ಹೊಸ ಸಚಿವರಿಬ್ಬರ ಮೇಲಿನ ಆರೋಪಗಳೇನು?

7

ಹೊಸ ಸಚಿವರಿಬ್ಬರ ಮೇಲಿನ ಆರೋಪಗಳೇನು?

Published:
Updated:

ಬೆಂಗಳೂರು: ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಡಿ.ಕೆ. ಶಿವಕುಮಾರ್‌ ಹಾಗೂ ರೋಷನ್‌ ಬೇಗ್‌ ಅವರು ಹಲವು ರೀತಿಯ ಆರೋಪಗಳನ್ನು ಎದುರಿಸುತ್ತಿದ್ದಾರೆ.‘ಎಸ್‌.ಎಂ.ಕೃಷ್ಣ ಸರ್ಕಾರ ಇದ್ದಾಗ ತಮ್ಮ ಅಧಿಕಾರ ಬಳಸಿ ಮೈಸೂರು ಮಿನರಲ್ಸ್‌ ಕಂಪೆನಿಯಿಂದ 10.80 ಲಕ್ಷ ಟನ್‌ ಅದಿರನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ’ ಎನ್ನುವ ಆರೋಪ ಶಿವಕುಮಾರ್‌ ಮೇಲಿದೆ.ಅಲ್ಲದೆ, ಬೆಂಗಳೂರಿನ ಬೆನ್ನಗಾನಹಳ್ಳಿಯ ಶ್ರೀನಿವಾಸ್‌ ಎನ್ನುವವರಿಗೆ ಸೇರಿದ್ದ 4.20 ಎಕರೆ ಜಮೀನನ್ನು  1986ರಲ್ಲೇ ಸರ್ಕಾರ ವಶಕ್ಕೆ ತೆಗೆದುಕೊಂಡಿತ್ತು. ಶ್ರೀನಿವಾಸ್‌  ನಿಧನದ ನಂತರ ಆ ಜಮೀನನ್ನು ಆಗಿನ ಸಿ ಎಂ ಯಡಿ­ಯೂರಪ್ಪ ಅವರಿಂದ ಡಿನೋಟಿಫೈ ಮಾಡಿಸಿಕೊಂಡು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎನ್ನುವ ಆರೋಪವೂ ಇದೆ.

ಸಚಿವ ರೋಷನ್‌ಬೇಗ್‌ ಸಹ, ಅಕ್ರಮ ಆಸ್ತಿ ಗಳಿಕೆ ಮತ್ತು ಸರ್ಕಾರಕ್ಕೆ ವಂಚಿಸಿರುವ ಆರೋಪಗಳನ್ನು ಎದುರಿಸುತ್ತಿದ್ದಾರೆ.ಉದ್ಯಮ ಸ್ಥಾಪಿಸುವುದಕ್ಕಾಗಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಿಂದ (ಕಿಯೋನಿಕ್ಸ್) ಬೇಗೂರಿನಲ್ಲಿ 1.1 ಎಕರೆ ಜಮೀನು ಪಡೆದಿದ್ದ ಬೇಗ್‌ ಅದನ್ನು ರಿಯಲ್ ಎಸ್ಟೇಟ್‌ಗೆ ಬಳಸಿದ್ದಾರೆ. ಪ್ರೆಸ್ಟೀಜ್ ಎಸ್ಟೇಟ್ಸ್ ಜೊತೆ ಜಂಟಿ ಪಾಲುದಾರಿಕೆ ಒಪ್ಪಂದದಲ್ಲಿ ವಾಣಿಜ್ಯ ಬಳಕೆ ಕಟ್ಟಡ ನಿರ್ಮಿಸಿದ್ದಾರೆ ಎನ್ನುವ ಆರೋಪ ಎದುರಿಸು­ತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ.ರೋಷನ್ ಬೇಗ್ ಮತ್ತು ಅವರ ಕುಟುಂಬದ ಸದಸ್ಯರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ಶಿವಾಜಿನಗರ ನಿವಾಸಿ ಅಬ್ದುಲ್ ಹಖ್ ಸುರಥಿ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಖಾಸಗಿ ದೂರಿನ ಅನ್ವಯ ಈ ಪ್ರಕರಣದ ತನಿಖೆ ನಡೆಯುತ್ತಿದೆ.ಈ ಹಿಂದೆ ಕೃಷ್ಣ ಸರ್ಕಾರದಲ್ಲಿ ಸಚಿವರಾಗಿದ್ದ ರೋಷನ್‌ ಬೇಗ್‌ ತಮ್ಮ ಸಹೋದರ ರೇಹನ್‌ ಬೇಗ್‌ನಿಂದಾಗಿಯೂ ರಾಜೀನಾಮೆ ನೀಡಬೇಕಾದ ಪ್ರಸಂಗ ಎದುರಾಗಿತ್ತು.

ನಕಲಿ ಛಾಪಾ ಕಾಗದ ಹಗರಣದ ರೂವಾರಿ ಕರೀಂಲಾಲಾ ತೆಲಗಿ ಜತೆ ನಿಕಟ ಸಂಪರ್ಕ ಹೊಂದಿದ ಆರೋಪ ರೇಹನ್‌ ಮೇಲಿತ್ತು. ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ರೋಷನ್‌ ಬೇಗ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry