ಸೋಮವಾರ, ಮೇ 23, 2022
30 °C

ಹೋಸ್ನಿ ಅಧಿಕಾರ ಮೊಟಕು ಪ್ರಕ್ರಿಯೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈರೊ (ಪಿಟಿಐ): ಈಜಿಪ್ಟಿನ ಉಪಾಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡ ಒಮರ್ ಸುಲೇಮಾನ್ ಹಾಗೂ ಉನ್ನತ ಸೇನಾಧಿಕಾರಿಗಳು ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ ಅಧಿಕಾರ ಮೊಟಕುಗೊಳಿಸುವ ಕುರಿತು ಶನಿವಾರ ಚರ್ಚೆ ಆರಂಭಿಸಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿದೆ. ಮತ್ತೊಂದೆಡೆ ಮುಬಾರಕ್ ಅಧಿಕಾರ ಹಸ್ತಾಂತರಿಸಬೇಕೆಂದು ಜಾಗತಿಕ ಒತ್ತಡ ಹೆಚ್ಚಿದ್ದು ಈಜಿಪ್ಟ್‌ನಲ್ಲಿ ಅನಿಶ್ಚಿತತೆ ಮತ್ತು ಪ್ರಕ್ಷುಬ್ಧತೆ ಮುಂದುವರಿದಿದೆ.

ಈ ಮಧ್ಯೆ ಮುಬಾರಕ್ ಪದಚ್ಯುತಿಗೆ ಒತ್ತಾಯಿಸಿ ಶುಕ್ರವಾರ ಬೃಹತ್ ರ್ಯಾಲಿ ನಡೆಸಿದ ನಂತರವೂ ಪ್ರತಿಭಟನಾಕಾರರು ಕೇಂದ್ರ ಸ್ಥಳವಾದ ತೆಹ್ರೀರ್ ಚೌಕದಿಂದ ಕದಲಲು ನಿರಾಕರಿಸಿದ್ದಾರೆ. ಕರ್ಫ್ಯೂ ಉಲ್ಲಂಘಿಸಿ ಚೌಕದಲ್ಲೇ ಪ್ರತಿಭಟನಾಕಾರರು ಉಳಿದಿರುವುದರಿಂದ 12ನೇ ದಿನವಾದ ಶನಿವಾರವೂ ಪ್ರತಿಭಟನೆ ಮುಂದುವರಿದಿದೆ. ಅಲೆಕ್ಸಾಂಡ್ರಿಯಾ, ಮಹಲ್ಲಾ ಮತ್ತು ಗಿಜಾಗಳಲ್ಲೂ ಮುಬಾರಕ್ ಪದಚ್ಯುತಿಗಾಗಿ ಭಾರಿ ಪ್ರತಿಭಟನೆಗಳು ನಡೆದಿವೆ.

ಅಮೆರಿಕ, ಯೂರೋಪ್ ಒಕ್ಕೂಟ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳು ಮುಬಾರಕ್ ಅಧಿಕಾರ ತ್ಯಜಿಸಬೇಕೆಂದು ಪರೋಕ್ಷವಾಗಿ ಸೂಚಿಸಿವೆ. ಆದರೆ, ಮುಬಾರಕ್ ಅವರಿಗೆ ಅಧ್ಯಕ್ಷ ಗಾದಿಯಿಂದ ಕೆಳಗಿಳಿಯುವ ಅಥವಾ ಉಪಾಧ್ಯಕ್ಷ ಸುಲೇಮಾನ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಇರಾದೆ ಇಲ್ಲ ಎಂದು ಹೊಸ ಪ್ರಧಾನಿ ಅಹಮ್ಮದ್ ಶಫೀಕ್ ಸ್ಪಷ್ಟಪಡಿಸಿದ್ದಾರೆ. ತಮ್ಮಿಂದಲೇ ನೇಮಕಗೊಂಡ ಸುಲೇಮಾನ್ ತಮ್ಮ ಅಧಿಕಾರವನ್ನೇ ಮೊಟಕುಗೊಳಿಸುವ ಪ್ರಕ್ರಿಯೆ ಚಾಲನೆ ನೀಡಿದ್ದಾರೆಂಬ ಬಗ್ಗೆ ಮುಬಾರಕ್ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು, ‘ಈಜಿಪ್ಟಿನ ಜನತೆಯ ಧ್ವನಿಯನ್ನು ಮುಬಾರಕ್ ಕೇಳಬೇಕು’ ಎನ್ನುವ ಮೂಲಕ ಅಧ್ಯಕ್ಷ ಪಟ್ಟದಿಂದ ಕೆಳಕ್ಕಿಳಿಯುವುದು ಸೂಕ್ತ ಎಂದಿದ್ದಾರೆ. 

ಈಜಿಪ್ಟ್‌ನಲ್ಲಿ ಕ್ರಮಬದ್ಧ ಸ್ಥಿತ್ಯಂತರ ಪ್ರಕ್ರಿಯೆ ನಡೆಯಬೇಕು ಎಂದಿರುವ ಅವರು, ಮುಬಾರಕ್ ಸೂಕ್ತ ನಿರ್ಧಾರ ಕೈಗೊಳ್ಳಲು ಸಮರ್ಥರು ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.