ಬುಧವಾರ, ನವೆಂಬರ್ 20, 2019
27 °C

ಹೊಸ ಹೆಜ್ಜೆ

Published:
Updated:

ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುವ ಅಪರಾಧ ಕಾನೂನು ತಿದ್ದುಪಡಿ ಕಾಯಿದೆ 2013 ರಾಷ್ಟ್ರದಲ್ಲಿ ಜಾರಿಯಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಕಳೆದ ತಿಂಗಳು ಈ ಕುರಿತ ಮಸೂದೆ ಅಂಗೀಕಾರವಾಗಿತ್ತು. ಈಗ ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ. ಇದರಿಂದ ಸಹಜವಾಗಿ ಫೆಬ್ರುವರಿ 3ರಂದು ಜಾರಿಗೊಳಿಸಲಾಗಿದ್ದ ಅತ್ಯಾಚಾರ ವಿರೋಧಿ ಸುಗ್ರೀವಾಜ್ಞೆ ಅನೂರ್ಜಿತಗೊಂಡಿದೆ. ಮಹಿಳೆಯ ಹಕ್ಕುಗಳ ರಕ್ಷಣೆಯಲ್ಲಿ ಈ ಅತ್ಯಾಚಾರ ವಿರೋಧಿ ಕಾನೂನು ಹೊಸದೊಂದು ಸಕಾರಾತ್ಮಕ ಹೆಜ್ಜೆ.ಲೈಂಗಿಕ ಅಪರಾಧಗಳಿಗೆ ಹೆಚ್ಚಿನ ಶಿಕ್ಷೆ ವಿಧಿಸುವ ಅವಕಾಶ ಈ ಕಾನೂನಿನಲ್ಲಿದೆ. ಅಪರೂಪದಲ್ಲಿ ಅಪರೂಪ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ನೀಡಲೂ ಈ ಕಾನೂನಿನಲ್ಲಿ ಅವಕಾಶವಿದೆ. ಹಿಂಬಾಲಿಸುವಿಕೆ, ವಿಕೃತ ಲೈಂಗಿಕ ದರ್ಶನ (ವಾಯರಿಸಂ), ಬಲಾತ್ಕಾರದಿಂದ ವಸ್ತ್ರ ಕಳಚುವಿಕೆ ಹಾಗೂ ಆಸಿಡ್ ದಾಳಿಗಳಿಗೆ ಶಿಕ್ಷೆಗಳನ್ನು ವಿಧಿಸಲು ಈ ಕಾನೂನು ಅವಕಾಶ ಮಾಡಿಕೊಡುತ್ತದೆ. ಆದರೆ ಹಿಂಬಾಲಿಸುವಿಕೆ ಹಾಗೂ ಲೈಂಗಿಕ ದರ್ಶನದಂತಹ ಅಪರಾಧಗಳಿಗೆ ಇದ್ದಂತಹ ಕಠಿಣ ನಿಯಮಾವಳಿಗಳನ್ನು ರಾಜಕೀಯ ಪಕ್ಷಗಳ ಒತ್ತಡಗಳಿಂದ ದುರ್ಬಲಗೊಳಿಸಲಾಗಿದೆ.

ಈ  ಪ್ರಕಾರ, ಈಗ ಈ ಎರಡೂ ಅಪರಾಧಗಳನ್ನು ಮೊದಲ ಬಾರಿಗೆ ಎಸಗುವವರಿಗೆ ಜಾಮೀನಿನ ಅವಕಾಶ ಇರುತ್ತದೆ. ಪದೇ ಪದೇ ಇಂತಹ ಅಪರಾಧ ಎಸಗುವವರಿಗೆ ಮಾತ್ರ ಇದು ಜಾಮೀನು ರಹಿತ ಅಪರಾಧವಾಗುತ್ತದೆ. ಹಾಗೆಯೇ  ಹಲವು ವಾದ ವಿವಾದಗಳ ನಂತರ ಸಮ್ಮತಿಯ ಲೈಂಗಿಕತೆ ವಯಸ್ಸನ್ನು 16ರಿಂದ 18ಕ್ಕೆ ಏರಿಸಲಾಗಿದೆ. ಆದರೆ ಈ ಸಂಬಂಧದ ವಿವಾದ ಮಾತ್ರ ಇನ್ನೂ ಜೀವಂತವಾಗಿಯೇ ಇದೆ.ಮಹಿಳೆಯ ದೇಹದೊಳಗೆ ವಸ್ತುಗಳನ್ನು ತೂರಿಸುವದು ಅತ್ಯಾಚಾರ ವಿವರಣೆಯ ಪರಿಧಿಗೆ ಒಳಪಟ್ಟಿರುವುದು ಈ ಕಾನೂನಿನ ಮಹತ್ವದ ಅಂಶ ಎನ್ನಬಹುದು. ದೆಹಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕಬ್ಬಿಣದ ಸಲಾಕೆ ಬಳಕೆಯಾಗಿದ್ದ ಹಿನ್ನೆಲೆಯಲ್ಲಿ ಈ ಅಂಶದ ಸೇರ್ಪಡೆಯ ವಿಚಾರದಲ್ಲಿ ಮಹಿಳಾ ಸಂಘಟನೆಗಳು ತೀವ್ರ ಒತ್ತಡ ಹೇರಿದ್ದವು.ದೆಹಲಿ ಅತ್ಯಾಚಾರ ಘಟನೆಯ ನಂತರ ರಚಿಸಲಾಗಿದ್ದ ನ್ಯಾಯಮೂರ್ತಿ ಜೆ ಎಸ್ ವರ್ಮಾ ಸಮಿತಿಯ ಅನೇಕ ಶಿಫಾರಸುಗಳನ್ನು ಈ ಹೊಸ ಕಾನೂನಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಆದರೆ ವರ್ಮಾ ಸಮಿತಿ ನೀಡಿದ್ದ ಇನ್ನೂ ಅನೇಕ ಪ್ರಮುಖ ಶಿಫಾರಸುಗಳು ಈ ಕಾನೂನಿನಲ್ಲಿ ಜಾಗ ಪಡೆಯುವುದು ಸಾಧ್ಯವಾಗಿಲ್ಲ. ಇವುಗಳಲ್ಲಿ ಮುಖ್ಯವಾದದ್ದು ವಿವಾಹದೊಳಗಿನ ಅತ್ಯಾಚಾರ. ಬಹುಶಃ ಬರಲಿರುವ ದಿನಗಳಲ್ಲಿ ಈ ವಿಚಾರಗಳು ಹೆಚ್ಚಿನ ಚರ್ಚೆಗಳಿಗೆ ಒಳಪಡಬೇಕಾಗಿವೆ.ಬದಲಾಗುತ್ತಿರುವ ಸಮಾಜ ಹಾಗೂ ಬದಲಾಗುತ್ತಿರುವ ಪುರುಷ - ಮಹಿಳೆ ಸಂಬಂಧಗಳಿಗೆ ಅನುಗುಣವಾಗಿ ಕಾನೂನುಗಳೂ ಬದಲಾಗಬೇಕಾಗುತ್ತವೆ. ಸಂಸತ್‌ನಲ್ಲಿ ಈ ಮಸೂದೆ ಚರ್ಚೆಯ ಸಂದರ್ಭದಲ್ಲಿ ಮಹಿಳೆ ಕುರಿತಂತೆ  ರಾಜಕಾರಣಿಗಳ ಪೂರ್ವಗ್ರಹ ಧೋರಣೆಗಳು ಢಾಳಾಗಿ ವ್ಯಕ್ತವಾಗಿದ್ದವು. ಹೀಗಾಗಿಯೇ ಬರೀ ಕಾನೂನುಗಳಲ್ಲಿ ಬದಲಾವಣೆಗಳಾದರೆ ಸಾಲದು. ಮುಖ್ಯವಾಗಿ ಮನೋಭಾವಗಳಲ್ಲಿ ಬದಲಾವಣೆಗಳಾಗಬೇಕಿವೆ. ಜೊತೆಗೆ ಇರುವ  ಕಾನೂನುಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವುದೂ ಮುಖ್ಯ.

ಪ್ರತಿಕ್ರಿಯಿಸಿ (+)