ಮಂಗಳವಾರ, ಮೇ 11, 2021
27 °C

ಹೋಟೆಲ್ ಉದ್ಯಮಕ್ಕೆ ವಿದೇಶಿ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಐಷಾರಾಮಿ ಹೋಟೆಲ್ ಮತ್ತು ಸರ್ವೀಸ್ ಅಪಾರ್ಟ್‌ಮೆಂಟ್ ವಲಯ ವಿದೇಶಿ ಸಂಸ್ಥೆಗಳನ್ನು ಆಕರ್ಷಿಸುತ್ತಿದೆ. ಈ ಹಿಂದೆಯೂ ಸ್ವಿಜರ್ಲೆಂಡ್ ಸೇರಿದಂತೆ ಹೊರದೇಶಗಳ ಅನೇಕ ಸಂಸ್ಥೆಗಳು ಇಲ್ಲಿನ ಆತಿಥ್ಯ ಕ್ಷೇತ್ರವನ್ನು ಪ್ರವೇಶಿಸಿದ್ದವು.

ಈ ಸಾಲಿಗೆ ಸಿಂಗಪುರದ ದಿ ಅಸ್ಕೋಟ್ ಲಿಮಿಟೆಡ್ ಮತ್ತು ಅಮೆರಿಕದ ಕಾರ್ಲ್‌ಸನ್ ವರ್ಲ್ಡ್‌ವೈಡ್ ಹೊಸ ಸೇರ್ಪಡೆ. ಭಾರತೀಯ ಮೂಲದ ಸಂಸ್ಥೆಗಳ ಸಹಯೋಗದಲ್ಲಿ ಇವು ಬೆಂಗಳೂರಿನಲ್ಲಿ ಸರ್ವೀಸ್ ಅಪಾರ್ಟ್‌ಮೆಂಟ್ ಮತ್ತು ಪಂಚತಾರಾ ಹೋಟೆಲ್ ಪ್ರಾರಂಭಿಸಿವೆ.ಸಿಟಡಿನಸ್

ದಿ ಅಸ್ಕೋಟ್ ಲಿಮಿಟೆಡ್, ರಿಚ್ಮಂಡ್ ವೃತ್ತದ ಬಳಿ 90 ಅಪಾರ್ಟ್‌ಮೆಂಟ್ ಘಟಕಗಳನ್ನು ಒಳಗೊಂಡಿರುವ `ಸಿಟಡಿನಸ್ ರಿಚ್ಮಂಡ್ ಸರ್ವೀಸ್ಡ್ ರೆಸಿಡೆನ್ಸಿ~ ಶುರುಮಾಡಿದೆ.ಸಾಂಪ್ರದಾಯಿಕ ತಾರಾ ಮತ್ತು ಐಷಾರಾಮಿ ಹೋಟೆಲ್‌ಗಳಿಗಿಂತ ಸರ್ವೀಸ್ ಅಪಾರ್ಟ್‌ಮೆಂಟ್‌ಗಳು ಭಿನ್ನ. ಪ್ರವಾಸ ಅಥವಾ ಕಾರ್ಯ ನಿಮಿತ್ತ ಬಂದಾಗ ಹೆಚ್ಚು ಕಾಲ, ಕುಟುಂಬ ಸಮೇತ ತಂಗುವವರಿಗೆ, ಸ್ವತಂತ್ರವಾಗಿ ಉಳಿಯಲು ಬಯಸುವವರಿಗೆ ಇದು ಉಪಯುಕ್ತ. ಪ್ರತಿ ಕೊಠಡಿಯೂ ಆಧುನಿಕ ಸೌಕರ್ಯಗಳ ಜತೆ ಅಡುಗೆ ಮಾಡಿಕೊಳ್ಳಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಹೊಂದಿರುತ್ತದೆ. ಹೀಗಾಗಿ ಇಲ್ಲಿ ತಂಗುವುದು ಬೋರ್ ಎನಿಸುವುದಿಲ್ಲ. ಜತೆಗೆ ತಾರಾ ಹೋಟೆಲ್‌ಗಳಿಗಿಂತ ಮಿತವ್ಯಯದ ದರದಲ್ಲಿ ಲಗ್ಷುರಿ ಸೌಕರ್ಯ. ಅದಕ್ಕಾಗಿಯೇ ಇವು ಎಲ್ಲೆಡೆ ಜನಪ್ರಿಯವಾಗುತ್ತಿವೆ ಎನ್ನುತ್ತಾರೆ ಅಸ್ಕೋಟ್ ಮುಖ್ಯ ಹೂಡಿಕೆ ಅಧಿಕಾರಿ ರೊನಾಲ್ಡ್ ಟಿ.ಸಿಟಡಿನಸ್ ರಿಚ್ಮಂಡ್ ಬೆಂಗಳೂರು ಆರಾಮದಾಯಕ, ವಿಶಾಲವಾದ ಎರಡು ಮಲಗುವ ಕೋಣೆಗಳ ಅಪಾರ್ಟ್‌ಮೆಂಟ್, ಸ್ಟೂಡಿಯೊ ಶ್ರೇಣಿ ವಸತಿಗಳನ್ನು ಒಳಗೊಂಡಿದೆ. ಈಜುಕೊಳ ಮತ್ತು ಮಕ್ಕಳ ಈಜುಕೊಳ, ಪೂಲ್ ಸೈಡ್ ಕೆಫೆ, ಸಮಗ್ರ ಜಿಮ್ಮಾಷಿಯಂ, ಕಾನ್ಫರೆನ್ಸ್ ಸೌಲಭ್ಯವೂ ಇದೆ.ವಾಣಿಜ್ಯ ಸಂಸ್ಥೆಗಳು, ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳು, ಎಂ.ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಿಗೆ ಹತ್ತಿರದಲ್ಲಿ ಇರುವುದು ಇನ್ನೊಂದು ಆಕರ್ಷಣೆ.ಪಾರ್ಕ್ ಪ್ಲಾಜಾ

ಮಾರತ್ತಹಳ್ಳಿ ರಿಂಗ್ ರಸ್ತೆಯಲ್ಲಿ ಆರಂಭವಾದ ಪಾರ್ಕ್‌ಪ್ಲಾಜಾ ನಾಲ್ಕು ವಿವಿಧ ಶ್ರೇಣಿಯ 234 ಕೊಠಡಿಗಳುಳ್ಳ ಪಂಚತಾರಾ ಹೋಟೆಲ್. ಪರಿಸರ ಸ್ನೇಹಿ ವಿಧಾನಗಳ ಅಳವಡಿಕೆ ಇದರ ವಿಶೇಷ.ಇಲ್ಲಿ ಕೊಠಡಿಗಳಿಗೆ ಬಿಸಿನೀರು ಪೂರೈಕೆಯಾಗುವುದು ಸೌರಶಕ್ತಿ ಘಟಕಗಳಿಂದ. ಕಡಿಮೆ ನೀರು ಬಳಸುವ ಶವರ್, ನಲ್ಲಿಗಳಿವೆ. ಇಡೀ ಹೋಟೆಲ್ ನೈಸರ್ಗಿಕ ಗಾಳಿ ಬೆಳಕನ್ನು ಯಥೇಚ್ಛವಾಗಿ ಬಳಸಿಕೊಳ್ಳುವಂತೆ ನಿರ್ಮಾಣಗೊಂಡಿದೆ. ಹೋಟೆಲ್‌ನ ಮೇಲ್ಭಾಗದ ಛಾವಣಿಯಲ್ಲಿ ಕೈತೋಟವಿದ್ದು ರೆಸ್ಟೊರೆಂಟ್‌ಗೆ ಬೇಕಾದ ಕೆಲ ತರಕಾರಿ ಬೆಳೆಸಲಾಗುತ್ತದೆ. ಲಾಂಜ್ ಬಾರ್, 2 ರೆಸ್ಟೊರೆಂಟ್‌ಗಳು, ಈಜುಗೊಳ, ಸ್ಪಾ, ಆಧುನಿಕ ಜಿಮ್ ಇತ್ಯಾದಿ ಸೌಲಭ್ಯಗಳಿವೆ.ಏಕಕಾಲಕ್ಕೆ 800 ಜನ ಕುಳಿತುಕೊಳ್ಳಬಹುದಾದ ಮತ್ತು 25 ಅಡಿ ಎತ್ತರವಾಗಿದ್ದು ಭವ್ಯ ನೋಟ ನೀಡುವ ಸಭಾಂಗಣ ಇಲ್ಲಿದೆ. ಇದು ಬೆಂಗಳೂರಿನ ಹೋಟೆಲ್‌ಗಳ ಪೈಕಿ ಅತಿ ದೊಡ್ಡ ಬ್ಯಾಂಕ್ವೆಟ್ ಸಭಾಂಗಣ ಎನ್ನುತ್ತಾರೆ ಪ್ರಧಾನ ವ್ಯವಸ್ಥಾಪಕ ಅಲೆಗ್ಸಾಂಡರ್ ಶ್ನೀಡರ್.ಅಮೆರಿಕದ ಕಾರ್ಲ್‌ಸನ್ ವರ್ಲ್ಡ್‌ವೈಡ್ ಜತೆಗಿನ ಒಪ್ಪಂದದ ಅಡಿ ಸರೋವರ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ `ಪಾರ್ಕ್‌ಪ್ಲಾಜಾ~ ನಿರ್ವಹಿಸಲಿದೆ. ಇದರಲ್ಲಿ ಆಸ್ಟಿನ್ ರೋಷ್ ಅವರ ಚರಿಷ್ಮಾ ಹೋಟೆಲ್‌ನ ಸಹಯೋಗವೂ ಇದೆ ಎನ್ನುತ್ತಾರೆ ಸರೋವರ್‌ನ ಕಾರ್ಯವಾಹಕ ನಿರ್ದೇಶಕ ಅಜಯ್ ಬಕಾಯಾ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.