ಹೋಟೆಲ್‌ಗಳಿಗೆ ಪಾಲಿಕೆ ಆಯುಕ್ತರ ದಾಳಿ

7

ಹೋಟೆಲ್‌ಗಳಿಗೆ ಪಾಲಿಕೆ ಆಯುಕ್ತರ ದಾಳಿ

Published:
Updated:

ಧಾರವಾಡ: ನಗರದಲ್ಲಿನ ಹೋಟೆಲ್‌ಗಳಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡದ ಮಹಾನಗರಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ನೇತೃತ್ವದ ಅಧಿಕಾರಿಗಳ ತಂಡವು ಸ್ವಚ್ಛತೆ ಕಾಪಾಡದ ನಾಲ್ಕು ಹೋಟೆಲ್‌ಗಳಿಗೆ ನೋಟಿಸ್ ನೀಡಿತು.ನಗರದ ಸಂಗಮ್ ಚಿತ್ರಮಂದಿರ ಸಮೀಪದಲ್ಲಿರುವ ಮೇಘದರ್ಶಿನಿ, ಕಾಮತ್ ಹೋಟೆಲ್, ವಿಮಲ್ ಮತ್ತು ಲಕ್ಷ್ಮಿ ಸಾವ್‌ಜೀ ಹೋಟೆಲ್‌ಗಳಿಗೆ  ಭೇಟಿ ನೀಡಿದ ಅಧಿಕಾರಿಗಳ ತಂಡವು ಅಲ್ಲಿನ ವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ನೋಟಿಸ್ ಜಾರಿಗೊಳಿಸಿತು.ಈ ಸಂದರ್ಭ ಮಾಧ್ಯಮದೊಟ್ಟಿಗೆ ಮಾತನಾಡಿದ ಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ `ಅಧಿಕಾರಿಗಳ ಭೇಟಿ ಸಂದರ್ಭ ಈ ಹೋಟೆಲ್‌ಗಳಲ್ಲಿ ಸ್ವಚ್ಛತೆ ಕುರಿತ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂತು.ಅಡುಗೆ ಮಾಡುವವರು ತಲೆಗೆ ರಕ್ಷಣಾ ವಸ್ತ್ರ ಧರಿಸದಿರುವುದು, ಆಹಾರ ವಿತರಣೆ ಸಂದರ್ಭ ಸ್ವಚ್ಛತೆ ಇಲ್ಲದಿರುವುದು ಕಂಡುಬಂತು. ಅಲ್ಲದೆ, ಪಾಲಿಕೆಯು ಅವಳಿನಗರದಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದ್ದರೂ ಕೆಲವು ಹೋಟೆಲ್‌ಗಳಲ್ಲಿ ಪಾರ್ಸಲ್ ಕಟ್ಟಲು ಪ್ಲಾಸ್ಟಿಕ್ ಬಳಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಷೋಕಾಸ್ ನೋಟಿಸ್ ಜಾರಿಮಾಡಿದ್ದಾರೆ~ ಎಂದು ತಿಳಿಸಿದರು.ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಅವರಿಗೆ ಸೂಚಿಸಲಾಗಿದೆ. ಒಂದುವೇಳೆ ಈ ಕ್ರಮ ಕೈಗೊಳ್ಳಲು ಹೋಟೆಲ್‌ಗಳು ವಿಫಲವಾದಲ್ಲಿ ಅವುಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.ಅವಳಿನಗರದ ಹೋಟೆಲ್‌ಗಳಲ್ಲಿ ಸ್ವಚ್ಛತೆ ಕೊರತೆ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ದಿಢೀರ್ ಭೇಟಿ ನೀಡಲಾಯಿತು. ಸೂಕ್ತ ನಿರ್ವಹಣೆ ಇಲ್ಲದ ಹೋಟೆಲ್‌ಗಳಿಗೆ ಇದೊಂದು ಎಚ್ಚರಿಕೆಯಾಗಿದೆ. ಇನ್ನು ಮುಂದೆಯೂ ನಗರದ ಹೋಟೆಲ್‌ಗಳಿಗೆ ಹೀಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ನಿಯಮ ಉಲ್ಲಂಘಿಸಿದ ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.ಬೇಸಿಗೆ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಹೋಟೆಲ್‌ಗಳು ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry