ಹೋಟೆಲ್ ಉದ್ಯಮಕ್ಕೂ ಹೊಡೆತ

ಬುಧವಾರ, ಮೇ 22, 2019
24 °C

ಹೋಟೆಲ್ ಉದ್ಯಮಕ್ಕೂ ಹೊಡೆತ

Published:
Updated:
ಹೋಟೆಲ್ ಉದ್ಯಮಕ್ಕೂ ಹೊಡೆತ

ಬೆಂಗಳೂರು: ಈಶಾನ್ಯ ರಾಜ್ಯಗಳ ಜನತೆ ಸಾಮೂಹಿಕವಾಗಿ ನಗರ ತೊರೆಯುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮದ ಮೇಲೆ ತೀವ್ರ ಹೊಡೆತ ಬಿದ್ದಿದೆ. ವಿಶೇಷವಾಗಿ ಚೈನೀಸ್, ಮೆಕ್ಸಿಕನ್ ಹಾಗೂ ಉತ್ತರ ಭಾರತೀಯ ಭೋಜನ ಶೈಲಿಯ ರೆಸ್ಟೋರೆಂಟ್‌ಗಳಲ್ಲಿ ಉದ್ಯೋಗಿಗಳು ವಲಸೆ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಸಂಜೆ ಯುವಕರಿಂದಲೇ ತುಂಬಿ ತುಳುಕುತ್ತಿದ್ದ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸುತ್ತಮುತ್ತಲಿನ ರಸ್ತೆಗಳಲ್ಲಿನ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಉದ್ಯೋಗಿಗಳಿಲ್ಲ.ಚೈನೀಸ್ ಹಾಗೂ ಉತ್ತರ ಭಾರತೀಯ ಭೋಜನ ಶೈಲಿಯ ಹೋಟೆಲ್ ಹಾಗೂ ಬಾರ್‌ಗಳಲ್ಲಿ ಕ್ಯಾಪ್ಟನ್‌ನಿಂದ ಹಿಡಿದು ಅಡಿಗೆ ಸಹಾಯಕರವರೆಗೆ ಈಶಾನ್ಯ ರಾಜ್ಯಗಳ ಯುವಕರೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಹೋಟೆಲ್ ಮಾಲೀಕರು ಭದ್ರತೆ ನೀಡುವ ಭರವಸೆ ನೀಡಿದರೂ ವದಂತಿಗಳಿಗೆ ಹೆದರಿ ಎರಡು ದಿನಗಳಿಂದ ತಮ್ಮ ಸ್ವರಾಜ್ಯಗಳತ್ತ ಕಾಲ್ಕಿತ್ತಿದ್ದಾರೆ. ನಗರದ ಇತರ ಕಡೆಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಹೀಗಾಗಿ, ಹೋಟೆಲ್ ಉದ್ಯಮದ ಶೇ 25ರಿಂದ 30ರಷ್ಟು ಹೊಡೆತ ಬಿದ್ದಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.`ನಮ್ಮ ಬಾರ್‌ನಲ್ಲಿ ಈಶಾನ್ಯ ರಾಜ್ಯಗಳ 12 ಮಂದಿ ಸಿಬ್ಬಂದಿ ಕೆಲಸ ಮಾಡಿಕೊಂಡಿದ್ದರು. ಅವರೆಲ್ಲರೂ ಭಯಭೀತರಾಗಿ ನಗರ ತೊರೆದಿದ್ದಾರೆ. ಹೀಗಾಗಿ, ಒಬ್ಬನ ನೆರವಿನಿಂದ ಗ್ರಾಹಕರನ್ನು ಸಮಾಧಾನಪಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ~ ಚರ್ಚ್ ಸ್ಟ್ರೀಟ್‌ನ `ಕೋಕೋನಟ್ ಗ್ರೋವ್~ ಕೆಫೆ ಬಾರ್‌ನ ಸಹಾಯಕ ವ್ಯವಸ್ಥಾಪಕ ಜೋಷಿ `ಪ್ರಜಾವಾಣಿ~ಗೆ ಅಳಲು ತೋಡಿಕೊಂಡರು.`ಅಡುಗೆ ತಯಾರಿಸಲು ಸದ್ಯಕ್ಕೆ ತೊಂದರೆಯಾಗುತ್ತಿಲ್ಲ. ಆದರೆ, ಸಪ್ಲೈಯರ್‌ಗಳೇ ಇಲ್ಲ. ಎರಡು ದಿನಗಳಿಂದ ಗ್ರಾಹಕರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ~ ಎಂದು ಅವರು ತಿಳಿಸಿದರು.ಇನ್ನು, ಇದೇ ರಸ್ತೆಯ `ಕ್ವೀನ್ಸ್~ ಹೋಟೆಲ್‌ನಲ್ಲೂ ಗ್ರಾಹಕರ ಕೊರತೆ ಎದ್ದು ಕಾಣುತ್ತಿತ್ತು. ಈ ಹೋಟೆಲ್‌ನಲ್ಲಿ ಅಡಿಗೆ ಕೆಲಸ ಮಾಡಿಕೊಂಡಿದ್ದ ಈಶಾನ್ಯ ರಾಜ್ಯಗಳ ಸಿಬ್ಬಂದಿ ಊರುಗಳತ್ತ ಹೊರಟಿದ್ದಾರೆ. `ಕೇವಲ ವದಂತಿಗಳಿಂದ ಭಯಭೀತರಾಗಿ ಅವರೆಲ್ಲರೂ ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ಪರಿಸ್ಥಿತಿ ತಿಳಿಯಾದ ನಂತರ ಕೆಲಸಕ್ಕೆ ಬರುವುದಾಗಿ ಹೇಳಿ ಹೋಗಿದ್ದಾರೆ~ ಎಂದು ಹೋಟೆಲ್‌ನ ವ್ಯವಸ್ಥಾಪಕ ನಿತಿನ್ ಹೇಳಿದರು.`ಎರಡು ದಿನಗಳಿಂದ ಸುಮಾರು ಶೇ 30ರಷ್ಟು ವ್ಯಾಪಾರ ಕಡಿಮೆಯಾಗಿದೆ. ವಾಹನ ನಿಲುಗಡೆಗೆ ಅವಕಾಶ ಇಲ್ಲದ ರೀತಿಯಲ್ಲಿ ವಾಹನಗಳು ಬರುತ್ತಿದ್ದವು. ಆದರೆ, ರಾತ್ರಿ 9 ಗಂಟೆ ವೇಳೆಗೆ ರಸ್ತೆ ಖಾಲಿ ಹೊಡೆಯುತ್ತಿದೆ~ ಎಂದು ಅವರು ತಿಳಿಸಿದರು.ತದ್ವಿರುದ್ಧ ಹೇಳಿಕೆ: ಇನ್ನು, ಕೆಲವು ಪ್ರತಿಷ್ಠಿತ ಬಾರ್ ಹಾಗೂ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಈಶಾನ್ಯ ರಾಜ್ಯಗಳ ಸಿಬ್ಬಂದಿ ಸಾಮೂಹಿಕವಾಗಿ ಸ್ವ-ರಾಜ್ಯಗಳತ್ತ ತೆರಳಿದ್ದಾರೆ. ಇದರಿಂದ ಈ ಹೋಟೆಲ್‌ಗಳಲ್ಲಿ ಅಡಿಗೆ ಸಿಬ್ಬಂದಿಯ ಕೊರತೆ ಎದುರಾಗಿದೆ.ಈಶಾನ್ಯ ರಾಜ್ಯಗಳಿಂದ ಬಂದು ಕೆಲಸ ಮಾಡುವ ಸಿಬ್ಬಂದಿ ವಾಪಸಾಗಿರುವುದನ್ನು ಸಹೋದ್ಯೋಗಿಗಳೇ ಒಪ್ಪಿಕೊಂಡರೂ, ವ್ಯವಸ್ಥಾಪಕರು ಮಾತ್ರ ತದ್ವಿರುದ್ಧ ಹೇಳಿಕೆ ನೀಡಿದರು. `ಇಲ್ಲ ನಮ್ಮ ಸಿಬ್ಬಂದಿಗೆಲ್ಲಾ ಮಲ್ಲೇಶ್ವರದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದೇವೆ. ಸದ್ಯಕ್ಕೆ ಯಾರೂ ವಾಪಸಾಗಿಲ್ಲ~ ಎಂದು ರೂಬಿ ಬಾರ್‌ನ ವ್ಯವಸ್ಥಾಪಕರು ತಿಳಿಸಿದರು.ಆದರೆ, ಬಾರ್ ಭಣಗುಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ಅದಕ್ಕೆ ಅವರ ಬಳಿ ಸ್ಪಷ್ಟವಾದ ಉತ್ತರ ದೊರೆಯಲಿಲ್ಲ. `ಗ್ರಾಹಕರು ಬಾರದಿರುವ ಬಗ್ಗೆ ನಾನೇನೂ ಹೇಳಲಾರೆ? ಎಂದು ವ್ಯವಸ್ಥಾಪಕರು ಹಾರಿಕೆ ಉತ್ತರ ನೀಡಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry