ಹೋಟೆಲ್ ಬಾಡಿಗೆ ದುಬಾರಿ!

7

ಹೋಟೆಲ್ ಬಾಡಿಗೆ ದುಬಾರಿ!

Published:
Updated:
ಹೋಟೆಲ್ ಬಾಡಿಗೆ ದುಬಾರಿ!

ಅಕ್ಕಿ-ಬೇಳೆ, ದಿನಸಿ ಬೆಲೆ ಏರಿತು, ಹಾಲು-ಕಾಯಿಪಲ್ಲೆ ಧಾರಣೆಯೂ ಅತಿಯಾಯ್ತು, ಪೆಟ್ರೋಲ್ ಬೆಲೆ ಹೆಚ್ಚಾಯ್ತು, ಮೊನ್ನೆ ವಿದ್ಯುತ್ ಶುಲ್ಕವೂ ಹೆಚ್ಚಾಯ್ತು ಛೆ ಛೆ ಛೆ... ಎಂದು ಬಡವರು, ಮಧ್ಯಮ, ಕೆಳಮಧ್ಯಮ ವರ್ಗ ಜನ ಬೇಸರ ಮಾಡಿಕೊಂಡಿದ್ರು.

ಆದ್ರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಮೇಲ್ಮಧ್ಯಮ ವರ್ಗದವರು, ಐಟಿ-ಬಿಟಿ ಮಂದಿ ಸಹ ಈಗ ಬೇಸರ ಮಾಡಿಕೊಳ್ಳುತ್ತಿದ್ದಾರೆ.

ವಾರಾಂತ್ಯದಲ್ಲೋ, ತಿಂಗಳ ಕೊನೆಗೋ ಪ್ರವಾಸ ಹೋಗುವ ಅಭ್ಯಾಸ ರೂಢಿಸಿಕೊಂಡಿರುವ ಈ ಮಂದಿ `ಭಾರತದಲ್ಲೂ ಹೋಟೆಲ್ ಕೊಠಡಿಗಳ ಬಾಡಿಗೆ ಬಹಳ ಹೆಚ್ಚಾಗಿದೆ~ ಎಂದು ಪಿಸುಮಾತಿನಲ್ಲೇ ಗೊಣಗುತ್ತಿದ್ದಾರೆ.

ಬೆಂಗಳೂರು, ಮೈಸೂರು, ನವದೆಹಲಿ, ಗೋವಾ, ಜೈಪುರ, ಮುಂಬೈ, ಮನಾಲಿಯಂಥ ಪ್ರಮುಖ ಪ್ರವಾಸಿ ತಾಣಗಳಲ್ಲಿನ ಹೋಟೆಲ್ ಕೊಠಡಿಗಳ ಬಾಡಿಗೆ 2011ರಲ್ಲಿ ದಿಢೀರ್ ಎಂದು ಶೇ. 19ರಷ್ಟು ಏರಿದೆ. ಇದನ್ನು ಇತ್ತೀಚೆಗೆ ನಡೆದ ಸಮೀಕ್ಷೆಯೂ ಖಚಿತಪಡಿಸಿದೆ.

ದೆಹಲಿಯಲ್ಲಿ ಒಂದು ರಾತ್ರಿ ಉಳಿಯಲು ಹೋಟೆಲ್ ಕೊಠಡಿ ಬಾಡಿಗೆ ಸರಾಸರಿ ಶೇ 9ರಷ್ಟು ಹೆಚ್ಚಳವಾಗಿದ್ದು, ರೂ. 5914ಕ್ಕೆ ಏರಿದ್ದರೆ, ಮುಂಬೈನಲ್ಲಿ ಶೇ 3ರಷ್ಟು ದುಬಾರಿಯಾಗಿ ರೂ. 6539ಕ್ಕೇರಿದೆ. ಬೆಂಗಳೂರಿನಲ್ಲಿ ಶೇ. 5ರಷ್ಟು ಹೆಚ್ಚಿದ್ದು, ರೂ. 4595ಕ್ಕೇರಿದೆ. ಇದ್ದುದರಲ್ಲಿ ಚೆನ್ನೈಯೇ ವಾಸಿ. ಇಲ್ಲಿ ಕೇವಲ ಶೇ 1ರಷ್ಟು ಏರಿಕೆಯಾಗಿದ್ದು, ಬಾಡಿಗೆ ರೂ. 4707ರಷ್ಟಿದೆ.

ಪ್ರವಾಸಿಗರನ್ನು ಅತ್ಯಧಿಕ ಪ್ರಮಾಣದಲ್ಲಿ ಆಕರ್ಷಿಸುವ ಅರಮನೆಗಳ ನಗರಿ ಮೈಸೂರು ಪ್ರವಾಸಿಗರ ಪಾಲಿಗೆ ಈಗ `ಬಲು ದುಬಾರಿ~ ಎನಿಸಿದೆ. ಇಲ್ಲಿ ಹೋಟೆಲ್ ಕೊಠಡಿ ಬಾಡಿಗೆ ಅತ್ಯಧಿಕ ಪ್ರಮಾಣದಲ್ಲಿ(ಶೇ. 19ರಷ್ಟು) ಹೆಚ್ಚಳವಾಗಿ ರೂ. 3111ಕ್ಕೇರಿದೆ.

ಹೋಟೆಲ್ ಬಾಡಿಗೆ ಏರಿಕೆಯಾಗಿರುವುದರಲ್ಲಿ ನಂತರದ ಸ್ಥಾನ ಆಗ್ರಾದ್ದು. ಇಲ್ಲಿ ಹೋಟೆಲ್ ಕೊಠಡಿ ಶೇ. 13ರಷ್ಟು ದುಬಾರಿಯಾಗಿದ್ದು, ರೂ. 4418ಕ್ಕೇರಿದೆ. ಜೈಪುರದಲ್ಲಿಯೂ ಶೇ. 13ರಷ್ಟು ಏರಿಕೆ ಕಂಡು ರೂ. 3854ರಷ್ಟಿದೆ. ಗೋವಾದಲ್ಲಿಯೂ ಶೇ. 12ರಷ್ಟು ಬಾಡಿಗೆ ಏರಿಸಲಾಗಿದೆ. ಪ್ರವಾಸಿಗರ ಮೆಚ್ಚಿನ ಪರ್ವತ ಪ್ರದೇಶ ಮನಿಲಾದಲ್ಲಿಯೂ ಹೋಟೆಲ್ ಬಾಡಿಗೆ ಶೇ. 8ರಷ್ಟು ಹೆಚ್ಚಿದ್ದು, ಒಂದು ರಾತ್ರಿಗೆ ಸರಾಸರಿ  ರೂ. 2428 ಬಾಡಿಗೆ ಇದೆ ಎನ್ನುತ್ತದೆ ಹೋಟೆಲ್ ಪ್ರೈಸ್ ಇಂಡೆಕ್ಸ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಅಂಕಿ ಅಂಶ.

ಹಳೆ ಮದ್ಯದ ಹಣ ಶಾಲೆಗೆ

ಮದ್ಯ ಹಳೆಯದಾದಷ್ಟೂ ಅದರ `ಕಿಕ್~(ಪ್ರಭಾವ) ಜೋರು. ಅದಕ್ಕೆ ತಕ್ಕಂತೆ ಬೆಲೆಯೂ ಅಧಿಕ.

55 ವರ್ಷ ಹಳತಾದ ಅಪರೂಪದ ವಿಸ್ಕಿ ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ಹರಾಜಿನಲ್ಲಿ ರೂ. 35 ಲಕ್ಷ(42000 ಪೌಂಡ್) ಬೆಲೆ ಪಡೆದುಕೊಂಡಿತು.

ಗ್ಲೆನ್‌ಫಿಡಿಚ್ ಸಿಂಗಲ್ ಮಾಲ್ಟ್ ವಿಸ್ಕಿಯನ್ನು ವರ್ಲ್ಡ್ ಡ್ಯುಟಿ ಫ್ರೀ ಗ್ರೂಪ್ ಖರೀದಿಸಿತು. ಈ ವಿಸ್ಕಿಗೆ ನಿಗದಿಪಡಿಸಲಾಗಿದ್ದ ಕನಿಷ್ಠ ಬೆಲೆಯೇ 40000 ಪೌಂಡ್. ಈ ಹಳೆ ವಿಸ್ಕಿ ಮಾರಾಟದಿಂದ ಬಂದ ಹಣದಲ್ಲಿ ಭಾರತದ ಉತ್ತರಾಖಂಡ್‌ನಲ್ಲಿ ಅಂಗವಿಕಲರಾದ ಮತ್ತು ಮಾನಸಿಕವಾಗಿ ಬೆಳವಣಿಗೆ ಕಾಣದ ಮಕ್ಕಳ ಶಾಲೆ ಆರಂಭಿಸಲಾಗುತ್ತದೆ ಎಂದು ಚಾರಿಟಿ ಸಂಸ್ಥೆ ಹೇಳಿದೆ.

ರೂ. 44000 ಕೋಟಿ ಬೆಲೆ ತರಕಾರಿ ತಿಪ್ಪೆಗೆ

ಭಾರತದಲ್ಲಿ ಎಲ್ಲವೂ ಅತಿಯೇ!

ಪ್ರತಿವರ್ಷ ಭಾರದಲ್ಲಿ ಒಟ್ಟು ರೂ. 44 ಸಾವಿರ ಕೋಟಿ ಮೌಲ್ಯದ ಹಣ್ಣು-ತರಕಾರಿ ವ್ಯರ್ಥವಾಗುತ್ತದೆ ಎಂಬುದನ್ನು ಕೇಂದ್ರ ಸರ್ಕಾರವೇ ಬಹಿರಂಗಪಡಿಸಿದೆ.

ಅಂದರೆ, ದೇಶದಲ್ಲಿ ಬೆಳೆಯಲಾಗುವ ಹಣ್ಣು-ಕಾಯಿಪಲ್ಲೆಯಲ್ಲಿ ಶೇ 18ರಷ್ಟು ಪ್ರಯೋಜನಕ್ಕೇ ಬಾರದಂತೆ ಕಸದ ರಾಶಿ ಸೇರುತ್ತಿದೆ. ಇದಕ್ಕೆ ಕಾರಣ ದೇಶದ ರೈತರು ಬೆಳೆದ ಬೆಳೆಯನ್ನು ಸೂಕ್ತ ರೀತಿ ಕಾಪಾಡಿಕೊಳ್ಳಲು ಅಗತ್ಯವಾದ ಶೀತಲೀಕರಣ ಘಟಕಗಳು ಇಲ್ಲದೇ ಇರುವುದು.

ಹೆಚ್ಚು ಹಣ್ಣು-ತರಕಾರಿ ಬೆಳೆಯುವುದರಲ್ಲಿ ವಿಶ್ವದಲ್ಲಿಯೇ ಭಾರತ 2ನೇ ಸ್ಥಾನದಲ್ಲಿದೆ. ಒಂದು ವರ್ಷದ ಹಿಂದೆ ದೇಶದಲ್ಲಿ 7.48 ಕೋಟಿ ಟನ್ ಹಣ್ಣು, 14.65 ಕೋಟಿ ಟನ್ ತರಕಾರಿ ಬೆಳೆಯಲಾಗಿತ್ತು ಎಂದು ವಿವರ ನೀಡಿದೆ ಕೇಂದ್ರ ಸರ್ಕಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry