ಹೊಸ ಹುಟ್ಟಿನ ಹಾಡು

7

ಹೊಸ ಹುಟ್ಟಿನ ಹಾಡು

Published:
Updated:
ಹೊಸ ಹುಟ್ಟಿನ ಹಾಡು

ಕವಿತೆ

ಕಸಿಗುಲಾಬಿಯ ರಾಜಶಿಶು

ನಾಟಿ ಗುಲಾಬಿಯ ಸ್ತನದಾಯಿನಿ ದಾದಿ

ಪುಷ್ಪಪಾಲಕನ ಕುಶಲಕಲೆ

ಹರಿತ ಶಸ್ತ್ರವ್ರಣಕೆ ಪ್ರೀತಿಲೇಪ

ನಾಟಿ ಗುಲಾಬಿಗೆ ಪುತ್ರಶೋಕ

ತನ್ನೊಡಲ ಚಿಗುರುಗಳ ಚಿವುಟಿ ಬಿಸುಡಿದೆ ಆ ಕೈ

ಕಸಿಗುಲಾಬಿಗೆ ತಾಯಿಲ್ಲದ ತಲ್ಲಣ

ತನ್ನ ತಲೆ ಕತ್ತರಿಸಿ ಯಾವುದೋ ಮುದಿಗಿಡಕೆ

ಅಂಟಿಸಿದೆ ಆ ಕೈ

ಶಪಿಸುತ್ತಿದೆ ನಾಟಿ ಗುಲಾಬಿ

ನಾ ನೆಲದೊಡಲಿಂದ ಮೊಗೆದ ರಸ

ನನ್ನ ಚಿಗುರಿಗೇ ಸಿಗದ ಹಾಗೆ

ಕುಡಿದು ಸೊಕ್ಕುವ ಸಾವೇ

ಒಣಗು

ಬುಡದಿಂದ ಚಿಗುರಿಸುತ್ತೇನೆ

ನನ್ನದೇ ಸಂತಾನ

ಸೆಟೆಯುತ್ತಿದೆ ಕಸಿಯ ಕೂಸು

ಉಪವಾಸ ಸಾಯುತ್ತೇನೆ ಮಲತಾಯೇ

ನಿನ್ನ ಹಾಲನೊಲ್ಲೆ

ನಾಟಿ ಗುಲಾಬಿಗೆ ಬೇರುಂಟು ಎಲೆಯಿಲ್ಲ

ಕಸಿಗುಲಾಬಿಗೆ ಎಲೆಯುಂಟು ಬೇರಿಲ್ಲ

ಮಣ್ಣು ಹಾಡಿತು ನೀರು ಹಾಡಿತು

ಗಾಳಿ ಹಾಡಿತು ಬಿಸಿಲು ಹಾಡಿತು

ಆಕಾಶ ಹಾಡಿತು

ಹುಟ್ಟು ಸಾವಿನ ಹಾಡು

ಕೆಳೆ ಹಗೆಯ ಹಾಡು

ಯಾಕೀ ಸಾವ ಕೊಲುವ ಕಲಹ

ಎಲೆ ಎಲೇ ಗಿಡವೇ

ಬೇರು ಬೇರೇ

ಸುಖವಿಲ್ಲ ನಾಟಿ ಗುಲಾಬೀ

ನಿನ್ನೊಡಲ ಚಿಗುರು ಚಿಗುರಿಸಿದರೂ

ಚಿವುಟಿ ಬಿಸುಡುವುದು

ಆ ಕೈ

ಹಿತವಿಲ್ಲ ಕಸಿಯ ಕೂಸೇ

ಉಣ್ಣದೇ ಹಟ ಮಾಡಿ ಸತ್ತರೆ

ಕತ್ತರಿಸಿ ಮತ್ತೊಂದು ಕುಡಿ

ಮತ್ತೆ ಮತ್ತೆ ಕಸಿ ಕಟ್ಟುವುದು ಆ ಕೈ

ಊಡದೇ ಉಣ್ಣದೇ ಸತ್ತು ಕೊಲುವಿರಿ ನೀವು

ಬೆಲೆಯಿಲ್ಲ ಬೇರಿಗೂ

ಬೇರು ಮೊಗೆದ ನೀರಿಗೂ

ಎಲೆ ಎಲೆ ಕುಡಿದ ಬಿಸಿಲ ಹಾಲಿಗೂ

ಪುಷ್ಪಪಾಲಕನ ಕುಶಲ ಕಲೆಗೂ

ಹಾಡುತ್ತಲೇ ಇವೆ

ಮಣ್ಣು ನೀರು ಬಿಸಿಲು ಗಾಳಿ ಬಾನು

ಸಾವ ಕೊಲುವ ಯುದ್ಧಕ್ಕೆ ಪ್ರತಿಹಾಡು

ಊಡಿ ಉಂಡು ಬಾಳಿಸುವ ಹಾಡು

ಲಾಲಿಸಿತು ನಾಟಿ ಗುಲಾಬಿ

ಲಾಲಿಸಿತು ಕಸಿಗುಲಾಬಿ

ಬೇರಿನಲಿ ನೀರಾಗಿ

ಎಲೆಯಲ್ಲಿ ಹಸಿರಾಗಿ

ಮೊಗ್ಗೆಯಲಿ ರಹಸ್ಯವಾಗಿ

ಹೂವಿನಲಿ ನಿಬ್ಬೆರಗು ರಂಗಾಗಿ ಅರಳಿದ ಗಳಿಗೆ

ನಾಟಿ ಗುಲಾಬಿಯ ಪುತ್ರ ಶೋಕವೂ

ಕಸಿಗುಲಾಬಿಯ ತಬ್ಬಲಿತನವೂ

ಹೊಸ ಹೊಸ ಹೂಗಳಾಗಿ

ಸಾವಿರದ ಬಣ್ಣಗಳಲ್ಲಿ ಅರಳಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry