ಹೊಸ ವರ್ಷದಲ್ಲಿ ಗರಿಷ್ಠ ನೇಮಕಾತಿ

7

ಹೊಸ ವರ್ಷದಲ್ಲಿ ಗರಿಷ್ಠ ನೇಮಕಾತಿ

Published:
Updated:

ನವದೆಹಲಿ (ಪಿಟಿಐ): ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಚೇತರಿಸಿಕೊಳ್ಳುತ್ತಿರುವ ಭಾರತದ ಉದ್ಯೋಗ ಮಾರುಕಟ್ಟೆ ಹೊಸ ವರ್ಷದಲ್ಲಿ (2013) ಗಣನೀಯ ಚೇತರಿಕೆ ಕಾಣಲಿದೆ. ನೌಕರರ ವೇತನವೂ ಶೇ 10ರಿಂದ ಶೇ 15ರಷ್ಟು ಹೆಚ್ಚಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.ಮುಖ್ಯವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು 50 ಸಾವಿರದಿಂದ 70 ಸಾವಿರ ಅಭ್ಯರ್ಥಿಗಳನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಿವೆ. ಹೊಸ ಬ್ಯಾಂಕುಗಳಿಗೆ ಸರ್ಕಾರ ಪರವಾನಗಿ ನೀಡಿದರೆ ಉದ್ಯೋಗಾವಕಾಶ ಇನ್ನಷ್ಟು ಹೆಚ್ಚಲಿದೆ. ಇದನ್ನು ಹೊರತುಪಡಿಸಿದರೆ ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಹೊರಗುತ್ತಿಗೆ, ವೈದ್ಯಕೀಯ, ರಿಯಲ್ ಎಸ್ಟೇಟ್ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ(ಎಫ್‌ಡಿಐ) ಚಿಲ್ಲರೆ ವಹಿವಾಟು ಕ್ಷೇತ್ರದಲ್ಲೂ ಹೊಸ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎನ್ನುತ್ತಾರೆ `ಮ್ಯಾನ್‌ಪವರ್ ಇಂಡಿಯಾ' ದ ವ್ಯವಸ್ಥಾಪಕ ನಿರ್ದೇಶಕ ಎ.ಜಿ.ರಾವ್.ಹೊಸ ವರ್ಷದಲ್ಲಿ ಉದ್ಯೋಗಿಗಳಿಗೆ ಉತ್ತಮ ವೇತನ ಏರಿಕೆ ಲಭಿಸುವ ಸಾಧ್ಯತೆ ಇದೆ. ಕಾರ್ಪೊರೇಟ್ ಕಂಪೆನಿಗಳೂ ಕೆಲಸದಲ್ಲಿ ಕಳಪೆ ಸಾಧನೆ ತೋರುವವರನ್ನು ವಜಾಗೊಳಿಸುವ ಕುರಿತೂ ಚಿಂತಿಸುತ್ತಿವೆ ಎನ್ನುವ ವಿವರಣೆ ಅವರದ್ದು.ಕೆಲವು ಕಾರ್ಪೊರೇಟ್ ಕಂಪೆನಿಗಳು ಈಗಾಗಲೇ ಮನೆಯಿಂದಲೇ ಕೆಲಸ ಮಾಡುವುದು, ಸಾಧನೆ ಆಧಾರಿತ ವೇತನ ಪರಿಷ್ಕರಣೆ ಇತ್ಯಾದಿ ಸ್ಪರ್ಧಾತ್ಮಕ ಯೋಜನೆಗಳನ್ನು ಜಾರಿಗೆ ತಂದಿವೆ. ಇವೆಲ್ಲವೂ ಭಾರತೀಯ ಉದ್ಯೋಗ ಮಾರುಕಟ್ಟೆ ಮೇಲೆ ಪೂರಕ ಪರಿಣಾಮ ಬೀರಬಹುದು ಎಂದು ರಾವ್ ಅಭಿಪ್ರಾಯಪಟ್ಟಿದ್ದಾರೆ.2012ರಲ್ಲಿ ಉದ್ಯೋಗ ಮಾರುಕಟ್ಟೆ ಶೇ 15ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇತ್ತು. ಆದರೆ, ಜಾಗತಿಕ ಆರ್ಥಿಕ ಅಸ್ಥಿರತೆ, ಯೂರೋಪ್ ಮತ್ತು ಅಮೆರಿಕದ ಬಿಕ್ಕಟ್ಟು ಹೊಸ ನೇಮಕ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಐ.ಟಿ, ಮೂಲಸೌಕರ್ಯ ವಲಯದಲ್ಲಿ ನೇಮಕಾತಿ ತಗ್ಗಿದೆ ಎನ್ನುವುದು `ರಾಮ್‌ಸ್ಟಡ್ ಇಂಡಿಯಾ' ವ್ಯವಸ್ಥಾಪಕ ನಿರ್ದೇಶಕ ಇ.ಬಾಲಾಜಿ ಅವರ ಅಭಿಪ್ರಾಯ. `ಆರ್ಥಿಕ ಉತ್ತೇಜನ ಕ್ರಮಗಳಿಂದ ಮುಂಬರುವ ದಿನಗಳಲ್ಲಿ ಹೊಸ ಉದ್ಯೋಗಾವಕಾಶ ಮತ್ತು ನೇಮಕ ಹೆಚ್ಚುವ ಸಾಧ್ಯತೆ ಇದೆ' ಎಂಬ ಅಭಿಪ್ರಾಯ `ಟೀಮ್‌ಲೀಸ್ ಸರ್ವೀಸಸ್' ಹಿರಿಯ ಉಪಾಧ್ಯಕ್ಷೆ ಸಂಗೀತಾ ಲಾಲ್ ಅವರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry