ಶನಿವಾರ, ಡಿಸೆಂಬರ್ 7, 2019
25 °C

ಹೊಸ ಸಂವತ್ಸರ ಮನ್ವಂತರ

Published:
Updated:

‘ಹೊ  ಸ ಸಂವತ್ಸರ ಹೊಸ ಮನ್ವಂತರ ಶುರುವಾಗಿದೆ ಈಗ...’

‘ಮೈನಾ’ ಚಿತ್ರದ ಹಾಡಿನ ಈ ಸಾಲು ಆ ಸಿನಿಮಾದ ಪ್ರೇಮಿಯ ಸಂಭ್ರಮದ ಉದ್ಗಾರವಾಗಿ ಮಾತ್ರ ಉಳಿದಿಲ್ಲ. 2013ರ ಚಿತ್ರರಂಗದ ಬೆಳವಣಿಗೆಗೆ ಸಾಕ್ಷಿಯಾಗಿರುವ ಸಿನಿಪ್ರೇಮಿಯ ಖುಷಿಯೂ ಹೌದು. ಏಕತಾನತೆಯ ಕಥನಗಳು, ನಿರೂಪಣೆಯ ಶೈಲಿಯಲ್ಲಿ ಮುಳುಗಿದ್ದ ಕನ್ನಡ ಚಿತ್ರರಂಗದಲ್ಲಿ ಹೊಸ ಮುಖಗಳು ಹೊಸ ಚೈತನ್ಯ ತುಂಬುವ ಪ್ರಯತ್ನ ಮಾಡುತ್ತಿವೆ. ಅದರಲ್ಲಿ ಕೆಲವರು ಯಶಸ್ವಿಯೂ ಆಗಿದ್ದಾರೆ.2012ರಲ್ಲಿ ನೆರೆ ಭಾಷೆಯ ಚಿತ್ರರಂಗಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದ ಗೆಲುವಿನ ಸರಾಸರಿ ಉತ್ತಮವಾಗಿತ್ತು. ಈ ವರ್ಷ ನಾವು ಮತ್ತಷ್ಟು ಮುಂದಿದ್ದೇವೆ ಎಂದು ಬೀಗುತ್ತಿದೆ ಚಿತ್ರರಂಗ. ಗೆಲುವಿನ ಜೊತೆಗೆ 2013 ಹೊಸ ಬಗೆಯ ಪ್ರಯೋಗಗಳಿಗೆ ಚಿತ್ರರಂಗ ತೆರೆದುಕೊಂಡಿದೆ. ಮನರಂಜನಾತ್ಮಕ ಚಿತ್ರಗಳ ನೆಲೆಗಟ್ಟಿನಲ್ಲಿಯೇ ಹೊಸ ಮಾದರಿಯ ಪ್ರಯೋಗಗಳು ಜನರನ್ನು ಸೆಳೆದಿವೆ. ‘ಇದಿನ್ನೂ ಮೊಗ್ಗು. ಹೂ ಬಿರಿಯುವ ಹೊತ್ತು ಮುಂದಿದೆ’ ಎನ್ನುತ್ತದೆ 2014ರಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಚಿತ್ರಗಳು.ಪ್ರಯೋಗಗಳೆಂದರೆ ಅದು ಕಲಾತ್ಮಕ ಚಿತ್ರಗಳು ಮಾತ್ರ ಎನ್ನುವ ಅಲಿಖಿತ ನಿಯಮಗಳನ್ನು ಇಂದಿನ ಪೀಳಿಗೆ ಲೆಕ್ಕಿಸುತ್ತಿಲ್ಲ. ಮೂರು ಫೈಟು, ಐದು ಹಾಡು ಎಂಬಂಥ ಸೂತ್ರಗಳನ್ನೂ ಒಪ್ಪಿಕೊಳ್ಳುತ್ತಿಲ್ಲ. ನೆಲದ ಕಥನಗಳನ್ನು ಹೆಕ್ಕಿಕೊಳ್ಳುವ, ಅದನ್ನು ಹೊಸ ಶೈಲಿಯಲ್ಲಿ ಆಪ್ತವಾಗಿ ಕಟ್ಟಿಕೊಡುವ ಪ್ರಯೋಗಗಳನ್ನು ಹೊಸ ತಲೆಮಾರಿನ ಸಿನಿ ಕೃಷಿಕರು ನಡೆಸುತ್ತಿದ್ದಾರೆ. 2013 ಈ ಹೊಸಕೃಷಿಗೆ ಭದ್ರ ಬುನಾದಿ ಹಾಕಿದೆ.‘ಲೂಸಿಯಾ’, ‘ಜಟ್ಟ’, ‘ಗೊಂಬೆಗಳ ಲವ್‌’, ‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’, ‘6–5=2’, ‘ಚಿತ್ರಮಂದಿರದಲ್ಲಿ’, ‘ಸಕ್ಕರೆ’, ‘ದ್ಯಾವ್ರೇ’, ‘ಅಷ್ಟ್ರಲ್ಲೇ ಜಸ್ಟ್‌ ಮಿಸ್‌’– ಹೀಗೆ ಹೊಸ ಬಗೆಯಲ್ಲಿ ಕಥೆ ಹೊಸೆಯುವ ಪ್ರಯತ್ನಗಳಿಗೆ ಸಾಕ್ಷಿ ಈ ವರ್ಷ. ಆಗೀಗ ಇಂಥ ಪ್ರಯೋಗಶೀಲ ಚಿತ್ರಗಳು ಕಮರ್ಷಿಯಲ್‌ ನೆಲೆಯಲ್ಲಿ ನಡೆಯುತ್ತಿದ್ದರೂ ಒಂದೇ ವರ್ಷದಲ್ಲಿ ಇಷ್ಟೊಂದು ಪ್ರಯೋಗಗಳು ನಡೆದಿರುವುದು ಇತ್ತೀಚಿನ ದಶಕಗಳಲ್ಲಿ ಇದೇ ಮೊದಲು. ಇವುಗಳು ಕೆಲವು ಯಶಸ್ವಿ ಚಿತ್ರಗಳು ಮತ್ತು ಇನ್ನು ಕೆಲವು ಗಳಿಕೆಯ ನಿಟ್ಟಿನಲ್ಲಿ ಯಶ ಕಾಣದಿದ್ದರೂ ಚರ್ಚೆ ಹುಟ್ಟುಹಾಕುವಲ್ಲಿ ಯಶಸ್ವಿಯಾದ ಚಿತ್ರಗಳು. ಈ ಭರವಸೆಯೇ ಪ್ರಯೋಗಶೀಲ ಮನಸುಗಳಿಗೆ ಮತ್ತಷ್ಟು ಹುರುಪು ತುಂಬಿದೆ. ‘ಉಳಿದವರು ಕಂಡಂತೆ’, ‘ಬಹುಪರಾಕ್‌’, ‘ಉಗ್ರಂ’, ‘ಮೈತ್ರಿ’, ‘ನೀರ್‌ ದೋಸೆ’, ‘ಪೆಟ್ರೋಮ್ಯಾಕ್ಸ್‌’, ‘ಕಂಟ್ರಿ ಪಿಸ್ತೂಲ್‌’ ಮುಂತಾದವು  2014ರಲ್ಲಿ ಕಾತರದಿಂದ ಕಾಯುವಂತೆ ಮಾಡಿರುವ ಚಿತ್ರಗಳು.ತಣ್ಣಗೆ ಸಣ್ಣಗೆ ಹೊಸ ಗಾಳಿ

ಚಿತ್ರರಂಗದಲ್ಲಿ ಹೊಸ ಗಾಳಿ ಸಣ್ಣನೆ ಬೀಸುತ್ತಿರುವುದು ನಿಜ ಎನ್ನುತ್ತಾರೆ ನಿರ್ದೇಶಕ ಪಿ. ಶೇಷಾದ್ರಿ. ತಮಿಳು ಮತ್ತು ಹಿಂದಿಯಲ್ಲಿ ನಾಲ್ಕೈದು ವರ್ಷಗಳಿಂದ ನಡೆಯುತ್ತಿದ್ದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವರನ್ನು ನಮ್ಮಲ್ಲೂ ಇಂಥ ಪ್ರಯೋಗಗಳು ನಡೆಯುತ್ತಿಲ್ಲ ಎಂಬ ಕೊರಗು ಕಾಡುತ್ತಿತ್ತು. ಸ್ಟಾರ್‌ಡಮ್‌ ಹಿಂದೆ ಹೋಗದ, ಅದನ್ನು ಮೀರಿದ ಚಿತ್ರಗಳನ್ನು ನೀಡುವ ಅನುರಾಗ್‌ ಕಶ್ಯಪ್‌ರಂಥ ನಿರ್ದೇಶಕರ ಪ್ರಯೋಗಗಳು ಈಗ ನಮ್ಮಲ್ಲೂ ನಡೆಯುತ್ತಿದೆ ಎಂಬ ಸಂತಸ ಅವರದು. ಅದಕ್ಕೆ ಅವರು ‘ಲೂಸಿಯಾ’, ‘ಜಟ್ಟ’, ‘6–5=2’ ಚಿತ್ರಗಳನ್ನು ಉದಾಹರಣೆಯಾಗಿ ನೀಡುತ್ತಾರೆ. ಅಬ್ಬರದ ಪ್ರಚಾರವಿಲ್ಲದೆ ಬಿಡುಗಡೆಯಾಗಿ, ನಂತರ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸಿಕೊಂಡ ‘6–5=2’ ಅಂಥ ಉತ್ತಮ ಪ್ರಯತ್ನಗಳಲ್ಲಿ ಒಂದು ಎನ್ನುತ್ತಾರೆ ಅವರು.‘ಅವರು ಗಿಮಿಕ್‌ ಮಾಡಿರಬಹುದು. ಅದು ತಪ್ಪಲ್ಲ. ಸಿನಿಮಾನೇ ಮೂಲವಾಗಿ ಸುಳ್ಳು. ಯಾವುದರಲ್ಲಿ ಸತ್ಯ ಇರುತ್ತದೆ? ಹೇಳುತ್ತಿರುವುದೇ ಸುಳ್ಳು ಎಂದಾದಾಗ ಅವರು ಬೇರೆ ಧಾಟಿಯಲ್ಲಿ ಅದನ್ನು ಹೇಳಿದ್ದಾರಷ್ಟೇ’ ಎನ್ನುವ ಶೇಷಾದ್ರಿ, ‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ ದೊಡ್ಡ ಬದಲಾವಣೆ ತಂದ ಚಿತ್ರ ಎಂದು ಗುರ್ತಿಸುತ್ತಾರೆ. ಈಗಿನ ಪೀಳಿಗೆಯ ಸಿನಿಮಾ ಮಂದಿಗೆ ತಮ್ಮ ಹಾದಿಯ ಬಗ್ಗೆ ಸ್ಪಷ್ಟತೆ ಇದೆ ಎಂದು ಅವರು ಹೇಳುತ್ತಾರೆ. ನಿರ್ದೇಶಕ ಸುನಿ ಮತ್ತು ನಾಯಕ ರಕ್ಷಿತ್‌ ಶೆಟ್ಟಿ ಯಶಸ್ಸಿನ ಜಾಡನ್ನು ಹಿಡಿದು ಹೋಗಿದ್ದರೆ ಅವರ ಕೈಯಲ್ಲಿ ನಾಲ್ಕೈದು ಚಿತ್ರಗಳು ಇರುತ್ತಿದ್ದವು. ಆದರೆ ಅವರು ಮತ್ತೆ ಹೊಸತನಕ್ಕೆ ತೆರೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಅವರದು.

ನೂರರಲ್ಲಿ ಮೂರ್ನಾಲ್ಕು ಒಳ್ಳೆಯ ಚಿತ್ರಗಳು ಬಂದರೆ ಸಾಲದು. ಅದರ ಪ್ರಮಾಣ ಕನಿಷ್ಠ 20–25ಕ್ಕೆ ಏರಬೇಕು. ಕಳಪೆ ಚಿತ್ರಗಳ ಸಂಖ್ಯೆ ತಗ್ಗಬೇಕು. ಆಗ ಮಾತ್ರ ನಾವು ಪ್ರೇಕ್ಷಕನ ನಂಬಿಕೆಯನ್ನು ತಿರುಗಿ ಗಳಿಸಲು ಸಾಧ್ಯ ಎನ್ನುವುದು ಸಾಹಿತಿ ಜಯಂತ ಕಾಯ್ಕಿಣಿ ಅಭಿಪ್ರಾಯ. ಹೊಸ ಹುರುಪಿನ ಯುವಕರಿಗೆ ಅವಕಾಶ ತೆರೆದರೆ ಇದು ಸಾಧ್ಯ ಎನ್ನುವ ಅವರಿಗೆ ಗುಣಮಟ್ಟ ರಹಿತ ಚಿತ್ರಗಳ ಸಂಖ್ಯೆಯ ಹೆಚ್ಚಳದಿಂದ ಪ್ರೇಕ್ಷಕ ಕುಟುಂಬದೊಂದಿಗೆ ಚಿತ್ರಮಂದಿರಕ್ಕೆ ಬರುವ ಹವ್ಯಾಸವೇ ಹೊರಟುಹೋಗಿದೆ ಎನಿಸಿದೆ.ಹೊಸಬರೇ ಸ್ಟಾರ್‌!

ಚಿತ್ರರಂಗ ಈ ವರ್ಷ ಕಂಡಿರುವ ಹೊಸ ಪ್ರಯೋಗಗಳು ನಡೆದಿರುವುದು ಹೊಸಮುಖಗಳಿಂದ ಮತ್ತು ಅವುಗಳಲ್ಲಿ ಸ್ಟಾರ್‌ ಕಲಾವಿದರು ಎನಿಸಿಕೊಂಡವರಾರೂ ಇಲ್ಲದಿರುವುದು ವಿಶೇಷ. ಚಿತ್ರ ನಿರ್ಮಾಣದಲ್ಲಿ ಮಾತ್ರವಲ್ಲ ಅದನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿಯೂ ಪ್ರಯೋಗಶೀಲತೆ ಕಾಣಬಹುದು. ಫೇಸ್‌ಬುಕ್‌, ಟ್ವಿಟ್ಟರ್‌, ಯೂಟ್ಯೂಬ್‌ನಂಥ ಸಾಮಾಜಿಕ ಜಾಲ ವ್ಯವಸ್ಥೆ ಅವರ ಪಾಲಿಗೆ ವರದಾನ. ಇದನ್ನು ಸೃಜನಶೀಲತೆಯ ವಿಸ್ತರಣೆ ಎಂದು ಕರೆಯುತ್ತಾರೆ ನಿರ್ದೇಶಕ ವಿಜಯಪ್ರಸಾದ್‌.‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’, ‘ಲೂಸಿಯಾ’, ‘6–5=2’ ನಂಥ ಚಿತ್ರಗಳು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗಳಿಕೆ ನಿಟ್ಟಿನಲ್ಲಿಯೂ ಗೆದ್ದರೆ, ‘ಜಟ್ಟ’, ‘ಗೊಂಬೆಗಳ ಲವ್‌’ನಂಥ ಚಿತ್ರಗಳು ಈ ಪ್ರಯೋಗದಲ್ಲಿ ಹಿಂದೆ ಬಿದ್ದವು. ಟ್ರೇಲರ್‌ಗಳ ಮೂಲಕ ಕುತೂಹಲ ಹುಟ್ಟುಹಾಕುವ ಪರಿಪಾಠವನ್ನು ಕನ್ನಡ ಚಿತ್ರರಂಗ ನೆಚ್ಚಿಕೊಳ್ಳುತ್ತಿದೆ. ‘ಉಳಿದವರು ಕಂಡಂತೆ’, ‘ಉಗ್ರಂ’, ‘ಬಹುಪರಾಕ್‌’ ಇದೇ ಕಾರಣಕ್ಕೆ ಕುತೂಹಲ ಮೂಡಿಸಿವೆ. ‘ಗೊಂಬೆಗಳ ಲವ್‌’ನಂಥ ಚಿತ್ರ ಸೋತಿದ್ದು ಗಳಿಕೆಯ ದೃಷ್ಟಿಯಿಂದಲೇ ಹೊರತು ಸಿನಿಮಾ ವಸ್ತು, ಅದರ ಪ್ರಸ್ತುತಿಯ ವಿಷಯದಲ್ಲಿ ಅಲ್ಲ ಎನ್ನುತ್ತಾರೆ ನಟ ಅಚ್ಯುತಕುಮಾರ್‌. ‘ಜಟ್ಟ’ ಚಿತ್ರ ಸಪ್ನದಂಥ ಚಿಕ್ಕ ಚಿತ್ರಮಂದಿರದಲ್ಲಿ ನಡೆಯುತ್ತಿದ್ದಾಗ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ವಾಸಿಸುವ ಎಷ್ಟೋ ತಮಿಳು, ಮಲಯಾಳಂ ಮೂಲದ ಐಟಿ ಉದ್ಯೋಗಿಗಳು ಸಪ್ನ ಚಿತ್ರಮಂದಿರ ಹುಡುಕಿಕೊಂಡು ಬಂದು ಸಿನಿಮಾ ವೀಕ್ಷಿಸಿದ್ದಾರೆ. ನಿರ್ದೇಶಕರೊಂದಿಗೆ ಸಂವಾದ ನಡೆಸಿದ್ದಾರೆ. ಇಲ್ಲಿ ನಕ್ಷತ್ರಗಳಿಲ್ಲ. ಇರುವುದು ಸೃಜನಶೀಲತೆ, ಸದಭಿರುಚಿ, ಕಥೆ ಮತ್ತು ಕನಸು. ಎಲ್ಲವೂ ಒಳ್ಳೆಯ ಪ್ರಯೋಗಗಳೇ ಆಗಿಲ್ಲ. ಅವುಗಳಿಗೂ ಅನಿರೀಕ್ಷಿತ ಗೆಲುವು ಸಿಗುವಂಥ ವಿಸ್ಮಯಗಳೂ ಸಂಭವಿಸಿವೆ ಎಂದು ವಿಶ್ಲೇಷಿಸುತ್ತಾರೆ ವಿಜಯಪ್ರಸಾದ್‌.ಮೇಕಿಂಗ್‌ ಮತ್ತು ಪ್ರಚಾರದಲ್ಲಿನ ಈ ಪ್ರಯೋಗಗಳು ಪಾತ್ರವರ್ಗದ ಆಯ್ಕೆಯಲ್ಲೂ ನಡೆಯಬೇಕು ಎನ್ನುವ ಅಭಿಮತ ಅವರದು. ಏಕತಾನತೆಯ ಕಾಂಬಿನೇಷನ್‌ಗಳು ಪ್ರೇಕ್ಷಕನ ಆಸಕ್ತಿ ಕೆರಳಿಸುವುದಿಲ್ಲ. ಒಬ್ಬ ನಟನ ಸಾಮರ್ಥ್ಯದ ಅರಿವಾಗುವುದು ಆತ ಬೇರೆ ಬೇರೆ ಮುಖಗಳನ್ನು ಎದುರಿಸಿದಾಗ ಎನ್ನುತ್ತಾರೆ ಅವರು.ಪ್ರೇಕ್ಷಕ ಪ್ರಭುವೇ...

ಇಷ್ಟೆಲ್ಲಾ ಇದ್ದರೂ ಪ್ರೇಕ್ಷಕನನ್ನು ತಲುಪುವಲ್ಲಿ ನಾವು ಸಾಕಷ್ಟು ಹಿಂದೆ ಉಳಿದಿದ್ದೇವೆ ಎನ್ನುವುದು ಹಲವರ ಅಭಿಪ್ರಾಯ. ಶೇಷಾದ್ರಿ ಅವರ ಪ್ರಕಾರ ನಮ್ಮ ವಿತರಣೆ ವ್ಯವಸ್ಥೆಯೇ ಸರಿಯಾಗಿಲ್ಲ. ಚೆನ್ನೈ, ಮುಂಬೈ ಮಲ್ಟಿಫ್ಲೆಕ್ಸ್‌ಗಳಲ್ಲಿ ಪ್ರಾದೇಶಿಕ ಭಾಷಾ ಚಿತ್ರಗಳ ಪ್ರದರ್ಶನ ಕಡ್ಡಾಯ. ಅವು ಮಧ್ಯಮ ವರ್ಗಕ್ಕೂ ಎಟಕುವ ದರದಲ್ಲಿದೆ.ಆದರೆ ನಮ್ಮಲ್ಲಿ ಕನ್ನಡ ಚಿತ್ರಗಳನ್ನು ನಮಗೆ ತಿಳಿಸದೆಯೇ ಕಿತ್ತು ಹಾಕಿ ಅದರ ಜಾಗದಲ್ಲಿ ಪರಭಾಷಾ ಚಿತ್ರ ಪ್ರದರ್ಶಿಸುತ್ತಿರುತ್ತಾರೆ ಎನ್ನುತ್ತಾರೆ ಅವರು.ಮಲ್ಟಿಫ್ಲೆಕ್ಸ್‌ಗಳು ಹಣವಂತರ ವಾರಾಂತ್ಯದ ಪಿಕ್ನಿಕ್‌ ತಾಣಗಳಾಗಿವೆ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ ಜಯಂತ ಕಾಯ್ಕಿಣಿ. ಹಿಂದಿ ಚಿತ್ರಗಳ ನೂರಿನ್ನೂರು ಕೋಟಿ ಗಳಿಕೆಯ ಘೋಷಣೆಗಳೇ ಅವಾಸ್ತವ ಎನ್ನುತ್ತಾರೆ ಅವರು.

ಹೆಣ್ಣನ್ನು ಅವಮಾನಿಸುವ ದಾರುಣ ದೃಶ್ಯವನ್ನು ನೋಡಿ ಮಲ್ಟಿಫ್ಲೆಕ್ಸ್‌ನಲ್ಲಿ ಕುಳಿತ ಪ್ರೇಕ್ಷಕ ಕುಟುಂಬ ನಗುತ್ತಿದ್ದನ್ನು ಕಂಡು ಬೇಸರವಾಯಿತು. ಸಿನಿಮಾ ಮನರಂಜನೆ ಎಂದರೆ ಏನೆಂಬುದರ ಬಗ್ಗೆಯೇ ಮೂಲಭೂತ ಗೊಂದಲ ಉದ್ಭವಿಸಿದೆ ಎನ್ನುತ್ತಾರೆ ಕಾಯ್ಕಿಣಿ.ಜಯಮಾಲ ಅವರಿಗೆ ನಾವು ಪ್ರೇಕ್ಷಕನನ್ನು ಕಟ್ಟುವ ಕಾರ್ಯದಲ್ಲಿ ಹಿಂದೆ ಇದ್ದೇವೆ ಎನಿಸಿದೆ. ಚಿತ್ರಮಂದಿರಕ್ಕೆಬರುವವನನ್ನು ಮಾತ್ರ ಪ್ರೇಕ್ಷಕ ಎಂದು ಒಪ್ಪಿಕೊಳ್ಳುವುದಿಲ್ಲ. ಟೀವಿ, ಅಂತರ್ಜಾಲ, ಮೊಬೈಲ್‌ಗಳಲ್ಲಿ ಸಿನಿಮಾ ನೋಡುವವನೂ ಪ್ರೇಕ್ಷಕನೇ ಎನ್ನುತ್ತಾರೆ ಅವರು.ಯಾವುದೇ ಕಲಾ ಪ್ರಕಾರದಲ್ಲಿ ಆದರೂ ಶೇ 20ರಷ್ಟು ಕಡಿಮೆ ಗುಣಮಟ್ಟವಿದ್ದೇ ಇರುತ್ತದೆ ಎನ್ನುವುದು ಈಗಿನ ಸಿನಿಮಾ ಸಾಹಿತ್ಯ ಚೆನ್ನಾಗಿಲ್ಲ ಎಂಬ ಆರೋಪಕ್ಕೆ ಕಾಯ್ಕಿಣಿ ನೀಡುವ ಉತ್ತರ. ಇವತ್ತಿನ ಯುವಸಮೂಹದ ತಲ್ಲಣ, ಕ್ಷೋಭೆಗಳನ್ನು ಆಧುನಿಕವಾಗಿ ಹೇಳಿದರೆ ಅದು ಜನರಿಗೆ ಇಷ್ಟವಾಗುತ್ತದೆ. ಯುವಕರಿಗೆ ಇಷ್ಟವಾಗುತ್ತದೆ ಎಂದರೆ ಅದರಲ್ಲಿ ಏನೋ ಒಂದು ವೈಶಿಷ್ಟ್ಯ ಇದೆ ಎಂದು ಅರ್ಥ ಎನ್ನುತ್ತಾರೆ ಅವರು.ಮತ್ತೆ ನಂಬರ್‌ 1?

ಈ ಹೊಸ ಪ್ರಯೋಗಗಳು, ಉತ್ಸಾಹ ಎಷ್ಟು ಕಾಲ ಎಂಬ ಪ್ರಶ್ನೆಯೂ ಇದೆ. ಸೂತ್ರಗಳನ್ನು ಮೀರಿದವರು ಮುಂದೆ ತಮ್ಮದೇ ಸೂತ್ರಗಳಲ್ಲಿ ಬಂಧಿಯಾಗಬಹುದು, ಅಥವಾ ಹಳೆಯ ಸೂತ್ರಗಳಿಗೆ ಮರಳಬಹುದು. ಇದೇನೇ ಇದ್ದರೂ ಇಡೀ ವಿಶ್ವವೇ ನಮ್ಮತ್ತ ಬೆರಗುಗಣ್ಣಿನಿಂದ ನೋಡುವ ದಿನಗಳು ಸನ್ನಿಹಿತವಾಗುತ್ತಿದೆ ಎನ್ನುತ್ತಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ. ಗಂಗರಾಜು. ‘ಲೂಸಿಯಾ’ ಕನ್ನಡದ ಬಗ್ಗೆ ವಿಶ್ವಚಿತ್ರೋದ್ಯಮದ ಗಮನ ಸೆಳೆದಿದೆ. ಆ ಗಮನವನ್ನು ಈಗ ನಡೆಯುತ್ತಿರುವ ಚಿತ್ರೋತ್ಸವ ಮೆಟ್ಟಿಲಾಗಿ ಬಳಸಿಕೊಳ್ಳಲಿದೆ. ಐಟಿ ಕ್ಷೇತ್ರದಂತೆಯೇ ಸಿನಿಮಾ ಬೆಳವಣಿಗೆ ಕಾರಣಕ್ಕೂ ಕನ್ನಡದತ್ತ ವಿಶ್ವದ ಗಮನ ಹರಿಯಲಿದೆ. ನಮ್ಮ ಚಿತ್ರರಂಗ ನಂಬರ್‌ ಒನ್‌ ಸ್ಥಾನಕ್ಕೆ ಏರಲಿದೆ ಎಂಬ ಅನಿಸಿಕೆ ವ್ಯಕ್ತಪಡಿಸುತ್ತಾರೆ ಅವರು.ಸಾಮಾನ್ಯ ಮಾದರಿ ಸಿನಿಮಾಗಳು ಮತ್ತು ಪ್ರಯೋಗ ಎರಡೂ ಸದೃಢವಾಗಿದ್ದರೆ ಮಾತ್ರ ಚಿತ್ರರಂಗ ಬೆಳೆಯಲು ಸಾಧ್ಯ. ಏಕೆಂದರೆ ಸಿನಿಮಾ ಕೇವಲ ಕಲೆಯಲ್ಲ. ಅದು ನೂರಾರು ಜನರ ಬದುಕು ಕೂಡ. ಹೀಗಾಗಿ ಹೊಸತು ಬಂದಾಗ ಹಳೆಯ ಸೂತ್ರಗಳನ್ನು ತಿರಸ್ಕರಿಸಬೇಕು ಎನ್ನುವುದು ತಪ್ಪು ಎನ್ನುತ್ತಾರೆ ಅಚ್ಯುತಕುಮಾರ್‌. ಕಥನ ಮತ್ತು ಅದನ್ನು ಹೇಳುವ ಬಗೆಯ ಜೊತೆಗೆ ಪ್ರೇಕ್ಷಕನನ್ನು ತಲುಪುವ ಬಗೆ, ಈ ಮೂರರಲ್ಲೂ ಸೃಜನಶೀಲತೆ ಮತ್ತು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಹೊಸ ನೀರಿನ ಸೆಲೆಗಳು ನೀಡುತ್ತಿರುವ ಸಿನಿಮಾಗಳು ಸದಭಿರುಚಿಯವು ಎನ್ನುವುದು ಗಮನಾರ್ಹ.ವ್ಯಾಪಾರೀ ಚಿತ್ರಗಳ ಸಿದ್ಧಸೂತ್ರಗಳನ್ನು ಮುರಿದು, ಪ್ರೇಕ್ಷಕನಿಗೆ ಮೋಸವಾಗದಂತೆ ಮನರಂಜನೆ ಮತ್ತು ಹೊಸ ಅನುಭವ ನೀಡುವ ಈ ಬಗೆಯ ಪ್ರಯೋಗಾತ್ಮಕ ಸಿನಿಮಾಗಳು ಎಪ್ಪತ್ತರ ದಶಕದ ವೈಭವವನ್ನು ಮರಳಿ ತರುವ ಭರವಸೆ ಮೂಡಿಸಿವೆ ಎಂದರೆ ತಪ್ಪಾಗಲಾರದು. ಒಳ್ಳೆಯ ಕಥೆಗಳುಳ್ಳ ಚಿತ್ರಗಳೇ ಇಲ್ಲ ಎಂಬ ಕೊರಗಿನ ನಡುವೆ ಚೇತನದ ಚಿಲುಮೆಯಂತೆ ಕಾಣಿಸುತ್ತಿರುವ ಈ ಹುಮ್ಮಸ್ಸಿನ ಮನಸುಗಳನ್ನು ಪ್ರೋತ್ಸಾಹಿಸುವ ಹೊಣೆಗಾರಿಕೆ ಪ್ರೇಕ್ಷಕನದಲ್ಲವೇ?

 

ಪ್ರತಿಕ್ರಿಯಿಸಿ (+)