ಭಾನುವಾರ, ಜೂನ್ 13, 2021
20 °C

ಹೋಳಿ ಘರ್ಷಣೆ: ನಿಷೇಧಾಜ್ಞೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಪಟ್ಟಣದಲ್ಲಿ ಹೋಳಿ ಹಬ್ಬದ ಅಂಗವಾಗಿ ಶುಕ್ರವಾರ ಸಾಗುತ್ತಿದ್ದ ಮೆರವಣಿಗೆಯ ಮೇಲೆ ಪ್ರಾರ್ಥನಾ ಮಂದಿರದಿಂದ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದರಿಂದ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿ ಘರ್ಷಣೆ ನಡೆದಿದ್ದು ಮೂರು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಉದ್ರಿಕ್ತ ಗುಂಪುಗಳನ್ನು ಚದುರಿಸಲು ಹಾಗೂ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಘಟನೆಯಲ್ಲಿ ಮೂವರು ಪೊಲೀಸರು ಸೇರಿದಂತೆ ಮೆರವಣಿಗೆ ಮತ್ತು ಪ್ರಾರ್ಥನಾ ಮಂದಿರದಲ್ಲಿದ್ದ ಹಲವು ಯುವಕರಿಗೆ ಗಾಯಗಳಾಗಿವೆ.ಘಟನೆ ಹಿನ್ನೆಲೆ:  ಹೋಳಿ ಹಬ್ಬದ ಅಂಗವಾಗಿ ಸಾರ್ವಜನಿಕ ಹೋಳಿ ಆಚರಣೆ ಸಮಿತಿ ಮತ್ತಿತರ ಸ್ಥಳೀಯ ಯುವಕ ಸಂಘದ ಪದಾಧಿಕಾರಿಗಳು ಡಿ.ಜೆ ಸಂಗೀತ ಮೇಳದೊಂದಿಗೆ ಸಿಬಿಎಸ್ ವೃತ್ತದಿಂದ ಮಕ್ಕಳ ಉದ್ಯಾನವನವರೆಗೆ ಪ್ರತಿವರ್ಷದಂತೆ ಮೆರವಣಿಗೆ ಹಮ್ಮಿಕೊಂಡಿದ್ದರು.  ಇದಕ್ಕೂ ಪೂರ್ವದಲ್ಲಿ ಕೆಲ ಯುವಕರು ಸಿಬಿಎಸ್ ವೃತ್ತದ ಸ್ತಂಭವೊಂದಕ್ಕೆ ಕಟ್ಟಿದ್ದ ಮತ್ತೊಂದು ಕೋಮಿಗೆ ಸೇರಿದ ಧಾರ್ಮಿಕ ಧ್ವಜವನ್ನು ಕೆಳಗಿಳಿಸಿ ತಮ್ಮ ಧ್ವಜವನ್ನು ಕಟ್ಟಲು ಯತ್ನಿಸಿದರು. ಇದು  ಕಲಹಕ್ಕೆ ಕಾರಣವಾಗಿತ್ತು ಎಂದು ತಿಳಿದು ಬಂದಿದೆ.  ಈ ಸಂದರ್ಭದಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.ಬಳಿಕ ಹೋಳಿ ಆಚರಣ ಸಮಿತಿಯ ಮೆರವಣಿಗೆ ಹೋಗಲು ಅವಕಾಶ ಮಾಡಿಕೊಟ್ಟರು ಎನ್ನಲಾಗಿದೆ.

ಚಪ್ಪಲಿ, ಕಲ್ಲು ತೂರಾಟ: ಮೆರವಣಿಗೆ ಗಾಂಧಿ ವೃತ್ತವನ್ನು ಹಾಯ್ದು ಪ್ರಾರ್ಥನಾ ಮಂದಿರದ ಮುಂದೆ ಬಂದಾಗ ಮೆರವಣಿಗೆಯಲ್ಲಿನ ಯುವಕರು ಜೋರಾಗಿ ಸಂಗೀತ ಇಟ್ಟು ಕುಣಿಯಲು ಆರಂಭಿಸಿದರು. ಇದು ಮತ್ತೊಂದು ಕೋಮಿನ ಯುವಕರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.ಆಗ ತಾನೇ ಶುಕ್ರವಾರದ ಪ್ರಾರ್ಥನೆ ಮಗಿದಿದ್ದರಿಂದ ಹೆಚ್ಚಿನ ಜನ ಸೇರಿದ್ದರು. ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಪ್ರಾರ್ಥನಾ ಮಂದಿರದ ಒಳಗಿನಿಂದ ಮೆರವಣಿಗೆಯ ಮೇಲೆ  ಚಪ್ಪಲಿ, ಕಲ್ಲು ತೂರಿದರು.

ಇದರಿಂದ ಉದ್ರಿಕ್ತರಾದ ಯುವಕರು ಮೆರವಣಿಗೆಯನ್ನು ಸ್ಥಗಿತಗೊಳಿಸಿ ಸ್ಥಳದಲ್ಲಿ ಧರಣಿ ಕುಳಿತರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಘರ್ಷಣೆಗೆ ಸಂಬಂಧಿಸಿದಂತೆ ಉಭಯ ಕೋಮಿನ ನೂರಕ್ಕೂ ಹೆಚ್ಚು ಜನರ ಮೇಲೆ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.