ಭಾನುವಾರ, ಡಿಸೆಂಬರ್ 8, 2019
25 °C

ಹೊಸ ವಿನ್ಯಾಸದಲ್ಲಿ `ಫೇಸ್‌ಬುಕ್'

Published:
Updated:
ಹೊಸ ವಿನ್ಯಾಸದಲ್ಲಿ `ಫೇಸ್‌ಬುಕ್'

ಬದಲಾವಣೆ ಜಗದ ನಿಯಮ. ಸತತವಾಗಿ ವಿಶ್ವದ ಸಕಲವೂ ಬದಲಾಗುತ್ತಲೇ ಇರುತ್ತದೆ. ಬೆಳಗಿನ ಹೊಂಬೆಳಕು ಮಧ್ಯಾಹ್ನದ ಹೊತ್ತಿಗೆ ಇರುವುದಿಲ್ಲ. ಮಧ್ಯಾಹ್ನದ ಉರಿಬಿಸಿಲು  ಸಂಜೆಯಲ್ಲಿಇರುವುದಿಲ್ಲ. ರಾತ್ರಿ ಚುಕ್ಕಿಗಳು ಹಗಲಿನಲ್ಲಿ ಕಾಣುವುದಿಲ್ಲ... ಹೀಗೆ ವಿಶ್ವದ ಚರಾಚರವೂ ಬದಲಾಗುತ್ತಲೇ ಸಾಗುತ್ತಿದೆ.ಹಾಗೆಯೇ ಫೇಸ್‌ಬುಕ್ ಕೂಡ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹೊಸ ಹೊಸದನ್ನು ತನ್ನ ತೆಕ್ಕೆಯಲ್ಲಿ ಸೇರಿಸಿಕೊಳ್ಳುತ್ತಾ ಬದಲಾಗುತ್ತಲೇ ಸಾಗುತ್ತಿದೆ.ಸದ್ಯ 2013ರಲ್ಲಿ ಫೇಸ್‌ಬುಕ್ ತನ್ನ ಸರ್ಚ್ ಎಂಜಿನನ್ನು ಮೇಲ್ದರ್ಜೆಗೇರಿಸಿಕೊಳ್ಳುತ್ತಿದೆ. ಹಾಗೆಯೇ  ತನ್ನ ಮುಖಪುಟದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಸಿಂಗರಿಸಿಕೊಂಡಿದೆ.ಮೊದಲನೆಯದಾಗಿ ಶೋಧನಾ  ಯಂತ್ರವನ್ನು  ಮೇಲ್ದರ್ಜೆಗೇರಿಸಿಕೊಳ್ಳುತ್ತಿರುವುದು ಅತಿ ಮುಖ್ಯವಾದ ಬದಲಾವಣೆ. ಇದು ಗೂಗಲ್ ಸೇರಿದಂತೆ ಇನ್ನಿತರ ಶೋಧನಾ ಎಂಜಿನ್‌ಗಳಿಗೆ ತೀವ್ರವಾದ ಪ್ರತಿಸ್ಪರ್ಧೆಯನ್ನು ಒಡ್ಡುವಂತಿದೆ.ಇಂಟರ್‌ನೆಟ್‌ನಲ್ಲಿ ಹುಡುಕುವುದಕ್ಕೆ ಸಂಬಂಧಿಸಿದಂತೆ ಕಾಮಧೇನು ಎನಿಸಿರುವ ಗೂಗಲ್ ಅನ್ನೇ ಇದು ಒಂದು ಹಂತದಲ್ಲಿ ಮೀರಿಸುವಂತಿದೆ. ಗೂಗಲ್ ಸೇರಿದಂತೆ ಯಾವುದೇ ಶೋಧನಾ ಯಂತ್ರದಲ್ಲಿ ನಮಗೆ ಬೇಕಿರುವ ಸಂಗತಿಗಳಿಗೆ ಸಂಬಂಧಿಸಿದಂತೆ ವೆಬ್‌ತಾಣಗಳು, ಚಿತ್ರಗಳು ಸಂಬಂಧಿಸಿದ ಬರಹಗಳು ಮೂಡಿ ಬರುತ್ತವೆ.ಆದರೆ ಫೇಸ್‌ಬುಕ್ ನೂತನವಾಗಿ  ತರಲಿರುವ ಶೋಧನಾ ಯಂತ್ರದಲ್ಲಿ, ನಮಗೆ ಬೇಕಾದ ಸಂಗತಿಗಳನ್ನು ಹುಡುಕುವುದಷ್ಟೇ ಅಲ್ಲ ಆ ಸಂಗತಿಗಳನ್ನು ಎಷ್ಟು ಮಂದಿ `ಲೈಕ್' ಮಾಡಿದ್ದಾರೆ, ನಮ್ಮ ಗೆಳೆಯರ ಬಳಗದಲ್ಲಿ ಎಷ್ಟು ಮಂದಿ ನಾವು ಹುಡುಕುತ್ತಿರುವ ಸಂಗತಿಗಳನ್ನು `ಲೈಕ್' ಮಾಡಿದ್ದಾರೆ ಎಂಬ ಅಂಶ ಹಾಗೂ ಈ ಸಂಗತಿಗಳಿಗೆ ಸಂಬಂಧಿಸಿದಂತೆ ನಮ್ಮ ಗೆಳೆಯರ ಬಳಗದ ಸದಸ್ಯರು ಮಾಡಿರುವ ಪೋಸ್ಟ್‌ಗಳ ವಿವರಗಳು... ಹೀಗೆ ಹುಡುಕುವುದಕ್ಕೆ ಒಂದು ಹೊಸ ಆಯಾಮವನ್ನೇ ಇದು ತಂದುಕೊಟ್ಟಿದೆ.ಇದರಿಂದ ಹೆಚ್ಚು ಸವಿವರವಾದ ಮಾಹಿತಿಯನ್ನು ಬಳಗದ ಸದಸ್ಯರು ಹುಡುಕಬಹುದು. ಒಂದು ರೀತಿಯಲ್ಲಿ ಗೂಗಲ್‌ಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಇದು ರೂಪುಗೊಂಡಿದೆ.ಈ ಹೊಸ ಶೋಧನಾ ವ್ಯವಸ್ಥೆಯ ರೂವಾರಿ ಗೂಗಲ್‌ನಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಲಾರ್ಸ್‌ ರಾಸ್‌ಮುಸೇನ್ ಹಾಗೂ ಟಾಮ್ ಸ್ಟಾಕಿ.ಉದಾ: `ಪ್ರಜಾವಾಣಿ' ಎಂದು ಫೇಸ್‌ಬುಕ್‌ನ ಗ್ರಾಫ್ ಸರ್ಚ್ ಎಂದು ಕರೆಯಲಾಗುವ ಜಾಗದಲ್ಲಿ ನಮೂದಿಸಿದರೆ ತಕ್ಷಣವೇ ಪ್ರಜಾವಾಣಿಯನ್ನು ಇಷ್ಟಪಡುವವರ ಹೆಸರುಗಳು ಮೂಡುತ್ತವೆ. ನಂತರ ಪ್ರಜಾವಾಣಿಯನ್ನು ಲೈಕ್ ಮಾಡುವ ನಮ್ಮ ಗೆಳೆಯರ ಬಳಗದ ವಿವರಗಳು ಒಂದೊಂದಾಗಿ ಮೂಡಿ ಬರುತ್ತವೆ. ಹಾಗೆಯೇ ಪ್ರಜಾವಾಣಿ ಬಗೆಗೆ ಹಾಕಲಾಗಿರುವ ಚಿತ್ರಗಳು, ಕಾಮೆಂಟುಗಳೂ ತೆರೆದುಕೊಳ್ಳುತ್ತವೆ.ಇದರಿಂದ ಒಟ್ಟಾರೆ ಒಂದು ವಿಷಯದ ಬಗೆಗಿನ ಸ್ಥೂಲ ಚಿತ್ರಣ ಸಿಗುತ್ತದೆ ಎಂಬುದು ಫೇಸ್‌ಬುಕ್‌ನ ಆಶಯ. ಮುಖ್ಯವಾಗಿ ನಿರ್ದಿಷ್ಟ ಕಂಪೆನಿಯಲ್ಲಿ ಉದ್ಯೋಗ ಹುಡುಕುವ ಯುವಜನತೆಗೆ ಇದರಿಂದ ಅಧಿಕ ಲಾಭವಾಗಲಿರುವುದಂತೂ ಸತ್ಯ.ಆದರೆ ಮತ್ತೆ ಇದರಲ್ಲಿ ಖಾಸಗಿತನದ ಪ್ರಶ್ನೆ ಎದ್ದಿದೆ. ನಾವು ಲೈಕ್ ಮಾಡಿದ ವಿವರಗಳು ಬೇರೆಯವರೂ ಸರ್ಚ್ ಮಾಡುವಾಗ ತೆರೆದುಕೊಳ್ಳುವುದರಿಂದ ಇದು  ಫೇಸ್‌ಬುಕ್‌ನ ಬಳಕೆದಾರರ ಖಾಸಗಿತನಕ್ಕೆ ಭಂಗ ತರುತ್ತದೆ ಎಂಬ ಟೀಕೆಗಳೂ ಕೇಳಿಬಂದಿವೆ.

ಸದ್ಯ ಅಮೆರಿಕದಲ್ಲಿ ಮಾತ್ರ ಇದು ಪ್ರಾಯೋಗಿಕ ಹಂತದಲ್ಲಿದ್ದು, ಆದಷ್ಟು ಶೀಘ್ರದಲ್ಲಿ ವಿಶ್ವಾದ್ಯಂತ ಬಳಕೆಗೆ ಮುಕ್ತವಾಗಲಿದೆಯಂತೆ. ಅದಕ್ಕಾಗಿ ht-t-ps://-w-ww.fac-e-b-ook.co-m-/-a-b-ou-t-/-gr-a-p-h-s-e-arch ವೆಬ್‌ತಾಣವನ್ನು ಕ್ಲಿಕ್ ಮಾಡಿ ನಿಮ್ಮ ಫೇಸ್‌ಬುಕ್ ಖಾತೆಯನ್ನು ವೇಟಿಂಗ್ ಪಟ್ಟಿಯಲ್ಲಿ ನೋಂದಾಯಿಸಿಕೊಂಡರೆ ಈ ಸೌಲಭ್ಯ ಬಹುಬೇಗನೆ ಲಭ್ಯವಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.ಉಳಿದಂತೆ ಫೇಸ್‌ಬುಕ್‌ನ ಬಳಕೆದಾರರ ಮುಖಪುಟದಲ್ಲಿ ಗೆಳೆಯರ ಬಳಗದ ಚಿತ್ರಗಳನ್ನು ಪುಟದ ಎಡಗಡೆ ಕ್ರಮಬದ್ದವಾಗಿ ಜೋಡಿಸಿದ್ದರೆ, ನಂತರದಲ್ಲಿ ಬಳಕೆದಾರರು ಇಷ್ಟಪಡುವ ಸಂಗೀತ, ಚಲನಚಿತ್ರ, ಟಿ.ವಿ ಕಾರ್ಯಕ್ರಮಗಳು, ಪುಸ್ತಕವಿವರಗಳು ಒಂದೊಂದಾಗಿ ಮೂಡಿಬರುತ್ತವೆ. ಅದರ ಕೆಳಗೆ ಬಳಕೆದಾರರು ಇಷ್ಟಪಟ್ಟಿರುವ ತಾಣಗಳ ವಿವರಗಳು ಸಚಿತ್ರವಾಗಿ ಮೂಡುತ್ತವೆ. ಆನಂತರ ಇತ್ತೀಚೆಗೆ ಬಳಕೆದಾರರು ಮಾಡಿರುವ `ಲೈಕ್'ಗಳು, ಹೊಸದಾಗಿ ಬೆಸೆದಿರುವ ಗೆಳೆತನದ ಸಂಬಂಧಗಳು ಮೂಡುತ್ತವೆ. ಪುಟದ ಮಧ್ಯ ಭಾಗದಲ್ಲಿ ಸ್ನೇಹಿತರು ಹಾಕಿರುವ ಸ್ಟೇಟಸ್ ಕಾಣಿಸುತ್ತದೆ.ಒಟ್ಟಾರೆ ಫೇಸ್‌ಬುಕ್ 2013ರಲ್ಲಿ ಹೊಸ ರೀತಿಯಲ್ಲಿ ಸಿಂಗರಿಸಿಕೊಂಡು ತನ್ನ ಬಳಕೆದಾರರಿಗೆ ಹೊಸ ಬಗೆಯ ಸೇವೆಯ ಅನುಭವವನ್ನು ನೀಡಲು ಅಣಿಯಾಗಿದೆ.100 ಕೋಟಿ ಸಕ್ರಿಯ ಬಳಕೆದಾರರು

ಮೇ 14, 1984ರಲ್ಲಿ ಅಮೆರಿಕದ ಮಾರ್ಕ್ ಏಲಿಯಟ್ ಜ್ಯುಕರ್‌ಬರ್ಗ್ ತನ್ನ 20ನೇ ವಯಸ್ಸಿನಲ್ಲಿ ಅಂದರೆ 2004ರಲ್ಲಿ  `ಫೇಸ್‌ಬುಕ್' ಎಂಬ ಸಾಮಾಜಿಕ ಜಾಲತಾಣವನ್ನು ತನ್ನ ನಾಲ್ವರು ಗೆಳೆಯರೊಂದಿಗೆ ಆರಂಭಿಸಿದರು.ಸದ್ಯ ಫೇಸ್‌ಬುಕ್‌ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಅವರು ಫೇಸ್‌ಬುಕ್‌ನ ಈ ವಿಶ್ವವ್ಯಾಪಕತೆಗೆ ಸಾಕಷ್ಟು ಶ್ರಮಿಸಿದ್ದಾರೆ.2004ರ ನಂತರ ಇಲ್ಲಿಯವರೆಗೂ ಫೇಸ್‌ಬುಕ್ ಕಳೆಗುಂದಿದ್ದೇ ಇಲ್ಲ. ವರ್ಷದಿಂದ ವರ್ಷಕ್ಕೆ ತನ್ನ ಜತೆಗೆ ಸ್ಪರ್ಧೆ ಒಡ್ಡಿದ್ದ ಇನ್ನಿತರ ಜಾಲತಾಣಗಳನ್ನು ಹಿಂದಿಕ್ಕಿ ಇಡೀ ಯುವಸಮುದಾಯವನ್ನೇ ಶರವೇಗದಲ್ಲಿ ಆವರಿಸಿಕೊಂಡಿದೆ. ಸದ್ಯ ಸಾಮಾಜಿಕ ಜಾಲತಾಣ ವಿಷಯದಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿರುವ  `ಫೇಸ್‌ಬುಕ್'ಗೆ ಪ್ರತಿ ತಿಂಗಳು ಸರಿ 100 ಕೋಟಿ ಸಕ್ರಿಯ ಬಳಕೆದಾರರು ಭೇಟಿ ನೀಡುತ್ತಾರೆ.

ಪ್ರತಿಕ್ರಿಯಿಸಿ (+)