ಭಾನುವಾರ, ಮೇ 16, 2021
23 °C
ಪ್ರವೇಶಕ್ಕೆ ಹಿಂಜರಿಯುತ್ತಿರುವ ವಿದ್ಯಾರ್ಥಿಗಳು!

ಹೋರಾಟದ ಕಾಲೇಜಿಗೆ `ಹಾಜರಾತಿ ಕೊರತೆ'

ಪ್ರಜಾವಾಣಿ ವಾರ್ತೆ/ -ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಅಸಂಖ್ಯಾತ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಬಾಳು ಬೆಳಗಿದ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ಇದೀಗ ವಿದ್ಯಾರ್ಥಿಗಳ ಹಾಜರಾತಿ ಚಿಂತೆ!ಹೌದು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದುಬಾರಿ ಮೊತ್ತದ ಪ್ರವೇಶ ಶುಲ್ಕ ನೀಡಿ ಪ್ರವೇಶ ಗಿಟ್ಟಿಸಿಕೊಳ್ಳಲಾಗದೇ ಪದವಿ ಶಿಕ್ಷಣದಿಂದ ವಂಚಿತಗೊಳ್ಳುತ್ತಿದ್ದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಪ್ರಗತಿ ಪರ ಸಂಘಟನೆಗಳ ಹೋರಾಟದ ಫಲವಾಗಿ ಸ್ಥಾಪನೆಗೊಂಡ ಗಜೇಂದ್ರಗಡ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ತೀವ್ರ ಹಾಜರಾತಿ ಕೊರತೆಯನ್ನು ಎದುರಿಸುತ್ತಿದೆ.1980ರ ದಶಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಟ್ಟಹಾಸದಿಂದ ನಲುಗಿ ಹೋಗಿದ್ದ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳ ಸಂಖ್ಯೆ ತೀರಾ ವಿರಳವಾಗಿತ್ತು. ಬದಲಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಬ್ಬರ ಜೋರಾಗಿತ್ತು. ಖಾಸಗಿ ಶಾಲಾ-ಕಾಲೇಜುಗಳು ನಿಗದಿ ಪಡಿಸುವ ದುಬಾರಿ ಮೊತ್ತದ ಪ್ರವೇಶ ಶುಲ್ಕವನ್ನು ನೀಡಲು ಸಾಧ್ಯವಾಗದೆ ಅಸಂಖ್ಯಾತ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಕಮರಿದ ಯುಗವೂ ಆಗಿತ್ತು.ಅಂದಿನ ಶೈಕ್ಷಣಿಕ ಕ್ಷೇತ್ರದ ವಾಸ್ತವಿಕತೆಯನ್ನು ಗಂಭೀರವಾಗಿ ಪರಿಗಣಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಉಪಟಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಂದಿನ ಶಾಸಕ ಜ್ಞಾನದೇವ ದೊಡ್ಡಮೇಟಿ ಅವರು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೇಲೆ ನಿರಂತರ ಒತ್ತಡ ಹೇರಿ ಗಜೇಂದ್ರಗಡಕ್ಕೆ ಸರ್ಕಾರಿ ಪದವಿ ಕಾಲೇಜನ್ನು ಮಂಜೂರು ಮಾಡಿಸಿದರು.ಶಾಸಕ ದೊಡ್ಡಮೇಟಿ ಅವರ ಸರ್ಕಾರಿ ಕಾಲೇಜು ಮಂಜೂರಾತಿ ಕಾರ್ಯವನ್ನು ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು, ಪಾಲಕರು, ಪ್ರಗತಿ ಪರ ಸಂಘಟನೆಗಳು ಸ್ವಾಗತಿಸಿದ್ದವು. ಖಾಸಗಿ ಶಿಕ್ಷಣ ಸಂಸ್ಥೆಗಳು ಕಣ್ಣು ಕೆಂಪಾಗಿಸಿದ್ದವು.ಆರಂಭದ ವರ್ಷಗಳಲ್ಲಿ ಖಾಸಗಿ ಕಟ್ಟಡಗಳಲ್ಲಿ ಕಾರ್ಯಾರಂಭಿಸಿದ ಕಾಲೇಜು ಹತ್ತು-ಹಲವು ಸಂಕಷ್ಟಗಳನ್ನು ಎದುರಿಸಿತ್ತು. ಸಕಲ ಸೌಲಭ್ಯವುಳ್ಳ ಪದವಿ ಕಾಲೇಜು ನಿರ್ಮಿಸಬೇಕೆಂಬ ಶಾಸಕ ದೊಡ್ಡಮೇಟಿ ಅವರ ಕನಸು ಕಾರಣಾಂತರಗಳಿಂದ ಕೈಗೂಡಲಿಲ್ಲ.ದೊಡ್ಡಮೇಟಿ ಅವರ `ಕನಸಿನ ಕೂಸು' ಈ ಕಾಲೇಜುಗೆ ಶಾಶ್ವತ ಕಟ್ಟಡ ನಿರ್ಮಿಸುವ ಉದ್ದೇಶದಿಂದ ನಗರದ ಸಿಂಹಾಸನದ ಎಂಬ ಕುಟುಂಬ ಕುಷ್ಟಗಿ ರಸ್ತೆಯಲ್ಲಿ 4 ಎಕರೆ ಜಮೀನನ್ನು 1995 ರಲ್ಲಿ ಉಚಿತವಾಗಿ ನೀಡುವ ಮೂಲಕ ಶೈಕ್ಷಣಿಕ ಕಳಕಳಿ ಮೆರೆಯಿತು.ದಾನಿಗಳು ಕಾಲೇಜು ಕಟ್ಟಡಕ್ಕೆ ಉಚಿತ ಜಮೀನು ನೀಡಿದ ಪರಿಣಾಮ ಕಾಲೇಜಿಗೆ `ಬೆನಕಪ್ಪ ಶಂಕ್ರಪ್ಪ ಸಿಂಹಾಸನದ (ಬಿ.ಎಸ್.ಎಸ್) ಪದವಿ ಕಾಲೇಜ' ಎಂದು ನಾಮಕರಣ ಮಾಡಲಾಯಿತು. 1995-96ರಲ್ಲಿ ಅಂದಿನ ಶಾಸಕ ಶ್ರೀಶೈಲಪ್ಪ ಬಿದರೂರ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸಿದರು.2000 ರಿಂದ ಅಳಿವಿನ ಚಿಂತೆ: ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪನೆಗೊಂಡ ಪದವಿ ಕಾಲೇಜಿಗೆ 2000ರಿಂದ ವಿಘ್ನಗಳು ಆರಂಭಗೊಂಡವು. ಸ್ವಂತ ಕಟ್ಟಡ, ಮೂಲ ಸೌಕರ್ಯ, ಹಾಜರಾತಿ ಕೊರತೆ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದ ಪದವಿ ಕಾಲೇಜನ್ನು 2001-02 ರಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಒಗ್ಗೂಡಿ ಇಲ್ಲ-ಸಲ್ಲದ ಕಾರಣ ನೀಡಿ ಕಾಲೇಜು ಸ್ಥಳಾಂತರಕ್ಕೆ ಹುನ್ನಾರ ನಡೆಸಿದವು.ಆದರೆ, ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರದಿಂದ ಎಚ್ಚೆತ್ತ ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳು ಹಾಗೂ ಪ್ರಗತಿಪರ ಚಿಂತಕರು ಕಾಲೇಜು ಉಳಿವಿಗಾಗಿ ಹೋರಾಟ ತೀವ್ರಗೊಳಿಸಿದವು. ಅಲ್ಲದೇ, ಸ್ಥಳೀಯ ಕೆಲ ಶೈಕ್ಷಣಿಕ ಪರ ಚಿಂತಕರು ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ತುಂಬಿ ಮಾನವೀಯತೆ ಮೆರೆದಿದ್ದರು.ವಿದ್ಯಾರ್ಥಿಗಳ ಹಾಗೂ ವಿವಿಧ ಸಂಘಟನೆಗಳ ಹೋರಾಟಕ್ಕೆ ಪ್ರತಿಯಾಗಿ ಸರ್ಕಾರ ಹಾಜರಾತಿ ಕೊರತೆಯನ್ನು ಮುಂದಿಟ್ಟಿತ್ತು. ಇದಕ್ಕೆ ಪ್ರತಿಯಾಗಿ ಸ್ಥಳೀಯ ಉದಾರಿಗಳು 54 ವಿದ್ಯಾರ್ಥಿಗಳ ಶುಲ್ಕ ನೀಡಿ, ಪ್ರವೇಶ ದೊರಕಿಸಿಕೊಟ್ಟರು. ಪರಿಣಾಮ ಕಾಲೇಜು ಸ್ಥಳಾಂತರಗೊಳ್ಳಲಿಲ್ಲ. ಸ್ಥಳಾಂತರಕ್ಕೆ ಹುನ್ನಾರ ನಡೆಸಿದ್ದ ಪಟ್ಟಭದ್ರ ಹಿತಾಸಕ್ತಿಗಳು ತೀವ್ರ ಮುಜುಗರ ಅನುಭವಿಸುವಂತಾಗಿದ್ದು ಈಗ ಇತಿಹಾಸ.ಶಾಸಕ ಶ್ರೀಶೈಲಪ್ಪ ಬಿದರೂರ ಅವರ ಅಧಿಕಾರಾವಧಿಯಲ್ಲಿ ಬಿಡುಗಡೆಗೊಂಡಿದ್ದ ಅನುದಾನದಲ್ಲಿ 1997ರಲ್ಲಿ ಮೂರು ಕೊಠಡಿಗಳು ನಿರ್ಮಾಣಗೊಂಡವು. ಆದರೆ, 2004 ರಿಂದ 2010ರ ಮಧ್ಯದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ತಮ್ಮ ಅಧಿಕಾರಾವಧಿಯಲ್ಲಿ ಭವ್ಯ ಕಾಲೇಜು ಕಟ್ಟಡ ನಿರ್ಮಿಸಿದರು. ಪರಿಣಾಮ 50 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ, 70 ಲಕ್ಷ ವೆಚ್ಚದಲ್ಲಿ ಮಹಡಿ ಕಟ್ಟಡ, 50 ಲಕ್ಷ ಅಡಿಟೋರಿಯಂ ಹಾಗೂ 20 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳಿಗೆ ಈ ಕಟ್ಟಡ ಮಾದರಿಯಾಗಿ ನಿರ್ಮಾಣಗೊಂಡಿರುವುದು ವಿಶೇಷ.ಹಾಜರಾತಿ ಕೊರತೆ: ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಶೈಕ್ಷಣಿಕ ಕಳಕಳಿಯಿಂದಾಗಿ 2009 ರಲ್ಲಿ ವ್ಯವಹಾರಿಕ ಅಧ್ಯಯನ ಶಾಸ್ತ್ರ (ಬಿಬಿಎ)ವಿಭಾಗ ಪದವಿ ಕಾಲೇಜಿಗೆ ಸೇರ್ಪಡೆಗೊಂಡಿತು. ಆದರೆ, ಕನಿಷ್ಠ ಹಾಜರಾತಿ ಇಲ್ಲದ ಪರಿಣಾಮ ಆರಂಭದ ಎರಡು ವರ್ಷಗಳ ಬಳಿಕ ವಿಭಾಗ ಸ್ಥಗಿತಗೊಂಡಿದೆ.ಕಳೆದ ವರ್ಷ ವಿಜ್ಞಾನ  (ಬಿಎಸ್ಸಿ) ವಿಭಾಗ ಪ್ರಾರಂಭಗೊಂಡಿದೆ. ಕಳೆದ ವರ್ಷ ಹಾಜರಾತಿ ಕೊರತೆ ಮಧ್ಯೆಯೂ ಕಾರ್ಯನಿರ್ವಹಿಸಿದ ಬಿಎಸ್ಸಿ ವಿಭಾಗಕ್ಕೆ ಈ ವರ್ಷವೂ ಹಾಜರಾತಿ ಕೊರತೆ ಎದುರಾಗಿದೆ. ಕನಿಷ್ಠ 16 ಜನ ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕು. ಆದರೆ, 9 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.ಉಪನ್ಯಾಸಕರು ವಿಶೇಷ ಕಾಳಜಿ ವಹಿಸದಿರುವುದೇ ಕಾಲೇಜಿನ ವಿವಿಧ ವಿಭಾಗಗಳು ಮುಚ್ಚಲು ಕಾರಣ ಎನ್ನಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.