ಬುಧವಾರ, ಜನವರಿ 22, 2020
17 °C

ಹೋಟೆಲ್‌ ಕಾರ್ಮಿಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶೇಷಾದ್ರಿಪುರದ ನಾರ್ಥ್‌ ಬ್ಲಾಕ್‌ ರಸ್ತೆಯಲ್ಲಿ ಪಾನ­ಮತ್ತ ದುಷ್ಕರ್ಮಿಗಳು ಬುಧವಾರ ರಾತ್ರಿ ರಮೇಶ್‌ (27) ಎಂಬ ಹೋಟೆಲ್‌ ಕಾರ್ಮಿಕ­ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.ಮೂಲತಃ ಹೊನ್ನಾವರದ ರಮೇಶ್‌, ಶೇಷಾದ್ರಿಪುರದ ಶಾಂತಿಸಾಗರ್‌ ಹೋಟೆಲ್‌­ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಇತರೆ ಕಾರ್ಮಿಕರೊಂದಿಗೆ ಹೋಟೆಲ್‌ನ ಮಹಡಿಯ ಕೊಠಡಿ­ಯಲ್ಲಿ ವಾಸವಾಗಿದ್ದರು.ಹೋಟೆಲ್‌ನ ವಹಿವಾಟು ಮುಗಿದ ನಂತರ ರಾತ್ರಿ 11.30ರ ಸುಮಾರಿಗೆ ಅವರು ಸಂದೀಪ್, ಸುರೇಂದ್ರ, ಜಯರಾಮ್‌ ಮತ್ತು ಪ್ರಸಾದ್‌ ಎಂಬ ಕಾರ್ಮಿಕರೊಂದಿಗೆ ಬಾರ್‌ ಒಂದರಲ್ಲಿ ಮದ್ಯಪಾನ ಮಾಡಿ ಕೊಠಡಿಗೆ ವಾಪಸ್‌ ಬರುತ್ತಿದ್ದಾಗ ಈ ಘಟನೆ ನಡೆದಿದೆ.ಸ್ವಸ್ತಿಕ್‌ ವೃತ್ತದ ಬಳಿಯ ಪಾದಚಾರಿ ಮಾರ್ಗದಲ್ಲಿ ಪಾನಮತ್ತನಾಗಿ ನಿಂತಿದ್ದ ಮಂಜು ಎಂಬಾತ ಸಹಚರರ ಜತೆ ಸೇರಿ­ಕೊಂಡು ರಮೇಶ್‌ ಮತ್ತು ಸ್ನೇಹಿತ­ರನ್ನು ಅಡ್ಡ­ಗಟ್ಟಿ­ದ್ದಾನೆ. ಈ ವೇಳೆ ಪರಸ್ಪರರ ಮಧ್ಯೆ ವಾಗ್ವಾದ ನಡೆದು ಜಗಳ­ವಾಗಿದೆ. ನಂತರ ಮಂಜು ಮತ್ತು ಸಹಚರರು ರಮೇಶ್‌ ಅವರ ಮೊಬೈಲ್‌ ಕಿತ್ತು­ಕೊಂಡು ತೊಡೆಗೆ ಚಾಕುವಿನಿಂದ ಇರಿದಿದ್ದಾರೆ. ಅಲ್ಲದೇ, ಸಂದೀಪ್, ಸುರೇಂದ್ರ, ಜಯರಾಮ್‌ ಮತ್ತು ಪ್ರಸಾದ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ರಮೇಶ್‌ ಅವರನ್ನು ಆಸ್ಪತ್ರೆಗೆ ದಾಖಲಿಸ­ಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳು ಘಟನೆ ನಂತರ ಸ್ಥಳ­ದಲ್ಲಿ ಬೈಕ್‌ ಬಿಟ್ಟು ಪರಾರಿಯಾಗಿದ್ದಾರೆ. ಬೈಕ್‌ನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳ ಗುರುತನ್ನು ಪತ್ತೆ ಮಾಡಲಾಗಿದೆ. ಸದ್ಯದಲ್ಲೇ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)