ಮಂಗಳವಾರ, ಮೇ 11, 2021
26 °C
ಚಿತ್ರ: ಆಟೋರಾಜ

ಹೊಸ ರಂಗು, ಹಳೆಯ ಗುಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ರಂಗು, ಹಳೆಯ ಗುಂಗು

ನಿರ್ಮಾಪಕರು: ಗಿರೀಶ್ ಮತ್ತು ವಿಶ್ವಾಸ್ ಕಾರ್ಯಪ್ಪ

ನಿರ್ದೇಶಕ: ಉದಯ್ ಪ್ರಕಾಶ್

ತಾರಾಗಣ: ಗಣೇಶ್, ಭಾಮಾ, ದೀಪಿಕಾ ಕಾಮಯ್ಯ, ಅರುಣ್ ಸಾಗರ್, ಯತಿರಾಜ್, ರವಿಕುಮಾರ್, ಮಮತಾ ರಾವತ್, ಅಮಿತ್, ಸಾಧು ಕೋಕಿಲ, ಮೈಕೋ ಸುಧಾಕರ್, ಮತ್ತಿತರರು.
ಎಂಬತ್ತರ ದಶಕದಲ್ಲಿ ಶಂಕರ್‌ನಾಗ್ ನಟಿಸಿದ `ಆಟೋರಾಜ' ಒಂದು ಜನಪ್ರಿಯ ಚಿತ್ರ. ಪ್ರೇಮಕಥೆ ಮತ್ತು ಆಟೋ ಚಾಲಕರ ಬದುಕು ಎರಡನ್ನೂ ಬೆಸೆದ ಈ ಚಿತ್ರದಲ್ಲಿ ಸಾಮಾಜಿಕ ಜೀವನದ ಹಲವು ಮಜಲುಗಳ ಚಿತ್ರಣವೂ ಇತ್ತು. ಇದೇ ನೆಪದಲ್ಲಿ ಆಟೋ ಇಮೇಜ್ ಅನ್ನು ಬಂಡವಾಳವಾಗಿರಿಸಿಕೊಂಡು ಜನಿಸಿದ ಚಿತ್ರಗಳೂ ಅನೇಕ. ಹೊಸ `ಆಟೋರಾಜ' ನೇರವಾಗಿ ಹಳೆಯ ಆಟೋರಾಜನನ್ನು ಆವಾಹಿಸಿಕೊಳ್ಳುವ ಪ್ರಯತ್ನದ ಸಿನಿಮಾ.

ಹೂ ಮನಸ್ಸಿನ ನಾಯಕನಿಗೆ ಸಿನಿಮಾ ನಟಿಯಾಗಬೇಕೆಂದು ನಗರಕ್ಕೆ ಬರುವ ಹಳ್ಳಿ ಹುಡುಗಿಯ ಮೇಲೆ ಪ್ರೀತಿ ಮೂಡುತ್ತದೆ. ಮುಂದೆ ನವಿರು ಪ್ರೀತಿಯ ಹೂರಣವಿದೆ ಎನ್ನುವ ಮೊದಲೇ ಅಂತ್ಯದ ತಿರುವಿನ ಸುಳಿವನ್ನು ನಿರ್ದೇಶಕರು ಬಿಟ್ಟುಕೊಡುತ್ತಾರೆ. ಪ್ರೀತಿಯ ಪಯಣ ಕನಸಿನಲ್ಲಿಯೇ ಸಾಗಿದರೂ ಅದು ಸಿಹಿ ಗುಳಿಗೆ. ಗಣೇಶ್ ಮತ್ತು ಭಾಮಾ ಅಭಿನಯ ಶ್ರಮದ ಫಲವಿದು. ಆಟೋರಿಕ್ಷಾವೇ ಬದುಕಾಗಿರುವ ನಾಯಕ ಆಕಸ್ಮಿಕವಾಗಿ ರೇಡಿಯೊ ಕಾರ್ಯಕ್ರಮ ನಿರೂಪಕನೂ ಆಗುತ್ತಾನೆ. ಮಾತಿನಲ್ಲಿಯೇ ಸಮಸ್ಯೆಗೆ ಪರಿಹಾರ ಕೊಟ್ಟು ಜನಮನ ಗೆಲ್ಲುವ ಆರ್‌ಜೆಗಳ ಪರಿಕಲ್ಪನೆಯ ಪರಂಪರೆಯೂ ಚಿತ್ರರಂಗದಲ್ಲಿ ದೊಡ್ಡದಿದೆ. `ಮುಂಗಾರು ಮಳೆ'ಯಲ್ಲಿ ಮೊಲ ಪ್ರೇಮಿಯ ಸಂಗಾತಿಯಾಗುವಂತೆ, ಇಲ್ಲಿ ಬೆಕ್ಕು ನಾಯಕನಿಗೆ ಪ್ರೀತಿಯನ್ನು ತೋರಿಸುತ್ತದೆ. ಬೆಕ್ಕು ಅಪಶಕುನವಲ್ಲ ಎಂದು ನಾಯಕನಿಂದ ಹೇಳಿಸಿದರೂ ಚಿತ್ರಕ್ಕೆ ನೀಡುವ ಅಂತ್ಯ ಹಳೆಯ ನಂಬಿಕೆಯನ್ನೇ ಒಪ್ಪಿಕೊಂಡಂತೆ ತೋರುತ್ತದೆ.ಶಂಕರ್‌ನಾಗ್ ಇಮೇಜಿನ ಅಂಗಿಯನ್ನು ನಟ ಗಣೇಶ್‌ಗೆ ತೊಡಿಸುವ ಪ್ರಯತ್ನವಿದು. ಈ ಇಮೇಜ್ ಬಳಕೆ ಶಂಕರ್‌ನಾಗ್ ಅವರ ಅಭಿನಯ ಶೈಲಿ, ಧ್ವನಿ ಅನುಕರಣೆಗಳಿಗೆ ಸೀಮಿತ. ಚಿತ್ರದುದ್ದಕ್ಕೂ ಶಂಕರ್‌ನಾಗ್‌ರ ಪ್ರತಿರೂಪವನ್ನು ಕಾಣಿಸುವ ಸಾಹಸವಿದೆಯೇ ವಿನಾ ಅವರ ಸಿನಿಮಾದ ಕಲಾತ್ಮಕತೆ ಅಥವಾ ಸೂಕ್ಷ್ಮತೆಯನ್ನಾಗಲೀ ಅನುಕರಿಸುವುದಿಲ್ಲ. ಪ್ರೀತಿಯನ್ನು ಕೇಂದ್ರವಾಗಿರಿಸಿಕೊಳ್ಳುವ ಕಥನದಲ್ಲಿ ಜೀವನದ ಸೆಲೆಗಳ ಹುಡುಕಾಟ ಇದೆಯಾದರೂ ಅದು ಬದುಕನ್ನು ಪ್ರತಿನಿಧಿಸುವುದಿಲ್ಲ. ತ್ರಿಕೋನ ಪ್ರೀತಿ, ಎಫ್.ಎಂ. ಪುರಾಣ, ನೀಲಿ ಚಿತ್ರಗಳ ದಂಧೆ, ಸಾವಿನೊಂದಿಗೆ ಕರಗುವ ಸತ್ಯ ಇದೆಲ್ಲವೂ ಬಿಡಿಬಿಡಿಯಾಗಿ ಹರಡುವ ಕಾರಣಕ್ಕೆ ಚಿತ್ರ ಕಾಡಿಸುವ ಗುಣವನ್ನು ಕಳೆದುಕೊಳ್ಳುತ್ತದೆ.ನಿರೂಪಣೆಯಲ್ಲಿನ ನಾವೀನ್ಯದ ಕೊರತೆಯೂ ಮತ್ತೊಂದು ಕಾರಣ. ಎಲ್ಲಿಯೋ ನೋಡಿದಂತಿದೆ ಎನಿಸುವ ಸನ್ನಿವೇಶಗಳೂ ಆಗಾಗ್ಗೆ ಎದುರಾಗುತ್ತವೆ. ಅನುಕರಣೆಯ ಪ್ರವೃತ್ತಿ ಶಂಕರ್‌ನಾಗ್ ಅವರನ್ನು ದಾಟಿ ಪರಭಾಷಾ ಚಿತ್ರಗಳತ್ತಲೂ ಹಾದು ಬರುತ್ತದೆ. ವ್ಯಾಪಾರೀ ಚಿತ್ರಗಳ ಮೂಲ ಧಾತುಗಳಾದ ದೃಶ್ಯಗಳ ವೈಭವೀಕರಣ ಮತ್ತು ಮಾತಿನ ಸೌಧ ಎರಡಕ್ಕೂ ಬರ. `ಕಳ್ಳ ಮಳ್ಳ ಸುಳ್ಳ' ಎಂಬ ಹಾಸ್ಯ ಪ್ರಧಾನ ಚಿತ್ರ ನೀಡಿ ಗೆದ್ದಿದ್ದ ಉದಯ್ ಪ್ರಕಾಶ್ ಗಂಭೀರ ಕಥನದ ಹೆಣಿಗೆಯಲ್ಲಿ ಹಲವೆಡೆ ಎಡವಿದ್ದಾರೆ.ಅನುಕರಣೆಯ ಅನಿವಾರ್ಯತೆ ಮತ್ತು ಹಳೆಯ ಇಮೇಜಿನ ಆಚೆ ಗಣೇಶ್ ಹೊಸ ಹೊಳೆಯಲ್ಲಿ ಮಿಂದೆದ್ದಿದ್ದಾರೆ. ಭಾಮಾ ಲವಲವಿಕೆ, ದೀಪಿಕಾ ದಿಟ್ಟತನ ವೈಫಲ್ಯಗಳನ್ನು ಮರೆಮಾಚಿಸಬಲ್ಲವು. ಸಹ ಕಲಾವಿದರ ಕೊಡುಗೆಯನ್ನೂ ಕಡೆಗಣಿಸುವಂತಿಲ್ಲ. ಅರ್ಜುನ್ ಜನ್ಯರ ಸಂಗೀತದಲ್ಲಿ ಸೊಗಸಿದೆ. ಆದರೆ ಸನ್ನಿವೇಶಗಳಲ್ಲಿ ಅದಕ್ಕೆ ಪೂರಕ ಲಹರಿಗಳ ಸೃಷ್ಟಿ ಇಲ್ಲಿ ಕಾಣಿಸುವುದಿಲ್ಲ. ಮಂಜುನಾಥ್ ನಾಯಕ್ ಛಾಯಾಗ್ರಹಣ ಮೆಚ್ಚುವಂತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.