ಬುಧವಾರ, ನವೆಂಬರ್ 13, 2019
24 °C

ಹೊಸ ಸೈಕಲ್ ಕೊಡಿಸಿ, ಸಹಾಯ ಮಾಡಿ'

Published:
Updated:

ಜನವಾಡ: `ಸೈಕಲ್ ಹಳೆಯದು. ಹೊಸ ಸೈಕಲ್ ಕೊಡಿಸಿ. ಮಗಳ ಮದುವೆಗೆ ಸಹಾಯ ಮಾಡಿ...'  ಸೋಮವಾರ ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದಲ್ಲಿ ಮತ ಕೇಳಲು ಬಂದ ಬೀದರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ರಹೀಮ್‌ಖಾನ್ ಅವರ ಎದುರು ಗ್ರಾಮದ ಕೆಲವರು ಇರಿಸಿದ ಬೇಡಿಕೆ ಇವು.ಶಾಸಕರು ಪ್ರಚಾರ ಸಭೆ ಮುಗಿಸಿ ಪಾದಯಾತ್ರೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಗ್ರಾಮದ ವೃದ್ಧ ಕಲ್ಯಾಣರಾವ್ ಎಂಬವರು ದಾರಿಯಲ್ಲಿ ಹಳೆ ಸೈಕಲ್ ನಿಲ್ಲಿಸಿ ಅಡ್ಡಗಟ್ಟಿದರು.  `ಸೈಕಲ್ ಹಳೆಯದು, ತುಳಿಯಲು ಕಷ್ಟ. ಹೊಸದು ಕೊಡಿಸಿ' ಎಂದು ಅವಲತ್ತುಕೊಂಡರು. ಶಾಸಕರು ಪ್ರತಿಕ್ರಿಯಿಸಲಿಲ್ಲ. ಗ್ರಾಮಸ್ಥರು ಶಾಸಕರಿಗೆ ತೆರಳಲು ದಾರಿ ನೀಡಿದರು.`ಈ ಮನಿ ನೋಡ್ರಿ ಸಾಬ್ರೆ, ಇಂಥ ಮನ್ಯಾಗ್ ಹ್ಯಾಂಗ್ ಬದುಕ್‌ಬೇಕ್' ಎಂದು ಗ್ರಾಮದ ಶಾಂತಮ್ಮ ಎಂಬುವರು ತಮ್ಮ ಗುಡಿಸಲು ಮನೆ ತೋರಿಸುತ್ತ ಗೋಳಿಟ್ಟರು. ನಮ್ಮ ಮಗಳ ಮದುವೆ ನಿಗದಿಯಾಗಿದೆ. ಸಹಾಯ ಮಾಡಿ ಎಂದು ವಿಮಲಾಬಾಯಿ ಎಂಬುವರು ಮತಯಾಚನೆಗಾಗಿ ಮನೆಗೆ ಬಂದ ಶಾಸಕರಿಗೆ ಕೋರಿಕೆಯಿತ್ತರು.ಮತ್ತೊಬ್ಬ ಮಹಿಳೆ, ಮಗಳ ಮದುವೆ ಆಮಂತ್ರಣ ಪತ್ರ ನೀಡಿ ನೆರವಿಗೆ ಮೊರೆಯಿಟ್ಟರು. ಅಂಧ ವೃದ್ಧ ವ್ಯಕ್ತಿ ಇಬ್ರಾಹಿಂಸಾಬ್ ಬೇಡಿಕೆಯೂ ನೆರವಿಗೆ ಸಂಬಂಧಿಸಿದ್ದೇ ಆಗಿತ್ತು. ಅವರ ಕುಟುಂಬದ ಸದಸ್ಯರು ಎರಡು ವರ್ಷ ಕಳೆದರೂ ಮಾಸಾಶನ ಬಿಡುಗಡೆ ಆಗಿಲ್ಲ ಎಂದು ಕೋಪ ವ್ಯಕ್ತಪಡಿಸಿದರು. ಆದರೆ, ಶಾಸಕರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾಸಕರು, ಈ ಚುನಾವಣೆಯಲ್ಲಿ ಪ್ರಾಮಾಣಿಕತೆಗೆ ಜಯ ಆಗಲಿದೆ. `ನಾನಿನ್ನೂ ರಾಜಕೀಯದಲ್ಲಿ ಹೊಸಬ. ತಪ್ಪುಗಳಾಗಿದ್ದರೆ ಸುಧಾರಿಸಿಕೊಂಡು ಹೋಗುತ್ತೇನೆ. ಈ ಬಾರಿಯೂ ಬೆಂಬಲಿಸಿ' ಎಂದು ಕೋರಿದರು.ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಚಂದ್ರಕಾಂತ್ ಹಿಪ್ಪಳಗಾಂವ್, ನಗರಸಭೆ ಸದಸ್ಯ ಧನರಾಜ ಹಂಗರಗಿ, ಪ್ರಮುಖರಾದ ವೈಜಿನಾಥ ಆನಂದೆ, ಸಂಜಯ್ ಜಾಗಿರದಾರ್, ಸಿದ್ಧು ಫುಲಾರಿ ಮತ್ತಿತರರು ಉಪಸ್ಥಿತರಿದ್ದರು. ಚಿಲ್ಲರ್ಗಿ ಗ್ರಾಮದಲ್ಲಿಯೂ ಅವರು ಮತಯಾಚಿಸಿದರು.

ಪ್ರತಿಕ್ರಿಯಿಸಿ (+)