ಬುಧವಾರ, ಏಪ್ರಿಲ್ 21, 2021
30 °C

ಹೋರಾಟಕ್ಕೆ ಜಯದೇವಿತಾಯಿ ಸ್ಫೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಜಯದೇವಿತಾಯಿ ಲಿಗಾಡೆ ಅವರು ಕರ್ನಾಟಕ ಏಕೀಕರಣದಲ್ಲಿ ಪಾಲ್ಗೊಂಡವರು. ಸಾಹಿತ್ಯ ಮತ್ತು ಸಂಸ್ಕೃತಿ ವಿಭಾಗದಲ್ಲಿ ಕನ್ನಡದ ಧ್ವನಿ ಬೆಳಿಗಿಸಿದವರು. ಅವರ ಹೋರಾಟವು ಎಂದಿಗೂ ಸ್ಫೂರ್ತಿದಾಯಕ~ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.ಪ್ರೊ. ಬಿ. ನಾರಾಯಣಮ್ಮ ಪ್ರತಿಷ್ಠಾನ, ಕರ್ನಾಟಕ ಸಹೃದಯ ಲೇಖಕಿಯರ ಪರಿಷತ್ತು ಹಾಗೂ ಭುವನೇಶ್ವರಿ ಮಹಿಳಾ ಸೇನೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆದ ಜಯದೇವಿತಾಯಿ ಲಿಗಾಡೆಯವರ ಜನ್ಮ ಶತಮಾನೋತ್ಸವ ಮತ್ತು ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಹಿತಿ ಜಾಣಗೆರೆ ವೆಂಕಟರಾಮಯ್ಯ  ಮಾತನಾಡಿ, `ಸರ್ಕಾರವು ಜಯದೇವಿತಾಯಿ ಲಿಗಾಡೆ ಅವರಂತಹ ಧೀಮಂತ ನಾಯಕಿಯನ್ನು ಮರೆತು ಕುಳಿತಿದೆ. 1974 ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು. ಭಾಷಾ ಸಂಸ್ಕೃತಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ಸರ್ಕಾರ ಮರೆತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ~ ಎಂದರು.ಪ್ರೊ. ಬಿ. ನಾರಾಯಣಮ್ಮ ಅವರು ಬರೆದ `ಜಯದೇವಿತಾಯಿ ಲಿಗಾಡೆ~ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ. ಬಿ. ನಾರಾಯಣಮ್ಮ, ಪತ್ರಕರ್ತ ರು. ಬಸಪ್ಪ ಮತ್ತಿತರರು ಭಾಗವಹಿಸಿದ್ದರು.

ಮಹಿಳಾ ಆದ್ಯತೆಗೆ ಉಪಾಧ್ಯಕ್ಷ ಹುದ್ದೆ ಸೃಷ್ಟಿ

`ಮಹಿಳೆಯರಿಗೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ, ಜಿಲ್ಲಾ ಮತ್ತು ಕೇಂದ್ರದಲ್ಲಿ ಉಪಾಧ್ಯಕ್ಷ ಹುದ್ದೆಯನ್ನು ಸೃಷ್ಟಿಸಿ ಅದರಲ್ಲಿ ಮಹಿಳೆಯರನ್ನು ಉಪಾಧ್ಯಕ್ಷರನ್ನಾಗಿ ಮಾಡಲು ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು~ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, `ಉಪಾಧ್ಯಕ್ಷ ಸ್ಥಾನ ಬರೀ ಅಲಂಕಾರಿಕವಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೀಡುವುದಾದರೆ ಅಧ್ಯಕ್ಷ ಸ್ಥಾನವನ್ನು ನೀಡಬೇಕು~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.