನಾಡು ಎಂಬ ಎರಡು ಊರಾದವು ಎಂದು ಹಿರಿಯರು ಹೇಳುತ್ತಾರೆ.ಮಹಾಭಾರತದ ಸಂಪರ್ಕ

ವನವಾಸದ ಕಾಲದಲ್ಲಿ ಪಾಂಡವರು ಯಳನಾಡು ಗ್ರಾಮದಲ್ಲಿ ನೆಲೆಸಿದ್ದರು. ಭೀಮ ಕೃಷಿ ಮಾಡಲು ಹೋಗುತ್ತಿದ್ದ. ಒಮ್ಮೆ ಗ್ರಾಮದಿಂದ 1 ಕಿ.ಮೀ. ದೂರದಲ್ಲಿ ಹಿರಿಯೂರು-ಧರ್ಮಪುರ ರಸ್ತೆಯಲ್ಲಿ ಬೇಸಾಯ ಮಾಡುತ್ತಿದ್ದಾಗ ಬಂಡೆಯೊಂದಕ್ಕೆ ಭೀಮನ ಮೇಟಿ ಸಿಕ್ಕಿಕೊಂಡು ಸಿಡಿದು ಅಲ್ಲಿಂದ ಆರೇಳು ಕಿ.ಮೀ. ದೂರದಲ್ಲಿ ಈಗಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬಿದ್ದಿತಂತೆ. ಮೇಟಿ ಬಿದ್ದ ಜಾಗವೇ ಪ್ರಸ್ತುತ ಮೇಟಿಕುರ್ಕೆ ಗ್ರಾಮವಾಯಿತು ಎಂಬ ಜನಜನಿತ ಕತೆಯಿದ್ದು, ಈಗಲೂ ಯಳನಾಡು ಸಮೀಪ ಭೀಮನ ಹೆಸರಿನ ಬಂಡೆಯನ್ನು ಕಾಣಬಹುದಾಗಿದೆ.ಗ್ರಾಮದಲ್ಲಿರುವ ಸೌಲಭ್ಯಗಳು

ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಸಮುದಾಯ ಭವನ, ಗ್ರಾಮ ಪಂಚಾಯ್ತಿ ಕಟ್ಟಡ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪಿಯು ಕಾಲೇಜು, ಅಂಗನವಾಡಿ ಕೇಂದ್ರ, ಮುಕ್ತಾಯ ಹಂತದಲ್ಲಿರುವ ರಂಗಮಂದಿರ, ನೂತನ ಬಸ್ ನಿಲ್ದಾಣ, ಸರ್ವಧರ್ಮ ಸಮನ್ವಯದ ಸದ್ಗುರು ಗುಡಿಕಲ್ ಅಲ್ಲಿಪೀರ್ ಸ್ವಾಮೀಜಿ ಆಶ್ರಮ ಇಲ್ಲಿವೆ.ಗ್ರಾಮದ ಭೋವಿ ಕಾಲೊನಿಯ ನಾಗವೇಣಿ  ಕಾಲೊನಿಯಲ್ಲಿ ರಸ್ತೆ, ಚರಂಡಿ ಇಲ್ಲ. ಕುಡಿಯುವ ನೀರಿಗೆಂದು ನಿರ್ಮಿಸಿರುವ ತೊಟ್ಟಿಯಲ್ಲಿ ನೀರನ್ನು ಬಳಸುವುದಕ್ಕಿಂತ ಸೋರಿ ಹೋಗುವುದೇ ಹೆಚ್ಚು. ನಿರ್ಮಲ ಕರ್ನಾಟಕ ಯೋಜನೆಯಡಿ ನಿರ್ಮಿಸಿರುವ ಶೌಚಾಲಯಗಳಿಗೆ ಬಾಗಿಲು ಅಳವಡಿಸಿಲ್ಲ. ಗುಂಡಿಯನ್ನು ತೋಡಿ ರಿಂಗ್ ಅಳವಡಿಸದೆ ಹೋಗಿದ್ದಾರೆ. ಸಮಸ್ಯೆಗಳ ದೊಡ್ಡ ಪಟ್ಟಿಯೇ ಇಲ್ಲಿದೆ. ಸದ್ಯಕ್ಕೆ ವಿದ್ಯುತ್ ವ್ಯವಸ್ಥೆ, ನೀರು, ಶೌಚಾಲಯದ ಸಮಸ್ಯೆ ಬಗೆಹರಿಯಬೇಕು ಎಂದು ಒತ್ತಾಯಿಸುತ್ತಾರೆ.ತಿಂಗಳಿಗೊಮ್ಮೆ ಚರಂಡಿ ಸ್ವಚ್ಛಗೊಳಿಸುವುದು ಕಷ್ಟ. ರೋಗಗಳಿಗೆ ಇದು ತವರು ಮನೆ. ಬಿಪಿಎಲ್ ಪಡಿತರ ಚೀಟಿ ಇರುವ ಕಾರಣ ದಿನಸಿ ಸಾಮಗ್ರಿಗೆ ಸಮಸ್ಯೆ ಇಲ್ಲ. ಗ್ರಾಮದಲ್ಲಿ ಸ್ವಚ್ಛತೆ ಮತ್ತು ನೀರಿನ ಸಮಸ್ಯೆ ಇದ್ದು, ಈ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದವರು ಮುಂದಾಗಬೇಕು ಎನ್ನುತ್ತಾರೆ ವೆಂಕಟಮ್ಮ.ಬಿ. ಗಂಗಾಧರಪ್ಪ ಹಿರಿಯೂರಿನಿಂದ ಯಳನಾಡು ಮಾರ್ಗವಾಗಿ ಕೋಡಿಹಳ್ಳಿಯವರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳನ್ನು ಓಡಿಸಬೇಕು. ವೇದಾವತಿ ನದಿಗೆ ಬ್ಯಾರೇಜ್ ನಿರ್ಮಿಸಬೇಕು. ಬ್ಯಾರೇಜ್ ನಿರ್ಮಾಣಕ್ಕೆ ಹಣ ಮಂಜೂರಾಗಿದೆ ಎಂದು ಆರೇಳು ವರ್ಷಗಳಿಂದ ಜನಪ್ರತಿನಿಧಿಗಳು ಹೇಳುತ್ತಲೇ ಇದ್ದಾರೆ. ಆದರೆ, ಕಾಮಗಾರಿ ಮಾತ್ರ ಆರಂಭವಾಗಿಲ್ಲ.  ಬ್ಯಾರೇಜ್‌ನಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡಬೇಕು. ಶಾಲಾ ಮೈದಾನದಲ್ಲಿ ಕ್ರೀಡಾಂಗಣ ನಿರ್ಮಿಸಬೇಕು. ವೃತ್ತಿಪರ ಕಾಲೇಜು ಆರಂಭಿಸಬೇಕು. ಅಂಗನವಾಡಿ ಮತ್ತು ಪ್ರೌಢಶಾಲೆಗೆ ಆವರಣ ಗೋಡೆ ನಿರ್ಮಿಸಬೇಕು ಎನ್ನುವುದು ಅವರ  ಒತ್ತಾಸೆ.ಗ್ರಾಮದ ಇಮಾಂಸಾಬ್  ಗ್ರಾಮದ ರಸ್ತೆಗಳಿಗೆ ಹಾಕಿದ್ದ ಡಾಂಬರು ಕಿತ್ತು ಹೋಗಿದ್ದು, ಅದನ್ನು ಸರಿಪಡಿಸಬೇಕು. ಬಡವರಿಗೆ ವಸತಿ ಸೌಕರ್ಯ ಕಲ್ಪಿಸಬೇಕು ಎನ್ನುತ್ತಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.