ಸೋಮವಾರ, ಅಕ್ಟೋಬರ್ 14, 2019
22 °C

ಹೊಸ ವರುಷ ಹೊಸ ಓದು

Published:
Updated:

ರಾಜ್ಯ ಕಂಡ ಅಪೂರ್ವ ಪತ್ತೆದಾರಿ ಕಾದಂಬರಿಕಾರ ಎನ್.ನರಸಿಂಹಯ್ಯ ಅವರ ಕಾದಂಬರಿ ಒಂದು ಕಾಲದಲ್ಲಿ ಯುವ ಓದುಗರಿಗೆ ಹುಚ್ಚು ಹಿಡಿಸಿತ್ತು. ಅವರು ಇತ್ತೀಚೆಗೆ ನಮ್ಮನ್ನು ಅಗಲಿರಬಹುದು; ಆದರೆ, ಅವರು ರಚಿಸಿದ ಕಾದಂಬರಿಗಳಿಗೆ ಈಗಲೂ ಬೇಡಿಕೆ ಕುಸಿದಿಲ್ಲ. ಬಹುತೇಕ ಹಳೆಯ ಕಾದಂಬರಿಗಳು ಕೇವಲ ಗ್ರಂಥಾಲಯಗಳಲ್ಲಿ ಮಾತ್ರ ಲಭ್ಯ.ಮಂಗಳೂರಿನ ಅಶೋಕ್ ಶೆಣೈ ಅವರಿಗೆ ನರಸಿಂಹಯ್ಯ ಕಾದಂಬರಿ ಎಂದರೆ ಪಂಚಪ್ರಾಣ. ಎನ್.ನರಸಿಂಹಯ್ಯ ಅವರ ಯಾವುದೇ ಕಾದಂಬರಿಯ ಹೆಸರನ್ನು ಕೇಳಿ ಅವರು ಥಟ್ಟನೆ ಉತ್ತರಿಸುತ್ತಾರೆ. ಅದು ನರಸಿಂಹಯ್ಯ ಅವರು ಪ್ರಕಟಿಸಿದ ಎಷ್ಟನೆ ಕಾದಂಬರಿ ಎಂಬುದನ್ನು, ಕಾದಂಬರಿಯ ವಸ್ತು ಏನು ಎಂಬುದನ್ನು ಅವರು ಹೇಳಬಲ್ಲರು.`ಉದ್ಯೋಗ ನಿಮಿತ್ತ ಅವರು ಈಗ ಕತಾರ್‌ನಲ್ಲಿ ನೆಲೆಸಿದ್ದಾರೆ. ಆದರೂ ನರಸಿಂಹಯ್ಯ ಅವರ ಕಾದಂಬರಿಯ ಆಕರ್ಷಣೆಯಿಂದ ಅವರು ಮುಕ್ತರಾಗಿಲ್ಲ. ಅವರು ಊರಿಗೆ ಆಗಮಿಸುವ ಮುನ್ನವೇ ಗೆಳೆಯರಿಗೆ ಓಲೆ ತರುಪಿರುತ್ತದೆ. - `ನರಸಿಂಹಯ್ಯ ಅವರ `ವಿಚಿತ್ರ ಕೊಲೆಗಾರ~ದ ಪ್ರತಿ ಸಿಕ್ಕಿದರೆ ತೆಗೆದಿಡು~, `ಚೋರಚೂಡಾಮಣಿ~, `ಕೊಲೆಯಾದವನ ಸಾಕ್ಷಿ~ ಕಾದಂಬರಿ ಓದುವ ಆಸೆಯಾಗಿದೆ~... ಗೆಳೆಯರು ಸಿಕ್ಕ ಸಿಕ್ಕ ಪುಸ್ತಕದ ಅಂಗಡಿ ಹುಡುಕಿ ಅವರಿಗಾಗಿ ನರಸಿಂಹಯ್ಯ ಅವರ ಕಾದಂಬರಿ ಪ್ರತಿ ತೆಗೆದಿಡಬೇಕು~ ಎನ್ನುತ್ತಾರೆ ಅವರ ಮಂಗಳೂರಿನ ಗೆಳೆಯರೊಬ್ಬರು. `ಅಕ್ಷರ ಪ್ರೀತಿ~ಯೇ ಹಾಗೆ. `ಮೋಹನ ಮುರಳಿಯಂತೆ... ಸಪ್ತಸಾಗರದಾಚೆ ನೆಲೆಸಿದರೂ `ತಾಯ್ನೆಲದ ಕೊಂಡಿ~ಯನ್ನು ಶಾಶ್ವತವಾಗಿ ಬಂಧಿಸುವ ವಿಶೇಷ ಶಕ್ತಿ ಅದಕ್ಕಿದೆ.ಹತ್ತು ವರ್ಷ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಿ; ಅಕ್ಷರಸ್ಥರ ಕೈಯಲ್ಲಿ ಬಿಡುವಿನ ವೇಳೆ ಸದಾ ಒಂದು ಪುಸ್ತಕ ಇರುತ್ತಿತ್ತು. ಕೆಲವರಂತೂ ಊಟ ಮಾಡುವಾಗಿನಿಂದ ಹಿಡಿದು ರಾತ್ರಿ ನಿದ್ದೆಗೆ ಜಾರುವವರೆಗೂ ಒಂದಿಲ್ಲೊಂದು ಪುಸ್ತಕ ಓದುವ ಹವ್ಯಾಸ ಹೊಂದಿರುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಒಂದೆರಡು ದಿನ ರಜಾ ಸಿಕ್ಕರೆ ಸಾಕು ಕಾಲೇಜಿನ ಗ್ರಂಥಾಲಯದ ಪುಸ್ತಕಗಳಿಗೆ ಭಾರಿ ಬೇಡಿಕೆ ಬಂದು ಬಿಡುತ್ತಿತ್ತು. ಸಾರ್ವಜನಿಕ ಗ್ರಂಥಾಲಯಗಳು ಗಿಜಿಗುಡುತಿದ್ದವು. ಪುಸ್ತಕವನ್ನು ಬೇರೆಯವರು ಎರವಲು ಪಡೆಯುವ ಮುನ್ನವೇ ಪಡೆಯಬೇಕೆಂಬ ಹಂಬಲ. ಕೆಲವರಂತೂ ತಮ್ಮಿಷ್ಟದ ಕಾದಂಬರಿಯನ್ನೋ, ಇನ್ನಾವುದೋ ಪುಸ್ತಕ ಪಡೆಯಲು ವಾರಗಟ್ಟಲೆ ಛಾತಕ ಪಕ್ಷಿಯಂತೆ ಕಾಯುತ್ತಿದ್ದರು. ಪುಸ್ತಕಗಳನ್ನು ಕಾದಿರಿಸುತ್ತಿದ್ದರು. ಸಿಗದಿದ್ದರೆ ಪರಿತಪಿಸುತ್ತಿದ್ದರು.ಇನ್ನು; ಗ್ರಂಥಾಲಯದ ವಾತಾವರಣವೇ ಒಂದು ವಿಚಿತ್ರ. ಸೂಜಿ ಕೆಳಗೆ ಬಿದ್ದರೂ ಸದ್ದು ಕೇಳಿಸುವಂಥ ಮೌನ; ಗ್ರಂಥಾಲಯದ ಒಳಗೆ ಹೆಜ್ಜೆ ಇಡುವಾಗ ಕೂಡಾ ಇನ್ನೊಬ್ಬರಿಗೆ ತೊಂದರೆ ಆದೀತೋ ಏನೋ ಎಂಬ ಅಳುಕು. ಅಲ್ಲಿ ಈಗಲೂ ಅದೇ ಪರಿಸ್ಥಿತಿ ಇದೆಯಾ? ಎಂಬ ಪ್ರಶ್ನೆ ಮುಂದಾದರೆ ತಕ್ಷಣ ಉತ್ತರಿಸುವುದು ಕಷ್ಟ.ಮಂಗಳೂರಿನಲ್ಲಂತೂ ಯುವ ಜನತೆ ಎಂದಾಕ್ಷಣ ತಕ್ಷಣ ಮನಸ್ಸಿನಲ್ಲಿ ಮೂಡುವ ಚಿತ್ರಗಳಲ್ಲಿ ಅವರು ಗ್ರಂಥಾಲಯದಲ್ಲಿ ಕುಳಿತು ಓದುವ ದೃಶ್ಯ ಕಾಣಸಿಗಲಿಕ್ಕಿಲ್ಲ. ಹಾಗಾದರೆ ನಗರದ ಜನತೆಯಲ್ಲಿ ಓದುವ ಪ್ರವೃತ್ತಿ ಕಡಿಮೆ ಆಗುತ್ತಿದೆಯೇ? ಹೌದು ಎಂದು ಉತ್ತರಿಸುವವರು ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಒಮ್ಮೆ ಭೇಟಿ ಕೊಡಬೇಕು.ಜನ ಮೊಬೈಲ್, `ಇಂಟರ್ನೆಟ್~, `ಫೇಸ್‌ಬುಕ್~, `ಟ್ವಿಟ್ಟರ್~ಗಳ `ಅಲೆ~ಯಲ್ಲಿ ತೇಲಿ ಹೋಗುತ್ತಿರಬಹುದು; ಆದರೆ ಇಂದಿಗೂ ಸಾರ್ವಜನಿಕ ಗ್ರಂಥಾಲಯಗಳು ತಮ್ಮ ಎಂದಿನ ಗತ್ತು ಗೈರತ್ತು ಉಳಿಸಿಕೊಂಡಿವೆ.

`ಜನರಲ್ಲಿ ಓದುವ ಪ್ರವೃತ್ತಿ ಕಡಿಮೆ ಆಗಿದೆ ಎಂಬ ಮಾತನ್ನು ತಾವು ಒಪ್ಪಲು ಸಿದ್ಧವಿಲ್ಲ~ ಎಂದು ಎದೆತಟ್ಟಿ ಹೇಳುತ್ತಾರೆ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಘವೇಂದ್ರ.`ನಮಗ ವರ್ಷ ವರ್ಷ ಪುಸ್ತಕಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಪ್ರತಿ ವರ್ಷ ನಮ್ಮ ಗ್ರಂಥಾಲಯದಲ್ಲೇ ಕನಿಷ್ಟ 450ರಷ್ಟು ಹೊಸ ಓದುಗರು ಪುಸ್ತಕ ಪಡೆಯುವ ಸಲುವಾಗಿ ಗ್ರಂಥಾಲಯದ ಸದಸ್ಯತ್ವ ಪಡೆಯುತ್ತಾರೆ. 2010ರಲ್ಲಿ ನಮ್ಮ ಗ್ರಂಥಾಲಯವೊಂದರಲ್ಲೇ 350 ಮಂದಿ ಸದಸ್ವತ್ವ ಪಡೆದಿದ್ದರು. 2011ರಲ್ಲಿ ಈ ಸಂಖೆ 450ಕ್ಕೆ ಏರಿದೆ. ಸದಸ್ಯತ್ವ ಪಡೆದವರ ಪೈಕಿ ಹಿಚ್ಚಿನವರು ನಿಗದಿತವಾಗಿ ಪುಸ್ತಕವನ್ನು ಮನೆಗೆ ಕೊಂಡೊಯ್ದು ಓದುತ್ತಾರೆ~ ಎಂದು ಅವರು ತಿಳಿಸಿದರು.`ಈಗಲೂ ನಗರದ ಓದುವವರ ಒಂದು ವರ್ಗವೇ ಇದೆ. ಯುವಜನರೂ ಗ್ರಂಥಾಲುದಿಂದ ಈಗಲೂ ನೆಚ್ಚಿನ ಕಾದಂಬರಿಗಳನ್ನು ಮನೆಗೆ ಒಯ್ದು ಓದುತ್ತಾರೆ. ತಪ್ಪದೇ ಗ್ರಂಥಾಲಯಕ್ಕೆ ಬರುವವರಿದ್ದಾರೆ. ಸೋಮವಾರ ಹಾಗೂ ತಿಂಗಳ ಎರಡನೇ ಮಂಗಳವಾರ ಗ್ರಂಥಾಲಯಕ್ಕೆ ರಜೆ. ಅದರ ಮರುದಿನ ಓದುಗರ ಸಂಖ್ಯೆ ಹೆಚ್ಚಿರುತ್ತದೆ~ ಎನ್ನುತ್ತಾರೆ ಗ್ರಂಥಪಾಲಕಿ ಮಮತಾ ರೈ.`ಎನ್.ನರಸಿಂಹಯ್ಯ, ತ್ರಿವೇಣಿ, ಸಾಯಿಸುತೆ ಅಂತಹವರ ಕಾದಂಬರಿಯನ್ನು ಈಗಿನ ಯುವ ಪೀಳಿಗೆಯೂ ಇಷ್ಟಪಡುತ್ತದೆ. ಟಿ.ವಿ.ಯಲ್ಲಿ ಧಾರಾವಾಹಿ ಎಷ್ಟೇ ಬರಲಿ ನಗರದ ಗೃಹಿಣಿಯರು ಈಗಲೂ ಗ್ರಂಥಾಲಯದಿಂದ ಕಾದಂಬರಿ ತರಿಸಿ ಓದುವ ಹವ್ಯಾಸಕ್ಕೇನು ಕುತ್ತು ಬಂದಿಲ್ಲ.  ಟಿ.ವಿ ಹಾವಳಿಯಿಂದ ಹೊಸ ಓದುಗರು ನಿರೀಕ್ಷಿತ ಪ್ರಮಾಣದಲ್ಲಿ ಸೃಷ್ಟಿ ಆಗದೆ ಇರಬಹುದು. ಆದರೆ ಒಮ್ಮೆ ಓದುವ ರುಚಿ ಹತ್ತಿಸಿಕೊಂಡವರು ಅದರಿಂದ ಹೊರಬರುವುದು ಸುಲಭವಲ್ಲ. ಪುಸ್ತಕದ ಸ್ಥಾನವನ್ನು ಟಿ.ವಿ. ಕಸಿದುಕೊಳ್ಳಲು ಸಾಧ್ಯವಿಲ್ಲ~ ಎಂದರು.ಮಂಗಳೂರಿನಲ್ಲಿ ಬಾವುಟಗುಡ್ಡೆ, ನಂದಿಗುಡ್ಡೆ; ಕದ್ರಿ; ಅಶೋಕ  ನಗರ, ಗಾಂಧಿನಗರ; ಕುಳಾಯಿ, ವೆಲೆನ್ಸಿಯಾ, ಸುರತ್ಕಲ್, ಹೊಯಿಗೆಬಜಾರ್, ಹೊಸಬೆಟ್ಟು; ಕುದ್ರೊಳಿ, ಸೂಟರ್‌ಪೇಟೆ, ಇಎಸ್‌ಐ ಆಸ್ಪತ್ರೆ, ಜಿಲ್ಲಾ ಕಾರಾಗೃಹ, ಕಣ್ಣೂರು, ಮಕ್ಕಳ ಸಮುದಾಯ ಕೇಂದ್ರ, ಪ್ರಗತಿನಗರ ಹಾಗೂ ಪಡೀಲ್‌ನಲ್ಲಿ ಗ್ರಂಥಾಲಯದ ಶಾಖೆಗಳಿವೆ. ಅಲ್ಲದೇ ಒಂದು ಸಂಚಾರಿ ಗ್ರಂಥಾಲಯದ ಘಟಕವೂ ಇದೆ. ಈ ಗ್ರಂಥಾಲಯಗಳಲ್ಲಿ ಒಟ್ಟು 6.35 ಲಕ್ಷ ಪುಸ್ತಕಗಳಿವೆ. 38 ಸಾವಿರ ಮಂದಿ ಓದುಗ ಸದಸ್ಯರು ಇದ್ದಾರೆ.ಈ ಪೈಕಿ 50 ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ (1969ರಲ್ಲಿ ಆರಂಭವಾದದ್ದು) ನಗರ ಕೇಂದ್ರ ಗ್ರಂಥಾಲಯ ಒಂದರಲ್ಲೇ 22,465 ಸದಸ್ಯರಿದ್ದಾರೆ. 75 ಸಾವಿರಕ್ಕೂ ಅಧಿಕ ಗ್ರಂಥಗಳಿವೆ. ಇಲ್ಲಿ ಎಂಟು ಕನ್ನಡ, ಐದು ಇಂಗ್ಲಿಷ್ ಹಾಗೂ 2 ಮಲೆಯಾಳಿ ದಿನ ಪತ್ರಿಕೆಗಳು, 8 ಕನ್ನಡ ಹಾಗೂ 7 ಇಂಗ್ಲಿಷ್ ವಾರಪತ್ರಿಕೆಗಳು;  ಕನ್ನಡ ಸಿಹಿತ 10 ಪಾಕ್ಷಿಕಗಳು, 22 ಮಾಸಿಕಗಳು . ಸೋರುವ ಮನೆಯಾಗಿ ಪರಿವರ್ತನೆಯಾಗಿದ್ದ ನಗರ ಕೇಂದ್ರ ಗ್ರಂಥಾಲಯ ನವೀಕರಣಗೊಳ್ಳುತ್ತಿದೆ. ಮೊದಲ ಮಹಡಿಯ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಜತೆಗೆ `ಇಂಟರ್ನೆಟ್ ಲೈಬ್ರರಿ~ ಆರಂಭಿಸುವ ತಯಾರಿಯೂ ನಡೆದಿದೆ.ಹೇಳಿದ ಹೊಸ ಕಾಲ ಚಕ್ರ ತನ್ನ ಮತ್ತೊಂದು ಆವರ್ತವನ್ನು ಪೂರ್ಣಗೊಳಿಸಿದೆ. ಹಾಡು, ಕುಣಿತ ಮೋಜು ಮಸ್ತಿಗಳೊಂದಿಗೆ ಕಳೆದ ವರ್ಷಕ್ಕೆ ವಿದಾಯ ಹೇಳಿ ಯಾಯಿತು. ಇನ್ನು ಮುಂದಿನದು ಹೊಸ ಅರುಣೋದಯಗಳು. ಮುಂಜಾವದ ಪರ್ವ ಕಾಲದಲ್ಲಿ ಗಿರಿ ತರುಲತೆಗಳಲ್ಲಿ ತಾಜಾತನವನ್ನೇ ಮೈವೆತ್ತು ರಾರಾಜಿಸುವ ತುಷಾರದ ಬಿಂದುಗಳಂತೆ ಈ ಹೊಸ ವರ್ಷ ಪಲ್ಲವಿಸುವ ಈ ಕಾಲಘಟ್ಟದಲ್ಲಿ ಹೊಸ ಹುರುಪು, ಹೊಸ ಚೇತನ, ಹೊಸತನ್ನು ಹೊಸೆಯುವ ಕಾತರ ಕುತೂಹಲ. ಹೊಸತು ಮತ್ತು ಹಳೆಯದರ ನಡುವೆ ಚಾಚಿಕೊಂಡ ದಂಡೆಯಲ್ಲಿ ನಿಂತು ಅತ್ತಿತ್ತ ಕಣ್ಣು ಹಾಯಿಸಿದಾಗ ಕಾಣಿಸುವ `ಕನಸು~ಗಳು ಮತ್ತು `ನನಸು~ಗಳು ಹಲವಾರು. ಕೈಗೆ ಸಿಕ್ಕ ಅವಕಾಶ ಕಳೆದುಕೊಂಡ ಹತಾಶೆಯ ನಡುವೆಯೇ, ಹೊಸತೊಂದನ್ನು ಕಂಡುಕೊಳ್ಳುವ ಅವಕಾಶ ಪಲ್ಲವಿಸಿರುತ್ತದೆ.ಅದನ್ನು ಕೈಗೂಡಿಸುವ ಕಾರ್ಯಾರಂಭಕ್ಕೆಕೆಯ ಹೊಸವರ್ಷದ ಆರಂಭದಷ್ಟು ನವಿರಾದ, ಲವಿಲವಿಕೆಯಿಂದ ಕೂಡಿದ ಶುಭ ಘಳಿಗೆ ಮತ್ತೊಂದಿರದು.  ಹೊಸ ವರ್ಷದ ಪರ್ವ ಕಾಲದಲ್ಲಿ ಬದುಕಿನಲ್ಲೊಂದಿಷ್ಟು ಬದಲಾವಣೆಗಳ `ಹುಟ್ಟು~ ಹಾಕಬೇಕೆಂಬ ಬಯಕೆ ಅನೇಕರ ಮನದಾಳದ್ಲ್ಲಲಿ ಖಂಡಿತಾ ಮೊಳಕೆ ಒಡೆದಿರುತ್ತದೆ.ನಗರದ ಗಜಿಬಿಜಿ ಬದುಕಿನ ನಡುವೆ ನಮ್ಮದೇ ಆದ ಪುಟ್ಟ ಕಲ್ಪನೆಯ ಲೋಕದಲ್ಲಿ ಪ್ರಶಾಂತವಾಗಿ ವಿಹರಿಸಲು ಓದುವ ಹವ್ಯಾಸಕ್ಕಿಂತ ಉತ್ತಮವಾದ ಮಾರ್ಗ ಬೇರೊಂದಿಲ್ಲ. ಹೌದು ನಾವೇಕೆ ಈ ವರ್ಷವಾದರೂ ನಮ್ಮ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಬಾರದು. ಖರೀದಿಸಿ ಓದುವುದು ಒಳ್ಳೆಯದು. ಅದಾಗದಿದ್ದರೆ ಕನಿಷ್ಟ ಮನೆ ಸಮೀಪದ ಯಾವುದಾದರೂ ಒಂದು ಗ್ರಂಥಾಲಯದಲ್ಲಿ ಸದಸ್ಯರಾಗಿ-ವ್ಯರ್ಥ ಕಳೆಯುವ `ಸಮಯ~ಕ್ಕೊಂದಿಷ್ಟು ಕೆಲಸಕೊಡಿ. ನೀವು ಮಾಡಬೇಕಾದುದು ಇಷ್ಟೇ ಒಂದು ರೂಪಾಯಿ ಕೊಟ್ಟು ಅರ್ಜಿ ಖರೀದಿಸಿ ಭರ್ತಿ ಮಾಡಿ ನೀಡುವುದು. (ಗಜೆಟೆಡ್ ಅಧಿಕಾರಿಯಿಂದ ಪ್ರಮಾಣೀಕರಿಸಿರಬೇಕು). ಜತೆಗೆರಡು ಭಾವ ಚಿತ್ರ. ಒಂದು ಪುಸ್ತಕಕ್ಕೆ ರೂ 25, ಎರಡು ಪುಸ್ತಕಕ್ಕೆ ರೂ 30, ಮೂರು ಪುಸ್ತಕಕ್ಕಾದರೆ 40 ರೂಪಾಯಿ ಶುಲ್ಕ ತೆರಬೇಕು. ಹೊಸ ವರ್ಷದ ಒಂದು ಜೋಕು ಹೇಳ ಬಯಸುತ್ತೇನೆ; - ಈಗ ನಾಲ್ಕಾಣೆ ಚಾಲ್ತಿಯಲ್ಲಿಲ್ಲ. ಆದರೆ ನೀವು ಪುಸ್ತಕ ಹಿಂತಿರುಗಿಸಲು ವಿಳಂಬ ಮಾಡಿದರೆ ದಿನಕ್ಕೆ ನಾಲ್ಕಾಣೆಯಂತೆ ದಂಡ ತೆತ್ತರೆ ಸಾಕಂತೆ.

Post Comments (+)