ಹೊಸ ರೈಲು ಮಾರ್ಗಕ್ಕೆ ಗ್ರಾಮಸ್ಥರ ವಿರೋಧ
ಕೋಲಾರ: ವೈಟ್ಫೀಲ್ಟ್- ಕೋಲಾರ ನಡುವೆ ಉದ್ದೇಶಿತ ಹೊಸ ಬಿಜಿ ರೈಲು ಮಾರ್ಗ ನಿರ್ಮಾಣ ಬೇಡ ಎಂದು ಆಗ್ರಹಿಸಿ ತಾಲ್ಲೂಕಿನ ಹಲವು ಗ್ರಾಮಗಳ ನಿವಾಸಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಧರಣಿ ನಡೆಸಿದರು.
ಈ ಮಾರ್ಗದಲ್ಲಿರುವ ಅರಾಭಿಕೊತ್ತನೂರು, ಮಡೇರಹಳ್ಳಿ, ಚುಂಚದೇನಹಳ್ಳಿ, ಚಲುವನಹಳ್ಳಿ ಗ್ರಾಮಗಳ ಬಹುತೇಕರು ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದಾರೆ. 33.57 ಹೆಕ್ಟೇರ್ ಭೂಮಿಯನ್ನು ರೈಲು ಮಾರ್ಗಕ್ಕೆ ಸ್ವಾಧೀನಪಡಿಸಿಕೊಂಡರೆ ಅವರಿಗೆ ಬದುಕಲು ಅನ್ಯ ಮಾರ್ಗವೇ ಇಲ್ಲದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಬಂಗಾರಪೇಟೆಯಿಂದ ಕೋಲಾರಕ್ಕೆ ರೈಲು ವ್ಯವಸ್ಥೆ ಇದೆ. ಕೋಲಾರ- ಬಂಗಾರಪೇಟೆ ರೈಲು ಮಾರ್ಗದಲ್ಲೇ ವೈಟ್ಫೀಲ್ಡ್ ಮಾರ್ಗಕ್ಕೂ ಪ್ರತ್ಯೇಕ ಮಾರ್ಗ ಕಲ್ಪಿಸುವುದು ಉಚಿತ. ಹೊಸ ಮಾರ್ಗ ನಿರ್ಮಾಣದಿಂದ ನೂರಾರು ರೈತರಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿದರು.
ನೈರುತ್ಯ ರೈಲ್ವೆ ಉಪಮುಖ್ಯ ಎಂಜಿನಿಯರ್, ಈಗಾಗಲೇ ಜಮೀನು ಗಳ ವಿವರಗಳೊಡನೆ ಪರಿ ಶೀಲನಾ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಭೂಸ್ವಾಧೀನ ಪ್ರಕ್ರಿಯೆ ಶುರು ಮಾಡುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿರುವುದು ಆತಂಕ ಮೂಡಿಸಿದೆ ಎಂದು ಹೇಳಿದರು.
ಉದ್ದೇಶಿತ ರೈಲು ಮಾರ್ಗ ನಿರ್ಮಾಣ ಯೋಜನೆಯ ಎಲ್ಲ ಪ್ರಕ್ರಿಯೆಗಳನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಈ ಮಾರ್ಗದ ಎಲ್ಲ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳೀಯರಾದ ಮಂಜುನಾಥ್, ವೆಂಕಟೇಶಪ್ಪ, ಸೋಮೇಗೌಡ, ನಾರಾಯಣಗೌಡ, ನಂಜೇಗೌಡ, ಸುರೇಶ, ರತ್ನಮ್ಮ, ಚಿಕ್ಕಮುನಿಯಪ್ಪ, ನಂಜುಂಡೇಗೌಡ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.