ಶುಕ್ರವಾರ, ಮೇ 27, 2022
31 °C

ಹೋರಾಟ ಸ್ಥಗಿತವಾಗಿಲ್ಲ: ಪೇಜಾವರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ನಂದಿಕೂರಿನ ಯುಪಿಸಿಎಲ್ ಉಷ್ಣವಿದ್ಯುತ್ ಸ್ಥಾವರದ ವಿರುದ್ಧ ನಡೆಸುತ್ತಿರುವ ತಮ್ಮ ಹೋರಾಟ ಸ್ಥಗಿತವಾಗಿಲ್ಲ, ಮುಂದಿನ ಕೆಲವೇ ದಿನಗಳಲ್ಲಿ ಮತ್ತೆ ಯುಪಿಸಿಎಲ್ ಜತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.ಈ ಸಂಬಂಧ ಸೋಮವಾರ ಪ್ರಕಟಣೆ ಹೊರಡಿಸಿರುವ ಸ್ವಾಮೀಜಿ, ಹೋರಾಟದ ಕುರಿತಂತೆ ಕಳೆದ 4ರಂದು ತಾವು ಉಡುಪಿಯಲ್ಲಿ ಕರೆದಿದ್ದ ಸಭೆಯಲ್ಲಿ ರೈತ ಸಂಘದವರು ಗದ್ದಲವೆಬ್ಬಿಸಿ ಕಾರ್ಯಕ್ರಮ ಭಗ್ನಗೊಳಿಸಿದ್ದರಿಂದ ಮುಂದಿನ ನಿಲುವು ಘೋಷಿ ಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ತಾವೇನೂ ತಮ್ಮ ನಿಲುವು ಘೋಷಿಸಲು ದೀರ್ಘಕಾಲದ ಕಾಲಾವಕಾಶ ಕೇಳಿರಲಿಲ್ಲ. ಸಂವಾದ ಮುಗಿಸಿ ಅದೇ ದಿನ ಸಂಜೆ 3 ಗಂಟೆಗೆ ಹೋರಾಟದ ಬಗ್ಗೆ ಘೋಷಣೆ ಮಾಡುವುದಾಗಿ ತಿಳಿಸಿದ್ದೆ. ಆದರೆ ಹೀಗೆ 3-4 ಗಂಟೆ ಕಾಲಾವಕಾಶವನ್ನೂ ನೀಡುವ ತಾಳ್ಮೆ ತೋರದ ರೈತಸಂಘದ ಧೋರಣೆ ತಮಗೆ ಅಚ್ಚರಿ ಉಂಟುಮಾಡಿದೆ ಎಂದು ಹೇಳಿದ್ದಾರೆ.‘ರೈತ ಸಂಘ ನಡೆಸುವ ಹೋರಾಟದ ನೇತೃತ್ವವನ್ನು ನಾನು ವಹಿಸದೇ ಇದ್ದರೂ ಕರಾವಳಿ ಜನತೆಗಾಗಿ ಒಬ್ಬ ಸಂತನಾಗಿ, ಧರ್ಮ ಪೀಠಾಧಿಪತಿಯಾಗಿ, ರಾಷ್ಟ್ರದ ನಾಗರಿಕನಾಗಿ ಹೋರಾಟ ಮುಂದುವರಿಸುತ್ತೇನೆ’ ಎಂದು ಸ್ವಾಮೀಜಿ ತಿಳಿಸಿದ್ದಾರೆ.

10-12 ದಿನಗಳಲ್ಲಿ ಸಂವಾದ: ಜತೆಗೆ ಈ ಬಗ್ಗೆ ಮಾಧ್ಯಮದವರು ಮತ್ತು ತಜ್ಞರೊಂದಿಗೆ ತಮ್ಮ ಉಪಸ್ಥಿತಿಯಲ್ಲಿ ಸಂವಾದ ನಡೆಸಲು ಯುಪಿಸಿಎಲ್ ಅಧಿಕಾರಿಗಳು ಒಪ್ಪಿದ್ದಾರೆ. ಮುಂದಿನ 10-12 ದಿನಗಳೊಳಗೆ ಸೂಕ್ತ ಸ್ಥಳದಲ್ಲಿ ಈ ಸಂವಾದ ನಡೆಯಲಿದೆ. ಮಾಧ್ಯಮದವರು ಮತ್ತು ತಜ್ಞರೂ ಭಾಗವಹಿಸಲು ಸಮ್ಮತಿಸಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.ಹಾರುಬೂದಿ ಮುಂತಾದವುಗಳಿಂದ ಪರಿಸರದ ಜನತೆಗೆ ಆಗುತ್ತಿರುವ ಅನಾಹುತಗಳನ್ನು ಪ್ರತ್ಯಕ್ಷವಾಗಿ ಕಂಡಿದ್ದ ತಾವು ಯುಪಿಸಿಎಲ್‌ಗೆ ಮಾರ್ಚ್ 3ರ ಗಡುವು ನೀಡಿ, 4ರಂದು ಹೋರಾಟದ ಕಾರ್ಯಕ್ರಮ ಘೋಷಣೆ ಮಾಡುವ ಬಗ್ಗೆ ಸಭೆ ಏರ್ಪಾಡು ಮಾಡಲಾಗಿತ್ತು.ಆದರೆ ಯುಪಿಸಿಎಲ್ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿ ವಿವರಣೆ ನೀಡಲು ಮುಂದಾದಾಗ ಈ ಬಗ್ಗೆ ಕೇವಲ ರಹಸ್ಯ ಮಾತುಕತೆ ಬೇಡ, ಮಾಧ್ಯಮದವರು ಮತ್ತು ತಜ್ಞರ ಜತೆಗೆ ತಮ್ಮ ಸಮ್ಮುಖದಲ್ಲಿ ಸಂವಾದ ನಡೆಯಲಿ ಎಂದು ಅವರನ್ನು ಅಹ್ವಾನಿಸಲಾಗಿತ್ತು.ನೂರಾರು ಜನರ ಮಧ್ಯೆ ಚರ್ಚೆ ನಡೆದರೆ ಬರೇ ಗದ್ದಲದಲ್ಲಿ ಪರ್ಯಾವಸಾನವಾಗುತ್ತದೆ.  ತಜ್ಞರು, ರೈತ ಸಂಘದ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಯುಪಿಸಿಎಲ್ ಅಧಿಕಾರಿಗಳು ಮತ್ತು ಮಾಧ್ಯಮದವರೊಂದಿಗೆ ನೇರವಾದ ಚರ್ಚೆ ಮೊದಲು ನಡೆಯಲಿ, ನಂತರ ತಜ್ಞರು ಮತ್ತು ರೈತ ಸಂಘದ ಪ್ರತಿನಿಧಿಗಳ ಜತೆಗೆ ಚರ್ಚೆ ನಡೆಯಲಿ ಎಂದು ಸಭೆಯ ಆರಂಭದಲ್ಲಿ ಸ್ಪಷ್ಟವಾಗಿ ಘೋಷಿಸಿದ್ದೆ. ಇದಕ್ಕೆ ವ್ಯತಿರಿಕ್ತವಾಗಿ ರೈತ ಸಂಘದವರು ಆಗಮಿಸಿ ಸಭೆಯಲ್ಲಿ ಗದ್ದಲವೆಬ್ಬಿಸಿ ಸಂವಾದ ಕಾರ್ಯಕ್ರಮ ಭಗ್ನಗೊಳಿಸಿದ್ದಾರೆ ಎಂದು ಸ್ವಾಮೀಜಿ ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.