ಬುಧವಾರ, ಅಕ್ಟೋಬರ್ 16, 2019
27 °C

ಹೊಸ ವರ್ಷಾಚರಣೆ; ಎಲ್ಲೆಡೆ ಪ್ರವಾಸಿಗರ ಕಲರವ

Published:
Updated:

ಮಡಿಕೇರಿ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರ ದಂಡು ಬೀಡುಬಿಟ್ಟಿದೆ. ವಾರಾಂತ್ಯದಲ್ಲಿ ಹೊಸ ವರ್ಷ ಆರಂಭ ಗೊಳ್ಳುತ್ತಿರುವ ಕಾರಣ ಪ್ರವಾಸಿಗರ ನಿರೀಕ್ಷೆಗಿಂತಲೂ ಹೆಚ್ಚಾಗಿದೆ. ಇದರಿಂದಾಗಿ ನಗರದಲ್ಲಿ ಎಲ್ಲಿ ನೋಡಿದರೂ ಪ್ರವಾಸಿಗರು ಹಾಗೂ ಪ್ರವಾಸಿ ವಾಹನಗಳು ಕಾಣುತ್ತಿವೆ.ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿರುವ ಕಾರಣ ನಗರದೆಲ್ಲೆಡೆ ವಾಹನಗಳ ದಟ್ಟಣೆಯೂ ಕಂಡುಬರುತ್ತಿದೆ. ಮತ್ತೊಂದೆಡೆ ನಗರದಲ್ಲಿ ಹಲವೆಡೆ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಸ್ವಲ್ಪ ಮಟ್ಟಿನ ತೊಂದರೆಯೂ ಆಗಿದೆ.ಇಲ್ಲಿರುವ ಎಲ್ಲ ಹೋಟೆಲ್‌ಗಳು, ಹೋಂ ಸ್ಟೇಗಳು ಹಾಗೂ ರೆಸಾರ್ಟ್‌ಗಳು ಪ್ರವಾಸಿಗರಿಂದ ತುಂಬಿಹೋಗಿವೆ. ರಾಜ್ಯದಿಂದ ಅಲ್ಲದೇ, ನೆರೆಯ ಕೇರಳ, ತಮಿಳುನಾಡು, ಹೈದ್ರಾಬಾದ್‌ನಿಂದಲೂ ಪ್ರವಾಸಿಗರು ಇಲ್ಲಿಗೆ ಬಂದಿದ್ದಾರೆ.ಚಳಿಯ ಅನುಭವದ ಜೊತೆ ಹೊಸ ವರ್ಷವನ್ನು ಆಹ್ವಾನಿಸಲು ಆಗಮಿಸಿರುವ ಪ್ರವಾಸಿಗರ ಸಂಖ್ಯೆ ಹತ್ತು ಸಾವಿರಕ್ಕೂ ಹೆಚ್ಚಾಗಿದೆ ಎನ್ನಬಹುದು. ನಗರದ ರಾಜಾಸೀಟು, ಅಬ್ಬಿಫಾಲ್ಸ್, ರಾಜರ ಗದ್ದುಗೆ ಸುತ್ತಾಡಿದ ನಂತರ ಪ್ರವಾಸಿಗರು ಇಲ್ಲಿಗೆ ಸಮೀಪದ ಕುಶಾಲನಗರದ ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯಕ್ಕೂ ಭೇಟಿ ನೀಡಿದ್ದಾರೆ.ಪ್ರವಾಸಿಗರಿಗೆ ಕೊಡಗು ಅಚ್ಚುಮೆಚ್ಚಿನ ಸ್ಥಳ ಎನ್ನುವುದು ಇದು ಪುಷ್ಠೀಕರಿಸುತ್ತದೆ. ಇಲ್ಲಿನ ನಿಸರ್ಗ ಸೌಂದರ್ಯದ ಜೊತೆ ಸಾಂಪ್ರದಾಯ ವೈವಿಧ್ಯತೆ ಕೂಡ ಅವರ ಆಕರ್ಷಣೆಯ ಪ್ರಮುಖ ಕಾರಣವಾಗಿದೆ. ಪ್ರವಾಸಿಗರ ಆಗಮನದಿಂದ ಸ್ಥಳೀಯರ ವ್ಯಾಪಾರ, ಆದಾಯ ವೃದ್ಧಿಯಾಗಿದೆ ಎನ್ನಬಹುದು.ವಿವಿಧೆಡೆ ಕಾಮಗಾರಿ


ನಗರದ ಪ್ರಮುಖ ಸ್ಥಳವಾಗಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಎದುರು ಕಾಲುವೆಗೆ ತಡೆಗೋಡೆ ನಿರ್ಮಿಸುತ್ತಿರುವುದು, ಕಾಲೇಜ್ ರಸ್ತೆಯ ಕಾಂಕ್ರೀಟ್ ಕಾರ್ಯ ನಡೆಯುತ್ತಿರುವುದು, ವಿಜಯ-ವಿನಾಯಕ ದೇವಸ್ಥಾನದ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.ಇದಲ್ಲದೇ. ಸೋಮವಾರ ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಈ ವೃತ್ತದ ಬಳಿ ನಿರ್ಮಿಸಲಾಗಿರುವ ಸ್ವಾತಂತ್ರ್ಯ ಸೇನಾನಿ ಗುಡ್ಡೆಮನೆ ಅಪ್ಪಯ್ಯಗೌಡ ಅವರ ಪುತ್ಥಳಿಯನ್ನು  ಅನಾವರಣಗೊಳಿಸಲಿದ್ದಾರೆ. ಈ ಕಾರಣಕ್ಕಾಗಿ ಸುದರ್ಶನ ವೃತ್ತದ ಬಳಿ ರಸ್ತೆ ಗುಂಡಿಗಳನ್ನು ಮುಚ್ಚಿ, ತೇಪೆ ಹಾಕುವ ಕೆಲಸವೂ ಭರದಿಂದ ಸಾಗಿದೆ.ಮುಖ್ಯಮಂತ್ರಿ ಅವರು ಗಾಂಧಿ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಕಾರಣ ಮೈದಾನಕ್ಕೆ ಹೋಗುವ ರಸ್ತೆಯಲ್ಲೂ ತೇಪೆಹಾಕುವ ಕೆಲಸ ನಡೆದಿದೆ.ಒಂದೆಡೆ ರಸ್ತೆ ಅಭಿವೃದ್ಧಿ ಕೆಲಸಗಳು ನಡೆದಿದ್ದರೆ ಮತ್ತೊಂದೆಡೆ ಪ್ರವಾಸಿಗರ ವಾಹನಗಳ ಭರಾಟೆಯಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರದಟ್ಟಣೆ ಕಂಡುಬರುತ್ತಿದೆ. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಸಂಚಾರಿ ಪೊಲೀಸರು ಪರದಾಡುತ್ತಿರುವುದು ಕಂಡುಬರುತ್ತಿದೆ. ಕೆಲವು ಸ್ಥಳಗಳಲ್ಲಿ ಏಕಮುಖ ಸಂಚಾರ ಮಾಡುವ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಾದರೆ ಸಂಚಾರ ದಟ್ಟಣೆ ನಿವಾರಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

Post Comments (+)