ಹೋರಾಟ ನಿರಂತರ: ಅಣ್ಣಾ ಎಚ್ಚರಿಕೆ

7

ಹೋರಾಟ ನಿರಂತರ: ಅಣ್ಣಾ ಎಚ್ಚರಿಕೆ

Published:
Updated:
ಹೋರಾಟ ನಿರಂತರ: ಅಣ್ಣಾ ಎಚ್ಚರಿಕೆ

ನವದೆಹಲಿ: `ಜನ ಲೋಕಪಾಲ ಮಸೂದೆ~ಗಾಗಿ ಕಳೆದ 12 ದಿನಗಳಿಂದ ನಡೆಸಿದ್ದ ಉಪವಾಸವನ್ನು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಸಹಸ್ರಾರು ಬೆಂಬಲಿಗರ ವಿಜಯೋತ್ಸವದ ನಡುವೆ ಭಾನುವಾರ ಬೆಳಿಗ್ಗೆ ನಿಲ್ಲಿಸಿದರು. ಚಳವಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಚುನಾವಣಾ ವ್ಯವಸ್ಥೆ ಸುಧಾರಣೆ ಸೇರಿದಂತೆ ಒಟ್ಟಾರೆ ವ್ಯವಸ್ಥೆಯ ಸಮಗ್ರ ಬದಲಾವಣೆಗೆ ಹೋರಾಟ ಮುಂದುವರಿಸುವುದಾಗಿ ಅವರು ಪ್ರಕಟಿಸಿದರು.ಸರ್ಕಾರ ಮತ್ತು ಅಣ್ಣಾ ತಂಡದ ನಡುವೆ `ಶಾಂತಿ ಸಮರ~ಕ್ಕೆ ಕಾರಣವಾಗಿದ್ದ ಜನ ಲೋಕಪಾಲದ ಮೂರು ವಿವಾದಾತ್ಮಕ ಅಂಶಗಳಿಗೆ ಸಂಸತ್ತಿನ ಉಭಯ ಸದನಗಳು ಒಮ್ಮತದಿಂದ ಶನಿವಾರ ರಾತ್ರಿ ತಾತ್ವಿಕ ಒಪ್ಪಿಗೆ ನೀಡಿದವು. ಜನ ಲೋಕಪಾಲದ ಅಂಶಗಳನ್ನು ಒಳಗೊಂಡು ಪ್ರಬಲ ಮತ್ತು ಪರಿಣಾಮಕಾರಿ ಲೋಕಪಾಲ ಮಸೂದೆ ಜಾರಿಗೆ ಬದ್ಧ ಎಂದು ಸರ್ಕಾರ ಪ್ರಕಟಿಸಿತು. ಇದರೊಂದಿಗೆ ಹೋರಾಟ ಸುಖಾಂತ್ಯ ಕಂಡಿತು.ರಾಮಲೀಲಾದಲ್ಲಿ ಭಾನುವಾರ ಬೆಳಿಗ್ಗೆ ಇಕ್ರ ಮತ್ತು ಸಿಮ್ರಾನ್ ಎಂಬ ಪುಟ್ಟ ಬಾಲಕಿಯರು ಕೊಟ್ಟ ಜೇನು ಬೆರೆಸಿದ ಎಳನೀರು ಕುಡಿದು 74 ವರ್ಷದ ಅಣ್ಣಾ  ಉಪವಾಸ ಅಂತ್ಯಗೊಳಿಸಿದರು. ಬಳಿಕ ಅವರನ್ನು ಗುಡಗಾಂವ್ ಆಸ್ಪತ್ರೆಗೆ ಸಾಗಿಸಲಾಯಿತು. 13 ದಿನಗಳಿಂದ ಊಟ ತ್ಯಜಿಸಿದ್ದ ಹಿರಿಯ ಗಾಂಧಿವಾದಿ 7.5 ಕೆ.ಜಿ ಇಳಿದಿದ್ದಾರೆ. ದೇಹದಲ್ಲಿ ನೀರಿನ ಅಂಶದ ಕೊರತೆಯಾಗಿದೆ. ರಕ್ತದೊತ್ತಡ, ಎದೆಬಡಿತವನ್ನು ವೈದ್ಯರು ಪರೀಕ್ಷಿಸಿದ್ದಾರೆ. ಎಲ್ಲ ಪ್ರಮುಖ ಅಂಗಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಡಾ.ಟ್ರೆಹಾನ್ ಹೇಳಿದ್ದಾರೆ.ಇಂಡಿಯಾ ಗೇಟ್‌ನಲ್ಲಿ ಸಂಜೆ ಅಣ್ಣಾ ತಂಡ ವಿಜಯೋತ್ಸವ ಆಚರಿಸಿತು. ದೆಹಲಿಯ ಎಲ್ಲ ರಸ್ತೆಗಳೂ ಇಂಡಿಯಾ ಗೇಟ್ ಕಡೆ ಮುಖ ಮಾಡಿದ್ದವು. ಮೆಟ್ರೊ, ಡಿಟಿಸಿ ಬಸ್‌ಗಳು ತುಂಬಿ ತುಳುಕಿದವು. ಎಲ್ಲೆಲ್ಲೂ ರಾಷ್ಟ್ರಧ್ವಜ, ಘೋಷಣೆಗಳು ಪ್ರತಿಧ್ವನಿಸಿದವು. ಕೊಂಬು- ಕಹಳೆ ಮೊಳಗಿದವು. ತಮಟೆ ಬಡಿತ ಸಾಮಾನ್ಯವಾಗಿತ್ತು. ಮಹಿಳೆಯರು, ಮಕ್ಕಳು, ಯುವಕ- ಯುವತಿಯರು ಅಗಾಧ ಸಂಖ್ಯೆಯಲ್ಲಿ ಸೇರಿ ಮೋಂಬತ್ತಿ ಬೆಳಗಿ ಸಂಭ್ರಮಿಸಿದರು. ಬೆಳಿಗ್ಗೆ ರಾಮಲೀಲಾದಲ್ಲೂ ಅಣ್ಣಾ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. `ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು~ ಎಂಬಂತೆ ಎಲ್ಲೆಲ್ಲೂ ಜನಸಾಗರ!ಅಣ್ಣಾ ರಾಮಲೀಲಾ ಮೈದಾನದಿಂದ ಹೊರಡುವ ಮೊದಲು ಭ್ರಷ್ಟಾಚಾರದ ವಿರುದ್ಧದ ಅಹಿಂಸಾ ಹೋರಾಟ ಮುಂದುವರಿಸುವಂತೆ ಬೆಂಬಲಿಗರಿಗೆ ಕರೆಕೊಟ್ಟರು. `ನೀವು ಅಣ್ಣಾ ಟೋಪಿ ಧರಿಸುವುದರಿಂದ ಅಣ್ಣಾ ಆಗುವುದಿಲ್ಲ. ಅಣ್ಣಾ ತತ್ವಗಳನ್ನು ಅನುಸರಿಸಬೇಕೆಂದು ಕಿವಿಮಾತು ಹೇಳಿದರು.ಎರಡು ವಾರಗಳಿಂದ ಸಂಸತ್ತು ಸಂವಿಧಾನ ಕಡೆಗಣಿಸಿದ ಟೀಕೆಗೆ ಗುರಿಯಾಗಿರುವ ಅಣ್ಣಾ, ತಮ್ಮ ತಂಡ ಮಂಡಿಸಿದ ಬೇಡಿಕೆಗಳು ಸಂವಿಧಾನದ ಚೌಕಟ್ಟಿನೊಳಗೇ ಇವೆ ಎಂದು ಪ್ರತಿಪಾದಿಸಿದರು. ಸರ್ಕಾರ ಕೊನೆಗೂ ಜನಶಕ್ತಿಗೆ ಮಣಿದಿದೆ. ಇದು ದೇಶದ ಜನ ಹಾಗೂ ಪ್ರಜಾಪ್ರಭುತ್ವದ ಗೆಲುವು. ಸಂಸತ್ತಿನ ಪಾರಮ್ಯ ಪ್ರತಿಪಾದಿಸಿದ ರಾಜಕೀಯ ನಾಯಕರಿಗೆ ತಿರುಗೇಟು ಕೊಟ್ಟರು. `ಜನರ ಸಂಸತ್ತು ಎಲ್ಲಕ್ಕಿಂತ ದೊಡ್ಡದು~ ಎಂದು ಚುಚ್ಚಿದರು.ಚುನಾವಣೆ ವ್ಯವಸ್ಥೆ ಸುಧಾರಣೆ ಕುರಿತು ಪ್ರಸ್ತಾಪಿಸಿ, ~ನಮ್ಮ ಚುನಾಯಿತ ಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಹಕ್ಕಿಗಾಗಿ ಹೋರಾಡೋಣ. ಕರ್ತವ್ಯಗಳನ್ನು ನಿರ್ವಹಿಸದ ಸಂಸದರನ್ನು ತಿರಸ್ಕರಿಸೋಣ~ ಎಂದರು. ನಮ್ಮ ಹೋರಾಟ ತಾತ್ಕಾಲಿಕವಾಗಿ ನಿಂತಿದ್ದು, ಸದ್ಯದಲ್ಲೇ ಮುಂದುವರಿಯಲಿದೆ ಎಂದು ಹಜಾರೆ ಘೋಷಿಸಿದರು.ತಮ್ಮ ಚಿಕ್ಕದಾದ ಭಾಷಣದಲ್ಲಿ ಹೋರಾಟದ ದಿಕ್ಕುದೆಸೆ ಕುರಿತು ವಿವರಿಸಿದ ಹಿರಿಯ ಗಾಂಧಿವಾದಿ, `ನಮ್ಮ ಹೋರಾಟ ಜಾತ್ಯತೀತ, ಪ್ರಜಾಸತ್ತಾತ್ಮಕ ಹಾಗೂ ದಲಿತಪರ ನಿಲುವು ಹೊಂದಿದೆ~ ಎಂದರು. ಮಾತಿನ ಮಧ್ಯೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಿದರು. `ಅಂಬೇಡ್ಕರ್ ನಮಗೆ ಕೊಟ್ಟಿರುವ ಸಂವಿಧಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಬೇಕಿದೆ~ ಎಂದರು. ಅಣ್ಣಾ ಚಳವಳಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿರೋಧಿ ಎಂದು ನಡೆದಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಅಣ್ಣಾ ತಮ್ಮ ನಿಲುವು ಸ್ಪಷ್ಟಪಡಿಸಿದರು.ಅಣ್ಣಾ ಉಪವಾಸ ಅಂತ್ಯಗೊಳಿಸಿದ ವೇಳೆ ಅವರ ತಂಡದ ಸದಸ್ಯರಾದ ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಕಿರಣ್ ಬೇಡಿ ಮತ್ತಿತರರು ಹಾಜರಿದ್ದರು. ಅರವಿಂದ್ ಕೇಜ್ರಿವಾಲ್ ಅಣ್ಣಾ ಬೆಂಬಲಿಗರಿಗೆ ಭ್ರಷ್ಟಾಚಾರ ವಿರೋಧಿ ಪ್ರಮಾಣ ವಚನ ಬೋಧಿಸಿದರು.ಜನ ಲೋಕಪಾಲದ ಮೂರು ಅಂಶಗಳಾದ, ಲೋಕಪಾಲದಂತೆ ರಾಜ್ಯಗಳಲ್ಲೂ ಲೋಕಾಯುಕ್ತ ಸಂಸ್ಥೆ ಸ್ಥಾಪನೆ, ಕೆಳ ಹಂತದ ಅಧಿಕಾರಿಗಳನ್ನು ಲೋಕಪಾಲ ಸಂಸ್ಥೆ ವ್ಯಾಪ್ತಿಗೆ ತರುವುದು ಹಾಗೂ ಪ್ರತಿ ಇಲಾಖೆಯಲ್ಲೂ ಶ್ರೀಸಾಮಾನ್ಯರ ಕೆಲಸಕ್ಕೆ ಗಡುವು ನಿಗದಿ ಸಂಬಂಧ ಸರ್ಕಾರ ಮತ್ತು ಅಣ್ಣಾ ತಂಡದ ನಡುವೆ ಬಿಕ್ಕಟ್ಟು ತಲೆದೋರಿತ್ತು.ಸಂಸತ್ತಿನ ಉಭಯ ಸದನಗಳು ಶನಿವಾರ ಈ ಅಂಶಗಳಿಗೆ ತಾತ್ವಿಕ ಒಪ್ಪಿಗೆ ನೀಡುವುದರೊಂದಿಗೆ ಸಮಸ್ಯೆ ಪರಿಹಾರ ಕಂಡಿತು. ಅನಂತರ ಅಣ್ಣಾ ತಂಡದ ಜನ ಲೋಕಪಾಲವನ್ನು ಸಂಸತ್ತಿನ ಸ್ಥಾಯಿ ಸಮಿತಿ ಪರಿಶೀಲನೆಗೆ ಕಳುಹಿಸಲಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry