ಸೋಮವಾರ, ಜೂನ್ 14, 2021
27 °C

ಹೋಗಾಕ ದಾರಿ ಕೊಡಸ್ರೀ ಡಿಸಿಗೆ ತಾಂಡಾ ಜನರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೊಟೆ: `ನೂರಾರು ವರ್ಷಗಳಿಂದ ಬಳಸುತ್ತ ಬಂದ ರಸ್ತಾ ಈಗ ಇಲ್ಲಂದ್ರ ಹ್ಯಾಂಗರೀ, ಸಾಯಬ್ರ, ತಾಂಡಾಕ ಹೋಗಾಕ ಇರುದ ಒಂದ ರಸ್ತಾ ಅದನ್ನು ಈಗ ಸಂಬಂಧಪಟ್ಟ ಜಮೀನು ಮಾಲೀಕ ರಸ್ತಾ ಕೊಡಂಗಿಲ್ಲಂದ್ರ ನಾವು ಊರು ಬಿಟ್ಟು ಹೊರಗ ಬರೂದು ಹ್ಯಾಂಗರಿ~ ಎಂದು ಗಡಿಸೋಮನಾಳ ತಾಂಡಾದ ನೂರಾರು ಗ್ರಾಮಸ್ಥರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಗೋಳಿಟ್ಟರು.ಗಡಿಸೋಮನಾಳ ತಾಂಡಾ-1 ಗ್ರಾಮದಿಂದ ಹೊರ ಜಗತ್ತಿನ ಸಂಪರ್ಕಕ್ಕೆ ಇದ್ದ ಒಂದು ರಸ್ತೆ ಇಂದು ಸಾರ್ವಜನಿಕ ಸಂಪರ್ಕಕ್ಕೆ ನೀಡಲು ಸಾಧ್ಯವಿಲ್ಲ ಎಂಬ ರೈತನೊಬ್ಬ ನ್ಯಾಯ ಮಾಡುತ್ತಿದ್ದು ಇದರಿಂದ ತಾಂಡಾದ ಜನ ಹೊರಗೆ ಬರಲಾಗುತ್ತಿಲ್ಲ.ಇದೇ ಮಾರ್ಗ ಬಳಸಿ ತಮ್ಮ ಜಮೀನುಗಳಿಗೆ ಹೋಗುತ್ತಿದ್ದ ಗಡಿಸೋಮನಾಳ ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ಬಿಡುತ್ತಿಲ್ಲ. ನಮಗೆ ದಾರಿ ಕೊಡಿಸಿ ಎಂದು  ಗ್ರಾಮಸ್ಥರು ಬುಧವಾರ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳಿಗೆ ದುಂಬಾಲು ಬಿದ್ದರು.ತಾಂಡಾದಿಂದ ಗಡಿಸೋಮನಾಳ ಮುಖ್ಯರಸ್ತೆಗೆ ಬರಲು ಸುಮಾರು ಒಂದುಕಿಲೋಮೀಟರ್ ಸಂಪರ್ಕ ರಸ್ತೆ ಇದೆ. ಮಧ್ಯದಲ್ಲಿ ಹಳ್ಳವೊಂದಿದ್ದು ಅವುಗಳನ್ನು ದಾಟಿಕೊಂಡು ಹೋಗಲು ಸರ್ಕಾರ ಎರಡು ಸೇತುವೆ ನಿರ್ಮಿಸಿದೆ.ತಾಂಡಾದಿಂದ ಸೇತುವೆವರೆಗೆ ರಸ್ತೆ ಡಾಂಬರೀಕರಣ ಕೂಡ ಮುಗಿದಿದೆ. ನಂತರದ ರಸ್ತೆ ಹೊಂದಿರುವ ಜಮೀನು ಮಾಲೀಕನ ಹೊಲದಲ್ಲಿ ರಸ್ತೆ ವಿಸ್ತರಣಾ ಪ್ರಕ್ರಿಯೆ ಕೈಗೊಂಡಾಗ ನ್ಯಾಯ ಪ್ರಾರಂಭವಾಗಿದೆ. ತನ್ನ ಜಮೀನಿನಲ್ಲಿ ರಸ್ತೆ ವಿಸ್ತರಣಕೆಕ ಅವಕಾಶ ನೀಡಲೊಪ್ಪದ ರೈತನ ವಿರುದ್ಧ ತಾಂಡಾ ಹಾಗೂ ಗಡಿಸೋಮನಾಳ ಗ್ರಾಮಸ್ಥರು ಸೇರಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು.ಮನವಿ ಸ್ವೀಕರಿಸಿದ್ದ ತಹಶೀಲ್ದಾರರು, ಸರ್ವೆಯರ್‌ರನ್ನು ಕಳಿಸಿ ಜಮೀನು ಮತ್ತು ರಸ್ತೆ ಬಗ್ಗೆ ಪರಿಶೀಲನೆ ಮಾಡಿಸಿದಾಗ ಅಲ್ಲಿ  ಸಾರ್ವಜನಿಕ ರಸ್ತೆಯಿಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ವೈಯಕ್ತಿಕ ಜಮೀನಿನಲ್ಲಿ ಇಲಾಖೆ ಏನೂ ಮಾಡಲಾಗದು ಎಂದು ಮರು ಉತ್ತರ ಸಲ್ಲಿಸಿದ್ದಾರೆ.ತನ್ನ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ಇಲ್ಲವೆಂಬುದನ್ನು ತಿಳಿದ ರೈತ ತನ್ನ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡ ಹೊರಟವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ತಾಳಿಕೋಟೆಗೆ ಬರುತ್ತಿರುವ ಮಾಹಿತಿ ಅರಿತು ಪಟ್ಟಣದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಖಾಸಗಿ ಜಮೀನಾಗಿದ್ದರೆ ಭೂಸ್ವಾಧೀನಪಡಿಸಿಕೊಂಡು ರಸ್ತೆ ಸಂಪರ್ಕ ನೀಡಿ ಭೂಸ್ವಾಧೀನ ಮುಗಿಯುವವರೆಗೆ  ಪರ್ಯಾಯ ರಸ್ತೆ ವ್ಯವಸ್ಥೆ ಮಾಡಿ ಎಂಬ ಬೇಡಿಕೆ ಇಟ್ಟರು.ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ), ವೈಯಕ್ತಿಕ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯ. ಸರ್ಕಾರಿ ನಿಯಮಾನುಸಾರ ಇರುವ ಬೆಲೆಗೆ ಮೂರರಷ್ಟು ಹೆಚ್ಚಿಗೆ ನೀಡಿ ಖರೀದಿಸೋಣ. ಜನತೆಗೆ ರಸ್ತೆ ಇಲ್ಲವೆಂದರೆ ಆಕಾಶದಲ್ಲಿ ನಡೆಯಲಾಗದು  ಎಂದು ಖಾರವಾಗಿ ಹೇಳಿದರು.ರಸ್ತೆ ಕೇಳುವವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಸಿಬ್ಬಂದಿ ಮೇಲೆ ಹರಿಹಾಯ್ದ ಶಾಸಕರು, ವೈಯಕ್ತಿಕವಾಗಿ ವ್ಯಕ್ತಿಗಳು ದೂರು ಕೊಡುವಾಗ ಸತ್ಯಾಂಶ ಅರಿಯಬೇಕು. ಸುಮ್ಮನೆ ಪ್ರಕರಣ ದಾಖಲಿಸಿಕೊಳ್ಳುವುದಲ್ಲ.

 

ಮರಳಿ ಇವರು ಅವರ ಮೇಲೆ ಪ್ರಕರಣ ದಾಖಲಿಸಿದರೆ ನ್ಯಾಯ ಮಾಡುತ್ತ ಕುಳಿತುಕೊಳ್ಳಲಾಗದು. ಇಬ್ಬರನ್ನು ಠಾಣೆಗೆ ಕರೆಸಿ ಚರ್ಚಿಸಿರಿ ಎಂದು ಸಲಹೆ ನೀಡಿದರು.ಆ  ಜಮೀನು ಮಾಲೀಕನನ್ನು ಕರೆಸಿ ಸಂಧಾನ ಮಾಡೋಣ ಜಗಳವಾಡಬೇಡಿ ಎಂದು ಗ್ರಾಮಸ್ಥರಿಗೆ ತಿಳಿಹೇಳಿದ ಮೇಲೆ ಗ್ರಾಮಸ್ಥರು ಅಲ್ಲಿಂದ ತೆರಳಿದರು.ನಂತರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ತಹಶೀಲ್ದಾರ ಸೋಮಲಿಂಗ ಗೆಣ್ಣೂರ,   ಜಮೀನು ಮಾಲೀಕ ಹೇಳಿದಂತೆ ಆತ ಬಡರೈತನಂತೆ, ಅವನ  ಒಂದು ಕಾಲು ಎಕರೆ ಹೊಲದಲ್ಲಿ ಮಧ್ಯೆ ರಸ್ತೆ ಮಾಡಿದರೆ ಅವನಿಗೆ ಏನೂ ಉಳಿಯುವುದಿಲ್ಲ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ.  ಎರಡು ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.