ಬುಧವಾರ, ಅಕ್ಟೋಬರ್ 23, 2019
25 °C

ಹೊಸ ವರ್ಷ: ಎಲ್ಲೆಡೆ ಹರ್ಷ

Published:
Updated:

ನ್ಯೂಯಾರ್ಕ್/ ಲಂಡನ್ (ಪಿಟಿಐ): ಹೊಸ ವರ್ಷವನ್ನು ಜಗತ್ತಿನಾದ್ಯಂತ ಸಂಭ್ರಮ ಮತ್ತು ಹರ್ಷೋಲ್ಲಾಸದಿಂದ ಬರಮಾಡಿಕೊಳ್ಳಲಾಯಿತು. ವಿಶ್ವದ ಪ್ರಮುಖ ಮಹಾನಗರಗಳಲ್ಲಿ ಸುಡುಮದ್ದು, ಬಾಣ ಬಿರುಸುಗಳು ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡಿಸಿದವು. ಪ್ರಮುಖ ಸ್ಥಳಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿ ಶಿಳ್ಳೆ, ಕೇಕೆ ಹೊಡೆದು ಸಂಭ್ರಮಿಸಿದರು.ನೈಸರ್ಗಿಕ ವಿಕೋಪ ಮತ್ತು ಆರ್ಥಿಕ ಹಿಂಜರಿತಕ್ಕೆ ಸಾಕ್ಷಿಯಾಗಿದ್ದ 2011ನೇ ವರ್ಷವನ್ನು ಬೀಳ್ಕೊಟ್ಟು 2012ನೇ ಸಾಲನ್ನು ಅದ್ದೂರಿಯಾಗಿ ಸ್ವಾಗತಿಸಿದರು. `ಕ್ರಿಸ್ಟಲ್ ಬಾಲ್~ಗೆ ಸಾಕ್ಷಿಯಾಗಲು ನ್ಯೂಯಾರ್ಕ್‌ನ ಟೈಮ್ಸ ಸ್ಕ್ವೇರ್‌ಗೆ ಜನಸಾಗರವೇ ಹರಿದು ಬಂದಿತ್ತು.ಮಧ್ಯರಾತ್ರಿ 12 ಗಂಟೆಗೆ, 2012ನೇ ಸಾಲಿಗೆ ಕಾಲಿಡುತ್ತಲೇ ನೆರೆದಿದ್ದ ಜನರ ಕರತಾಡನ ಮುಗಿಲು ಮುಟ್ಟಿತ್ತು. ಈ ಸಂದರ್ಭದಲ್ಲಿ ಯುವ ಜೋಡಿಗಳು ಪರಸ್ಪರ ಚುಂಬಿಸಿಕೊಂಡರೆ, ಮತ್ತೆ ಕೆಲವರು ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.`ಕ್ರಿಸ್ಟಲ್ ಬಾಲ್~ ಬೀಳುವ ಮುನ್ನ ಲೇಡಿ ಗಾಗಾ ಮತ್ತು ಮೇಯರ್ ಮೈಕಲ್ ಬ್ಲೂಮ್‌ಬರ್ಗ್ ಅವರ ನೇತೃತ್ವದಲ್ಲಿ ಸಹಸ್ರಾರು ಜನ ಹೊಸ ವರ್ಷದ ಅಂತಿಮ ಸೆಕೆಂಡ್‌ಗಳನ್ನು ಎಣಿಸಿದ್ದು ವಿಶೇಷವಾಗಿತ್ತು.ಮಧ್ಯರಾತ್ರಿ 12 ಗಂಟೆಯಾಗುತ್ತಲೇ ಲಂಡನ್‌ನ ಥೇಮ್ಸ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲಿಂದ ಸುಡುಮದ್ದು ಇಡೀ ಆಕಾಶವನ್ನು ಬಣ್ಣಮಯಗೊಳಿಸಿತ್ತು. ಈ ವಿಹಂಗಮ ದೃಶ್ಯಕ್ಕೂ ಸಹಸ್ರಾರು ಜನ ಸಾಕ್ಷಿಯಾದರು.  ಜಗತ್ತಿನಲ್ಲಿ ಎಲ್ಲಕ್ಕಿಂತ ಮುಂಚಿತವಾಗಿ ಹೊಸ ವರ್ಷಕ್ಕೆ ನ್ಯೂಜಿಲೆಂಡ್‌ನ ಆಕ್ಲೆಂಡ್ ನಗರ ಸಾಕ್ಷಿಯಾಗಿದ್ದು ವಿಶೇಷ. ಇಲ್ಲಿ ನಡೆದ ವಾರ್ಷಿಕ ಸುಡುಮದ್ದು ಪ್ರದರ್ಶನದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಇದಲ್ಲದೇ ಸಿಡ್ನಿ, ಮಾಸ್ಕೊ, ಟೋಕಿಯೊ, ಹಾಂಗ್‌ಕಾಂಗ್‌ನಲ್ಲಿ ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು. ವ್ಯಾಟಿಕನ್‌ನಲ್ಲಿ ಜಗತ್ತಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಚಳವಳಿ 2012ನೇ ಸಾಲಿನಲ್ಲಿ ಮುಂದುವರಿಯುವ ಸಾಧ್ಯತೆ ಇದ್ದು, ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಅಗತ್ಯ ನೆರವು ನೀಡುವುದಾಗಿ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ತಿಳಿಸಿದ್ದಾರೆ.`ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ ಮತ್ತು ರಾಜಕೀಯ ದ್ವೇಷ ಮರೆತು ಸೌಹಾರ್ದದಿಂದ ಜೀವನ ನಡೆಸಲಿ~ ಎಂದು ರಷ್ಯಾದ ಪ್ರಧಾನಿ ವ್ಲಾಡಿಮಿರ್ ಪುಟಿನ್ ಹಾರೈಸಿದ್ದಾರೆ. ಕಳೆದ ಸಾಲಿಗಿಂತ 2012ನೇ ವರ್ಷ ಬಹಳಷ್ಟು ಸವಾಲಿನಿಂದ ಕೂಡಿರುತ್ತದೆ ಎಂದು ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)