ಹೋಟೆಲ್‌ಗಳಲ್ಲಿ ಶೀಘ್ರ ಧೂಮಪಾನ ನಿಷೇಧ

7

ಹೋಟೆಲ್‌ಗಳಲ್ಲಿ ಶೀಘ್ರ ಧೂಮಪಾನ ನಿಷೇಧ

Published:
Updated:

ಬೆಂಗಳೂರು: ಬೆಂಗಳೂರಿನ ಎಲ್ಲ ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗುವುದು. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ರಾಜ್ಯದಾದ್ಯಂತ ಜಾರಿಗೆ ತರಲಾಗುವುದು ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಾಸುದೇವ ಅಡಿಗ, `ಹೋಟೆಲ್‌ನಲ್ಲಿ ಧೂಮಪಾನಕ್ಕೆ ಅವಕಾಶ ನೀಡಿದರೆ ಹೋಟೆಲ್‌ನ ನೌಕರರು ಮತ್ತು ಇತರೆ ಗ್ರಾಹಕರಿಗೆ ತೊಂದರೆಯಾಗುತ್ತದೆ.ಧೂಮಪಾನದಿಂದ ಗ್ರಾಹಕರು ಮತ್ತು ನೌಕರರ ಆರೋಗ್ಯಕ್ಕೆ ಹಾನಿ ಉಂಟಾಗದಂತೆ ರಕ್ಷಿಸುವುದು ನಮ್ಮ ಕರ್ತವ್ಯ. ಹಾಗಾಗಿ ಎಲ್ಲ ಹೋಟೆಲ್‌ಗಳಲ್ಲಿ ಕಡ್ಡಾಯವಾಗಿ ಧೂಮಪಾನ ನಿಷೇಧಿಸಿ ನಾಮಫಲಕಗಳನ್ನು ಅಳವಡಿಸಲಾಗುವುದು. ಅಗತ್ಯಬಿದ್ದರೆ ನಿಯಮ ಪ್ರಕಾರ ಧೂಮಪಾನಕ್ಕೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗುವುದು~ ಎಂದರು.`ಹೋಟೆಲ್ ಗ್ರಾಹಕರಿಗೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆಯ (ಸಿಒಟಿಪಿಎ-ಕೊಟ್ಪಾ) ಬಗ್ಗೆ ಅರಿವು ಮೂಡಿಸಲಾಗುವುದು. ಈ ಸಂಬಂಧ ಎಲ್ಲ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಫಲಕಗಳನ್ನು ಹಾಕಲಾಗುವುದು~ ಎಂದು ಹೇಳಿದರು.ಬೆಂಗಳೂರು ಬಾರ್ ಮತ್ತು ರೆಸ್ಟೊರೆಂಟ್‌ಗಳ ಸಂಘದ ಅಧ್ಯಕ್ಷ ಆಶಿಶ್ ಕೊಠಾರಿ, `ಬಾರ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಇನ್ನು ಮುಂದೆ ಕೊಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ವಿದೇಶಗಳಲ್ಲಿ ಬಾರ್, ಪಬ್ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಧೂಮಪಾನವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅದೇ ಮಾದರಿಯನ್ನು ಇಲ್ಲಿಯೂ ಜಾರಿಗೆ ತರಲು ಪ್ರಯತ್ನಿಸಲಾಗುವುದು~ ಎಂದು ಹೇಳಿದರು.ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಲಹೆಗಾರ (ಕರ್ನಾಟಕ ವಿಭಾಗ) ಡಾ. ಸೋಮಿಲ್ ರಸ್ತೋಗಿ, `ತಂಬಾಕು ಸೇವನೆ ಮಾಡುವವರಿಂದ ಇತರರ ಆರೋಗ್ಯಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಯ್ದೆಗಳನ್ನು ಜಾರಿಗೊಳಿಸಿವೆ. ಅದರಂತೆ ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಬಸ್ ನಿಲ್ದಾಣ, ರೈಲು ನಿಲ್ದಾಣ, ಚಿತ್ರಮಂದಿರ, ರೆಸ್ಟೊರೆಂಟ್‌ಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ~ ಎಂದರು.

ಬಿಬಿಎಂಪಿಯ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗಡೆ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry