ಹೊಸ ವೆಸ್ಪಾ: ಹಳೆಯ ಮಾಂತ್ರಿಕತೆ ಮರುಕಳಿಸೀತೆ?

7

ಹೊಸ ವೆಸ್ಪಾ: ಹಳೆಯ ಮಾಂತ್ರಿಕತೆ ಮರುಕಳಿಸೀತೆ?

Published:
Updated:
ಹೊಸ ವೆಸ್ಪಾ: ಹಳೆಯ ಮಾಂತ್ರಿಕತೆ ಮರುಕಳಿಸೀತೆ?

ಭಾರತದ ರಸ್ತೆಗಳಿಗೆ ಮತ್ತೆ ವೆಸ್ಪಾ ಮರು ಪರಿಚಯಗೊಂಡಾಗ ಇದ್ದ ನಿರೀಕ್ಷೆ ಅದು ಮಾರುಕಟ್ಟೆಗೆ ಬಂದ ಮೇಲೆ ಉಳಿಯಲಿಲ್ಲ. ಕಾರಣ, ಅತಿಯಾದ ಬೆಲೆ. ಸ್ಕೂಟರ್ ಒಂದಕ್ಕೆ 75 ಸಾವಿರ ರೂಪಾಯಿಗಳನ್ನು ತೆತ್ತು ಕೊಳ್ಳುವ ಅಗತ್ಯವಾದರೂ ಏನಿದೆ? ಹಾಗಾಗಿ ಕಡಿಮೆ ಬೆಲೆಯ ಸ್ಕೂಟರ್‌ಗಳಿಗೇ ಭಾರತದಲ್ಲಿ ಬೇಡಿಕೆ ಹೆಚ್ಚು. ಈಗ ಯಾರೂ ಯಾವುದೇ ವಾಹನವನ್ನು 5 ವರ್ಷಗಳಿಗಿಂತಲೂ ಹೆಚ್ಚು ಕಾಲ ಇಟ್ಟುಕೊಳ್ಳುವುದೇ ಇಲ್ಲ. ಬದಲಿಗೆ ಹೊಸ ವಾಹನವನ್ನೇ ಕೊಳ್ಳುತ್ತಾರೆ. ದ್ವಿಚಕ್ರ ವಾಹನ ಉಳ್ಳವರು ಕಾರ್ ಕೊಳ್ಳಲು ಯೋಜನೆ ಮಾಡುತ್ತಾರೆ.ವೆಸ್ಪಾ ಉತ್ತಮ ಸ್ಕೂಟರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮಾನೋಕಾಕ್ ಚ್ಯಾಸಿಸ್, ಸಂಪೂರ್ಣ ಕಬ್ಬಿಣದ ದೇಹ ಇರುವುದು ನಿಜಕ್ಕೂ ಪ್ಲಸ್ ಪಾಯಿಂಟ್‌ಗಳೇ. ಅತ್ಯುತ್ತಮ ತಂತ್ರಜ್ಞಾನದ ಆಟೊಮ್ಯಾಟಿಕ್ ಗಿಯರ್ ಎಂಜಿನ್ ಇದ್ದರೂ, 125 ಸಿಸಿ ಎಂಜಿನ್ ಕಡಿಮೆಯಾಯಿತು ಎಂಬ ಮಾತಿದೆ. ಕೊಡುವ ಹಣಕ್ಕೆ ಹೆಚ್ಚಿನ ಸಾಮರ್ಥ್ಯದ ಎಂಜಿನ್ ಇರಬೇಕಿತ್ತು ಎಂಬುದು ಇದಕ್ಕೆ ವಾದ. ಆದರೂ ‘ಗುಡ್‌ನೇಮ್’ ಅನ್ನು ಇಟ್ಟುಕೊಂಡೇ ಒಂದು ಸ್ಕೂಟರ್ ಅನ್ನು ಮಾರಾಟ ಮಾಡುವ ಸೂತ್ರವನ್ನು ವೆಸ್ಪಾ ಅನುಸರಿಸಿದ್ದು ಮಾತ್ರ ದುರಂತವೇ ಸರಿ.ಆದರೂ ವೆಸ್ಪಾ ಹೆಚ್ಚಿನ ಸಂಖ್ಯೆಯಲ್ಲೇ ಮಾರಾಟವಾಗಿದೆ. ಹೋಂಡಾದ ‘ಆಕ್ಟಿವಾ’, ಟಿವಿಎಸ್‌ನ ‘ವೀಗೊ’ ಸ್ಕೂಟರ್‌ಗಳು ಸಹ ಕಬ್ಬಿಣದ ದೇಹವನ್ನೇ ಒಳಗೊಂಡಿವೆ. ಅಲ್ಲದೇ ಆಟೊಮ್ಯಾಟಿಕ್ ಗಿಯರ್ ಸ್ಕೂಟರ್ ಕ್ಷೇತ್ರದಲ್ಲಿ ವೆಸ್ಪಾಗಿಂತ ಇವಕ್ಕೇ ಹೆಚ್ಚು ಹೆಸರು. ವೆಸ್ಪಾ ವಿಶ್ವದ ಅತ್ಯಂತ ಹಳೆಯ ಸ್ಕೂಟರ್ ಬ್ರ್ಯಾಂಡ್ ಆದರೂ, ಕೊಂಚ ಕಾಲ ಭಾರತದಿಂದ ಕಣ್ಮರೆಯಾಗಿತ್ತು. ಹಾಗಾಗಿ ಮರು ಬಿಡುಗಡೆಯನ್ನು ಜನ ಕುತೂಹಲದಿಂದ ನೋಡಿದ್ದರು. ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿರುವ ವೆಸ್ಪಾ ಇದೀಗ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡು ಮರುಬಿಡುಗಡೆ ಮಾಡಿದೆ.

ಇವು ಬದಲಾವಣೆಯೇ?

ಇದು ಹೊಸ ವೆಸ್ಪಾ. ‘ವೆಸ್ಪಾ ವಿಎಕ್ಸ್ ಎಂಬ ಹೆಸರಲ್ಲಿ ಈ ಸ್ಕೂಟರ್ ಬಿಡುಗಡೆಯಾಗಿದೆ. ಆದರೆ ಬದಲಾವಣೆಗಳು ತೀರ ದೊಡ್ಡವೇನಲ್ಲ ಎಂಬುದು ಬೇಸರದ ಸಂಗತಿ. ಎಂಜಿನ್‌ನಲ್ಲಿ ಯಾವುದೇ ಬದಲಾವಣೆಯಿಲ್ಲ. 125 ಸಿಸಿ ಎಂಜಿನ್ ಅನ್ನೇ ಉಳಿಸಿಕೊಳ್ಳಲಾಗಿದೆ. 10.06 ಪಿಎಸ್ (7500 ಆರ್‌ಪಿಎಂ) ಬಿಎಚ್‌ಪಿ ಇದೆ. ಸಿವಿಟಿ ಆಟೊ ಗಿಯರ್ ಸೌಲಭ್ಯ ಇದೆ. ಇವನ್ನು ಬಿಟ್ಟರೆ ಕೇವಲ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾತ್ರ ಮಾಡಿ ಹೊರಬಿಟ್ಟಿದ್ದಾರೆ. ‘ರಾಸ್ಸೋ ಡ್ರಾಗನ್ ರೆಡ್’, ‘ಗಿಯಾಲೊ ಲೈಮ್’, ‘ನೀರೊ ವಾಲ್ಕನೊ’ ಎಂಬ ಮೂರು ಹೊಸ ಬಣ್ಣಗಳನ್ನು ಪರಿಚಯಿಸಲಾಗಿದೆ. ಕೊಂಚ ತೆಳುವಾದ ಸೀಟ್, ಮುಂಭಾಗದಲ್ಲಿ ಸಿಲ್ವರ್ ಬಾಡಿ ಬೀಡಿಂಗ್ ನೀಡಲಾಗಿದೆ.ಆದರೆ ಅತಿ ದೊಡ್ಡ ಕೊರತೆ- ಸ್ಟೆಪ್ನಿ ಇಲ್ಲದೇ ಇರುವುದು. ಟಯರ್ ಪಂಕ್ಚರ್ ಆದರೆ ಯಾವುದೇ ಪರ್ಯಾಯ ಅನುಕೂಲ ಇಲ್ಲದೇ ಇರುವುದು ದೊಡ್ಡ ಕೊರತೆ. ಹಿಂದಿನ ವೆಸ್ಪಾ ಸ್ಕೂಟರ್‌ಗಳಲ್ಲಿ ಸ್ಟೆಪ್ನಿ ಇದ್ದೇ ಇರುತ್ತಿತ್ತು. ಇದನ್ನು ಅಳವಡಿಸಿಕೊಂಡರೆ ಮಾಡರ್ನ್ ಲುಕ್‌ಗೆ ಕುತ್ತು ಬರುತ್ತದೆ ಎಂಬುದು ವಾದ. ಆದರೆ ಪಂಕ್ಚರ್ ಆದಾಗ ಸಮಸ್ಯೆ ತಪ್ಪಿಸಿಕೊಳ್ಳುವುದು ಮುಖ್ಯವೊ, ಅಥವಾ ಕೇವಲ ಲುಕ್‌ಗೆ ಬೆಲೆ ಕೊಡುವುದು ಮುಖ್ಯವೊ ಎಂಬುದನ್ನು ಕಂಪೆನಿ ಗಮನಿಸಬೇಕು.

ಸುರಕ್ಷೆಗೆ ಹೆಚ್ಚಿನ ಗಮನ

ಹೊಸ ವೆಸ್ಪಾ ವಿಎಕ್ಸ್‌ನಲ್ಲಿ ಸುರಕ್ಷೆಗೆ ಹೆಚ್ಚಿನ ಗಮನ ನೀಡಲಾಗಿದೆ. ಮುಂಭಾಗದ ಚಕ್ರಕ್ಕೆ ಡಿಸ್ಕ್ ಬ್ರೇಕ್ ಸೌಲಭ್ಯವಿದೆ. 150 ಎಂಎಂ ಹಿಂದಿನ ಡ್ರಮ್ ಬ್ರೇಕ್ ಇದ್ದರೆ, ಮುಂಭಾಗದಲ್ಲಿ 200 ಎಂಎಂ ಡಿಸ್ಕ್ ಇದೆ. ಅಂಡರ್ ಸೀಟ್ ಸ್ಟೋರೇಜ್ ಅನ್ನು ಕೊಂಚ ಹೆಚ್ಚಿಸಲಾಗಿದೆ. ಇವಿಷ್ಟನ್ನು ಬಿಟ್ಟರೆ ಮಿಕ್ಕಂತೆ ಹೇಳಿಕೊಳ್ಳುವ ಬದಲಾವಣೆಗಳು ಏನೂ ಇಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry