ಹೊಸ ವೈದ್ಯರು ಮತ್ತು ಹಳೆರೋಗಿಗಳು

ಭಾನುವಾರ, ಮೇ 26, 2019
32 °C

ಹೊಸ ವೈದ್ಯರು ಮತ್ತು ಹಳೆರೋಗಿಗಳು

Published:
Updated:

ಆಯುರ್ವೇದ ವೈದ್ಯರು ಅಲೋಪತಿ ಔಷಧಿಗಳನ್ನು ನೀಡಬಾರದು ಎನ್ನುವುದು ಕಾನೂನು. ಆದರೆ ಬಹಳಷ್ಟು ಆಯುರ್ವೇದ ವೈದ್ಯರು ಅಲೋಪತಿ ಔಷಧ ಕೊಡುತ್ತಾರೆ. ಚುಚ್ಚುಮದ್ದುಗಳನ್ನೂ ನೀಡುತ್ತಾರೆ. ಇದನ್ನು ನಿಯಂತ್ರಿಸಬೇಕು ಎಂದು ಇತ್ತೀಚೆಗೆ ಮತ್ತೊಂದು ಆದೇಶ ಬಂದ ಹಿನ್ನೆಲೆಯಲ್ಲಿ ರಾಜ್ಯದ ಆಯುರ್ವೇದ ವೈದ್ಯರು ಒಂದು ದಿನದ ಮುಷ್ಕರ ಮಾಡಿದರು.ತಮಗೂ ಅಲೋಪತಿ ಔಷಧ ನೀಡುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ಆಯುರ್ವೇದ, ಯುನಾನಿ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ ಮುಂತಾದ ವಿಷಯಗಳಲ್ಲಿ ಪದವಿ ಪಡೆದ ವೈದ್ಯರಿಗೆ 1998ರವರೆಗೆ ಅಲೋಪತಿ ಔಷಧ ವಿಧಾನ ಕುರಿತಂತೆ ಒಂದೂವರೆ ವರ್ಷದ ಸಮ್ಮಿಶ್ರ ಕೋರ್ಸ್ ಇತ್ತು.

 

ಅದನ್ನು ಮಾಡಿಕೊಂಡವರು ಎರಡೂ ಪದ್ಧತಿಯ ಔಷಧವನ್ನು ನೀಡಬಹುದಾಗಿತ್ತು. ಆದರೆ ಈಗ ಆ ಕೋರ್ಸ್ ರದ್ದು ಮಾಡಲಾಗಿದೆ. ಅಲ್ಲದೆ ಯಾವ ಪದ್ಧತಿಯ ಪದವಿಯನ್ನು ಪಡೆದಿರುತ್ತಾರೋ ಆ ಪದ್ಧತಿಯ ಔಷಧವನ್ನು ಮಾತ್ರ ನೀಡಬೇಕು ಎನ್ನುವುದನ್ನು ಕಡ್ಡಾಯ ಮಾಡಲಾಗಿದೆ.ಇತ್ತೀಚೆಗೆ ವಿಧಾನ ಮಂಡಲದಲ್ಲಿ ಈ ವಿಷಯ ಪ್ರಸ್ತಾಪವಾದಾಗ ಕೆಲವು ಸದಸ್ಯರು ಆಯುರ್ವೇದ ವೈದ್ಯರು ಅಲೋಪತಿ ಔಷಧಿ ಕೊಡುವುದನ್ನು ನಿಯಂತ್ರಿಸುವ ಭರದಲ್ಲಿ ಪಾರಂಪರಿಕ ಮತ್ತು ನಾಟಿ ವೈದ್ಯರಿಗೆ ತೊಂದರೆ ನೀಡಬಾರದು. ಇದು ಭಾರತೀಯ ವೈದ್ಯಕೀಯ ಪದ್ಧತಿಯಾಗಿದ್ದು ಹಲವಾರು ರೋಗಗಳಿಗೆ ಉತ್ತಮ ಚಿಕಿತ್ಸೆಯನ್ನು ಕೊಡುತ್ತದೆ ಎಂದು ವಾದಿಸಿದರು.ಆಗ ಆರೋಗ್ಯ ಸಚಿವರು `ಪಾರಂಪರಿಕ ಮತ್ತು ನಾಟಿ ವೈದ್ಯರಿಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು~ ಎಂಬ ಹೇಳಿಕೆಯನ್ನು ನೀಡಿದರು. ಇದೇ ಈಗ ವಿವಾದದ ಕೇಂದ್ರವಾಗಿದೆ.ಈಗಿರುವ ಕಾನೂನಿನ ಪ್ರಕಾರ ಪಾರಂಪರಿಕ ಮತ್ತು ನಾಟಿ ವೈದ್ಯರಿಗೆ ಪ್ರಮಾಣ ಪತ್ರ ನೀಡಲು ಅವಕಾಶವಿಲ್ಲ. ಆರೋಗ್ಯ ಸಚಿವರು ಇವರಿಗೆ ಪ್ರಮಾಣ ಪತ್ರ ನೀಡಬೇಕು ಎಂದಾದರೆ ಕಾನೂನಿಗೆ ತಿದ್ದುಪಡಿ ತರಬೇಕು. ಅದು ವಿಧಾನ ಮಂಡಲದ ಒಪ್ಪಿಗೆ ಪಡೆಯಬೇಕು. ಅಲ್ಲದೆ ಪಾರಂಪರಿಕ, ನಾಟಿ ವೈದ್ಯರು ಯಾರು ಎನ್ನುವುದನ್ನು ಪತ್ತೆ ಮಾಡಬೇಕು. ಪಾರಂಪರಿಕ ಮತ್ತು ನಾಟಿ ವೈದ್ಯರ ವ್ಯಾಖ್ಯೆ ಏನು ಎನ್ನುವುದು ಸ್ಪಷ್ಟವಾಗಬೇಕು.ಭಾರತದಲ್ಲಿ ಮೊದಲಿನಿಂದಲೂ ನಾಟಿ ವೈದ್ಯರು, ಪಾರಂಪರಿಕ ವೈದ್ಯರೇ ಜನರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈ ಹೆಸರಿನಲ್ಲಿ ನಕಲಿ ವೈದ್ಯರು ಹೆಚ್ಚಾಗಿದ್ದರಿಂದ ಹಾಗೂ ಆಯುರ್ವೇದದಲ್ಲಿ ಪದವಿ ಪಡೆದ ವೈದ್ಯರ ಒತ್ತಡ ಬಂದಿದ್ದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ಅಧ್ಯಯನ ನಡೆಸಲು 1955ರಲ್ಲಿ ಒಂದು ಸಮಿತಿ ರಚಿಸಿತು.ಸೌರಾಷ್ಟ್ರದ ಆರೋಗ್ಯ ಸಚಿವ ಡಿ.ಕೆ.ದವೆ ಅವರ ನೇತೃತ್ವದ ಈ ಸಮಿತಿ 1956ರಲ್ಲಿ ತನ್ನ ಮಧ್ಯಂತರ ವರದಿಯನ್ನು ನೀಡಿತು. ಭಾರತದಲ್ಲಿರುವ ವಿವಿಧ ವೈದ್ಯಕೀಯ ಪದ್ಧತಿಗಳಲ್ಲಿ ಏಕರೂಪತೆ ತರುವುದು, ಹಕೀಮರು, ಹೋಮಿಯೋಪತಿ, ಸಿದ್ಧ ಮುಂತಾದ ವೈದ್ಯ ಪದ್ಧತಿಗಳ ಬಗ್ಗೆ ಅಧ್ಯಯನ ನಡೆಸುವುದು ಹಾಗೂ ನಕಲಿ ವೈದ್ಯರನ್ನು ತಡೆಯುವುದಕ್ಕೆ ಕೈಗೊಳ್ಳಬಹುದಾದ ಕ್ರಮಗಳನ್ನು ಸೂಚಿಸುವುದು ಈ ಸಮಿತಿಯ ಕಾರ್ಯವಾಗಿತ್ತು.ನಕಲಿ ವೈದ್ಯರನ್ನು ನಿಯಂತ್ರಣ ಮಾಡುವುದಕ್ಕೆ ಇಡೀ ದೇಶದಲ್ಲಿ ಏಕರೂಪ ಕಾನೂನು ಜಾರಿಗೊಳಿಸಬೇಕು. ಭಾರತೀಯ ವೈದ್ಯಕೀಯ ಪದ್ಧತಿ ಅನುಸರಿಸುವ ವೈದ್ಯರಿಗೆ ಅಧಿಕೃತ ನೋಂದಣಿ ನೀಡಬೇಕು ಎಂಬ ಶಿಫಾರಸುಗಳನ್ನು ದವೆ ಸಮಿತಿ ನೀಡಿತು.  

ಈ ಸಮಿತಿಯ ವರದಿಯ ಆಧಾರದಲ್ಲಿ ಕರಡು ಮಸೂದೆಯನ್ನು ಸಿದ್ಧಪಡಿಸಲಾಯಿತು.ಅದರ ಆಧಾರದಲ್ಲಿ ಕರ್ನಾಟಕ ಸರ್ಕಾರ 1961ರಲ್ಲಿ ಶಾಸನವೊಂದನ್ನು ಸಿದ್ಧಪಡಿಸಿತು. ಈ ಕಾನೂನಿನ ಪ್ರಕಾರ ಆಯಾ ವೈದ್ಯ ಪದ್ಧತಿಯಲ್ಲಿ ಅಧಿಕೃತ ಪದವಿಯನ್ನು ಪಡೆಯದೇ ವೈದ್ಯಕೀಯ ವೃತ್ತಿ ನಡೆಸುವುದು ಅಪರಾಧ ಎಂದು ಪರಿಗಣಿಸಲಾಯಿತು.ಅಲ್ಲದೆ ಆಯುರ್ವೇದ, ಯುನಾನಿ, ಯೋಗ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ, ಸಿದ್ಧ, ಸಮ್ಮಿಶ್ರ ಮುಂತಾದ ವೈದ್ಯ ಪದ್ಧತಿಯಲ್ಲಿ ವೈದ್ಯಕೀಯ ವೃತ್ತಿಯನ್ನು ನಡೆಸುವವರನ್ನು ನೋಂದಣಿ ಮಾಡಿಕೊಳ್ಳಲು 1965ರಲ್ಲಿ ಕರ್ನಾಟಕ ಆಯುರ್ವೇದ, ಯುನಾನಿ ವೈದ್ಯ ನೋಂದಣಿ ಮಂಡಳಿಯನ್ನು ರಚಿಸಲಾಯಿತು. ಈ ಮಂಡಳಿಯಲ್ಲಿ ಈಗ ಸುಮಾರು 33 ಸಾವಿರ ವೈದ್ಯರು ನೋಂದಣಿ ಮಾಡಿಸಿಕೊಂಡಿದ್ದಾರೆ.

 

ಮಂಡಳಿ ಅಸ್ತಿತ್ವಕ್ಕೆ ಬಂದರೂ 1981ರವರೆಗೆ ಪಾರಂಪರಿಕ ಮತ್ತು ನಾಟಿ ವೈದ್ಯರಿಗೂ ಅವರ ಅನುಭವದ ಆಧಾರದಲ್ಲಿ ನೋಂದಣಿಯನ್ನು ನೀಡುವ ಅವಕಾಶವಿತ್ತು. ಆದರೆ ನೋಂದಣಿಯನ್ನು ದುರುಪಯೋಗಪಡಿಸಿಕೊಂಡು ನಕಲಿ ವೈದ್ಯರು ಸಮಾಜದಲ್ಲಿ ಹೆಚ್ಚಾಗಿದ್ದರಿಂದ 1981ರಲ್ಲಿ ಪಾರಂಪರಿಕ ಮತ್ತು ನಾಟಿ ವೈದ್ಯರಿಗೆ ಪ್ರಮಾಣ ಪತ್ರ ನೀಡುವುದನ್ನು ರದ್ದು ಮಾಡಲಾಯಿತು.ಆದರೆ ತಕ್ಷಣಕ್ಕೆ ನಿಲ್ಲಿಸದೆ 1984ರವರೆಗೆ ನಾಟಿ ವೈದ್ಯರು ಮತ್ತು ಪಾರಂಪರಿಕ ವೈದ್ಯರಿಗೆ ಅವಕಾಶವನ್ನು ನೀಡಲಾಗಿತ್ತು. ನಂತರ ಅದು ಸಂಪೂರ್ಣ ನಿಂತಿತು. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೂ ಹೋದರು. ವಿಚಾರಣೆ ಇನ್ನೂ ನಡೆಯುತ್ತಿದೆ. 1984ರ ನಂತರ ಕೂಡ ಮಂಡಳಿಗೆ ಅರ್ಜಿ ಸಲ್ಲಿಸಿ ತಮಗೆ ನೋಂದಣಿ ನೀಡಬೇಕು ಎಂಬ ಅರ್ಜಿಗಳು ಬರುತ್ತಲೇ ಇವೆ. ಈಗಲೂ ಕೂಡ ಮಂಡಳಿಯಲ್ಲಿ ನೂರಾರು ಅರ್ಜಿಗಳು ನೋಂದಣಿಗಾಗಿ ಕಾಯುತ್ತಿವೆ.ಇಂತಹ ವೈದ್ಯರಿಗೆ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಲು ಮುಖ್ಯ ಕಾರಣ ಪಾರಂಪರಿಕ, ನಾಟಿ, ಮನೆ ಮದ್ದುಗಳ ವ್ಯಾಖ್ಯೆ ಇನ್ನೂ ಸ್ಪಷ್ಟವಾಗದೇ ಇರುವುದು. ಆದರೆ ಈಗ ಆರೋಗ್ಯ ಸಚಿವರ ಹೇಳಿಕೆಯಿಂದ ಉತ್ತೇಜಿತರಾದ ಪಾರಂಪರಿಕ, ನಾಟಿ ವೈದ್ಯರು ತಮಗೂ ಮಂಡಳಿಯಲ್ಲಿ ನೋಂದಣಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.ಮನೆ ವೈದ್ಯ ಎಂದರೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಔಷಧ ಪದ್ಧತಿ. ಮನೆಯಲ್ಲಿರುವ ಜೀರಿಗೆ, ಮೆಂತೆ, ಸಾಂಬಾರು ಬಟ್ಟಲಿನಲ್ಲಿರುವ ವಸ್ತುಗಳು, ಹಿತ್ತಲಿನಲ್ಲಿ ಸಿಗುವ ಎಲೆ, ಬೇರು, ಚಕ್ಕೆಗಳಿಂದ ಔಷಧ ತಯಾರು ಮಾಡಿಕೊಂಡು ಯಾವುದೇ ರೋಗಕ್ಕೆ ಉಪಶಮನ ಪಡೆಯುವುದಕ್ಕೆ ಮನೆ ವೈದ್ಯ ಎಂದು ಹೆಸರು. ಇಲ್ಲಿ ಹಣದ ಪ್ರಶ್ನೆ ಬರುವುದಿಲ್ಲ.ನಾಟಿ ವೈದ್ಯರು ಸಾಮಾನ್ಯವಾಗಿ ಎಲ್ಲ ರೋಗಗಳಿಗೂ ಔಷಧ ಕೊಡುವುದಿಲ್ಲ. ಒಂದೋ ಎರಡು ನಿರ್ದಿಷ್ಟ ರೋಗಗಳಿಗೆ ಔಷಧ ನೀಡುತ್ತಾರೆ. ಅಲ್ಲದೆ ಮುಖ್ಯವಾಗಿ ಇವರು ರೋಗದ ಲಕ್ಷಣವನ್ನು ತಿಳಿದಿರುವುದಿಲ್ಲ. ಇವರಿಗೆ ಔಷಧ ಗೊತ್ತೇ ವಿನಾ ರೋಗ ಗೊತ್ತಿರುವುದಿಲ್ಲ. ರೋಗ ಇಂತಹದು ಎಂದು ಹೇಳಿದರೆ ಅದಕ್ಕೆ ಔಷಧ ಕೊಡುತ್ತಾರೆ. ಬಹುತೇಕ ಇವರು ಗ್ರಾಮೀಣ ವಾಸಿಗಳು.ತಲೆ ತಲಾಂತರದಿಂದ ಔಷಧವನ್ನು ನೀಡುತ್ತಾ ಬಂದವರು. ಔಷಧಕ್ಕೆ ಬದಲಾಗಿ ಹಣ ಪಡೆಯುವ ಪದ್ಧತಿ ಇಲ್ಲ. ಹೆಚ್ಚೆಂದರೆ ಒಂದು ತೆಂಗಿನ ಕಾಯಿಯನ್ನು ಪಡೆಯುತ್ತಾರೆ ಅಷ್ಟೆ. ಅಲ್ಲೊಬ್ಬರು ಜಾಂಡೀಸ್‌ಗೆ ಉತ್ತಮ ಔಷಧಿ ಕೊಡ್ತಾರೆ, ಇಲ್ಲೊಬ್ಬರು ಹೊಟ್ಟೆ ನೋವಿಗೆ ಔಷಧಿ ಕೊಡುತ್ತಾರೆ ಎಂದು ನಾವು ಕೇಳಿದ್ದೇವೆ. ಆದಿವಾಸಿಗಳು, ಹಿಂದುಳಿದ ವರ್ಗದವರು, ರೈತರು, ಪರಿಶಿಷ್ಟರು ಇಂತಹ ಔಷಧಿ ನೀಡುವುದು ಹೆಚ್ಚು.ಕಾಡಂಚಿನ ಜನರೇ ಜಾಸ್ತಿ. ಕಾಡಿನಲ್ಲಿ ಸಿಗುವ ಹಲವಾರು ವನಸ್ಪತಿಗಳ ಪರಿಚಯ ಇವರಿಗೆ ಇರುವುದರಿಂದ ಅದನ್ನು ತಂದು ಇವರು ಔಷಧಿ ನೀಡುತ್ತಾರೆ. ಅಲ್ಲದೆ ಇವರು ಗಿಡಮೂಲಿಕೆ ಯಾವುದು ಎಂದು ಬೇರೆಯವರಿಗೆ ಹೇಳುವುದಿಲ್ಲ. ಹೀಗೆ ಹೇಳಿದರೆ ಔಷಧಿಯ ಶಕ್ತಿ ಕಡಿಮೆಯಾಗುತ್ತದೆ ಎಂದು ನಂಬಿದವರು ಇವರು.ಪಾರಂಪರಿಕ ವೈದ್ಯರು ಆನುವಂಶೀಯವಾಗಿ ಔಷಧ ತಯಾರಿಸಿ ಜನರಿಗೆ ನೀಡುತ್ತಾ ಬಂದವರು. ಇವರನ್ನು ಗ್ರಾಮೀಣ ಪ್ರದೇಶಗಳಲ್ಲಿ ಪಂಡಿತರು ಎಂದೂ ಕರೆಯುತ್ತಾರೆ. ಇವರೂ ಕೂಡ ಗಿಡಮೂಲಿಕೆಯಿಂದಲೇ ಔಷಧವನ್ನು ಸ್ವತಃ ತಯಾರಿಸಿ ನೀಡುತ್ತಾರೆ. ಕಷಾಯ, ಲೇಹ್ಯ ಮುಂತಾದವುಗಳನ್ನು ನೀಡಿ ರೋಗವನ್ನು ಗುಣಪಡಿಸುತ್ತಾರೆ.ತಂದೆ, ಮಗ, ಮೊಮ್ಮಗ ಹೀಗೆ ಈ ವೃತ್ತಿಯನ್ನು ಮುಂದುವರಿಸಿಕೊಂಡು ಬಂದವರು. ಇವರು ಹಲವಾರು ರೋಗಗಳಿಗೆ ಔಷಧ ನೀಡುತ್ತಾರೆ. ಭಾರತದಲ್ಲಿ ಅಲೋಪತಿ ಔಷಧ ಪದ್ಧತಿ ಜಾರಿಗೆ ಬರುವುದಕ್ಕೆ ಮೊದಲು ಇವರೇ ಜನರ ರೋಗಗಳನ್ನು ನಿವಾರಿಸುವ ದೇವರುಗಳಾಗಿದ್ದರು.ಹೀಗೆ ಪಾರಂಪರಿಕ ವೈದ್ಯ ಪದ್ಧತಿಯನ್ನು ಅನುಸರಿಸುವವರಲ್ಲಿ ಬಹಳಷ್ಟು ಮಂದಿ ಈಗ ಆಯುರ್ವೇದ ಕಾಲೇಜುಗಳಲ್ಲಿ ಪದವಿಯನ್ನು ಪಡೆದುಕೊಂಡು ಉತ್ತಮ ವೈದ್ಯರಾಗಿದ್ದಾರೆ. ಕೇರಳದಲ್ಲಿ ಪಾರಂಪರಿಕ ಮತ್ತು ನಾಟಿ ವೈದ್ಯರಿಗೆ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಿದ ನಂತರ ಬಹುತೇಕ ಪಾರಂಪರಿಕ ವೈದ್ಯರು ತಮ್ಮ ಮಕ್ಕಳಿಗೆ ನಿರ್ದಿಷ್ಟ ಪದ್ಧತಿಯಲ್ಲಿ ಪದವಿಯನ್ನು ಓದಿಸಿದರು.ಪಾರಂಪರಿಕ ಮತ್ತು ನಾಟಿ ವೈದ್ಯರಿಗೆ ಭಾರತೀಯ ಸಮಾಜದಲ್ಲಿ ಅತ್ಯಂತ ಗೌರವದ ಸ್ಥಾನವಿದೆ. ಅಲೋಪತಿ ಔಷಧಗಳು ಗುಣಪಡಿಸಲಾಗದಂತಹ ರೋಗಗಳನ್ನು ಈ ಪದ್ಧತಿಯ ಔಷಧಗಳು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಇವುಗಳ ಹೆಸರನ್ನು ಹೇಳಿಕೊಂಡು ಜನರನ್ನು ಮೋಸ ಮಾಡುವ ನಕಲಿ ವೈದ್ಯರಿಂದಾಗಿ ಈ ವೈದ್ಯ ಪದ್ಧತಿಗಳ ಬಗ್ಗೆ ಜನರು ಶಂಕೆಯಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ನಕಲಿ ವೈದ್ಯರ ಹಾವಳಿಯನ್ನು ತಡೆಯುವ ಉದ್ದೇಶದಿಂದಲೇ ಪಾರಂಪರಿಕ ಮತ್ತು ನಾಟಿ ವೈದ್ಯರಿಗೆ ನೋಂದಣಿ ನೀಡುವುದನ್ನು ರಾಜ್ಯದಲ್ಲಿ ಸ್ಥಗಿತಗೊಳಿಸಲಾಯಿತು. ಅಲ್ಲದೆ ನೋಂದಣಿ ಮಂಡಳಿಯನ್ನೂ ಸ್ಥಾಪಿಸಲಾಯಿತು. ಮಂಡಳಿ ಸ್ಥಾಪನೆಯಾದಾಗಿನಿಂದಲೂ ನಿಜವಾದ ಪಾರಂಪರಿಕ ಮತ್ತು ನಾಟಿ ವೈದ್ಯರನ್ನು ಹಿಡಿದು ಬಂಧಿಸುವ ಕೆಲಸವೇನೂ ಆಗಿಲ್ಲ.ಈ ವೈದ್ಯರು ತಮ್ಮ ಪಾಡಿಗೆ ತಾವು ಔಷಧ ಕೊಡುತ್ತಾ ಬಂದಿದ್ದಾರೆ. ಆದರೆ ಈ ಪದ್ಧತಿಯ ಹೆಸರು ಹೇಳಿಕೊಂಡು ಯಾವುದೇ ಅಧಿಕೃತ ಶಿಕ್ಷಣ ಸಂಸ್ಥೆಗಳಿಂದ ಪದವಿಯನ್ನೂ ಪಡೆಯದೆ ಔಷಧಿ ನೀಡುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ.ಪರ್ಯಾಯ ವೈದ್ಯ ಪದ್ಧತಿಯ ಹೆಸರಿನಲ್ಲಿ ಈಗ ಸಾಕಷ್ಟು ಪದವಿಗಳು ಬಂದಿವೆ. ನಕಲಿ ವೈದ್ಯರಿಗೆ ನಕಲಿ ಪ್ರಮಾಣ ಪತ್ರ ನೀಡುವ ಸಂಸ್ಥೆಗಳೂ ಹುಟ್ಟಿಕೊಂಡಿವೆ. ಜನರ ಭಾವನೆಗಳೊಂದಿಗೆ, ಜನರ ಜೀವದೊಂದಿಗೆ ಆಟವಾಡುವ ನಕಲಿ ವೈದ್ಯರು ಹೆಚ್ಚಾಗಿದ್ದಾರೆ. ಅವರನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.ರಾಜ್ಯದಲ್ಲಿ ಕರ್ನಾಟಕ ಆಯುರ್ವೇದ, ಯುನಾನಿ ವೈದ್ಯ ನೋಂದಣಿ ಮಂಡಳಿಯನ್ನು ರಚಿಸಲಾಗಿದ್ದರೂ ನಕಲಿ ವೈದ್ಯರ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಆರೋಗ್ಯ ಸಚಿವರ ಹೇಳಿಕೆಯಿಂದ ಈಗ ಮತ್ತೆ ಈ ವಿಷಯ ಚರ್ಚೆಯಲ್ಲಿದೆ. ಈ ಹಿಂದೆ ಕೂಡ ಪಾರಂಪರಿಕ ಮತ್ತು ನಾಟಿ ವೈದ್ಯರಿಗೆ ನೋಂದಣಿ ನೀಡುವಾಗ ಅವರ ಅನುಭವವನ್ನು ಆಧರಿಸಿ ನೋಂದಣಿ ನೀಡಲಾಗುತ್ತಿತ್ತು.5 ಸಾವಿರ ರೋಗಿಳನ್ನು ನೋಡಿದ್ದಾರೆ, 10 ಸಾವಿರ ರೋಗಿಗಳನ್ನು ನೋಡಿದ್ದಾರೆ ಎಂದು ನೋಂದಣಿ ನೀಡಲಾಗುತ್ತಿತ್ತು. ಆದರೆ ನೋಂದಣಿಗೆ ಇಷ್ಟೇ ಮಾನದಂಡ ಸಾಕಾಗುವುದಿಲ್ಲ. ಅಂದಮಾತ್ರಕ್ಕೆ ಪಾರಂಪರಿಕ ಮತ್ತು ನಾಟಿ ವೈದ್ಯರನ್ನು ನಿರ್ಲಕ್ಷಿಸಲೂ ಸಾಧ್ಯವಿಲ್ಲ. ಅವರಿಗೆ ಪ್ರತ್ಯೇಕ ನೋಂದಣಿಯ ವ್ಯವಸ್ಥೆ ಮಾಡುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬಹುದು.ಪಾರಂಪರಿಕ ಮತ್ತು ನಾಟಿ ವೈದ್ಯರು ನಿರ್ದಿಷ್ಟ ರೋಗಕ್ಕೆ ಖಚಿತವಾದ ಔಷಧಿಯನ್ನು ನೀಡುವುದು ಹಾಗೂ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವ ಸಾಧ್ಯತೆ ಇರುವುದರಿಂದ ನಿರ್ದಿಷ್ಟ ರೋಗದ ಹೆಸರಿನಲ್ಲಿಯೇ ಅವರಿಗೆ ನೋಂದಣಿ ನೀಡಲು ಸಾಧ್ಯವಿದೆಯೇ ಎನ್ನುವುದರ ಬಗ್ಗೆ ಕೂಡ ಆಲೋಚನೆ ಮಾಡಬೇಕಾಗಿದೆ.ಈಗಿರುವ ಪದ್ಧತಿಯಂತೆಯೇ ನೋಂದಣಿಗೆ ಅವಕಾಶ ನೀಡಿದರೆ ಎಲ್ಲ ರೋಗಗಳಿಗೂ ಅವರು ಔಷಧ ನೀಡಬಹುದು ಎನ್ನುವಂತಾಗುತ್ತದೆ. ಇದರಿಂದ ನಕಲಿ ವೈದ್ಯರ ಹಾವಳಿ ಇನ್ನಷ್ಟು ಹೆಚ್ಚಾಗಬಹುದು.ರಾಜ್ಯದಲ್ಲಿರುವ ಪಾರಂಪರಿಕ ಮತ್ತು ನಾಟಿ ವೈದ್ಯರು ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೂಕ್ತವಾದ ತರಬೇತಿ ಮತ್ತು ಶಿಕ್ಷಣವನ್ನು ನೀಡಿದರೆ ಅವರು ಸಮಾಜಕ್ಕೆ ಉತ್ತಮ ಆಸ್ತಿಯಾಗಬಲ್ಲರು. ಈ ಕುರಿತು ರಾಜ್ಯ ಸರ್ಕಾರ ಆಲೋಚಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry