ಹೋರಾಟ ತೀವ್ರಗೊಳಿಸಲು ಸಂಘ ಸಂಸ್ಥೆಗಳು ಸಿದ್ಧ

7
ತಾಯಿ, ಮಗು ಸಾವು ಪ್ರಕರಣ; 13ನೇ ದಿನಕ್ಕೆ ಧರಣಿ

ಹೋರಾಟ ತೀವ್ರಗೊಳಿಸಲು ಸಂಘ ಸಂಸ್ಥೆಗಳು ಸಿದ್ಧ

Published:
Updated:

ಕೋಲಾರ: ಗೃಹಿಣಿ ವೀಣಾ ಮತ್ತು ಅವರ ಮಗಳು ದೀಪ್ತಿಯ ಸಾವಿಗೆ ಕಾರಣನಾದ ಪತಿ ಸಂತೋಷ್‌ಕುಮಾರ್‌ನನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎರಡು ವಾರದಿಂದ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಕಾರ್ಯದರ್ಶಿ ವಿ.ಗೀತಾ ತಿಳಿಸಿದ್ದಾರೆ.ಧರಣಿ ಸ್ಥಳದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಆರೋಪಿಯನ್ನು ಪತ್ತೆ ಹಚ್ಚದೆ ಪೊಲೀಸರು ಸುಮ್ಮನಿರುವ ಕುರಿತು ಸೋಮವಾರ ಗೃಹಸಚಿವರಿಗೂ ದೂರು ನೀಡಲಾಗಿದೆ. ಎರಡು ದಿನದಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಹೀಗಾಗಿ ಬುಧವಾರದವರೆಗೂ ಕಾಯುತ್ತೇವೆ. ನಂತರ ಉಗ್ರ ರೀತಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.15 ದಿನದಿಂದ ಧರಣಿ ನಡೆಯುತ್ತಿದ್ದರೂ, ಧರಣಿ ನಿರತರ ಅಹವಾಲು ಆಲಿಸಲು ಅಥವಾ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಒಮ್ಮೆಯೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆಬರಲೇ ಇಲ್ಲ. ಇದೂ ಕೂಡ ಅವರ ನಿರ್ಲಕ್ಷ್ಯ ಧೋರಣೆಯನ್ನು ತೋರುತ್ತದೆ ಎಂದರು.ಆರೋಪಿಯ ಪತ್ತೆಯಾಗದಿದ್ದಲ್ಲಿ, ಸೆ.5ರಂದು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಗೃಹಸಚಿವರ ಪ್ರತಿಕೃತಿಯನ್ನು ಸುಟ್ಟು ಪ್ರತಿಭಟಿಸಲಾಗುವುದು. ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಮುಖಂಡ ವಿಜಯಕುಮಾರ ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಕೂಡ ಪ್ರಕರಣದ ಕಡೆಗೆ ಗಂಭೀರ ಗಮನ ಹರಿಸಿಲ್ಲ. ಆರೋಪಿಯನ್ನು ಪತ್ತೆ ಹಚ್ಚದೇ ಇರುವಲ್ಲಿ ಪೊಲೀಸರ ಮೇಲೆ ಅವರೂ ಪ್ರಭಾವ ಬೀರಿರುವ ಸಾಧ್ಯತೆ ಇದೆ ಎಂದು ಸಮತಾಸೈನಿಕ ದಳದ ಪಂಡಿತ್ ಮುನಿವೆಂಕಟಪ್ಪ ಆರೋಪಿಸಿದರು.ವಾಹನ ದುರ್ಬಳಕೆ: ಆರೋಪಿಯನ್ನು ಪತ್ತೆ ಹಚ್ಚುವ ನೆಪದಲ್ಲಿ ನಗರ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎನ್.ರಮೇಶ್ ದೂರುದಾರರ ವಾಹನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಯಾಗಿದ್ದು ದೂರುದಾರರ ಕಾರಿನಲ್ಲಿ ಸಂಚರಿಸಿ ಕರ್ತವ್ಯಲೋಪ ಎಸಗಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಧರಣಿ ನಿರತರಿಗೆ ನ್ಯಾಯ ಒದಗಿಸುವ ಬದಲಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಧರಣಿ ನಿರತರನ್ನು ಸ್ಥಳದಿಂದ ಎತ್ತಂಗಡಿ ಮಾಡಿಸುವ ಪ್ರಯತ್ನಗಳನ್ನು ನಡೆಸಿರುವುದು ಶೋಚನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಆಟೋ ಚಾಲಕರ ಸಂಘದ ಮಂಜುನಾಥ್, ಡಿವೈಎಫ್‌ಐನ ರಮೇಶ್, ಸಂಘಟನೆಯ ಸುಶೀಲ ಮತ್ತು ಮೃತ ಗೃಹಿಣಿಯ ಪೋಷಕರು, ಸಂಬಂಧಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry