ಹೊಸ ವರ್ಷದ ಹೊಸ ಬೈಕ್‌ಗಳು

7

ಹೊಸ ವರ್ಷದ ಹೊಸ ಬೈಕ್‌ಗಳು

Published:
Updated:
ಹೊಸ ವರ್ಷದ ಹೊಸ ಬೈಕ್‌ಗಳು

ಕಳೆದ ವರ್ಷ ವೆಸ್ಪಾ ಭಾರತದಲ್ಲಿ ಎರಡನೇ ಬಾರಿಗೆ ಖಾತೆ ತೆರೆಯಿತು. ಯಮಹಾ ಸ್ಕೂಟರ್ ಲೋಕಕ್ಕೆ ಪದಾರ್ಪಣೆ ಮಾಡಿತು. ಆದರೂ ಬೈಕ್‌ಲೋಕದಲ್ಲಿ ಅಂತಹ ಹೆಚ್ಚಿನ ಸಂಚಲನವೇನೂ ಆಗಲಿಲ್ಲ. ಕೆಟಿಎಂನ ಡ್ಯೂಕ್ ಹಾಗೂ ಪಲ್ಸರ್ 200 ಎನ್‌ಎಸ್ ಬೈಕ್‌ಗಳನ್ನು ಬಿಟ್ಟರೆ ಹೊಸ ಬೈಕ್‌ಗಳು ಕಡಿಮೆ. ಆದರೆ 2013ರಲ್ಲಿ ಅನೇಕ ಹೊಸ ಮತ್ತು ದುಬಾರಿ ಬೈಕ್‌ಗಳ ಮೆರವಣಿಗೆಯೊಂದು ನಡೆಯುವ ಸೂಚನೆಗಳು ಕಂಡುಬರುತ್ತಿವೆ.

ಎನ್‌ಫೀಲ್ಡ್ ಜಾದೂ

ಭಾರತದ ಬೈಕ್ ಜಗತ್ತಿನಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ವಿಶಿಷ್ಟ ಸ್ಥಾನವೊಂದಿದೆ. ಹಾಗೆಂದು ಇದು ಜನ ಸಾಮಾನ್ಯನ ಬೈಕ್‌ಗಳನ್ನೇನೂ ತಯಾರಿಸುವುದಿಲ್ಲ. ಆದರೆ ಈ ಬೈಕ್‌ಗಳು ಎಲ್ಲಾ ಬೈಕರ್‌ಗಳ ಕಣ್ಮಣಿಗಳೆಂಬುದಂತೂ ನಿಜ. ಈ ಸಂಸ್ಥೆಯ ಥಂಡರ್‌ಬರ್ಡ್-500 ಈ ವರ್ಷ ಪರಿಪೂರ್ಣ ಬಿಡುಗಡೆ ಕಾಣಲಿದೆ. 2012ರಲ್ಲೇ ಇದು ಮಾರುಕಟ್ಟೆಗೆ ಬಂದಿತ್ತು. ಆದರೆ ಹೆಚ್ಚಿನವರಿಗೆ ಇದಿನ್ನೂ ಸಿಕ್ಕಿಲ್ಲ, 2013ರ ಈ ಬೈಕ್‌ನ ಮಟ್ಟಿಗೆ ಬಹುಮುಖ್ಯ ವರ್ಷವಾಗಲಿದೆ.ಎನ್‌ಫೀಲ್ಡ್ ಕುತೂಹಲ ಮೂಡಿಸಿರುವುದು ತನ್ನ ಫ್ಯೂರಿ ಹಾಗೂ ಕೆಫೆ ರೇಸರ್ ಮೂಲಕ. ಕೊಂಚ ಹಳೆಯ ಶೈಲಿ ಎನ್ನಬಹುದಾದ ಎನ್‌ಫೀಲ್ಡ್ ಸಂಪೂರ್ಣ ಹೊಸ, ಆಧುನಿಕ ಶೈಲಿಯ ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿರುವುದು ಎಲ್ಲರ ಹುಬ್ಬೇರಿಸುತ್ತಿದೆ.ಅಮೆರಿಕದ ಮಾರುಕಟ್ಟೆಯ ಎನ್‌ಫೀಲ್ಡ್ ಎನ್ನಬಹುದಾದ ಹಾರ್ಲೆ ಡೇವಿಡ್‌ಸನ್ ತನ್ನ ಮಾರುಕಟ್ಟೆ ಪಾಲನ್ನು ಖಾತರಿಪಡಿಸಿಕೊಳ್ಳಲು ಕೆಲ ವರ್ಷಗಳ ಹಿಂದೆ ಇಂತಹುದೇ ಒಂದು ಕಸರತ್ತನ್ನು ನಡೆಸಿತ್ತು. ಈಗ ಎನ್‌ಫೀಲ್ಡ್ ಮೈಕೊಡವಿಕೊಂಡು ನಿಂತಿದೆ. ಫ್ಯೂರಿ ಅತಿ ಆಧುನಿಕ ನೋಟ, ತಂತ್ರಜ್ಞಾನ ಒಳಗೊಂಡಿರಲಿದೆ. ಆದರೆ ಕೆಫೆ ರೇಸರ್ ರೇಸಿಂಗ್ ಶೈಲಿಯನ್ನು ಒಳಗೊಂಡು ಕುತೂಹಲ ತಣಿಸಲಿದೆ. ಕೆಫೆ ರೇಸರ್ ಎನ್‌ಫೀಲ್ಡ್ ಬಳಿ ಮುಂಚೆಯೇ ಇತ್ತು. ಕ್ಲಾಸಿಕ್ ಬೈಕ್ ಅನ್ನು ಮರುಬಿಡುಗಡೆಗೊಳಿಸಿದ ಹಾಗೆ, ಕೆಫೆ ರೇಸರ್ ಸಹ ಬಿಡುಗಡೆ ಆಗಲಿದೆ. ಅತಿ ಚಿಕ್ಕ ವೀಲ್‌ಬೇಸ್‌ನ, ಏಕ ಆಸನ ಹೊಂದಿರುವ ವೇಗವಾಗಿ ಚಲಿಸುವ ಬೈಕ್ ಇದಾಗಲಿದೆ. ಈ ಎರಡೂ ಬೈಕ್‌ಗಳಲ್ಲೂ 500 ಸಿಸಿ ಎಂಜಿನ್ ಇರಲಿದೆ.ಟಿವಿಎಸ್ ಮೋಡಿ

ಟಿವಿಎಸ್ ಸಹ ಬೈಕ್ ಲೋಕಕ್ಕೆ ಒತ್ತು ನೀಡಲಿದೆ. ತನ್ನ ವೆಲಾಸಿಟಿ ಬೈಕ್ ಮೂಲಕ. ವೆಲಾಸಿಟಿ ಅಪ್ಪಟ ಸ್ಪೋರ್ಟ್ಸ್ ಬೈಕ್. ತನ್ನ ಅಪಾಚೆ ಬೈಕ್‌ನಿಂದಲೇ ಸ್ಫೂರ್ತಿ ಪಡೆದಿರುವ ಟಿವಿಎಸ್ ಈಗ ವೆಲಾಸಿಟಿಯನ್ನು ಅಭಿವದ್ಧಿಪಡಿಸಿದೆ. 160 ಸಿಸಿ ಎಂಜಿನ್ ಹಾಗೂ ವೇಗವರ್ಧಕ ಗುಣಗಳನ್ನು ಹೊಂದಿರುವುದೇ ಈ ಬೈಕ್‌ನ ವಿಶೇಷ. ಬೈಕ್‌ಗಳ ಜತೆಗೆ ಟಿವಿಎಸ್ ರಾಕ್ಸ್ ಎನ್ನುವ ಸ್ಕೂಟರ್ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಲಿದೆ. ಇದು ಸ್ಕೂಟರ್ ಸಹ ಅಲ್ಲದ, ಬೈಕ್ ಸಹ ಅಲ್ಲದ ವಿಶೇಷ ವಾಹನ. ಹಿಂದೆ ಬಜಾಜ್ ಬಳಿ ಇದ್ದ ಎಂ-80 ಶೈಲಿಯ ವಾಹನ. ಮತ್ತೆ ಭಾರತದಲ್ಲಿ ಈ ವಿಧವನ್ನು ಪ್ರಸಿದ್ಧಗೊಳಿಸುವ ಚಿಂತನೆ ಇದ್ದರೂ ಇರಬಹುದು.ಯಮಹಾ

ಯಮಹಾ 2012ರಲ್ಲಿ ರೇ ಸ್ಕೂಟರ್ ಬಿಟ್ಟು ಸುದ್ದಿ ಮಾಡಿತ್ತು. ಅದರಂತೆ 2013ರಲ್ಲಿ ನಿಯೋ ಎಂಬ ಸ್ಕೂಟರ್ ಹೊರಬಿಡಲಿದೆ. ವಿನ್ಯಾಸದಲ್ಲಿ ರೇ ಗಿಂತಲೂ ಅದ್ಭುತ ಎಂದು ಕಂಪೆನಿ ಹೇಳಿಕೊಂಡಿದೆ. ರೇ ಚೂಪಾದ ವಿನ್ಯಾಸ ಹೊಂದಿದ್ದರೆ, ನಿಯೋ ನಯವಾದ ವಿನ್ಯಾಸ ಹೊಂದಿರುವುದಂತೆ. ಅದೂ ಅಲ್ಲದೇ ಕೇವಲ 50 ಸಿಸಿಯ ಸ್ಕೂಟರ್ ಇದು. 30 ಸಾವಿರ ರೂಪಾಯಿಗೆ ಸ್ಕೂಟರ್ ನೀಡಬೇಕು ಎಂಬುದು ಚಿಂತನೆ. ಯಮಹಾದ ಸ್ಕೂಟರ್ ಇಷ್ಟು ಕಡಿಮೆ ಬೆಲೆಗೆ ಸಿಕ್ಕರೆ, ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗುವುದು ಎಂಬುದು ಲೆಕ್ಕಾಚಾರವಂತೆ. ಇದರ ಜತೆಗೆ ಯಮಹಾ ಸ್ಪಾರ್ಕ್ ಎಂಬ ಸ್ಕೂಟರ್ ಬಿಡಲು ಚಿಂತನೆ ನಡೆಸಿದೆ. ದೊಡ್ಡ ಚಕ್ರಗಳ ಎಂ-80 ಶೈಲಿಯ ಸ್ಕೂಟರ್ ಇದು.ವಿದೇಶಿ ಬೈಕ್ ಸಂತೆ?

ನಿರೀಕ್ಷೆಯಲ್ಲಿ ವಿದೇಶಿ ಬೈಕ್‌ಗಳದ್ದು ಸಿಂಹ ಪಾಲು. ಹಿಂದೆ ಇದ್ದ ಕೈನೆಟಿಕ್ ಮೂಲಕ ಭಾರತಕ್ಕೆ ಪ್ರವೇಶ ಮಾಡಿದ್ದ ಹ್ಯೋಸಂಗ್ ಈಗ ಮಹಿಂದ್ರಾ ಟೂವೀಲರ್ಸ್ ಮೂಲಕ ಪದಾರ್ಪಣೆ ಮಾಡಲು ಸಿದ್ಧತೆ ನಡೆಸಿದೆ. 2013ಕ್ಕೆ ತನ್ನ ಜಿವಿ-250 ಹಾಗೂ ಜಿವಿ-650 ಬೈಕ್‌ಗಳನ್ನು ಹೊರಬಿಡಲಿದೆ. ಈ ಎರಡೂ ಬೈಕ್‌ಗಳ ಬೆಲೆ ಕ್ರಮವಾಗಿ 2 ಲಕ್ಷ, 5 ಲಕ್ಷ ರೂಪಾಯಿಗಳು.ಈಗಾಗಲೇ ಬಜಾಜ್ ಮೂಲಕ ಪರಿಚಿತಗೊಂಡಿರುವ ಕೆಟಿಎಂ, ತನ್ನ ಡ್ಯೂಕ್ 390 ಸಿಸಿ ಬೈಕ್ ಅನ್ನು 2013ರಲ್ಲಿ ಪರಿಚಯಿಸಲಿದೆ. ಅಲ್ಲದೇ, ಈ ವರ್ಷದ ಅತಿ ಪ್ರಮುಖ ನಿರೀಕ್ಷೆ ಹಾರ್ಲೆ ಡೇವಿಡ್‌ಸನ್‌ನದ್ದು. ಈಗಾಗಲೇ ಭಾರತದಲ್ಲಿ ತನ್ನ ತಯಾರಿಕಾ ಘಟಕದ ಸ್ಥಾಪಿಸಿರುವ ಕಂಪೆನಿ, ತನ್ನ ಬೈಕ್‌ಗಳ ಬಿಡುಗಡೆಗೆ ಕ್ಷಣಗಣನೆ ಮಾಡುತ್ತಿದೆ. ಇದೇನಾದರೂ ನಿಜವಾದರೆ, ಭಾರತೀಯ ಸುಮಾರು 2 ದಶಕಗಳ ಹಾರ್ಲೆ ಡೇವಿಡ್‌ಸನ್ ಬೈಕ್ ಹೊಂದುವ ಕನಸು ನನಸಾದಂತೆ ಆಗುತ್ತದೆ.ಇವಲ್ಲದೇ, ಹೋಂಡಾ ಹಾಗೂ ಮಹಿಂದ್ರಾ ಅನೇಕ ಸಣ್ಣ ಎಂಜಿನ್ ಉಳ್ಳ ಬೈಕ್ ಹೊರಬಿಡಲಿವೆ. ಹೋಂಡಾ ಎಲೆಕ್ಟ್ರಿಕ್ 2012ರಲ್ಲೇ ವಿದ್ಯುಚ್ಚಾಲಿತ ಬೈಕ್ ಬಿಡುವುದಾಗಿ ಪ್ರಕಟಿಸಿತ್ತು. ಇದೇನಾದರೂ 2013 ರಲ್ಲಿ ಬಿಡಗಡೆ ಆದರೆ, ಬೈಕ್ ಲೋಕಕ್ಕೆ ಹೊಸ ವ್ಯಾಖ್ಯಾನವನ್ನೇ ಬರೆಯಬೇಕಾಗುವುದೋ ಏನೋ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry