ಹೊಸ `ಸೃಜನ'ಶೀಲತೆ

7

ಹೊಸ `ಸೃಜನ'ಶೀಲತೆ

Published:
Updated:
ಹೊಸ `ಸೃಜನ'ಶೀಲತೆ

ರಿಯಾಲಿಟಿ ಕಾರ್ಯಕ್ರಮಗಳು ಟೀವಿ ವಾಹಿನಿಗಳನ್ನು ಇನ್ನಿಲ್ಲದಂತೆ ಆವರಿಸಿಕೊಂಡಿರುವ ಕಾಲ ಇದು. ಧಾರಾವಾಹಿಗಳಷ್ಟೇ ಜನಪ್ರಿಯ ಸ್ಥಾನ ಇವುಗಳಿಗೆ. ರಿಯಾಲಿಟಿ ಶೋಗಳ ಮೂಲಕ ಜನಮನ್ನಣೆ ಗಳಿಸಿದ ಝೀ ಕನ್ನಡ ವಾಹಿನಿ ಈಗ ಅಂಥದ್ದೇ ಮತ್ತೊಂದು ಸಾಹಸಕ್ಕೆ ಮುಂದಾಗಿದೆ.`ಸರೆಗಮಪ', `ಕುಣಿಯೋಣು ಬಾರಾ' `ಯಾರಿಗುಂಟು ಯಾರಿಗಿಲ್ಲ', `ಸಾಲಕ್ಕೊಂದು ಸಲಾಂ', `ಮಮ್ಮಿ ನಂ1' ಹೀಗೆ ಹಲವು ರಿಯಾಲಿಟಿ ಪ್ರಯೋಗಗಳನ್ನು ನಡೆಸಿದ್ದ ವಾಹಿನಿ ಬತ್ತಳಿಕೆಯಲ್ಲಿ `ಈಗ ಕಾಸ್‌ಗೆ ಟಾಸ್' ಇದೆ. `ಮಮ್ಮಿ ನಂ.1' ಬಳಗದಲ್ಲಿದ್ದ ಸೃಜನ್ ಈ ಬಾರಿ `ಕಾಸ್‌ಗೆ ಟಾಸ್' ಆಡಿಸುತ್ತಿರುವ ಬಾಸ್! ವಿಶೇಷ ಎಂದರೆ ಇದು ಅವರ `ಲೋಕೇಶ್ ನಿರ್ಮಾಣ ಸಂಸ್ಥೆ'ಯ ಕೂಸು.

ಒಟ್ಟು 26 ಕಂತುಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾನವೀಯತೆಗೆ ಒತ್ತು ಕೊಟ್ಟು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಮಾರ್ಚ್ 2ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.ಮನಕಲಕುವ ನೈಜ ವ್ಯಕ್ತಿಗಳ ಜೀವನ ಕಥೆ ಕಾರ್ಯಕ್ರಮದ ಮೂಲಕ ಅನಾವರಣಗೊಳ್ಳುತ್ತಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನ ಸಾಮಾನ್ಯರಿಗಾಗಿ ಕನ್ನಡದ ಖ್ಯಾತ ತಾರೆಯರು ಹಾಗೂ ಗಣ್ಯವ್ಯಕ್ತಿಗಳು ಆಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಮಾನ್ಯರ ಪರವಾಗಿ ಗಣ್ಯರು ಟಾಸ್ ಆಯ್ಕೆ ಮಾಡಿಕೊಳ್ಳುವರು.

ಕಾರ್ಯಕ್ರಮದ ಪ್ರತಿ ಕಂತಿನಲ್ಲಿ ಒಟ್ಟು ಎರಡು ಲಕ್ಷ ರೂಪಾಯಿವರೆಗೆ ಹಣ ಗೆಲ್ಲಲು ಅವಕಾಶವಿದೆ.ಸಂಕಷ್ಟದಲ್ಲಿರುವ ಗಣ್ಯರಿಗೆ ಸಹಾಯ ಮಾಡುವ ಬ್ಯಾಂಕರ್ ಆಗಿ ನಟ ಜಹಾಂಗೀರ್ ಕಾಣಿಸಿಕೊಳ್ಳುತ್ತಿದ್ದಾರೆ.

ಈ ದುಡ್ಡು ಕೊಡುವ ದೊಡ್ಡಪ್ಪ ಮಾಡುವ ಮೋಡಿ ವೀಕ್ಷಕರಿಗೆ ಭರ್ತಿ ಮನರಂಜನೆ ಒದಗಿಸಲಿದೆ. ಆರಂಭದ ಕಂತುಗಳಲ್ಲಿ, ನಟರಾದ ಯೋಗೀಶ್, ಪ್ರಜ್ವಲ್ ದೇವರಾಜ್, ವಿಜಯ ರಾಘವೇಂದ್ರ, ರವಿಶಂಕರ್, ನೀತೂ, ಶುಭಾ ಪೂಂಜಾ ಮತ್ತಿತರರು ಆಟ ಆಡಿದ್ದಾರೆ.ವ್ಯಕ್ತಿಗಳಿಗೆ ಸಹಾಯ ಮಾಡುವುದು ಮಾತ್ರವಲ್ಲದೆ ಸಮುದಾಯಗಳಿಗೂ ನೆರವು ನೀಡುವ ಉದ್ದೇಶ `...ಟಾಸ್'ನದು. ಅದಕ್ಕಾಗಿ ನಾಡಿನ ಖ್ಯಾತ ವೈದ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆಯಂತೆ. ಸಂಕಷ್ಟದಲ್ಲಿರುವ ಚಿತ್ರನಟರು, ಸಾಂಸ್ಕೃತಿಕ ಲೋಕದ ಗಣ್ಯರು ಕೂಡ ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳಬಹುದು.ಮನರಂಜನೆ ಮತ್ತು ಸಾಮಾಜಿಕ ಕಳಕಳಿಯ ಎರಡು ಹಳಿಗಳ ಮೇಲೆ ಸಾಗುವ ರಿಯಾಲಿಟಿ ಶೋ ಕನ್ನಡದಲ್ಲೇ ಮೊದಲ ಯತ್ನ ಎಂಬುದು ಝೀ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ಗೌತಮ್ ಮಾಚಯ್ಯ ಅವರ ಅಭಿಪ್ರಾಯ. ಧಾರಾವಾಹಿಯೇತರ ಕಾರ್ಯಕ್ರಮಗಳ ಮುಖ್ಯಸ್ಥ ಬಾಲರಾಜು ನಾಯ್ಡು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry