ಶುಕ್ರವಾರ, ಮೇ 20, 2022
19 °C
ಪ್ರತಿ ಕಾಲೇಜಿಗೆ ರೂ. 150 ಕೋಟಿ ಕೇಂದ್ರ ನೆರವು

ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಅನಿಶ್ಚಿತ

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಹೊಸದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯುವ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಕಾಲೇಜು ಆರಂಭ ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.ಮಡಿಕೇರಿ, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಕಾಲೇಜು ತೆರೆಯುವ ಪ್ರಸ್ತಾವ ಮಾಡಲಾಗಿತ್ತು. ಇವುಗಳಲ್ಲಿ ತುಮಕೂರು, ಚಿತ್ರದುರ್ಗದಲ್ಲಿ ಸರ್ಕಾರಿ ಜಿಲ್ಲಾ ಆಸ್ಪತ್ರೆ ಬಳಸಿಕೊಂಡು ಈ ಶೈಕ್ಷಣಿಕ ವರ್ಷವೇ ಕಾಲೇಜು ಆರಂಭಗೊಳ್ಳಲಿವೆ ಎಂದು ಹೇಳಲಾಗಿತ್ತು. ಆದರೆ ಸಮರ್ಪಕ ಸಿದ್ಧತೆಯ ಕೊರತೆ, ಕೇಂದ್ರ ಸರ್ಕಾರದ ಹೊಸ ಷರತ್ತು ಕಾಲೇಜು ಆರಂಭಕ್ಕೆ ವಿಘ್ನ ತಂದಿದೆ.ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಆರ್‌ಎಂ) ಹೊಸದಾಗಿ ಸ್ಥಾಪಿಸುವ ಪ್ರತಿ ಕಾಲೇಜಿಗೆ ರೂ. 150 ಕೋಟಿ ನೆರವು ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರವು ಈಗ ಹೊಸ ಷರತ್ತು ವಿಧಿಸಿದೆ. ಈಗಾಗಲೇ ವೈದ್ಯಕೀಯ ಕಾಲೇಜು ಇರುವ ಕಡೆಗಳಲ್ಲಿ ಕಾಲೇಜು ಸ್ಥಾಪಿಸಿದರೆ ನೆರವು ನೀಡುವುದಿಲ್ಲ ಎಂದು ಈಚೆಗಷ್ಟೇ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪತ್ರ ಬರೆದಿರುವುದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿದೆ.ಉಳಿದಂತೆ ಕಾಲೇಜುಗಳಿಲ್ಲದ ಕಡೆ ಕಾಲೇಜು ಸ್ಥಾಪನೆಗೆ ಹಣ ನೀಡಲು ಕೇಂದ್ರ ಆತುರ ತೋರಿದರೂ ಕಾಲೇಜುಗಳ ಸ್ಥಾಪನೆಗೆ ಬೇಕಾದ ಭೂಮಿ, ಮೂಲಸೌಲಭ್ಯ, ಯೋಜನೆಯ ರೂಪುರೇಷೆಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿಕೊಂಡಿಲ್ಲದ ಕಾರಣ ಈ ವರ್ಷ ಯಾವುದೇ ಹೊಸ ಕಾಲೇಜು ಸ್ಥಾಪನೆ ಸಾಧ್ಯವಿಲ್ಲವಾಗಿದೆ ಎಂದು ಮೂಲಗಳು ತಿಳಿಸಿವೆ.ತುಮಕೂರು, ಚಿತ್ರದುರ್ಗದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಿರುವ ಕಾರಣ ಕೇಂದ್ರ ಸರ್ಕಾರದ ನೆರವು ಪಡೆದು ಈ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಎರಡು ಕಡೆಗಳಲ್ಲಿ ಜಿಲ್ಲಾ ಆಸ್ಪತ್ರೆಗಳನ್ನು ಬಳಸಿಕೊಂಡು ಈ ವರ್ಷವೇ ಹೊಸ ಕಾಲೇಜು ಆರಂಭಿಸಬಹುದಾದರೂ ಅಷ್ಟೊಂದು ಹಣ ರಾಜ್ಯ ಸರ್ಕಾರ ನೀಡಲು ಸಾಧ್ಯವೆ ಎಂಬ ಪ್ರಶ್ನೆ ಮೂಡಿದೆ.ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಹೊಸ ಕಾಲೇಜು ಆರಂಭಿಸಲಿರುವ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಇಲಾಖೆ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಈಚೆಗೆ ನಡೆಸಿದ್ದು, ಸಭೆಯಲ್ಲೂ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.ತುಮಕೂರಿನಲ್ಲಿ ಆರಂಭಿಸಬೇಕಾಗಿದ್ದ ಕಾಲೇಜಿನ ವಾರ್ಷಿಕ ಯೋಜನಾ ವೆಚ್ಚದ ವಿವರವನ್ನು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಕೇಳಿದರೂ ಇದೂವರೆಗೂ ಹಣಕಾಸು ಇಲಾಖೆಯು ಸಲ್ಲಿಸದೇ ಇರುವುದು ಕಾಲೇಜು ಆರಂಭಕ್ಕೆ ಮತ್ತೊಂದು ಹಿನ್ನಡೆಯಾಗಿದೆ ಎಂದು ಮೂಲಗಳು ತಿಳಿಸಿವೆ.`ತುಮಕೂರಿನಲ್ಲಿ ವೈದ್ಯಕೀಯ ಕಾಲೇಜು ಈ ವರ್ಷವೇ ಆರಂಭಿಸುವ ಉದ್ದೇಶವಿತ್ತು. ಆದರೆ ವಿವಿಧ ಕಾರಣಗಳಿಂದ ಈ ವರ್ಷ ಆರಂಭ ಕಷ್ಟ. ಈ ಸಂಬಂಧ ಚರ್ಚಿಸಲು ಜುಲೈನಲ್ಲಿ ವೈದ್ಯಕೀಯ ಸಚಿವರು ಮತ್ತೊಂದು ಸಭೆ ಕರೆದಿದ್ದಾರೆ' ಎಂದು ತುಮಕೂರು ಇನ್ಸ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ನಿರ್ದೇಶಕ ಗಂಗಾಧರಗೌಡ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.