ಹೋರಾಟದ ಚಿಲುಮೆ ಮಲಾಲಾ

7

ಹೋರಾಟದ ಚಿಲುಮೆ ಮಲಾಲಾ

Published:
Updated:

ಅದು 2008ರ ಆರಂಭದ ಕಾಲ. ಪಾಕಿಸ್ತಾನದ ಸ್ವಾತ್ ಕಣಿವೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ತಾಲಿಬಾನೀಯರ ವಿರುದ್ಧ ಯಾರೊಬ್ಬರೂ ಸೊಲ್ಲೆತ್ತುವಂತಿರಲಿಲ್ಲ. ಅಲ್ಲಿ ಅವರು ಹೇಳಿದ್ದೇ ನಿಯಮ, ಬಯಸಿದ್ದೇ ಕಾನೂನು. ಮಹಿಳೆಯರು- ಮಕ್ಕಳ ವಿಷಯದಲ್ಲಂತೂ ಅವರು ಶಿಲಾಯುಗದಿಂದ ಆಚೆ ಬಂದಿರಲೇ ಇಲ್ಲ.

 

ಹೆಣ್ಣು ಮಕ್ಕಳು ಶಾಪಿಂಗ್ ಮಾಡುವಂತಿಲ್ಲ, ಹಾಡುವಂತಿಲ್ಲ, ಟಿ.ವಿಗಳಲ್ಲಿ ಮುಖ ತೋರುವಂತಿಲ್ಲ, ಅಷ್ಟೇ ಏಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತೆಯೂ ಇಲ್ಲ ಎಂಬ ಅಲಿಖಿತ ಫತ್ವಾವನ್ನೇ ಹೊರಡಿಸಿದ್ದರು. ಇದನ್ನೆಲ್ಲ ಸ್ಥಳೀಯರು ಹೇಗೋ ಕಷ್ಟಪಟ್ಟು ಸಹಿಸಿಕೊಂಡರು.ಆದರೆ ಅವರ ಈ ಸಹನೆಯನ್ನೇ  ಅಸ್ತ್ರ ಮಾಡಿಕೊಂಡ ಉಗ್ರರು, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನೂ ನಿಷೇಧಿಸಿದರು. ಇದಕ್ಕೆ ಜನ ಬಗ್ಗದಿದ್ದಾಗ ಶಾಲಾ ಕಟ್ಟಡಗಳನ್ನು ಧ್ವಂಸ ಮಾಡಿದರು.

 

ಶಾಲೆಗಳಲ್ಲಿ ಬಾಂಬ್ ಇಟ್ಟು ಜನ ಭಯಭೀತರಾಗಿ ಮಕ್ಕಳನ್ನು ಮನೆಯೊಳಗೇ ಕೂಡಿಟ್ಟುಕೊಳ್ಳುವಂತೆ ಮಾಡಿದರು. ಇದರಿಂದ ಸಾವಿರಾರು ಮಕ್ಕಳು ಮಾನಸಿಕವಾಗಿ ಕುಗ್ಗಿಹೋದರು. ಹೀಗೆ ಬರಬರುತ್ತಾ ತಾಲಿಬಾನ್ ಅಟ್ಟಹಾಸ ಮಿತಿ ಮೀರುತ್ತಿತ್ತು.ಆಗ ಬಿಬಿಸಿ ವೆಬ್‌ಸೈಟ್ ಇಂತಹ ದೌರ್ಜನ್ಯಗಳನ್ನು ಹಸಿಹಸಿಯಾಗಿ ಬರೆಯುವವರಿಗೆ ಹುಡುಕಲಾರಂಭಿಸಿತ್ತು. ಸಣ್ಣ ಬಾಲಕಿಯೊಬ್ಬಳು ಸದ್ದಿಲ್ಲದೇ ಸ್ವಯಂಪ್ರೇರಿತಳಾಗಿ ಈ ಕಾರ್ಯಕ್ಕೆ ಮುಂದೆ ಬಂದಳು. ತನ್ನವರ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಉಗ್ರರ ದೌರ್ಜನ್ಯ, ಕಣ್ಣಾರೆ ಕಂಡ ಅವರ ಅಟ್ಟಹಾಸ, ಶಿಕ್ಷಣದಿಂದ ವಂಚಿತಳಾದ ದುಃಖ, ಏನೂ ಮಾಡಲಾಗದ ಅಸಹಾಯಕತೆ, ಅದರಿಂದ ಒಡಮೂಡಿದ ಆಕೆಯ ಆಕ್ರೋಶ ಎಲ್ಲವೂ ಅಕ್ಷರ ರೂಪದಲ್ಲಿ ಇಡೀ ಜಗತ್ತಿಗೇ ಹರಿದುಬಂತು.

 

ತಮ್ಮ ಮೇಲಿನ ಶೋಷಣೆಯನ್ನು ಪರಸ್ಪರ ಹಂಚಿಕೊಳ್ಳಲೂ ಜನ ಹೆದರುತ್ತಿದ್ದ ಕಾಲದಲ್ಲಿ `ಗುಲ್ ಮಕಾಯ್~ ಹೆಸರಿನ ಮೂಲಕ ಆಕೆ ಬ್ಲಾಗ್‌ನಲ್ಲಿ ಬರೆಯುತ್ತಿದ್ದ ಬರಹಗಳು ತಾಲಿಬಾನೀಯರ ಕ್ರೌರ್ಯಕ್ಕೆ ಕನ್ನಡಿ ಹಿಡಿದವು.

 

ಹೇಗೆ ತಮ್ಮ ಮನೆಗಳ ಗಂಡು ಮಕ್ಕಳನ್ನು ಬಲವಂತವಾಗಿ ಅವರು ಹೊತ್ತೊಯ್ಯುತ್ತಾರೆ, ಯುವಜನರನ್ನು ಆತ್ಮಾಹುತಿ ಬಾಂಬರ್‌ಗಳಾಗಿ ಬದಲಿಸುತ್ತಾರೆ, ತಮ್ಮ ಕೃತ್ಯಕ್ಕೆ ಬೇಕಾದ ಸಂಪನ್ಮೂಲಕ್ಕಾಗಿ ಪಿತ್ರಾರ್ಜಿತ ಆಸ್ತಿಯನ್ನು ಜನರಿಂದ ಬಲವಂತವಾಗಿ ಹೇಗೆ ವಶಪಡಿಸಿಕೊಳ್ಳುತ್ತಾರೆ ಎಂಬುದೆಲ್ಲವೂ ಹೊರಜಗತ್ತಿಗೆ ಬಟಾಬಯಲಾದವು. ಆದರೆ ಆ ಬಾಲಕಿ ಮತ್ತು ಅವಳಿಗೆ ಒತ್ತಾಸೆಯಾಗಿ ನಿಂತಿದ್ದ ತಂದೆ ಯಾರೆಂಬುದು ಮಾತ್ರ ಯಾರಿಗೂ ತಿಳಿದಿರಲಿಲ್ಲ.ಬಳಿಕ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕ್ ಸೇನೆ ಕಣಿವೆಯಲ್ಲಿ ಕಾರ್ಯಾಚರಣೆ ಆರಂಭಿಸಿತು. ಆಗ ಹೆದರಿದ ತಾಲಿಬಾನೀಯರು ಅಲ್ಲಿಂದ ಪಲಾಯನ ಮಾಡಿದರು.ನಿಟ್ಟುಸಿರು ಬಿಟ್ಟ ಜನ ಒಬ್ಬೊಬ್ಬರಾಗಿ ಮುಂದೆ ಬಂದು ತಮ್ಮ ಅನುಭವಗಳನ್ನು ಬಹಿರಂಗವಾಗಿ ಹಂಚಿಕೊಳ್ಳತೊಡಗಿದರು. ಆಗ ಎಲ್ಲರೆದುರು ಕಾಣಿಸಿಕೊಂಡ ಬಾಲಕಿ ಮಲಾಲಾ ಯೂಸುಫ್ ಜೈ ತನ್ನ `ಅಕ್ಷರ ಕ್ರಾಂತಿ~ಯ ರಹಸ್ಯವನ್ನು ಬಿಚ್ಚಿಟ್ಟಳು. ಆವರೆಗೂ ತನ್ನ ಸರ್ವಾಧಿಕಾರವನ್ನು ಜಗಜ್ಜಾಹೀರು ಮಾಡಿದವರು ಯಾರೆಂಬುದನ್ನು ಅರಿಯದೆ ಕಂಗೆಟ್ಟಿದ್ದ ತಾಲಿಬಾನ್ ಲಾವಾರಸದಂತೆ ಕುದಿಯಿತು.

 

ಜಗತ್ತಿನ ಪ್ರಮುಖ ರಾಷ್ಟ್ರಗಳನ್ನೇ ನಡುಗಿಸುತ್ತಿರುವ ತನ್ನ ಅಸ್ತಿತ್ವವನ್ನೇ ಪ್ರಶ್ನಿಸಿದ 14 ವರ್ಷದ ಬಾಲಕಿಯನ್ನು ಹೊಸಕಿಹಾಕುವ ಸಂಚು ರೂಪಿಸಿತು. ಇದೇ ತಿಂಗಳ 9ರಂದು ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಮಲಾಲಾ ಮೇಲೆ ಗುಂಡಿನ ದಾಳಿ ನಡೆಸಿತು.ತೀವ್ರವಾಗಿ ಗಾಯಗೊಂಡಿರುವ ಮಲಾಲಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಉಗ್ರರ ಕೃತ್ಯಕ್ಕೆ ಜಗತ್ತಿನಾದ್ಯಂತ ಖಂಡನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮಲಾಲಾಳ ಚಿಕಿತ್ಸೆಯ ಸಂಪೂರ್ಣ ಹೊಣೆ ಹೊರುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬ್ರಿಟನ್‌ಗೆ ಕರೆದೊಯ್ಯಲಾಗಿದೆ.

 

ಸುಮಾರು 50ಕ್ಕೂ ಹೆಚ್ಚು ಸುನ್ನಿ ಮೌಲ್ವಿಗಳು `ಮಲಾಲಾಳ ಮೇಲಿನ ದಾಳಿ ಇಸ್ಲಾಂ ಧರ್ಮಕ್ಕೆ ವಿರುದ್ಧವಾದುದು~ ಎಂದು ತಾಲಿಬಾನ್ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಮಲಾಲಾಳ ಸ್ನೇಹಿತೆಯರು `ಶಿಕ್ಷಣದ ಹಕ್ಕಿಗಾಗಿನ ಹೋರಾಟದಲ್ಲಿ ನಾವು ಎಂದಿಗೂ ಸೋಲುವುದಿಲ್ಲ~ ಎಂದು ಹೇಳಿ ಬೆಂಬಲದ ಹಸ್ತ ಚಾಚಿದ್ದಾರೆ. ಇತ್ತ ಜಗತ್ತೇ ಮಲಾಲಾ ಶೀಘ್ರ ಗುಣಮುಖಳಾಗಲಿ ಎಂದು ಹಾರೈಸುತ್ತಿದ್ದರೆ ಅತ್ತ ತಾಲಿಬಾನ್ ಮಾತ್ರ, ಆಕೆ ಬದುಕಿ ಬಂದರೆ ಮತ್ತೆ ದಾಳಿ ನಡೆಸುವುದಾಗಿ ಎಚ್ಚರಿಸಿ ಧಾರ್ಮಿಕ ಮೂಲಭೂತವಾದ ಮೆರೆದಿದೆ.ಯಾವುದೇ ಒತ್ತಡಕ್ಕೆ ಒಳಗಾಗದೆ ಅಪರಾಧಿಗಳನ್ನು ಶಿಕ್ಷಿಸಿ  ಮಲಾಲಾಗೆ ನ್ಯಾಯ ದೊರಕಿಸಿಕೊಡುವ ಹೊಣೆ ಸರ್ಕಾರದ ಮೇಲಿದೆ. ಇದು ಇನ್ನುಳಿದ ತಾಲಿಬಾನ್ ಉಗ್ರರಿಗೆ ಎಚ್ಚರಿಕೆಯ ಗಂಟೆಯಾಗಬೇಕು, ಆ ಮೂಲಕ `ಉಗ್ರರ ಭದ್ರ ನೆಲೆ~ ಎಂಬ ಕಳಂಕ ಹೊತ್ತಿರುವ ಪಾಕಿಸ್ತಾನದ ನೆಲದಿಂದಲೇ ಭಯೋತ್ಪಾದನೆ ಮೂಲೋತ್ಪಾಟನೆಯ ಆಂದೋಲನ ಪ್ರಬಲವಾಗಬೇಕು ಎಂದು ಜಗತ್ತು ಆಶಿಸುತ್ತಿದೆ.ಅಪ್ಪನಂತೆ ಮಗಳು...

ಪಾಕಿಸ್ತಾನದ ಸ್ವಾತ್ ಜಿಲ್ಲೆಯಲ್ಲಿ 1998ರಲ್ಲಿ ಜನಿಸಿದ ಮಲಾಲಾ ದಿಟ್ಟ ನಿಲುವಿಗೆ ಒತ್ತಾಸೆಯಾಗಿ ನಿಂತಿರುವವರು ತಂದೆ ಜಿಯಾವುದ್ದೀನ್ ಯೂಸುಫ್ ಜೈ. ಇವರು ಕವಿ, ಶೈಕ್ಷಣಿಕ ಕಾರ್ಯಕರ್ತ, ಶಾಲೆಯೊಂದರ ಮಾಲೀಕ. ತಮ್ಮ ಮಗಳು ರಾಜಕೀಯ ನಾಯಕಿಯಾಗಿ ಬೆಳೆದು ದೇಶದಲ್ಲಿ ಬದಲಾವಣೆ ತರಬೇಕು ಎಂಬ ಆಶಯ ಅವರದು.ಮಗಳ ಮೇಲಿನ ದಾಳಿಯನ್ನೂ ಲೆಕ್ಕಿಸದೆ ಉಗ್ರರ ವಿರುದ್ಧ ಅವರು ದೃಢ ನಿಲುವನ್ನು ಪ್ರದರ್ಶಿಸಿದ್ದಾರೆ.ಡಚ್‌ನ  `ಕಿಡ್ಸ್ ರೈಟ್ಸ್ ಫೌಂಡೇಶನ್~ 2011ರಲ್ಲಿ `ಅಂತರ ರಾಷ್ಟ್ರೀಯ ಶಾಂತಿ ಪ್ರಶಸ್ತಿ~ಗೆ ಮಲಾಲಾ ಹೆಸರನ್ನು ಶಿಫಾರಸು ಮಾಡಿತ್ತು. ಪಾಕಿಸ್ತಾನ ಸರ್ಕಾರ ಸಹ ಕಳೆದ ವರ್ಷ ರಾಷ್ಟ್ರೀಯ ಶಾಂತಿ ಪುರಸ್ಕಾರ ನೀಡಿ, ಶಾಲೆಯೊಂದಕ್ಕೆ ಈಕೆಯ ಹೆಸರನ್ನೇ ನಾಮಕರಣ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry