ಹೋರಾಡಿ ಗೆದ್ದ ತಲಶೇರಿ ತಂಡ

7

ಹೋರಾಡಿ ಗೆದ್ದ ತಲಶೇರಿ ತಂಡ

Published:
Updated:

ಮಂಗಳೂರು: ಪೂರ್ಣ ಐದು ಸೆಟ್‌ಗಳಿಗೆ ಬೆಳೆದ ಸೆಣಸಾಟದಲ್ಲಿ ತಲಶೇರಿಯ ಭಾರತ ಕ್ರೀಡಾ ಪ್ರಾಧಿಕಾರ ವನಿತೆಯರ ತಂಡ, ತ್ರಿಶೂರಿನ ಸೇಂಟ್ ಜೋಸೆಫ್ಸ್ ಕಾಲೇಜು ತಂಡವನ್ನು ಸೋಲಿಸಲು ಪ್ರಯಾಸಪಡಬೇಕಾಯಿತು. 5ನೇ ಅಖಿಲ ಭಾರತ ಆಹ್ವಾನ ವಾಲಿಬಾಲ್ ಟೂರ್ನಿಯ ಮೂರನೇ ದಿನವಾದ ಶನಿವಾರ ಕ್ರೀಡಾ ಪ್ರಾಧಿಕಾರ ತಂಡ ಕೊನೆಗೂ 25-11, 24-26, 25-21, 20-25, 16-14 ರಲ್ಲಿ ಜಯಗಳಿಸಿತು.ಮಂಗಳಾ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಶಿವಪ್ರಸಾದ್ ಬಾಳಿಗಾ ಸ್ಮರಣಾರ್ಥ ಉರ್ವಸ್ಟೋರ್ ಮೈದಾನದ ಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಹೊನಲು ಬೆಳಕಿನ ಟೂರ್ನಿಯಲ್ಲಿ ಇದು ತಲಶೇರಿಯ ತಂಡಕ್ಕೆ ಎರಡನೇ ಜಯ. ಸರಿಯಾಗಿ ನೂರು ನಿಮಿಷ ನಡೆದ ಈ ಪಂದ್ಯದಲ್ಲಿ ಪೂರ್ಣಿಮಾ, ಅನುಮೋಳ್ ದಾಳಿಯಲ್ಲಿ ಮತ್ತು ಜೀಜಿ `ಲಿಬ್ರೊ~ ಪಾತ್ರದಲ್ಲಿ ಉತ್ತಮ ನಿರ್ವಹಣೆ ತೋರಿದರು. ಸೇಂಟ್ ಜೋಸೆಫ್ಸ್ ಕಾಲೇಜು ಪರ ಲಿಟ್ಲ್‌ಫ್ಲವರ್ ಶೈನಿ, ಜೀನಾ ಮ್ಯಾಥ್ಯೂ ಮತ್ತು `ಸೆಟ್ಟರ್~ ರಿಚು ಮೇರಿ ಸೋಲಿನಲ್ಲೂ ಗಮನ ಸೆಳೆದರು.ಶುಕ್ರವಾರ ತಲಶೇರಿಯ ತಂಡ, ಮಹಿಳೆಯರ ವಿಭಾಗದ ತನ್ನ ಮೊದಲ ಪಂದ್ಯದಲ್ಲಿ ಮೈಸೂರಿನ ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು 21-25, 25-23, 25-17, 25-23ರಲ್ಲಿ 3-1 ಸೆಟ್‌ಗಳಿಂದ ಪರಾಭವಗೊಳಿಸಿತ್ತು.ಶುಕ್ರವಾರ ರಾತ್ರಿ, ಪುರುಷರ ವಿಭಾಗದ `ಎ~ ಗುಂಪಿನ ಪಂದ್ಯದಲ್ಲಿ ಚೆನ್ನೈನ ಕಸ್ಟಮ್ಸ ತಂಡ 25-23, 12-25, 25-18, 25-23 ರಲ್ಲಿ ತಿರುವನಂತಪುರದ ಕೇರಳ ವಿದ್ಯುಚ್ಛಕ್ತಿ ಮಂಡಳಿ (ಕೆಎಸ್‌ಇಬಿ) ತಂಡವನ್ನು ಸೋಲಿಸಿತ್ತು. ಒಂದೂವರೆ ಗಂಟೆಯ ಈ ಪಂದ್ಯದ ಕೊನೆಯ ಸೆಟ್ಟಂತೂ ಬಹುಭಾಗ ಸಮಸಮನಾಗಿಯೇ ಸಾಗಿತು. ಆದರೆ ಜಾನ್ ಕ್ರಿಸ್ಟೋಫರ್ ನಿರ್ಣಾಯಕ ಸಂದರ್ಭದಲ್ಲಿ ಪ್ರಬಲ ಸ್ಮ್ಯಾಶ್‌ಗಳೊಂದಿಗೆ ತಂಡದ ನೆರವಿಗೆ ಬಂದರು. ಕ್ರಿಸ್ಟೋಫರ್ ಅವರಿಗೆ ಶ್ರೀಕಾಂತ್ ಸೂಕ್ತ ಬೆಂಬಲ ನೀಡಿದರು. ಕೆಎಸ್‌ಇಬಿ ಪರ ಮನು ಜೋಸೆಫ್ ಕೂಡ ಉತ್ತಮ ನಿರ್ವಹಣೆ ತೋರಿದರು. ಅವರಿಗೆ ಅಜೇಶ್ ಅವರಿಂದಷ್ಟೇ ಸ್ವಲ್ಪ ಬೆಂಬಲ ದೊರೆಯಿತು.ಶುಕ್ರವಾರ ಮಧ್ಯರಾತ್ರಿ ನಂತರ ಆರಂಭವಾಗಿ ಶನಿವಾರ ಬೆಳಗಿನ ಜಾವ ಎರಡೂವರೆ ಗಂಟೆಯವರೆಗೆ ನಡೆದ `ಬಿ~ ಗುಂಪಿನ ರೋಚಕ ಪಂದ್ಯದಲ್ಲಿ ಕೊಚ್ಚಿಯ ಭಾರತೀಯ ನೌಕಾಪಡೆ ತಂಡ 25-21, 22-25, 17-25, 25-21, 18-16 ರಲ್ಲಿ ಬಿಪಿಸಿಎಲ್ ತಂಡವನ್ನು ಸೋಲಿಸಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry