ಹ್ಞಾ ಕೃಷ್ಣಾ... ಹ್ಞಾ ಲಕ್ಷ್ಮಣಾ...

7

ಹ್ಞಾ ಕೃಷ್ಣಾ... ಹ್ಞಾ ಲಕ್ಷ್ಮಣಾ...

Published:
Updated:

ವಾರದ ವಿನೋದ

ರಾಮಾಯಣದ ಆ ರಾಮ

ಮಾಯಾಜಿಂಕೆಯ ಬೆನ್ನತ್ತಿ

ಸೀತೇನ ಕಳ್ಕೊಂಡ

ರಾಮನ ಪಕ್ಷದ ಈ ಲಕ್ಷ್ಮಣ

ಮೊಬೈಲ್ ಮೋಹಿನಿಯ ಬೆನ್ನತ್ತಿ

ಅಧಿಕಾರ ಕಳ್ಕೊಂಡ!

`ಹ್ಞಾ ಕೃಷ್ಣಾ , ಹ್ಞಾ ಲಕ್ಷ್ಮಣಾ .....~ ಎಂದ ಪರಮೇಶಿ. `ಯಾಕೋ ಪರಮೇಶಿ, ಒಳ್ಳೆ ರಾಮಾಯಣದ ಮಾಯಾಜಿಂಕೆ ಮಾರೀಚನ ಥರ ಅರಚಿಕೊಳ್ತಾ ಇದೀಯಲ್ಲ ಏನ್ಕತೆ? ~ ಎಂದ ಗುಡ್ಡೆ ನಗುತ್ತ.`ಏನಿಲ್ಲ ಮಾರಾಯ, ರಾಮನ ಪಕ್ಷದಲ್ಲಿ `ಕೃಷ್ಣಲೀಲೆ~  ನಡೀತಾ ಐತಲ್ಲ, ಅದ್ಕೇ ಹಾಗಂದೆ. ರಾಮಾಯಣದ  ಆ ರಾಮ ಮರ್ಯಾದಾ ಪುರುಷೋತ್ತಮ, ಬಿಜೆಪಿಯ ಈ ಲಕ್ಷ್ಮಣ ಮೊಬೈಲ್ ಸರಸೋತ್ತಮ... ಸರೀನಾ?~ ಪರಮೇಶಿ ಪ್ರಾಸಬದ್ಧವಾಗಿ ಹೇಳಿದಾಗ `ಪರವಾಗಿಲ್ಲ ಕಣಲೆ, ನೀನೂ ಕವಿತೆ ಬರೀಬಹುದು~ ಎಂದು ಗುಡ್ಡೆ ಬೆನ್ನು ಚಪ್ಪರಿಸಿದ.ತಕ್ಷಣ ತೆಪರೇಸಿ `ಕರ್ಣ ಕೊಟ್ಟು ಕೆಟ್ಟ, ದುರ್ಯೋಧನ ಕೊಡದೇ ಕೆಟ್ಟ, ಶ್ರಿರಾಮ ಮಾಯಾಜಿಂಕೆ ಹಿಂದೆ ಓಡಿ ಕೆಟ್ಟ, ಬಿಜೆಪಿಯ ಈ ಲಕ್ಷ್ಮಣ ಮೊಬೈಲ್ ಮಾಯಾಂಗನೆಯ ನೋಡಿ ಕೆಟ್ಟ... ಇದು ಹೆಂಗೆ?~ ಎಂದು ಹುಬ್ಬು ಕುಣಿಸಿದ.

`ಅಲೆ ಇವ್ನ, ಇವತ್ತೇನು ಎಲ್ಲರೂ ಒಳ್ಳೆ ಕವಿತೆ ಮೂಡ್‌ನಲ್ಲಿದ್ದೀರ? ಬಿಜೆಪಿ ಬ್ಲೂಬಾಯ್ಸ ಸ್ಫೂರ್ತಿನಾ?~ ಗುಡ್ಡೆಗೆ ಅಚ್ಚರಿ.`ಬ್ಲೂ ಬಾಯ್ಸ ಅಂತ ನಮ್ಮ ಕ್ರಿಕೆಟ್ ಆಟಗಾರರನ್ನೂ ಕರೀತಾರೆ ಕಣಲೆ, ಸ್ವಲ್ಪ ಹುಷಾರಾಗಿ ಮಾತಾಡು...~ ದುಬ್ಬೀರ ಆಕ್ಷೇಪಿಸಿದ.

`ಅವರು ಕ್ರಿಕೆಟ್ ಬ್ಲೂಬಾಯ್ಸ, ಇವರು ಬಿಜೆಪಿ ಬ್ಲೂ ಬಾಯ್ಸ. ಕೇಸರಿ ಬಣ್ಣಕ್ಕೆ ನೀಲಿ ರಂಗು!~ ಎಂದ ಗುಡ್ಡೆ.`ನಮ್ಮ ಮಹಾಭಾರತದಲ್ಲೂ ಒಬ್ಬ ಬ್ಲೂಬಾಯ್ ಇದಾನೆ ಗೊತ್ತಾ?~ ತೆಪರೇಸಿ ಪ್ರಶ್ನಿಸಿದ.

`ಯಾರಪ್ಪ ಅದು?~

`ಇನ್ಯಾರು? ನೀಲಮೇಘಶಾಮ... ನಮ್ಮ ಕೃಷ್ಣ ಪರಮಾತ್ಮ! ಅವನ ಬಣ್ಣಾನೂ ನೀಲಿ, ಆಡೋದು ನೀಲಿ ಆಟಾನೇ...~ ತೆಪರೇಸಿ ಹೇಳಿದಾಗ `ಹ್ಞೂ ಕಣಲೆ, ಹೆಸರಿನ ಮಹಿಮೆನೋ ಏನೋ, ಮೊನ್ನೆ ವಿಧಾನಸಭೇಲಿ ಆ ನೀಲಿಚಿತ್ರ ಇದ್ದದ್ದು ಕೃಷ್ಣ ಸಾಹೇಬರ ಮೊಬೈಲ್‌ನಲ್ಲೇ ಅಂತೆ. ಪಾಪ ಅದನ್ನ ಲಕ್ಷ್ಮಣ ನೋಡಿ ಕೆಟ್ಟರು, ಪಾಟೀಲರು ಬಗ್ಗಿ ನೋಡಿ ಕೆಟ್ಟರು...~ ದುಬ್ಬೀರ ವಿಶ್ಲೇಷಿಸಿದ.`ಅಂದಮೇಲೆ ಪಾಟೀಲರನ್ನು `ಬಗ್ಗಿ ನೋಡೋ ಬ್ರದರ್~ ಅಂತ ಕರೀಬಹುದಾ?~ ಗುಡ್ಡೆಗೆ ನಗು.

`ಪಾಪ ಅವರ ಕಷ್ಟ ಅವರಿಗೆ, ನಿಂಗೆ ತಮಾಷೆ. ಸಿಪ್ಪೆ ತಿಂದು ಸಿಗಾಕ್ಕೊಂಡಂಗೆ ಈಗ ಪಾಟೀಲರ ಸ್ಥಿತಿ...~ ಮಿಸ್ಸಮ್ಮ ಕನಿಕರ ವ್ಯಕ್ತಪಡಿಸಿದಳು.ಅಷ್ಟರಲ್ಲಿ ಕೊಟ್ರೇಶಿ `ಪ್ಯಾರ್‌ಗೇ ಆಗ್ಬುಟ್ಟೇತೆ ನಮ್ದುಕೆ...~ ಎಂದು ಹಾಡುತ್ತ ಹರಟೆಕಟ್ಟೆಗೆ ಬಂದ. ಜೊತೆಯಲ್ಲೊಬ್ಬ ಗೆಳೆಯ ಬೇರೆ.`ಏನಲೆ ಕೊಟ್ರ, ಆಗ್ಲೆ ನಿಮ್ದುಕೂ ಪ್ಯಾರ್ ಆಗ್‌ಬುಟ್ಟೇತಾ? ಹುಡುಗಿ ಯಾರು? ಈ ಹೊಸ ಫ್ರೆಂಡ್ ಯಾರು?~ ದುಬ್ಬೀರ ವಿಚಾರಿಸಿದ.

`ಇವನು ಚಾಂದ್ ಅಂತ, ನನ್ನ ಹಳೇ ಫ್ರೆಂಡ್. ಗಾನಾಬಜಾನ, ಜೋಕ್ಸ್ ಎಲ್ಲ ಹೇಳ್ತಾನೆ. ಹರಟೆಕಟ್ಟೆ ಮೆಂಬರ್ ಆಗ್ತಾನಂತೆ...~ ಕೊಟ್ರೇಶಿ ಪರಿಚಯಿಸಿದ.`ಹೌದಾ? ಹಾಗಾದ್ರೆ `ಪ್ಯಾರ್‌ಗೆ ಆಗ್ಬುಟ್ಟೇತೆ~ ಸ್ಟೈಲಲ್ಲಿ ಸದಾನಂದಗೌಡ್ರ ಮೇಲೊಂದು ಹಾಡು ಹೇಳಿ ಚಾಂದ್ ನೋಡಾಣ~ ಎಂದ ಗುಡ್ಡೆ, ಪರೀಕ್ಷಿಸುವವನ ಹಾಗೆ.

`ಹೇಳಿ ಅಲ್ಲ ದೋಸ್ತ್, ಬೋಲ್‌ರೇ ಅನ್ಬೇಕು. ಈಗ ಸದಾನಂದಗೋಡ ಅವರ್‌ದು ಮುಖ್ಯಮಂತ್ರಿಗೆ ಆಗಿ ಆರ್ ತಿಂಗ್ಳು ಆಯ್ತಲ್ಲಾ? ಅದರ ಮೇಲೆ ಹೇಳ್ತೀನಿ ಸುನೋ...~ ಎಂದ ಚಾಂದ್ ಶುರು ಮಾಡಿದಆರ್ ತಿಂಗ್ಳು ಆಗ್ಬುಟ್ಟೇತೆ ನಮ್ದುಕೆ

ಭಾರಿ ಖುಷಿಗೇ ಆಗ್ಬುಟ್ಟೇತೆ...

ಖುರ್ಚಿ ಚೋಡ್ನಾ ಗೀಡ್ನ ಇಲ್ಲ ಇನ್ನು ನಮ್ದುಕೆ

ವಾಪಾಸ್ ದೇನಾ ಪ್ರಶ್ನೆ ಇಲ್ಲ ನಮ್ದುಕೆ

ಪ್ಯಾರ್‌ಗೇ ಆಗ್ಬುಟ್ಟೇತೆ ಖುರ್ಚಿಗೆ ನಮ್ದುಕೆ`ಹೆಂಗೆ ಗುಡ್ಡೆ ಭಾಯ್, ಅಚ್ಛಾ ಹೈನಾ?~ ಎಂದ ಚಾಂದ್. `ವಾವ್ಹಾ ವಾವ್ಹಾ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಗುಡ್ಡೆ `ಹಂಗೇ ಯಡ್ಯೂರಪ್ಪ ಮೇಲೂ ಒಂದು ಹೇಳು  ದೋಸ್ತ್~ ಎಂದ. `ಸುನೋ~ ಎಂದ ಚಾಂದ್.ಖುರ್ಚಿಗೆ ಹೋಗ್ಬುಟ್ಟೇತೆ ನಮ್ದುಕೆ

ಭಾರಿ ದೋಖಾಗೆ ಆಗ್ಬುಟ್ಟೇತೆ...

ನನ್ ಖುರ್ಚಿ ನಂಗೆ ಕೊಡಿ ಅಂದಿದ್ಕೆ

ತೆಪ್ಪಗಿರಿ ಅಂತಾರಲ್ಲ ನಮ್ದುಕೆ?

ಹೊಸ ಪಕ್ಷಾಗೇ ಕಟ್‌ಬುಡ್ತೀನಿ ನಮ್ದುಕೆ

ಈ ಸರ‌್ಕಾರ್‌ಗೇ ಉರುಳಿಸ್‌ಬುಡ್ತೀನಿ ನಿಮ್ದುಕೆ...`ಚೆನ್ನಾಗಿ ಹೇಳ್ತಿ ಚಾಂದು, ಇನ್ಮೇಲೆ ಹರಟೆಕಟ್ಟೆ ಮಿಸ್ ಮಾಡಂಗಿಲ್ಲ ಆಯ್ತೊ?~ ಎಂದು ಗುಡ್ಡೆ ತಾಕೀತು ಮಾಡಿದ.`ಅದ್ಸರಿ ನಮ್ಮ ಬ್ಲೂಬಾಯ್ಸ ಕತೆ ಅಲ್ಲಿಗೇ ನಿಲ್ಲಿಸಿಬಿಟ್ರಲ್ಲೋ... ಮುಂದೆ?~ ಎಂದ ದುಬ್ಬೀರ.

`ಮುಂದಿನ್ನೇನು? ಬಿಜೆಪಿಯ `ಬ್ಲೂ~ ಕಿರೀಟಕ್ಕೆ ಇನ್ನೊಂದು ಗರಿ ಬಂದಂಗಾತು. ಮೈಸೂರು ಮಲ್ಲಿಗೆ, ಮಡಿಕೇರಿ ಸಂಪಿಗೆ ಅಂತ ಯಾವ್ಯಾವುದೋ ಸಿ.ಡಿ. ಬರ‌್ತಾವಲ್ಲ, ಆತರ `ಬಿಜೆಪಿ ಬ್ಲೂ ಬಾಯ್ಸ~ ಅಂತ ಇವರದೂ ಒಂದು ಸಿ.ಡಿ. ಬರಬಹುದು ಅಷ್ಟೆ. ಮೊದಲೆಲ್ಲ ಬಿಹಾರ ಅಂದ್ರೆ ಜನ ನಗ್ತಿದ್ರು. ಈಗ ಬಿಹಾರದ ಜನಾನೇ ಕರ್ನಾಟಕ ನೋಡಿ ನಗ್ತಾ ಇದಾರಂತೆ... ಎಂಥ ಸ್ಥಿತಿ ಬಂತು ನೋಡು~ ಎಂದ ಗುಡ್ಡೆ.`ಹೋಗ್ಲಿ ಬಿಡೋ ಮಾರಾಯ, ಈಗ ರೇವ್ ಪಾರ್ಟಿ ನಡೆದ ಐಲ್ಯಾಂಡ್ನ ಕಾಂಗ್ರೆಸ್‌ನೋರು ಹೋಮ-ಹವನ ಮಾಡಿ ಶುದ್ಧ ಮಾಡಿದಾರಂತೆ. ಅದೇ ತರ ನೀಲಿಚಿತ್ರ ನೋಡಿದ ವಿಧಾನಸಭೆನೂ ಶುದ್ಧ ಮಾಡಿದ್ರಾತು, ಏನಂತಿ?~ ತೆಪರೇಸಿ ಸಲಹೆ ನೀಡಿದ.

`ಏನಾದ್ರು ಮಾಡ್ಕಳಿ, ಆದ್ರೆ ನೀಲಿಚಿತ್ರಗಳ ಬಗ್ಗೆ ನಿಮಗೆ ಒಂದು ಜೋಕ್ ಗೊತ್ತಾ?~ ಎಂದ ಗುಡ್ಡೆ.`ಏನದು?~ ಮಿಸ್ಸಮ್ಮಗೆ ಕುತೂಹಲ.

`ಒಬ್ಬ ಸಿ.ಡಿ. ಮಾರೋ ಅಂಗಡಿಗೆ ಹೋಗಿ ಸಿನಿಮಾ ನಟಿಯರು, ರಾಜಕಾರಣಿಗಳ ಬ್ಲೂ ಫಿಲಂ ಅದಾವಾ? ಅಂತ ಕೇಳಿದ್ನಂತೆ. ಅದಕ್ಕೆ ಅಂಗಡಿಯವನು `ರೀ ಸ್ವಾಮಿ, ಬ್ಲೂ ಫಿಲಂ ಅಂತ ಕೇಳಬಾರದು, `ದೇವರ ಸಿನಿಮಾ~ ಅಂತ ಕೇಳಬೇಕು. ಸಿನಿಮಾ ನಟಿಯರು, ರಾಜಕಾರಣಿಗಳ ಸಿ.ಡಿ. ಬೇಕಾದ್ರೆ ಅವಕ್ಕೆ ಒಂದೊಂದು ಕೋಡ್ ಇಟ್ಟಿರ‌್ತೀವಿ. ಹಾಲು, ಆಲ್ಕೋಹಾಲು, ರಂ... ಅಂತೆಲ್ಲ ಇರುತ್ತೆ.ಹಾಲು ಅಂದ್ರೆ ಹಾಲಪ್ಪ, ಆಲ್ಕೋಹಾಲು ಅಂದ್ರೆ ರೇಣುಕಾಚಾರ‌್ಯ, ರಂ ಅಂದ್ರೆ ರಂಜಿತಾ... ಗೊತ್ತಾತ?~ ಅಂದನಂತೆ.ಅದಕ್ಕೆ ಆ ಗಿರಾಕಿ, `ಗೊತ್ತಾತು ಬಿಡಿಸಾ, ಅರ್ಜೆಂಟ್ ಎರಡು ಪ್ಯಾಕೆಟ್ ಹಾಲು, ಒಂದು ಕ್ವಾಟ್ರು ರಂ ಕೊಡಿ~ ಅಂದನಂತೆ! ಗುಡ್ಡೆ ಜೋಕಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry