ಹೋರಾಟ ತಾತ್ಕಾಲಿಕ ಸ್ಥಗಿತ

7

ಹೋರಾಟ ತಾತ್ಕಾಲಿಕ ಸ್ಥಗಿತ

Published:
Updated:

ಮರಿಯಮ್ಮನಹಳ್ಳಿ: ಬಿಎಂಎಂ ಇಸ್ಪಾತ್ ಕಂಪೆನಿಗೆ ರೈತರ ಜಮೀನನ್ನು ಹಸ್ತಾಂತರಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ರೈತರ ಭೂಮಿಗೆ ಪಟ್ಟಾ ವಿತರಿಸುವಂತೆ ಒತ್ತಾಯಿಸಿ ಪಟ್ಟಣದ ಭೂತಾಯಿ ಹೋರಾಟ ಸಮಿತಿ ಹಮ್ಮಿಕೊಂಡ ಸರದಿ ಉಪವಾಸ ಸತ್ಯಾಗ್ರಹ ಐದನೇ ದಿನವಾದ ಸೋಮವಾರ ಪ್ರತಿಭಟನೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಕರೀಗೌಡ, ತಹಶೀಲ್ದಾರ್ ಪಿ.ಎಸ್.ಮಂಜುನಾಥ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದ ನಂತರ ಸಲ್ಲಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಸಲ್ಲಿಸುವುದಾಗಿ ನೀಡಿದ ಭರವಸೆಗೆ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಕಾರ್ಯಾಧ್ಯಕ್ಷ ಟಿ.ಹುಲುಗಪ್ಪ, ಸರ್ಕಾರ ಕೂಡಲೇ ಜಮೀನಿನ ಪಹಣಿ ಪತ್ರಗಳಲ್ಲಿ ನಮ್ಮ ಹೆಸರುಗಳ ಬದಲಾಗಿ ನಮೂದಿಸಿರುವ ಕೆಐಎಡಿಬಿ ಹೆಸರನ್ನು ಕೂಡಲೇ ಬದಲಾಗಬೇಕು, ಅಲ್ಲದೆ ಕಾರ್ಖಾನೆಗೆ ಭೂಮಿಕೊಟ್ಟು ನಾವು ಎಲ್ಲಿಗೆ ಹೋಗಬೇಕು, ಇದರಿಂದಲೇ ನಮ್ಮ ಬದುಕು ಸಾಗುತ್ತಿದೆ, ಈಗಾಗಲೇ ಇರುವ ಬಿಎಂಎಂ ಇಸ್ಪಾತ್ ಕಂಪೆನಿಯಿಂದ ಸುತ್ತಮುತ್ತಲ ಹಳ್ಳಿಗಳ ಜನರ ಆರೋಗ್ಯ ಹದಗೆಡುತ್ತಿದ್ದು, ಜತೆಗೆ ದೂಳಿನಿಂದ ಬೆಳೆಗಳು ಬಾರದಂತಾಗಿದೆ. ನಮ್ಮ ಭೂಮಿ ನಮಗೆ ಬೇಕು ಎಂದು ಆಗ್ರಹಿಸಿದರು.ಸಂಚಾಲಕ ಕೆ.ಲೋಕೇಶ್, ಕೈಗಾರಿಕೀಕರಣ ನೀತಿಯಿಂದಾಗಿ ದುಡಿಯುವ ರೈತ ವರ್ಗದ ಮೇಲೆ ಭೀಕರ ಪರಿಣಾಮ ಉಂಟಾಗಿದ್ದು, ಡಣಾಪುರ, ಗುಂಡಾ, ತಾಂಡಾ, ಬ್ಯಾಲಕುಂದಿ, ಗರಗ ಗ್ರಾಮಗಳ ಫಲವತ್ತಾದ ಜಮೀನುಗಳನ್ನು ಬಿಎಂಎಂ ಇಸ್ಪಾತ್ ಕಂಪೆನಿಗೆ ಸ್ವಾಧೀನ ಪಡೆಸಿಕೊಳ್ಳವುದನ್ನು ನಿಲ್ಲಿಸಿ, ಪುನಃ ರೈತರ ಹೆಸರನ್ನು ಪಹಣಿಯಲ್ಲಿ ಹಾಕುವದು, ಈ ಭಾಗದ ರೈತರ ಭೂಮಿಗೆ ಪಟ್ಟಾ ವಿತರಿಸುವಂತೆ ಆಗ್ರಹಿಸಿದರು.ಪ್ರಧಾನ ಕಾರ್ಯದರ್ಶಿ ಬಿ.ಎಂ.ಎಸ್. ಪ್ರಕಾಶ್, ಅಧಿಕಾರಿಗಳ ಸ್ಪಂದನೆಗೆ ತಾತ್ಕಾಲಿಕವಾಗಿ ಹೋರಾಟ ಹಿಂದೆತೆಗೆದುಕೊಂಡಿದೆ. ಸೂಕ್ತ ಉತ್ತರಕ್ಕಾಗಿ 20ದಿನಗಳವರೆಗೆ ಗಡುವು ನೀಡಿದ್ದು, ಮನವಿಗೆ ಸ್ಪಂದಿಸದೆ ಹೋದರೆ ಮುಂದೆ ಉಗ್ರಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಪಿ.ಎಸ್.ಮಂಜುನಾಥ, ಉಪತಹಸೀಲ್ದಾರ ನಾಗರಾಜ್, ಸಿಪಿಐ ಆಶೋಕ್‌ಕುಮಾರ್, ಪಿಎಸ್‌ಐ ಆರ್.ಎಲ್. ಮೋತಿಲಾಲ್, ಸಮಿತಿಯ ಅಧ್ಯಕ್ಷ ಎಚ್.ಮಂಜುನಾಥ, ಸಹ ಕಾರ್ಯದರ್ಶಿ ಕೆ.ರಘುವೀರ,  ಉಪಾಧ್ಯಕ್ಷ ಗಡ್ಡಿ ಸೋಮಶೇಖರ, ಕುಂಬಾರ ಮಂಜುನಾಥ, ಯು.ವೆಂಕಟೇಶ್, ಸೋಮಪ್ಪ, ರೋಗಾಣಿ ಬಸಪ್ಪ, ಎಪಿಎಂಸಿ ಸದಸ್ಯ ಹೇಮ್ಲನಾಯ್ಕ ಚಿದಾನಂದ, ತಾ.ಪಂ.ಮಾಜಿ ಸದಸ್ಯ ಅಂಜಿನಪ್ಪ, ಅಂಕ್ಲೇಶ್, ಎಚ್.ಈಶ್ವರಪ್ಪ, ಸಮಾದೆಪ್ಪ, ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಅಧ್ಯಕ್ಷ ನಾಗೇಂದ್ರ, ವೆಂಕಟ ಸೋಮಪ್ಪ, ಹೊಸಪೇಟೆ ಕರವೇ ಟಿ.ಹನುಮಂತಪ್ಪ, ಶ್ರೀನಿವಾಸ, ಜಿ.ಎಂ. ಬಷೀರ್, ಪಿ.ಕಾಸಿಂ, ಈ.ರಮೇಶ್, ಕರ್ಕಿಹಳ್ಳಿ ವೆಂಕಟೇಶ್, ಭೀಮಪ್ಪ, ಖೀಮ್ಯೋನಾಯ್ಕ ಸೇರಿದಂತೆ ವಿವಿದ ಸಂಘಟನೆಯ ಪದಾಧಿಕಾರಿಗಳು ಸರದಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry