ಹೋರಾಟದಿಂದ ಉ.ಕ.ಗೆ ನ್ಯಾಯ: ಶೆಟ್ಟರ್

ಗಜೇಂದ್ರಗಡ: ‘ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಸರ್ಕಾರಗಳು ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡ ನಿದರ್ಶನವಿಲ್ಲ. ನಿರಂತರ ಹೋರಾಟದ ಫಲವಾಗಿ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ’ ಎಂದು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಖೇಧ ವ್ಯಕ್ತಪಡಿಸಿದರು.
ಕರ್ನಾಟಕ ಜನ ಹಿತ ವೇದಿಕೆಯ ಉದ್ಘಾಟನೆ ಹಾಗೂ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಜನ್ಮ ಶತಮಾನೋತ್ಸವದ ಅಂಗವಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿಯ ವಿಶಾಲ ಬಯಲು ಜಾಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ ಸಾಮೂಹಿಕ ವಿವಾಹ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಉತ್ತರ ಕರ್ನಾಟಕದ ಬಹುತೇಕ ಕುಟುಂಬಗಳು ಮಳೆ ಆಶ್ರಿತ ಕುಟುಂಬದಿಂದ ತೀವ್ರ ಸಂಕಷ್ಟದ ಬದುಕು ಸವೆಸುತ್ತಿವೆ. ಹೀಗಿದ್ದರೂ ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಯಾವೊಂದು ಸರ್ಕಾರಗಳು ಇಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಅಸ್ವಿತ್ವದಲ್ಲಿದ್ದಾಗ ಉತ್ತರ ಕರ್ನಾಟಕದ ಬಹುತೇಕ ಶಾಶ್ವತ ನೀರಾವರಿ ಯೋಜನೆಗಳಿಗೆ ಚಾಲನೆ ದೊರೆತಿದೆ’ ಎಂದರು.‘ಉತ್ತರ ಕರ್ನಾಟಕದಲ್ಲಿ ನೈರುತ್ಯ ರೇಲ್ವೆ ವಲಯ ಸ್ಥಾಪನೆಗೆ ಸಾಕಷ್ಟು ಸಂಘಟನೆಗಳು ಹೋರಾಟ ನಡೆಸಿದವು.
ಆಗ ಬಿಜೆಪಿಯೂ ಹೋರಾಟಕ್ಕೆ ಮುಂದಾಯಿತು. ಆಗ ಕೇಂದ್ರದಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯ ಸ್ಥಾಪನೆಯಿಂದ ಹಿಂದುಳಿದ ಉತ್ತರ ಕರ್ನಾಟಕದಲ್ಲಿ ಆಗುವ ಬೆಳವಣಿಗೆಗಳ ಕುರಿತು ಸಮಗ್ರ ಮಾಹಿತಿ ನೀಡಿದ್ದೆವು. ವಾಜಪೇಯಿ ಅವರು ಹುಬ್ಬಳ್ಳಿಗೆ ನೈರುತ್ಯ ರೈಲ್ವೆ ವಲಯ ಸ್ಥಾಪನೆಗೆ ಮುಂದಾದರು. ಇದನ್ನು ಸಹಿಸದ ಕೆಲವರು ನ್ಯಾಯಾಲಯದ ಮೊರೆ ಹೋದರು. ಅಲ್ಲಿಯೂ ಹುಬ್ಬಳ್ಳಿಗೆ ನ್ಯಾಯ ದೊರಕಿತು’ ಎಂದರು.
ಹಾವೇರಿ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ‘ನಾಡಿನ ಹಾಗೂ ಶ್ರೀಸಾಮಾನ್ಯ ಸಂಕಷ್ಟಗಳ ನಿವಾರಣೆಗಾಗಿ ಹೋರಾಟ ನಡೆಸುವ ಸಂಘಟನೆಗಳ ಬಲವರ್ಧನೆಗೆ ನಾಗರಿಕರು ಮುಂದಾಗಬೇಕು’ ಎಂದರು.
ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರ, ಕಾಗಿನೆಲೆ ಸಂಸ್ಥಾನ ಮಠ ತಿಂಥಣಿಯ ಸಿದ್ಧರಾಮನಂದಪುರಿ ಸ್ವಾಮೀಜಿ, ಮನಸೂರು ರೇವಣಸಿದ್ದೇಶ್ವರ ಮಹಾ ಸಂಸ್ಥಾನ ಮಠದ ಬಸವರಾಜ ದೇವರು, ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಜನ ಹಿತ ವೇದಿಕೆ ಅಧ್ಯಕ್ಷ ಎಚ್.ಎಸ್.ಸೋಂಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಟ ವಿಜಯ ರಾಘವೇಂದ್ರ, ಚಿತ್ರ ನಿರ್ಮಾಪಕ ಟಿ.ಪಿ.ಸಿದ್ಧರಾಜು, ಅಂಬುಜಾಕ್ಷಮ್ಮ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಗಜೇಂದ್ರಗಡ ಲಕ್ಷ್ಮ ಬ್ಯಾಂಕ್ ನಿರ್ದೇಶಕ ಸಿದ್ಧಣ್ಣ ಬಂಡಿ, ಹೊಳೆ ಆಲೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪರಶುರಾಮ ಹಂಡಿ, ಸ್ನೇಹಾ ಮಹಿಳಾ ಮಂಡಳದ ಗೌರವಾಧ್ಯಕ್ಷೆ ಸಂಯುಕ್ತಾ ಬಂಡಿ, ಗಜೇಂದ್ರಗಡ ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ವಿವಿಧ ಸಂಘಟನೆಗಳ ಮುಖಂಡರಾದ ಭೀಮಾಶಂಕರ ಪಾಟೀಲ ಇತರರು ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.