ಬುಧವಾರ, ಜನವರಿ 22, 2020
21 °C

ಹೊಸ ವರ್ಷದ ದುಃಸ್ವಪ್ನಥೇನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ/ ಕಡಲೂರು/ ಪುದುಚೇರಿ (ಪಿಟಿಐ, ಐಎಎನ್‌ಎಸ್):  `ಥೇನ್~ ಚಂಡಮಾರುತದ ಪರಿಣಾಮ ತಮಿಳುನಾಡಿಗೆ ಈ ಬಾರಿಯ ಹೊಸ ವರ್ಷ ಕರಾಳವಾಗಿ ಪರಿಣಮಿಸಿದೆ. ರಾಜ್ಯದ ಹಲವೆಡೆ ಸರಿಯಾದ ವಿದ್ಯುತ್ ಸರಬರಾಜು ಇಲ್ಲದ ಕಾರಣ ಶನಿವಾರ ಕತ್ತಲಲ್ಲೇ ಹೊಸ ವರ್ಷವನ್ನು ಸ್ವಾಗತಿಸಬೇಕಾದ ಅನಿವಾರ್ಯತೆ ಉಂಟಾಯಿತು.ಚಂಡಮಾರುತದಿಂದ ತೀವ್ರ ಹಾನಿಗೆ ಒಳಗಾಗಿರುವ ಕಡಲೂರು, ಚಿದಂಬರಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದಿವೆ. ಕುಡಿಯುವ ನೀರಿನ ಸರಬರಾಜು ಕೂಡ ನಿಂತಿದ್ದು, ಬಾವಿಗಳಿಂದಲೂ ನೀರನ್ನು ಎತ್ತಿ ಬಳಸಿಕೊಳ್ಳಲಾರದಷ್ಟು ಪರಿಸ್ಥಿತಿ ಹದಗೆಟ್ಟಿದೆ.ಕಡಲೂರು ಮತ್ತು ಪುದುಚೇರಿ ರಸ್ತೆಯಲ್ಲಿ ಬಿದ್ದಿರುವ ಮರಗಳು, ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ಶೇ 90ರಷ್ಟು ಮುಗಿದಿದ್ದು, ಸುಗಮ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯುತ್ ಸರಬರಾಜು ಸೇರಿದಂತೆ ಮೂಲ ಸೌಲಭ್ಯ ಒದಗಿಸಲು ಎಲ್ಲ ರೀತಿಯ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸುಮಾರು 18 ಸಾವಿರ ಸಂತ್ರಸ್ತರು ಸರ್ಕಾರದ ತಾತ್ಕಾಲಿಕ ಶೆಡ್, ಸರ್ಕಾರಿ ಕಟ್ಟಡಗಳು, ಮದುವೆ ಮಂಟಪಗಳು ಹಾಗೂ  ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನು ಒಂದು ವಾರದೊಳಗೆ ಅಗತ್ಯ ವಸ್ತುಗಳ ಪೂರೈಕೆ ಸಾಮಾನ್ಯ ಪರಿಸ್ಥಿತಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.ಪ್ರಕೃತಿಯ ವಿಕೋಪಕ್ಕೆ ತಮಿಳುನಾಡಿನ 40 ಹಾಗೂ ಪುದುಚೇರಿಯ 7 ಮಂದಿ ಸೇರಿದಂತೆ ಒಟ್ಟು 47 ಜನ ಬಲಿಯಾಗಿದ್ದಾರೆ.ಭೇಟಿ ಮುಂದಕ್ಕೆ: ತೀವ್ರ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ನೀಡಬೇಕಾಗಿದ್ದ ಭೇಟಿಯನ್ನು ಹವಾಮಾನ ವೈಪರೀತ್ಯದ ಕಾರಣ ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.ಪುದುಚೇರಿಯಲ್ಲಿ ಹಾನಿಗೊಳಗಾಗಿರುವ ಸ್ಥಳಗಳಿಗೆ ಭೇಟಿ ನೀಡಿದ್ದ ಅವರು, `ಶೀಘ್ರ ಪರಿಹಾರ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸಲು ಪುದುಚೇರಿ ಸರ್ಕಾರ ವಿಫಲವಾಗಿದೆ~ ಎಂದು ಆರೋಪಿಸಿದರು. `ಇಷ್ಟೊಂದು ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದರೂ ಇದುವರೆಗೂ ಒಬ್ಬ ಅಧಿಕಾರಿ ಸಹ ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಕಳೆದ ಎರಡು ದಿನಗಳಿಂದ ಆಹಾರವಿಲ್ಲದೆ ಜನ ಪರದಾಡುತ್ತಿದ್ದಾರೆ~ ಎಂದು ಸಚಿವರು ದೂರಿದರು.

ಪ್ರತಿಕ್ರಿಯಿಸಿ (+)