ಗುರುವಾರ , ಜೂನ್ 24, 2021
23 °C

ಹೊಸ ರೈಲು: ಪ್ರವಾಸೋದ್ಯಮಕ್ಕೆ ಉತ್ತೇಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ರೈಲು: ಪ್ರವಾಸೋದ್ಯಮಕ್ಕೆ ಉತ್ತೇಜನ

ಹೊಸದಾಗಿ ಮೂರು ಪ್ಯಾಸೆಂಜರ್ ಮತ್ತು ಆರು ಎಕ್ಸ್‌ಪ್ರೆಸ್ ರೈಲುಗಳನ್ನು ಆರಂಭಿಸಿರುವುದು ರಾಜ್ಯದ ರೈಲ್ವೆ ಪ್ರಯಾಣಿಕರ ಪಾಲಿಗೆ ಶುಭ ಸುದ್ದಿಯಾಗಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವಾಗಲಿದ್ದು, ರಾಜ್ಯದ ಆರ್ಥಿಕ ಅಭಿವೃದ್ಧಿಗೂ ಪೂರಕವಾಗಿರಲಿದೆ.  ರೈಲ್ವೆ ಬಜೆಟ್, ರಾಜ್ಯದ ಜನತೆಯ ಪಾಲಿಗೆ ಪರವಾಗಿಲ್ಲ ಎಂಬ ಭಾವನೆ ಮೂಡಿಸುವಲ್ಲಿ ಸಫಲವಾಗಿದೆ.ಎಂಟು ವರ್ಷಗಳಿಂದ ಪ್ರಯಾಣ ದರ  ಹೆಚ್ಚಳ ಮಾಡಿರಲಿಲ್ಲ. ಈಗ ಹೆಚ್ಚಿಸಿರುವ ದರಗಳೂ ಪ್ರಯಾಣಿಕರಿಗೆ ಹೆಚ್ಚಿನ ಹೊರೆಯನ್ನೇನೂ ಹೇರುವುದಿಲ್ಲ. ರೈಲ್ವೆಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಂಪನ್ಮೂಲಗಳ ಅಗತ್ಯ ಇತ್ತು.ಹೊಸ ಪ್ಯಾಸೆಂಜರ್ ರೈಲುಗಳಾದ ಮೈಸೂರು - ಶ್ರವಣಬೆಳಗೊಳ, ಮೈಸೂರು ಚಾಮರಾಜನಗರ ಮತ್ತು ಮೈಸೂರು ಬೀರೂರು ವಯಾ ಅರಸಿಕೆರೆ   -ಎಲ್ಲವೂ ಪ್ರತಿ ದಿನ ಸಂಚರಿಸಲಿದ್ದು, ಮೈಸೂರು ಪ್ರಾಂತ್ಯದ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸಿಕೊಡಲಿವೆ.ಹೊಸ ರೈಲುಗಳಾದ ಯಶವಂತಪುರ - ಕೊಚುವೆಲಿ ಎ.ಸಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ), ಬೆಂಗಳೂರು - ಚೆನ್ನೈ ಎ.ಸಿ ಡಬಲ್ ಡೆಕ್ಕರ್ (ಪ್ರತಿ ದಿನ), ಬೀದರ್ - ಸಿಕಂದರಾಬಾದ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ವಾರದಲ್ಲಿ 6 ದಿನ), ಮೈಸೂರು - ಸಾಯಿ ನಗರ್ ಶಿರಡಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ಮತ್ತು ಸೊಲ್ಲಾಪುರ ಯಶವಂತಪುರ ವಯಾ ಗುಲ್ಬರ್ಗಾ (ವಾರದಲ್ಲಿ 3 ಬಾರಿ) ರಾಜ್ಯದ ಪ್ರಯಾಣಿಕರ ಅನುಕೂಲತೆ  ಹೆಚ್ಚಿಸಲಿವೆ.ಮೈಸೂರು ಕರ್ನಾಟಕ ಜನತೆಗೆ ಹೆಚ್ಚು ಸೌಲಭ್ಯ ಕಲ್ಪಿಸಿಕೊಡುವುದರ ಉತ್ಸಾಹದಲ್ಲಿ ಉತ್ತರ ಕರ್ನಾಟಕ ಭಾಗವನ್ನು ಕೆಲಮಟ್ಟಿಗೆ ನಿರ್ಲಕ್ಷಿಸಿರುವುದೂ ಕಂಡು ಬರುತ್ತದೆ.ಕೋಲಾರಕ್ಕೆ ಹೊಸ ಬೋಗಿ ತಯಾರಿಕೆ ಕಾರ್ಖಾನೆ ಮತ್ತು ಬೆಂಗಳೂರಿಗೆ ತರಬೇತಿ ಕೇಂದ್ರ ತರಲು ಆಸಕ್ತಿ ತೋರಿರುವ ರೈಲ್ವೆ ರಾಜ್ಯ ಸಚಿವ ಮುನಿಯಪ್ಪ ಅವರು, ಒಂದರ್ಥದಲ್ಲಿ ರಾಜ್ಯದ ಜನತೆಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೂ, ರಾಜ್ಯದ ಇತರ ಭಾಗಗಳಿಗೂ ಇದೇ ಬಗೆಯಲ್ಲಿ ಕೆಲಮಟ್ಟಿಗಾದರೂ ನ್ಯಾಯ ಒದಗಿಸಲು ಮನಸ್ಸು ಮಾಡಬಹುದಾಗಿತ್ತು. ಹೊಸ ರೈಲುಗಳ ಆರಂಭದ ವಿಷಯದಲ್ಲಿ ಸಮಗ್ರ ಕರ್ನಾಟಕವನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡದಿರುವುದು ಕಂಡು ಬರುತ್ತದೆ.ರೈಲ್ವೆ ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಖಾಸಗಿ ಪಾಲುದಾರಿಕೆಗೆ ಇನ್ನಷ್ಟು ಒತ್ತು, ರೈಲು ನಿಲ್ದಾಣಗಳ ನಿರ್ವಹಣೆ - ಸ್ವಚ್ಛತೆಗೆ ಆದ್ಯತೆ. ರೈಲ್ವೆ ಸುರಕ್ಷತಾ ಆಯೋಗ ರಚನೆ ಮುಂತಾದವು ಉತ್ತಮ ನಿರ್ಧಾರವಾಗಿವೆ.ಆಧುನಿಕ ಚಿಂತನೆ: ರೈಲ್ವೆಗೆ ಆಧುನಿಕ, ಸಮಗ್ರ ತರಬೇತಿ ಪಡೆದ ಮತ್ತು ಅತ್ಯಾಧುನಿಕ ಸಲಕರಣೆಗಳಿಂದ ಸನ್ನದ್ಧ ಸ್ಥಿತಿಯಲ್ಲಿ ಇರುವ ಪ್ರಕೋಪ ನಿರ್ವಹಣಾ ವ್ಯವಸ್ಥೆಯ ಅಗತ್ಯ ಇದೆ. ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ  ರಕ್ಷಣಾ ಮತ್ತು  ಪರಿಹಾರ ತಂಡಗಳ ಕಾರ್ಯಾಚರಣೆಗೆ ವಿಶೇಷ ತರಬೇತಿ ಪಡೆದ ಸಿಬ್ಬಂದಿಗಾಗಿ ಬೆಂಗಳೂರು ಸೇರಿದಂತೆ ಮೂರು ಕಡೆಗಳಲ್ಲಿ `ಸುರಕ್ಷತಾ ಗ್ರಾಮ~ ಹೆಸರಿನ ತರಬೇತಿ ಕೇಂದ್ರಗಳನ್ನು ಆರಂಭಿಸುತ್ತಿರುವುದು ಇಲಾಖೆಯು ಆಧುನಿಕವಾಗಿ ಚಿಂತಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.ಕರ್ನಾಟಕ ರಾಜ್ಯ ಸರ್ಕಾರದ ವೆಚ್ಚ ಹಂಚಿಕೊಳ್ಳುವ ಸೂತ್ರದ ಅನ್ವಯ, ಗದಗ - ಹಾವೇರಿ, ಗದಗ - ವಾಡಿ, ಚಿಕ್ಕಬಳ್ಳಾಪುರ- ಪುಟ್ಟಪರ್ತಿ ಮತ್ತು ಶ್ರೀನಿವಾಸಪುರ- ಮದನಪಲ್ಲಿ ಹೊಸ ರೈಲು ಮಾರ್ಗಗಳನ್ನು ಅನುಮೋದನೆಗಾಗಿ ಯೋಜನಾ ಆಯೋಗಕ್ಕೆ ಕಳಿಸಿರುವುದು ಕೂಡ ರಾಜ್ಯದಲ್ಲಿನ ರೈಲ್ವೆ ಅಭಿವೃದ್ಧಿಗೆ ಇಲಾಖೆಯು ಆಸಕ್ತಿ ತಳೆದಿರುವುದರ ದ್ಯೋತಕವಾಗಿದೆ.

 

ಚಿತ್ರದುರ್ಗ ಮಾರ್ಗವಾಗಿ ತುಮಕೂರು- ದಾವಣಗೆರೆ ಹೊಸ ರೈಲು ಮಾರ್ಗ, ಬೆಂಗಳೂರು - ಮಂಗಳೂರು ಹಗಲು ರೈಲು,  ಗುಲ್ಬರ್ಗ  ರೈಲ್ವೆ ವಲಯ ಮತ್ತಿತರ ಬೇಡಿಕೆಗಳು ಈ ಬಾರಿಯೂ ನೆರವೇರಿಲ್ಲ. ಹಲವು ಮಿತಿಗಳ ಮಧ್ಯೆಯೂ, 2012-13ನೇ ಸಾಲಿನ ರೈಲ್ವೆ ಬಜೆಟ್, ರಾಜ್ಯದ ಜನತೆಯ ಪಾಲಿಗೆ ಪರವಾಗಿಲ್ಲ ಎನ್ನುವ ಭಾವನೆ ಮೂಡಿಸುವಲ್ಲಿ ಸಫಲವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.