ಹೋದ ನಮ್ಮ ನಾರಾಯಣ

7

ಹೋದ ನಮ್ಮ ನಾರಾಯಣ

Published:
Updated:
ಹೋದ ನಮ್ಮ ನಾರಾಯಣ

ಎಷ್ಟೆಯಿರಲಿ ಅಷ್ಟೆ ಮಿಗಿಲು-ತಮ್ಮ ಕಿರಣ ತಮಗೆ ಹಗಲು;/ಉಳಿದ ಬೆಳಕು ಕತ್ತಲು./ ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು/ ಉಳಿದ ಲೋಕ ಹಿತ್ತಲು.  

-ದ.ರಾ.ಬೇಂದ್ರೆ
ಉಡುಪಿಯ `ರಥಬೀದಿ ಗೆಳೆಯರು~ ಸಾಂಸ್ಕತಿಕ ಸಂಘಟನೆಯ ಸ್ಥಾಪಕರಲ್ಲಿ ಒಬ್ಬನಾದ ಗೆಳೆಯ ಕೆ.ಜಿ.ನಾರಾಯಣ, ಇದೇ ಆಗಸ್ಟ್ 9ರಂದು ತೀರಿಕೊಂಡ.

 

ತನ್ನ 55 ವರ್ಷಗಳ ಆಯುಷ್ಯದಲ್ಲಿ ನಾಟಕ ನಿರ್ದೇಶಕ, ಯಕ್ಷಗಾನ ಕಲಾವಿದ, ಸಾಂಸ್ಕೃತಿಕ ಸಂಘಟಕ, ಕನ್ನಡ ಪ್ರಾಧ್ಯಾಪಕ ಇತ್ಯಾದಿ ವಿಶೇಷಣಗಳಿಗೆ ನಿಜಕ್ಕೂ ಯೋಗ್ಯವಾದ ಕ್ರಿಯಾಶೀಲ ಚಟುವಟಿಕೆಗಳನ್ನು ನಾರಾಯಣ ಮಾಡಿ ಹೋಗಿದ್ದಾನೆ.ಈ ಕಾರಣಕ್ಕೆ ಉಡುಪಿಯ ಸಾಂಸ್ಕೃತಿಕ ವಲಯದಲ್ಲಿ ಹಾಗೂ ತಾನು ಬೋಧಿಸುತ್ತಿದ್ದ ಕಾಲೇಜಿನ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ನಡುವೆ ಅವನು ಖ್ಯಾತನೂ, ಆತ್ಮೀಯನೂ ಆಗಿದ್ದಾನೆ.ಅವನ ಅಗಲುವಿಕೆಯಿಂದ ಅವನ ಮಿತ್ರವೃಂದದಲ್ಲಿದ್ದ ನನ್ನಂತಹವರು ನಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಕಳೆದುಕೊಂಡು ಖಾಲಿಯಾಗಿದ್ದೇವೆ- ಇದು ಕೂಡ ಅತಿಶಯೋಕ್ತಿಯ ಮಾತಲ್ಲ.

 

ಆತ್ಮೀಯರ ಮರಣಾ ನಂತರದಲ್ಲಿ, ನಾವು ಅಷ್ಟಾಗಿ ಮುಖ್ಯ ಅಂತ ಕಾಣದಿದ್ದ ಅವರ ಹಲವಾರು ಗುಣಗಳಿಗೆ ಹೊಸ ಅರ್ಥವಿರುವಂತೆ ತೋರುತ್ತದೆ. ಅವು ನಿಜವಾಗಿದ್ದಲ್ಲಿ, ನಮ್ಮ ವ್ಯಕ್ತಿತ್ವದಲ್ಲಿ ಗೆಳೆಯನ ಗುಣ ವಿಲೀನವಾಗಿ, ನಮ್ಮ ನಡವಳಿಕೆ ಬದಲಾಗುತ್ತದೆ; ಸ್ಮಶಾನ ವೈರಾಗ್ಯದ ಭ್ರಮೆಯೇ ಆಗಿದ್ದಲ್ಲಿ, ಅದು ಎರಡೇ ದಿನದಲ್ಲಿ ಕರಗಿ, ನಮ್ಮ ಸಾಚಾತನ-ಲಫಂಗತನಗಳು ನಮ್ಮ ಜೊತೆ ಉಳಿಯುತ್ತವೆ.

 

ಆದರೆ, ನಾರಾಯಣನಂತಹ ಜೀವದ ವಿಷಯದಲ್ಲಿ, ಈ ವೈಯಕ್ತಿಕ ಸಂಬಂಧಕ್ಕಿಂತ ಮಿಗಿಲಾದ ಕೆಲವು ಸಾಮಾಜಿಕ ಜೀವನದ ಸಂಕೇತಗಳಿವೆ. ಆತ್ಮೀಯರ ಶ್ರದ್ಧಾಂಜಲಿ ಸಭೆಯ ಪ್ರಾಮಾಣಿಕ ಸ್ಪಂದನಗಳಿಗೆ ಹೊರತಾದ ಅರ್ಥವನ್ನು ಆ ಜೀವಸಂಕೇತಗಳು ಹೊರಡಿಸುತ್ತವೆ.

 

ಸಾಂಪ್ರದಾಯಿಕ ಜೀವನಕ್ರಮದಲ್ಲಿ ನನಗೆ ಏನೇನೂ ಸಂಬಂಧವಿಲ್ಲದ ನಾರಾಯಣ ನನ್ನ ಆತ್ಮೀಯ ಗೆಳೆಯನಾದದ್ದೇ ಒಂದು ಸಾಮಾಜಿಕ ಸನ್ನಿವೇಶದಲ್ಲಿ; ಒಂದು ಸಾಮಾಜಿಕ ಸಂಕಲ್ಪದ ಸುಕೃತದಲ್ಲಿ. ಅದನ್ನು ಹೇಳುವುದಕ್ಕಷ್ಟೇ- ಈ ಸಾರ್ವಜನಿಕ ಶ್ರದ್ಧಾಂಜಲಿ ಬರಹ.ಊರಿಗೆ ಒಂದು ಚಹರೆ ಅಂತ ಇರುವುದಿಲ್ಲ. ಊರ ಜನರ ನಡಾವಳಿಗಳಿಂದ ಊರಿಗೆ ಒಂದು ಮುಖ ಮೂಡುತ್ತದೆ. ಜಾತಿ, ಮತ, ಅಂತಸ್ತುಗಳನ್ನು ತಮ್ಮ ಬದುಕಿನ ಗುರುತಾಗಿ ಮಾಡಿಕೊಂಡಿರುವ ಮಂದಿ ಬದುಕುವ ಊರುಗಳು ನಮ್ಮ ದೇಶದಲ್ಲಿ ಸಾಮಾನ್ಯ.

 

ಇಂತಹ ಊರುಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯಲ್ಲಿ ಇಂತಹ ಭೇದಗಳ ಢಾಳಾಗಿ ಉಳಿಸಿಕೊಂಡು ಮೆರೆಯುವ ಸಂಸ್ಥೆಗಳೂ ಸಾಮಾನ್ಯ. ನಮ್ಮ ಊರುಗಳು ಹೀಗಿವೆ ಅಂತಲೇ ಭಾರತದ ವಸಾಹತುಶಾಹಿ ವಿರೋಧಿ ಹೋರಾಟದ ಒಡಲಲ್ಲಿ ಸಾಮಾಜಿಕ ಪರಿವರ್ತನೆಯ ಚಳವಳಿಗಳೂ ಬೆಳೆದವು.ಹಲವು ಬಗೆಯ ವಿಶಿಷ್ಟ ಪರಿವರ್ತನೆಯ ಮಾರ್ಗಗಳನ್ನು ಈ ಚಳವಳಿಗಳು ನಮ್ಮೂರ ಜನರಿಗೆ ಕಲಿಸಿದವು. ಜಾತಿ-ಮತದ ಅಸ್ಮಿತೆಗಳನ್ನು ಹಿಂದಿಕ್ಕಿ, ತಮ್ಮ ಅಸ್ತಿತ್ವಕ್ಕೆ ವಿಶಿಷ್ಟವಾದ ವೈಚಾರಿಕತೆಯನ್ನು ಆಧುನಿಕ ವೈಜ್ಞಾನಿಕ ಸತರ್ಕವಾದ (ರ‌್ಯಾಶನಾಲಿಸಂ), ಸಾಹಿತ್ಯ, ಸಂಸ್ಕೃತಿಯಲ್ಲಿ ಸದಾ ಹುಡುಕಾಡುವ `ಸ್ವಯಂತಂತ್ರವಾದಿ~ (ಲಿಬರಲ್) ಧೋರಣೆಯ ಜನ ಭಾರತದ ಊರೂರುಗಳಲ್ಲಿ ರೂಪಪಡೆದರು.

 

ಈ ಅರ್ಥದಲ್ಲಿ ಭಾರತದ `ಸ್ವಯಂತಂತ್ರವಾದ~ ವಿಶಿಷ್ಟವಾದ ಯುಗಧರ್ಮದ ಕೂಸು. ಉಡುಪಿಯಲ್ಲಿ ಜಾತಿ-ಮತಗಳ ಅಸ್ಮಿತೆಯನ್ನು ಹಿಂದಿಕ್ಕಿ ಆಧುನಿಕ ಸಾಹಿತ್ಯ- ಸಂಸ್ಕೃತಿ- ಕಲಾ ಪ್ರಕಾರಗಳನ್ನು ಅತ್ಯುತ್ಸಾಹದಿಂದ ಸಂಘಟಿಸಿದ ಯುಗಪ್ರವರ್ತಕರು ಕು.ಶಿ.ಹರಿದಾಸ ಭಟ್ಟರು.ವಿದ್ಯಾರ್ಥಿಯಾಗಿ, ಹರಿದಾಸ ಭಟ್ಟರಿಂದ `ಸ್ವಯಂತಂತ್ರವಾದ~ದ ಮಟ್ಟುಗಳನ್ನು ಕಲಿತ ಕೆ.ಎಸ್.ಕೆದ್ಲಾಯ 1983ರಲ್ಲಿ `ರಥಬೀದಿ ಗೆಳೆಯರು~ ಸಾಂಸ್ಕೃತಿಕ ಸಂಘಟನೆಯನ್ನು ಕಟ್ಟುವಲ್ಲಿ ನಾಯಕ ಪಾತ್ರವಹಿಸಿದರು. ಅವರ ಜೊತೆ ಸಮನಾಗಿ ಹೆಗಲು ಕೊಟ್ಟವನು ಕೆ.ಜಿ.ನಾರಾಯಣ.

 

ಇವರಂತಹವರ ಸಂಘಟಕತ್ವದಲ್ಲಿ ಬೆಳೆದ `ರಥಬೀದಿ ಗೆಳೆಯರು~ ಸಂಘಟನೆಯ ಭಿನ್ನಮತೀಯ ಗುಣಸ್ವರೂಪ ಎಂಥದ್ದು ಎನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಹೊಸ ಬಗೆಯ ವೈಚಾರಿಕತೆಯನ್ನು ಪ್ರಸಾರ ಮಾಡುವ ಕರ್ನಾಟಕದ ಹವ್ಯಾಸಿ ರಂಗಭೂಮಿ ಚಳವಳಿಯ ಭಾಗವಾಗಿ `ರಥಬೀದಿ ಗೆಳೆಯರು~ ಸಂಘಟನೆ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿತು.ಆದರೆ ಸಂಘಟನೆಯ ಚಟುವಟಿಕೆ ಅಷ್ಟಕ್ಕೆ ಸೀಮಿತವಾಗಲಿಲ್ಲ. 1989ರಲ್ಲಿ ಎಲ್.ಕೆ.ಅಡ್ವಾನಿ ರಥಯಾತ್ರೆಯ ಮೂಲಕ ಮತ-ಧರ್ಮಗಳ ನಂಬಿಕೆಯನ್ನು ಕೋಮುವಾದಿ ಅಸ್ತ್ರವನ್ನಾಗಿ ಬಳಸುವ ರಾಜಕೀಯ ಚಳವಳಿಯನ್ನು ಶುರುಮಾಡಿದರು.

 

ಅಡ್ವಾನಿಯ ಈ ರಾಜಕೀಯವನ್ನು ಪ್ರತಿಭಟಿಸುವ ಸಲುವಾಗಿ, ಉಡುಪಿಯ ಎಡಪಂಥೀಯರು, `ಸ್ವಯಂತಂತ್ರವಾದಿ~ ಕಲಾವಿದರು ಮತ್ತು ಸಾಮಾಜಿಕ ಕಾರ್ಯಕರ್ತರ ಜೊತೆ `ರಥಬೀದಿ ಗೆಳೆಯರು~ ಸೇರಿದರು. ಈ ಒಕ್ಕೂಟವು 1990ರ ಅಕ್ಟೋಬರಿನಲ್ಲಿ, ಅಷ್ಟಮಠಗಳಿರುವ ಉಡುಪಿಯ ರಥಬೀದಿಯಲ್ಲಿ ಒಂದು ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಿತು. ಆ ಹೊತ್ತಿನಲ್ಲಿ, ಕರ್ನಾಟಕದ ಊರುಗಳ ಮಟ್ಟಿಗೆ ಇದೊಂದು ಅಪೂರ್ವ ಪ್ರತಿಭಟನೆಯೇ ಸರಿ. ಕೆ.ಜಿ.ನಾರಾಯಣ ಇಂಥ ಸಂಘಟನೆಯ ವಾರಾಸುದಾರರಲ್ಲಿ ಒಬ್ಬನಾಗಿದ್ದ.ನಾರಾಯಣ ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಮುಳುಗಡೆಯಾದ ಕೆಳಮನೆ ಗ್ರಾಮದವನು. ಆಧುನಿಕ ಅಭಿವೃದ್ಧಿಯಿಂದಾಗಿ ತನ್ನ ಊರು ಕಳೆದುಹೋದದ್ದನ್ನು ಅವನು ಜೀವನಪೂರ್ತಿ ಮರೆಯಲಿಲ್ಲ. ಮುಳುಗಡೆಯ ನಂತರ ಅವನ ಕುಟುಂಬ ಹೆಗ್ಗೋಡಿನ ಹತ್ತಿರದ ಪುರಪ್ಪೆಮನೆ ಎಂಬ ಗ್ರಾಮದಲ್ಲಿ ನೆಲೆಯೂರಿತು.ನಾರಾಯಣ, ಅವನ ತಂದೆ, ಸೋದರರು ಒಟ್ಟಾಗಿ `ಸಾಕೇತ ಕಲಾವಿದರು~ ಎಂಬ ಯಕ್ಷಗಾನ ತಂಡವನ್ನು ಕಟ್ಟಿ, ಪ್ರದರ್ಶನಗಳನ್ನು ನೀಡುವ ಮೂಲಕ ತಮ್ಮ ನಿರಾಶ್ರಿತರಾದ ನೋವನ್ನು ಮೀರಲು ಪ್ರಯತ್ನಿಸಿದರೋ ಏನೋ.ಆದರೆ, ಆ ನೋವು ನಾರಾಯಣನಿಂದ ಎಂದೂ ತೊಲಗಲಿಲ್ಲ. ನಾರಾಯಣ ಮತ್ತು ಅವನ ತಮ್ಮ ಕೆ.ಜಿ.ಕೃಷ್ಣಮೂರ್ತಿ ಮುಳುಗಡೆ ಪ್ರದೇಶದ ಅಂಚಿನಲ್ಲಿರುವ ತುಮರಿಯಲ್ಲಿ `ಕಿನ್ನರ ಮೇಳ~ ಎಂಬ ರಂಗತಂಡವನ್ನು ಕಟ್ಟಿದ್ದಾರೆ.ಪ್ರತಿವರ್ಷವೂ ಅಲ್ಲಿ ಆಧುನಿಕ ಭಾರತ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಗಲಿನಲ್ಲಿ ವೈಚಾರಿಕ ಶಿಬಿರವನ್ನೂ, ಸಂಜೆ ತುಮರಿಯ `ಗೋಪಾಲ ಗೌಡ ರಂಗಮಂದಿರ~ದಲ್ಲಿ ನಾಟಕೋತ್ಸವವನ್ನೂ ಏರ್ಪಡಿಸುತ್ತಾರೆ. ಚಳಿಗಾಲದಲ್ಲಿ, ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರು ಇಳಿದಿರುವ ಸಮಯದಲ್ಲಿ ನಡೆಯುವ ಈ ಶಿಬಿರದಲ್ಲಿ ಮಾತನಾಡಲು ಕನ್ನಡದ ವಿಚಾರಶೀಲ ಪ್ರಮುಖರನ್ನು ಅಹ್ವಾನಿಸುತ್ತಾರೆ.ಈ ಶಿಬಿರಕ್ಕೆ ಬಂದವರಿಗೆಲ್ಲ ಬೆಟ್ಟಗಳ ಮಧ್ಯೆ ಬಟ್ಟಲಿನಾಕಾರದಲ್ಲಿರುವ ಮುಳುಗಡೆಯಾದ ಪ್ರದೇಶದಲ್ಲಿ ಅರೆಯಾಗಿ ಕಾಣುವ ತಮ್ಮ `ಕೆಳಮನೆ~ ತೋರಿಸುವುದನ್ನು ನಾರಾಯಣ ಮತ್ತು ಕಿಟ್ಟಿ ಶಿಬಿರದ ಅಂಗ ಎಂಬಂತೆ ಆಚರಿಸುತ್ತಾರೆ.ನಾರಾಯಣನಿಗೆ ನಿರಾಶ್ರಿತರ ಸಮ್ಮೇಳನವನ್ನು ಮಾಡುವ ಯೋಜನೆ ಇತ್ತು. ಹಲವಾರು ವರ್ಷಗಳಿಂದ, ಬೊಗಸೆಯಲ್ಲಿ ಮೊಗೆದಂತೆ, ಯೋಜನೆಯನ್ನು ಕಾರ್ಯಗತ ಗೊಳಿಸುವುದಕ್ಕೆ ಸಂಪನ್ಮೂಲವನ್ನು ಅವನು ಒಗ್ಗೂಡಿಸುತ್ತಿದ್ದ. ಈ ಚಳಿಗಾಲಕ್ಕೆ ನಾರಾಯಣನಿಲ್ಲ. ಅವನ ತಮ್ಮ ಕಿಟ್ಟಿಯ ಜೊತೆ ನಾವೆಲ್ಲರೂ ಅನಾಥರಾಗಿದ್ದೇವೆ. ನಾರಾಯಣ ಹೊಟ್ಟೆಪಾಡಿನ ವೃತ್ತಿಯನ್ನು ಹುಡುಕಿಕೊಂಡು ಉಡುಪಿಗೆ ಬಂದ. ಅಷ್ಟರಲ್ಲಾಗಲೇ ಪುರಪ್ಪೆಮನೆಗೆ ಸಮೀಪವಿದ್ದ ಹೆಗ್ಗೋಡಿನಲ್ಲಿ ಕೆ.ವಿ.ಸುಬ್ಬಣ್ಣನವರು ಮಾಡುತ್ತಿದ್ದ ಚಟುವಟಿಕೆಗಳಿಂದ ಅವನು ಪ್ರಭಾವಿತನಾಗಿದ್ದ.

 

1980ರಲ್ಲಿ ಹರಿದಾಸಭಟ್ಟರು ಪ್ರಿನ್ಸಿಪಾಲರಾಗಿದ್ದ ಎಂ.ಜಿ.ಎಂ. ಕಾಲೇಜಿನಲ್ಲಿ ಒಂದು ವರ್ಷ ಉಪನ್ಯಾಸಕನಾಗಿ ಕೆಲಸ ಮಾಡಿದ ನಂತರ, ಉಡುಪಿಯ ಸಮೀಪದಲ್ಲಿರುವ ಬ್ರಹ್ಮಾವರದ ಸೇಂಟ್ ಮೇರಿಸ್ ಸಿರಿಯನ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇರಿದ. ಮರಣದ ಹೊತ್ತಿಗೆ ಅವನು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥನಾಗಿದ್ದ.ಉಡುಪಿಗೆ ಬಂದ ಹೊಸತರಲ್ಲೇ ನಾರಾಯಣನಿಗೆ, ಸಮೀಪದ ಕಲ್ಯಾಣಪುರದ ಮಿಲಾಗ್ರೇಸ್ ಕಾಲೇಜಿನಲ್ಲಿ ಕನ್ನಡ ಕಲಿಸುತ್ತಿದ್ದ ಕೆ.ಎಸ್.ಕೆದ್ಲಾಯನ ಸ್ನೇಹ ದೊರೆಯಿತು. ಇಬ್ಬರೂ, ಉಡುಪಿಯ ರಥಬೀದಿಯಲ್ಲಿ ದಿನವೂ ಸಂಜೆ, ಇತರ `ಸ್ವಯಂತಂತ್ರವಾದಿ~ ಗೆಳೆಯರ ಜೊತೆ ಸೇರಿಕೊಂಡು ಹೊಸದೇನನ್ನೋ ಮಾಡಬೇಕೆಂಬ ಹುಡುಕಾಟದಲ್ಲಿರುತ್ತಿದ್ದರು.ಅದರ ಫಲವೇ ಉಡುಪಿಯ `ರಥಬೀದಿ ಗೆಳೆಯರು~ ಸಂಘಟನೆ. ನಾರಾಯಣನ ಬಗ್ಗೆ ಮಾತನಾಡುವಾಗ ದಿ.ಕೆ.ಎಸ್.ಕೆದ್ಲಾಯ ಮತ್ತು ಮುಂದೆ ಇವರ ಜೊತೆ ಸೇರಿದ ದಿ.ಮುರಾರಿ ಬಲ್ಲಾಳರನ್ನೂ  ನೆನೆಯಬೇಕು.

 

ಮೂವರೂ ವಿಭಿನ್ನ ವ್ಯಕ್ತಿತ್ವದವರಾಗಿದ್ದರೂ ತಮ್ಮೂರು ಸಹನಶೀಲವಾಗಿರಬೇಕು, ತಮ್ಮ ಸುತ್ತಮುತ್ತಲಿನ ಜನ ನೆಮ್ಮದಿಯಿಂದ ಬದುಕಬೇಕು ಎಂಬ ಸಮಾನ ಆಕಾಂಕ್ಷೆ ಉಳ್ಳವರಾಗಿದ್ದರು. ಈ ಕಾರಣವಾಗಿ, ಆಧುನಿಕ ಅಭಿವೃದ್ಧಿ ಮತ್ತು ಮತೀಯವಾದಗಳು ನಮ್ಮ ಸಮಾಜದಲ್ಲಿ ಉಂಟುಮಾಡುವ ಹಾನಿಯನ್ನು ಬಲ್ಲವರಾಗಿದ್ದರು.

 

ಅರಿತು ಸುಮ್ಮನೆ ಕೂಡುವ ಜಾಯಮಾನ ಇವರದಾಗಿರಲಿಲ್ಲ. ಇಂತಹ ಅರಿವೊಂದು ಊರ ಜನರಲ್ಲೂ ಜಾಗೃತವಾಗಲಿ ಎಂದು ದೇಶದ ಖ್ಯಾತ ಭಿನ್ನಮತೀಯ ಚಿಂತಕರನ್ನೂ, ಚಳವಳಿಗಾರರನ್ನೂ ಉಡುಪಿಗೆ ಕರೆ ತಂದು ಇವರು ಕಾರ್ಯಕ್ರಮಗಳನ್ನು ಏರ್ಪಡಿಸದೇ ಹೋಗಿದ್ದರೆ, ಧರ್ಮ, ಸಾಮಾಜಿಕ ಜೀವನಗಳ ಬಗೆಗಿನ ಬಹುಮುಖಿ ದೃಷ್ಟಿಕೋನಗಳ ಪರಿಚಯವೇ ನಮಗೆ ಆಗುತ್ತಿರಲಿಲ್ಲ.ಯಾವ ಖ್ಯಾತಿಯ ಆಸೆ ಇಲ್ಲದೆ, ತಮ್ಮ ಮನೆಯ ಸಮಾರಂಭವೆನ್ನುವ ಹಾಗೆ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರು ಅನೇಕ ಸಾರಿ ಮತೀಯವಾದಿಗಳ ಕೆಂಗಣ್ಣಿಗೆ ಗುರಿಯಾದದ್ದಿದೆ. ಮತೀಯವಾದ ಹಾಗೂ ಅಭಿವೃದ್ಧಿಯ ನಂಜು ಕರಾವಳಿಯ ಜನರ ನೆತ್ತಿಗೇರುತ್ತಿರುವ ಹೊತ್ತಿಗೇ ಈ ಮೂವರೂ ನಮ್ಮನ್ನಗಲಿದ್ದಾರೆ. ನಾರಾಯಣ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಾನು ಪಾಠಮಾಡುತ್ತಿದ್ದ ಬ್ರಹ್ಮಾವರದ ಎಸ್.ಎಮ್.ಎಸ್. ಕಾಲೇಜಿನಲ್ಲಿ ವಿಚಾರಶಿಬಿರ, ನಾಟಕೋತ್ಸವ, ಚಲನಚಿತ್ರ ರಸಗ್ರಹಣ ಶಿಬಿರ, ಯಕ್ಷಗಾನ ಪ್ರಾತ್ಯಕ್ಷಿಕೆ- ಪ್ರದರ್ಶನಗಳನ್ನು ಮೈಮೇಲೆ ಹೊತ್ತುಕೊಂಡು ಜರುಗಿಸುತ್ತಿದ್ದ.ಕಾಲೇಜಿನ ರಜತ ಮಹೋತ್ಸವ ಸಂದರ್ಭದಲ್ಲಿ, ದೇಶದ ಘನವೆತ್ತ ಭಿನ್ನಮತೀಯ ವಿದ್ವಾಂಸರನ್ನು ಕರೆಸಿ ನಡೆಸಿದ ಎರಡು ದಿನಗಳ ವಿಚಾರ ಸಂಕಿರಣ ಹಾಗೂ ಪ್ರಖ್ಯಾತ ನಾಟಕದ ತಂಡಗಳು ಭಾಗವಹಿಸಿದ್ದ ನಾಟಕೋತ್ಸವಗಳು ಇಂದಿಗೂ ಅವಿಸ್ಮರಣೀಯವಾಗಿವೆ. ಈ ವಿಚಾರಸಂಕಿರಣಕ್ಕೆ ಅನಂತಮೂರ್ತಿ ನಿರ್ದೇಶಕರಾಗಿದ್ದರು.

 

ಅವರು ಒಂದು ಗೋಷ್ಠಿಯ ಮಧ್ಯಪ್ರವೇಶದಲ್ಲಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕ್ರಿಶ್ಚಿಯನ್ ಸಂಸ್ಥೆಗಳು ಮಾಡಿರುವ ಸಮಾಜಸೇವೆಯನ್ನು ಪ್ರಸ್ತಾಪಿಸಿ, ನಮ್ಮ ಜಾತಿವಂತ ಮಠಗಳು ಸಮಾಜಕ್ಕೆ ತಾವೇನು ಮಾಡಿದ್ದೇವೆ? ಎಂದು ಆತ್ಮಶೋಧ ಮಾಡಿಕೊಳ್ಳಬೇಕು ಎಂದರು.

 

ನೆಪಕ್ಕಾಗಿ ಕಾಯುತ್ತಿದ್ದವರ ಹಾಗೆ ಮರುದಿನ ಹಿಂದೂ ಮತೀಯವಾದಿ ಸಂಘಟನೆಗಳು, ಕಾಲೇಜಿನ ಮುಂಭಾಗದಲ್ಲಿ ಜಮಾಯಿಸಿ ಅನಂತಮೂರ್ತಿಯವರೂ ಹಾಗೂ ಕಾಲೇಜಿನ ಆಡಳಿತ ಮಂಡಳಿಯೂ ಬೇಷರತ್ ಕ್ಷಮೆ ಯಾಚಿಸಬೇಕೆಂದು ಗಲಾಟೆ ಮಾಡಿದವು.

 

ನಾರಾಯಣ ಸಂಘಟನೆಗಳ ಉದ್ಧಟತನಕ್ಕೆ ಮಣಿಯದೆ, ಶಾಂತವಾಗಿ ಕಾಲೇಜಿನ ಆಡಳಿತಮಂಡಳಿ ಪರ ನಿಂತು ಪರಿಸ್ಥಿತಿಯನ್ನು ನಿಭಾಯಿಸಿದ. `ಹಲ್ಲೆ ಮಾಡಿದ್ರೆ ಏನು ಮಾಡ್ತಿದ್ದೆ ಮಾರಾಯ~ ಎಂದು ನಾವು ಗೆಳೆಯರು ಕೇಳಿದಾಗ ನಾರಾಯಣ `ಅಂಥದ್ದೆಲ್ಲ ಆಗಲ್ಲ! ಅಷ್ಟರ ಮಟ್ಟಿಗೆ ಊರನ್ನ್ ನೆಟ್ಟ್‌ಗ್ ಇಟ್ಕಾಂಡಿದಿವಿ~ ಅಂದ. `ಊರನ್ನು ನೆಟ್ಟಗೆ ಇಟ್ಟುಕೊಳ್ಳುವುದು~ ಎಂಥ ಮಹತ್ವದ ಕೆಲಸ ಎಂದು ಕರಾವಳಿಯ ಊರುಗಳಲ್ಲಿ ಹಿಂಸೆ ಅನುಭವಿಸುತ್ತಿರುವ ಜನರಿಗೆ ಮಾತ್ರ ಗೊತ್ತು.ಮುಳುಗಡೆಯಾದ `ಕೆಳಮನೆ~, ನೆಲೆ ನೀಡಿರುವ ಪುರಪ್ಪೆಮನೆ, ತನ್ನ ಕಾಲೇಜು ಹಾಗು `ರಥಬೀದಿ ಗೆಳೆಯರು~ ಸಂಘಟನೆಗಳಲ್ಲಿ ಮನಸ್ಸಿಗೆ ಹಚ್ಚಿಕೊಂಡು ಮಾಡುತ್ತಿದ್ದ ಕೆಲಸ ಹಾಗೂ ಯಕ್ಷಗಾನ- ಇವಿಷ್ಟನ್ನು ಮಾತ್ರವೇ ತನ್ನ ಜೀವನದ ಸೌಭಾಗ್ಯವೆಂದು ನಾರಾಯಣ ನಂಬಿದ್ದ.

 

ಮೊನ್ನೆ ಯು.ಜಿ.ಸಿ.ಯ ಹೊಸ ವೇತನಶ್ರೇಣಿ ಲಾಗೂ ಆದಾಗ, ತನಗೆ ಬರುವ ಸಂಬಳದ ಗಾತ್ರ ಕಂಡು ನಾರಾಯಣ ಹೌಹಾರಿ ಹೋಗಿದ್ದ; ಎಲ್ಲ ಸ್ನೇಹಿತರ ಮುಂದೆಯೂ ಅವನದೊಂದೇ ವರಾತ-

 

`ಅಷ್ಟು ದುಡ್ಡು ತಂಗಂಡ್ ಎಂಥ ಮಾಡಾದ್ ಮಾರಾಯ! ನಮ್ಮನ್ನ್ ಹಾಳ್ ಮಾಡಾಕೆ ಕೊಡ್ತಿರೋ ಸಂಬ್ಳವಾ ಇದು; ಇಷ್ಟು ಹಣ ಇಟ್ಕಂಡವ್ರಿಗೆ ಊರ್ ಜನ ಕಾಣ್ತಾರ ಮಾರಾಯ! ಥೂ ರಿಟೈರಾಗಾದೇ ವಾಸಿ-ಇಲ್ಲ ಹಾಳಾಗ್ತೇವಾ!~. ಹಾಳಾಗಲು ನಿರಾಕರಿಸಿದವನ ಹಾಗೆ ಹೋಗೇಬಿಟ್ಟ ನಮ್ಮ ನಾರಾಯಣ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry