ಹೊಸ ವರ್ಷಕ್ಕೆ ಉಪೇಂದ್ರ ಟೋಪಿ!

7

ಹೊಸ ವರ್ಷಕ್ಕೆ ಉಪೇಂದ್ರ ಟೋಪಿ!

Published:
Updated:

ಟೋಪಿ ಹಾಕುವ ಗುಂಪಿನ ನಾಯಕ ಉಪೇಂದ್ರ. ಆ ಗುಂಪಿನಲ್ಲಿ ಎರಡನೇ ನಾಯಕಿ ಮೈತ್ರಿಯಾ ಇದ್ದಾರೆ. ಸಿಬಿಐ ಅಧಿಕಾರಿ ಭಾವನಾ ಗುಂಪಿನೊಳಗೆ ಸೇರಿಕೊಂಡು ಟೋಪಿ ಹಾಕಲು ಪ್ರಯತ್ನಿಸುತ್ತಾರೆ. ಇಂಥ ಎಳೆಯೊಂದನ್ನು ಬೆಳೆಸಿ `ಟೋಪಿವಾಲಾ' ಸಿನಿಮಾ ಮಾಡಲಾಗಿದೆ. ಈ ಕಥಾ ಲೇಖಕ ಮತ್ತು ನಾಯಕ ಉಪೇಂದ್ರ.`ಪ್ರತಿಯೊಂದು ಸನ್ನಿವೇಶವೂ ಕುತೂಹಲ ಕಾಯ್ದುಕೊಳ್ಳುತ್ತದೆ. ಪ್ರಸ್ತುತ ನಡೆಯುತ್ತಿರುವ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಕತೆ ರಚಿಸಲಾಗಿದೆ. ಹಲವು ತಿರುವುಗಳಿಂದ ಚಿತ್ರ ಪ್ರೇಕ್ಷಕರಿಗೆ ಹತ್ತಿರವಾಗುತ್ತದೆ. ಇದೊಂದು ರೀತಿಯಲ್ಲಿ ವಿಡಂಬನಾತ್ಮಕ ಕತೆಯ ಚಿತ್ರ. ಅಪರಾಧ, ಹಾಸ್ಯ, ದರೋಡೆ ಎಲ್ಲವೂ ಕತೆಯೊಳಗೆ ಅಡಗಿದೆ. ಎರಡು ಟ್ರ್ಯಾಕ್‌ನಲ್ಲಿ ಸಿನಿಮಾ ನಡೆಯುತ್ತೆ. ಯಾರು ಯಾರಿಗೆ ಟೋಪಿ ಹಾಕ್ತಾರೆ ಎನ್ನುವುದು ಕುತೂಹಲಕರ ಸಂಗತಿ. ಪ್ರತಿಯೊಂದಕ್ಕೂ ರೂಪಕಗಳನ್ನು ಬಳಸಲಾಗಿದೆ. ಮನರಂಜನೆಯೊಂದಿಗೆ ಒಂದಷ್ಟು ವಿಚಾರ ಹೇಳಿದ್ದೇವೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈ ಚಿತ್ರ ಜನರಿಗೆ ಖುಷಿ ಇಷ್ಟವಾಗಬಹುದು' ಎಂದರು ಉಪೇಂದ್ರ.ಅಂದರೆ ಇದು ರಾಜಕಾರಣಿಗಳ `ಟೋಪಿ'ಗೆ ಸಂಬಂಧಿಸಿದ್ದಾ? ಎಂದರೆ `ಸಿನಿಮಾ ನೋಡಿ' ಎಂಬ ನಗು ಬೆರೆತ ಉತ್ತರ ಅವರಿಂದ ಬಂತು.ಉಪೇಂದ್ರ ಅವರಿಗೆ `ಕೈಲಾಸಂ' ಕುರಿತ ಕಿರುಚಿತ್ರ ನೋಡುವ ಅವಕಾಶ ದೊರೆತು, ಅದರ ನಿರ್ದೇಶಕ ಶ್ರೀನಿ ಅವರ ವೃತ್ತಿಪರತೆ ಇಷ್ಟವಾಯಿತಂತೆ. ಅದನ್ನು ಶ್ರೀನಿಗೂ ಹೇಳಿ ಸಿನಿಮಾ ನಿರ್ದೇಶನಕ್ಕೆ ಅವಕಾಶ ನೀಡುವುದಾಗಿ ಹೇಳಿದರಂತೆ. ಅದನ್ನು ನಂಬಿಕೊಂಡ ಶ್ರೀನಿ, ದುಂಬಾಲು ಬಿದ್ದ ಕಾರಣ `ಟೋಪಿವಾಲಾ' ಕತೆಯನ್ನು ಸಿದ್ಧಪಡಿಸಿ, ಚಿತ್ರಕತೆಯನ್ನೂ ರಚಿಸಿಕೊಟ್ಟಿದ್ದಾರೆ. ನಿರ್ದೇಶನದ ಹೊಣೆ ಮಾತ್ರ ಶ್ರೀನಿ ಅವರದೇ.`ಆರ್‌ಜೆ ಆಗಿದ್ದೆ. ಕಿರುಚಿತ್ರ ಮಾಡುತ್ತಿದ್ದೆ. ಉಪೇಂದ್ರ ಅವರು ದೊಡ್ಡದೊಂದು ಹೊಣೆಗಾರಿಕೆ ಕೊಟ್ಟರು. ನಿಭಾಯಿಸಿರುವೆ' ಎನ್ನುತ್ತಾ ಮೊದಲಿಗೆ ಅವಕಾಶ ಕೊಟ್ಟವರಿಗೆ ಕೃತಜ್ಞತೆ ಸಲ್ಲಿಸಿದರು ಶ್ರೀನಿ.`ಬೆಂಗಳೂರು, ಚೆನ್ನೈ, ಸ್ವಿಟ್ಜರ್‌ಲೆಂಡ್‌ನಲ್ಲಿ ಚಿತ್ರೀಕರಣ ನಡೆದಿದೆ. ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಶೀರ್ಷಿಕೆ ಕೆಳಗೆ `ತಲೆ ಇಲ್ಲದವರಿಗಲ್ಲ' ಎಂಬ ಅಡಿಬರಹ ಇದೆ. ಅದು ಗಿಮಿಕ್ ಅಲ್ಲ. ಅದರೊಳಗೊಂದು ಸಪ್ರೈಸ್ ಇದೆ. ಸಿನಿಮಾ ನೋಡಿದಾಗ ಅದು ತಿಳಿಯಲಿದೆ' ಎಂದು ನಿರ್ದೇಶಕರು ಗುಟ್ಟು ಕಾಯ್ದುಕೊಂಡರು.ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಮೈತ್ರಿಯಾ ಅವರಿಗೆ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಅದೃಷ್ಟ ಎನಿಸಿದೆ. `ಈ ಚಿತ್ರದ ಮೂಲಕ ನಾನು ಗುರುತಿಸಿಕೊಳ್ಳುವಂತಾಗಬಹುದು. ಬಾಲಿವುಡ್ ಮಟ್ಟಕ್ಕೆ ಸಿನಿಮಾ ರೂಪುಗೊಂಡಿದೆ' ಎಂದ ಅವರು, ಚಿತ್ರದಲ್ಲಿ ಟೋಪಿ ಹಾಕುವ ಪಾತ್ರ ನಿರ್ವಹಿಸಿದ್ದಾರಂತೆ.ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರಿಗೆ ಉಪೇಂದ್ರ ತಮ್ಮನ್ನು ಕರೆದು `ಟೋಪಿವಾಲಾ' ಕತೆಗೆ ತಾವೇ ಸೂಕ್ತ ನಿರ್ಮಾಪಕರು ಎಂದು ಹೇಳಿದ್ದು ಸಂತಸ ನೀಡಿದೆ. ಚಿತ್ರದ ಆಡಿಯೋ ಸೀಡಿಗಳನ್ನು ಕನಕಪುರದಲ್ಲಿ ಬಿಡುಗಡೆ  ಮಾಡುವುದಾಗಿ ಹೇಳಿದ ಅವರು, ಚಿತ್ರ ಗೆದ್ದೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಅವರ ಪುತ್ರ ಶ್ರೀಕಾಂತ್ ಅವರಿಗೆ `ಟೋಪಿವಾಲಾ' ಪರಭಾಷೆಗಳಿಗೆ ರೀಮೇಕ್ ಆಗುವುದು ನಿಶ್ಚಿತ ಎನಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry