ಸೋಮವಾರ, ನವೆಂಬರ್ 18, 2019
24 °C
ಅಮೆರಿಕ -ಭಾರತ ವಾಣಿಜ್ಯ ಮಂಡಳಿ ಆತಂಕ

ಹೊಸ ವೀಸಾ ನೀತಿಯಿಂದ ಪ್ರತಿಕೂಲ ಪರಿಣಾಮ

Published:
Updated:
ಹೊಸ ವೀಸಾ ನೀತಿಯಿಂದ ಪ್ರತಿಕೂಲ ಪರಿಣಾಮ

ವಾಷಿಂಗ್ಟನ್ (ಪಿಟಿಐ): ವಾಣಿಜ್ಯ ವೀಸಾ ಮತ್ತು ಉದ್ಯೋಗ ವೀಸಾದ ಮೇಲೆ ನಿರ್ಬಂಧ ಹೇರಲು ಉದ್ದೇಶಿಸಿರುವ ಅಮೆರಿಕದ ಪ್ರಸ್ತಾಪಿತ ವಲಸೆ ಮಸೂದೆ ಭಾರತದ ಕಂಪೆನಿಗಳಿಗೆ ಹೊಡೆತ ನೀಡಲಿದ್ದು, ಉಭಯ ದೇಶಗಳ ವಾಣಿಜ್ಯ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅಮೆರಿಕ -ಭಾರತ ವಾಣಿಜ್ಯ ಮಂಡಳಿ (ಯುಎಸ್‌ಐಬಿಸಿ) ಆತಂಕ ವ್ಯಕ್ತಪಡಿಸಿದೆ.`ವಲಸೆ ಸುಧಾರಣೆ' ಮಸೂದೆ ಪ್ರಸ್ತಾವನೆ ಸಿದ್ಧಪಡಿಸುವ ಹೊಣೆ ಹೊತ್ತಿರುವ ಎಂಟು ಸೆನೆಟ್ ಸದಸ್ಯರ ತಂಡಕ್ಕೆ ಯುಎಸ್‌ಐಬಿಸಿ ಮಾರ್ಚ್ 22ರಂದು ಮೂರು ಪುಟಗಳ ಪತ್ರ ಬರೆದಿದೆ.ಈ ಮಸೂದೆ ಕಾಯ್ದೆಯಾದಲ್ಲಿ ಎಚ್1ಬಿ ಹಾಗೂ ಎಲ್-1 ವೀಸಾ (ಎರಡೂ ತಾತ್ಕಾಲಿಕ ಉದ್ಯೋಗ ವೀಸಾಗಳು) ಪ್ರಾಯೋಜಿಸುವ ಕಂಪೆನಿಗಳು ಅತಿಯಾದ ನಿಬಂಧನೆಗೆ ಒಳಪಡುತ್ತವೆ. ಆ ಕಂಪೆನಿಗಳು ಭಾರಿ ಮೊತ್ತದ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಎಂದು ಯುಎಸ್‌ಐಬಿಸಿ ಅಧ್ಯಕ್ಷ ರಾನ್ ಸೋಮರ್ಸ್‌ ಅವರು ಸೆನೆಟ್ ಸದಸ್ಯರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪೆನಿಗಳನ್ನು ಗುರಿಯಾಗಿಟ್ಟುಕೊಂಡು ರೂಪಿಸಲಾಗಿರುವ ವೀಸಾ ನಿರ್ಬಂಧಗಳು ಮತ್ತು ಶುಲ್ಕ ಉಭಯದೇಶಗಳ ಸಹಭಾಗಿತ್ವ ತತ್ವಗಳಿಗೆ ವಿರುದ್ಧವಾಗಿವೆ.ಇದನ್ನೇ ಮಾದರಿಯಾಗಿಟ್ಟುಕೊಂಡು ಭಾರತೀಯ ಕಂಪೆನಿಗಳ ಹಿತಾಸಕ್ತಿ ರಕ್ಷಿಸಲು ಅಲ್ಲಿನ ಸರ್ಕಾರ ಯತ್ನಿಸಿದಲ್ಲಿ, ಅದು ಉಭಯ ದೇಶಗಳ ವಾಣಿಜ್ಯ ಮತ್ತು ಆರ್ಥಿಕ ಸಹಕಾರಕ್ಕೆ ಅಡ್ಡಿಯಾಗಲಿದೆ ಎಂದೂ ಯುಎಸ್‌ಐಬಿಸಿ ಹೇಳಿದೆ.`50:50 ಮಾದರಿ'ಗೆ (ಯಾವ ಅರ್ಜಿದಾರರು 50 ಅಥವಾ ಅದಕ್ಕೂ ಹೆಚ್ಚು ನೌಕರರನ್ನು ಹೊಂದಿದ್ದಾರೆ ಹಾಗೂ   ಶೇ 50ರಷ್ಟು ನೌಕರರು ಎಚ್1ಬಿ ಮತ್ತು ಎಲ್1 ವೀಸಾ ಹೊಂದಿದ್ದಾರೆ) ತೀವ್ರ ವಿರೋಧ ವ್ಯಕ್ತಪಡಿಸಿರುವ ಯುಎಸ್‌ಐಬಿಸಿ, ಸಿಬ್ಬಂದಿ ಅನುಪಾತದ ಮೇಲೆ ಕಂಪೆನಿಗಳ ಗುರುತಿಸುವಿಕೆಯು ಸ್ಥಳೀಯ ಹೂಡಿಕೆ ಮತ್ತು ಭವಿಷ್ಯದ ಹೊರಗುತ್ತಿಗೆ ಯೋಜನೆಗಳನ್ನು ವಿಫಲಗೊಳಿಸುತ್ತದೆ ಎಂದು ಹೇಳಿದೆ. 

ಕೌಶಲ್ಯವುಳ್ಳ ಕೆಲಸಗಾರರಿಗೆ ಹೆಚ್ಚಿನ ವೀಸಾ: ನಿರುಪಮಾ ರಾವ್

ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕ ತನ್ನ ವೀಸಾ ನೀತಿಯನ್ನು ಉದಾರಗೊಳಿಸಿ ಹೆಚ್ಚು ಕೌಶಲ್ಯವುಳ್ಳ ಭಾರತೀಯ ಕೆಲಸಗಾರರಿಗೆ  ಹೆಚ್ಚು ವೀಸಾ ನೀಡುವುದರಿಂದ ಉಭಯದೇಶಗಳಿಗೂ ಲಾಭವಾಗಲಿದೆ  ಎಂದು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ನಿರುಪಮಾರಾವ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು `ಯುಎಸ್ ಟುಡೆ' ಎಂಬ ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದಿರುವ ಅವರು, ಉದ್ದೇಶಿತ ವೀಸಾ ಸುಧಾರಣೆಯ ನಿರ್ಧಾರ, ಭವಿಷ್ಯದಲ್ಲಿ ವಿದೇಶಿ ಕಂಪೆನಿಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯನ್ನು ಸೆನೆಟ್ ಸದಸ್ಯರು ಪರಿಗಣಿಸಬೇಕು ಎಂದು ಗೌರವಪೂರ್ವವಾಗಿ ಒತ್ತಾಯಿಸುವುದಾಗಿ ಹೇಳಿದ್ದಾರೆ.ಅತ್ಯಂತ ಸ್ಫೂರ್ತಿದಾಯಕವಾಗಿರುವ ಎರಡೂ ದೇಶಗಳ  ವಾಣಿಜ್ಯ ಮತ್ತು ಆರ್ಥಿಕ ಸಂಬಂಧಗಳು ಭವಿಷ್ಯಕ್ಕೂ ಮಾರ್ಗದರ್ಶಿಯಾಗಬೇಕು. ಅಲ್ಲದೇ, ಪರಸ್ಪರ ಸಂಬಂಧ ವೃದ್ಧಿಗೆ ಉತ್ತಮ ತಳಹದಿ ಒದಗಿಸಬೇಕು ಎಂದೂ ಅವರು ಆಶಿಸಿದ್ದಾರೆ.ಭಾರತ- ಅಮೆರಿಕ ನಡುವಿನ ವಾಣಿಜ್ಯ ವ್ಯವಹಾರ ಕಳೆದ ಒಂದು ದಶಕದಲ್ಲಿ ವರ್ಷಕ್ಕೆ 3500 ಕೋಟಿ ಡಾಲರ್‌ನಿಂದ 10 ಸಾವಿರ ಕೋಟಿ ಡಾಲರ್‌ಗೆ ಮುಟ್ಟಿದೆ. ಅಂದರೆ, ಮೂರು ಪಟ್ಟು ಹೆಚ್ಚಾಗಿದೆ. ಅಲ್ಲದೆ, ಅಮೆರಿಕದ ಪ್ರಮುಖ ಕಂಪೆನಿಗಳು ಭಾರತವನ್ನು ಬಹುಮುಖ್ಯ ಹೊರಗುತ್ತಿಗೆ ರಾಷ್ಟ್ರವನ್ನಾಗಿ ಪರಿಗಣಿಸಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ  ಒದಗಿಸುತ್ತಿರುವ ಭಾರತೀಯ ಮೂಲದ 50 ಸಾವಿರ ಉದ್ಯೋಗಿಗಳು ಈಗ ಅಮೆರಿಕದ ಪ್ರಜೆಗಳಾಗಿದ್ದಾರೆ. ಅಲ್ಲದೆ, ಪ್ರತಿ ವರ್ಷ ಭಾರತೀಯರ ನೇಮಕಾತಿ ಮತ್ತು ಗುತ್ತಿಗೆ ಹೆಚ್ಚಾಗುತ್ತಲೇ ಇದೆ' ಎಂದೂ ಅವರು  ತಮ್ಮ ಲೇಖನದಲ್ಲಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)