ಬುಧವಾರ, ಮೇ 25, 2022
22 °C

ಹೊಸ ವರ್ಷಕ್ಕೆ ನಾವಿನ್ಯ ಕುಂದವಾಡ ಕೆರೆ ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಕುಂದವಾಡ ಕೆರೆ ಅಭಿವೃದ್ಧಿಗೆ ವಿವಿಧ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ಜಾಗತಿಕ ಗುಣಮಟ್ಟದಲ್ಲಿ ಮೇಲ್ದರ್ಜೆಗೇರಿದ ನಾವಿನ್ಯ ರೂಪದ ಕೆರೆಯನ್ನು ಜನವರಿಗೆ ಅರ್ಪಣೆ ಮಾಡಲಾಗುವುದು ಎಂದು ಪೂರ್ವ ವಲಯ ಐಜಿಪಿ ಹಾಗೂ ಕುಂದವಾಡ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜಯ್ ಸಹಾಯ್ ತಿಳಿಸಿದರು.



ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಪಾಲಿಕೆಯಿಂದ ಕುಂದವಾಡ ಕೆರೆಯ `ಪರಗೋಲ~ದಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಂದವಾಡ ಕೆರೆ ಕಂಗೊಳಿಸುವಂತೆ ಮಾಡಲು ಜನಾಂದೋಲನ ಆರಂಭಿಸಲಾಗಿದೆ. ಇದಕ್ಕೆ ಜನರು ಕೈಜೋಡಿಸಬೇಕು. ನಾವು ಹೇಳಿದ್ದು ಅನುಷ್ಠಾನ ಆಗದಿದ್ದಲ್ಲಿ ಜನರು ಪ್ರಶ್ನಿಸಬೇಕು ಎಂದು ತಿಳಿಸಿದರು.



ಕೆರೆಯನ್ನು ಆಕರ್ಷಕ ಪಕ್ಷಿಧಾಮವಾಗಿ ರೂಪಿಸಲು ಅವಕಾಶವಿದೆ. ಸಮರ್ಪಕ ಯೋಜನೆ ರೂಪಿಸಿ, ಅನುಷ್ಠಾನವಾದರೆ ಸಾಕಷ್ಟು ಅನುದಾನವೂ ದೊರೆಯುತ್ತದೆ. ಇಲ್ಲಿ ಸಂಗೀತ ಕಾರಂಜಿ ಸ್ಥಾಪನೆ, ಆಕರ್ಷಕ ವಿದ್ಯುದೀಪಾಲಂಕಾರ ಹಾಗೂ ಹೈಮಾಸ್ಟ್ ದೀಪ ಅಳವಡಿಕೆ ಮಾಡಲಾಗುವುದು. ಇದು ಸಾಧ್ಯವಾದಲ್ಲಿ, ರಾತ್ರಿ ವೇಳೆ ಕೆರೆ, `ರಾಣಿಯ ಕೊರಳಿನ ಹಾರ~ದಂತೆ ಭಾಸವಾಗುತ್ತದೆ. ಒಂದು ಭಾಗದಲ್ಲಿ ಬಯಲು ರಂಗಮಂದಿರ ನಿರ್ಮಿಸುವ ಪ್ರಸ್ತಾವ ಇದೆ. ಇಲ್ಲಿ, ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.



ಹಲವರಿಂದ ತೆಗೆದಿರುವ ಕೆರೆಯ ಚಿತ್ರಗಳು ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳು ಬಿಡಿಸಿರುವ ಚಿತ್ರಗಳನ್ನು ಜುಲೈನಲ್ಲಿ ದಾವಣಗೆರೆ ವಿವಿಯ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಪಕ್ಷಿ ವೀಕ್ಷಕರಿಗೆ ಅನುವಾಗುವಂತೆ ಗೋಪುರ ನಿರ್ಮಿಸಲಾಗುವುದು ಎಂದರು.

ನಾಗರಿಕರಲ್ಲಿ, `ನಮ್ಮ ಕೆರೆ ಸಂರಕ್ಷಣೆ; ನಮ್ಮ ಕರ್ತವ್ಯ~ ಎಂಬ ಅರಿವು ಮೂಡಬೇಕು. ಈ ಸಂಬಂಧ ಅಭಿಯಾನ ನಡೆಸಲು ಪಾಲಿಕೆ ಕ್ರಮ ಕೈಗೊಳ್ಳಲಿ ಎಂದು ಆಶಿಸಿದರು.



ಡಾ.ರತ್ನಾಕರ ಮಾತನಾಡಿ, ಕೆರೆ ಆವರಣದಲ್ಲಿ ಪಕ್ಷಿ ವೀಕ್ಷಣೆ ಗೋಪುರ, ಸಂಶೋಧನೆ ನಡೆಸಲು ಒತ್ತು ನೀಡಲು ಐಜಿಪಿ ಸಂಜಯ್ ಸಹಾಯ್ ಕನಸು ಹೊಂದಿದ್ದಾರೆ. ಸಾರ್ವಜನಿಕರು, ಕೆರೆಯ ಸುಂದರ ಪರಿಸರದಲ್ಲಿ ಕಾಲ ಕಳೆದರೆ, ದೈಹಿಕ ವ್ಯಾಯಾಮ ಮಾಡಿದರೆ, ವೈದ್ಯರ ಬಳಿ ಹೋಗುವ ಅಗತ್ಯವಿರುವುದಿಲ್ಲ ಎಂದರು.



ಅಮೆರಿಕಾದ ನ್ಯೂಯಾರ್ಕ್ ನಗರದ ವಾಸಿಯಾಗಿರುವ ಸ್ಥಳೀಯ ಗಿರೀಶ್ ಎಂಬವರು ಕೆರೆ ಬಗ್ಗೆ ಅನಿಸಿಕೆ ಹಂಚಿಕೊಂಡರು. `ಹಿಂದೆ ಇಲ್ಲಿ ವಾಯುವಿಹಾರಕ್ಕೆ ಬಂದಾಗ ಕೆರೆಯ ದುಃಸ್ಥಿತಿ ಕಂಡು ಬೇಸರವಾಗುತ್ತಿತ್ತು. ಇಂದು ಅಭಿವೃದ್ಧಿಗೆ ಒಡ್ಡಿಕೊಂಡಿರುವುದು ಖುಷಿ ತಂದಿದೆ. ಇನ್ನಷ್ಟು ನಿರ್ವಹಣೆ ಮಾಡಿ ಕಾಪಾಡಿಕೊಳ್ಳಬೇಕು~ ಎಂದರು.



ಗುರುಕುಲ ವಿದ್ಯಾಲಯದ ಮಕ್ಕಳು ಪರಿಸರ ಸಂರಕ್ಷಣೆ ಬಗ್ಗೆ ಪ್ರಸ್ತುತ ಪಡಿಸಿದ ರೂಪಕ ಗಮನ ಸೆಳೆಯಿತು. ಪ್ರಬಂಧ, ಆಶುಭಾಷಣ, ನಡಿಗೆ ಹಾಗೂ ಚಿತ್ರರಚನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರೇಕ್ಷಕರಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ, ಬಹುಮಾನ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.