ಶುಕ್ರವಾರ, ಏಪ್ರಿಲ್ 16, 2021
22 °C

ಹೋಂ ಸ್ಟೇ ಪ್ರಕರಣ ಮುಚ್ಚಿ ಹಾಕುವ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಕ್ಷಿ ಪತ್ರಕರ್ತನ ಬಂಧನಕ್ಕೆ ಜೆಡಿಎಸ್ ಖಂಡನೆ

ಮಂಗಳೂರು:
`ಹೋಂ ಸ್ಟೇ ಮೇಲಿನ ದಾಳಿಗೆ ಸಂಬಂಧಿಸಿದಂತೆ ಸಾಕ್ಷಿಯಾಗಿದ್ದ ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ಆರೋಪಿಯನ್ನಾಗಿ ಮಾಡುವ ಮೂಲಕ ಸಾಕ್ಷಿಯೇ ಇಲ್ಲದಂತೆ ಮಾಡಿ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ~ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಆರೋಪಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಪ್ರಕರಣದಲ್ಲಿ ಪತ್ರಕರ್ತನನ್ನು ಪ್ರಮುಖ ಸಾಕ್ಷಿಯನ್ನಾಗಿ ಬಳಸಿಕೊಳ್ಳಲು ಪೊಲೀಸರಿಗೆ ಅವಕಾಶವಿತ್ತು. ಆದರೆ ಸಾಕ್ಷಿಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ನವೀನ್ ವಿರುದ್ಧ 395ನೇ ಸೆಕ್ಷನ್ (ಡಕಾಯಿತಿ) ಅಡಿ ಪ್ರಕರಣ ದಾಖಲಿಸಿರುವುದು ಆತಂಕಕಾರಿ ಸಂಗತಿ. ಇದರ ಹಿಂದೆ ಬೆದರಿಕೆಯ ತಂತ್ರ ಇದೆ~ ಎಂದು ದತ್ತ ವಿಶ್ಲೇಷಿಸಿದರು.ಪ್ರಕರಣದ ತನಿಖಾ ಅಧಿಕಾರಿಯಾಗಿದ್ದ ಎಸಿಪಿ ವರದಿ ಸಲ್ಲಿಸದೇ ರಜೆಯ ಮೇಲೆ ಹೋಗಿದ್ದಾರೆ. ಗ್ರಾಮಾಂತರ ಠಾಣೆ ಉಸ್ತುವಾರಿ ಇನ್‌ಸ್ಪೆಕ್ಟರ್ ತನಿಖಾ ವರದಿ ಸಲ್ಲಿಸಿರುವ ಮಾಹಿತಿ ಲಭಿಸಿದೆ ಎಂದು ಹೇಳಿದರು.

`ಬಿಜೆಪಿ ಆಡಳಿತದಲ್ಲಿ ಮೂಲಭೂತವಾದಿಗಳ ಅಟ್ಟಹಾಸದಿಂದ ಜನತೆಗೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಮೂಲಭೂತವಾದಿಗಳ ಆಡುಂಬೊಲವಾಗಿದೆ. ಅವರ ಕುಕೃತ್ಯಗಳಿಗೆ ಇದು ಫಲವತ್ತಾದ ನೆಲವಾಗಿದೆ~ ಎಂದು ಟೀಕಿಸಿದರು.ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಉಲ್ಲೇಖಿಸಿರುವುದನ್ನು ಪ್ರಸ್ತಾಪಿಸಿದ ಅವರು, `ಪೂಜಾರಿ ಅವರ ಕಳಕಳಿ ನೈಜವಾದುದು. ಆದರೆ ಅವರ ಪಕ್ಷಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಬಗ್ಗೆ ಮಾತನಾಡುವ ಹಕ್ಕಿಲ್ಲ. ಇಂಥ ಪ್ರಕರಣದಲ್ಲಿ ಕಾಂಗ್ರೆಸ್‌ಗೆ ಬೇಳೆ ಬೇಯಿಸಿಕೊಳ್ಳುವ ಹಕ್ಕಿಲ್ಲ. ತುರ್ತುಪರಿಸ್ಥಿತಿ ಸಮಯದಲ್ಲಿ ಕಾಂಗ್ರೆಸ್ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡಿತ್ತು.ಈ ಎರಡೂ ಪಕ್ಷಗಳ ವಿರುದ್ಧ ದೊಡ್ಡ ಮಟ್ಟದ ಜನಜಾಗೃತಿ ಹೋರಾಟ ಹಮ್ಮಿಕೊಳ್ಳಲಾಗುವುದು~ ಎಂದೂ ದತ್ತ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.