ಮಂಗಳವಾರ, ಏಪ್ರಿಲ್ 13, 2021
30 °C

ಹ್ಯಾಟಿಪ್ರಕರಣ:ಆರೋಪಿಗಳ ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ತಾಲ್ಲೂಕಿನ ಹ್ಯಾಟಿ ಗ್ರಾಮದಲ್ಲಿ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ, ಇಡೀ ಘಟನೆ ಸಂಶಯದಿಂದ ಕೂಡಿದೆ. ಈ ಪ್ರಕರಣ ಕುರಿತಂತೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಪಿಎಂ ಕಾರ್ಯಕರ್ತರು ಒತ್ತಾಯಿಸಿದ್ದಾರೆ.ನಗರದ ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು, ಯುವತಿಯ ಪ್ರಣಯಚೇಷ್ಟೆಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ಕೆಲ ಯುವಕರು ಅವಳನ್ನು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಲಾಗಿದೆ  ಎನ್ನಲಾಗುತ್ತಿದೆ. ಹೀಗಾಗಿ ಘಟನೆ ಕುರಿತಂತೆ ತನಿಖೆ ನಡೆಸಿದಾಗ ಸತ್ಯ ಹೊರಬೀಳಲಿದೆ ಎಂದು ಹೇಳಿದರು.ಮಹಿಳೆ ವಿರುದ್ಧ ಹಿಂಸಾಚಾರ ತಡೆಗಾಗಿ ನ. 25ರಿಂದ ಡಿ. 10ರ ವರೆಗೆ ವಿಶ್ವದಾದ್ಯಂತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿಯೇ ತಾಲ್ಲೂಕಿನಲ್ಲಿ ಹನುಮವ್ವ ಆತ್ಮಹತ್ಯೆಗೆ ಶರಣಾಗಿರುವುದು ವಿಪರ್ಯಾಸ ಎಂದು ಪಕ್ಷದ ತಾಲ್ಲೂಕು ಕಾರ್ಯದರ್ಶಿ ಸುಂಕಪ್ಪ ಗದಗ ವಿಷಾದಿಸಿದರು.ಗ್ರಾಮದಲ್ಲಿ ನಡೆದಿರುವ ಘಟನೆ ಹರಿಯಾಣ ರಾಜ್ಯದ ಹಿಸ್ಸಾರ್ ಜಿಲ್ಲೆಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣವನ್ನು ಹೋಲುತ್ತದೆ. ಇಂತಹ ಕೃತ್ಯಗಳು ಭವಿಷ್ಯದಲ್ಲಿ ಸಂಭವಿಸದಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದರು. ಮುಖಂಡರಾದ ಹುಲುಗಪ್ಪ ಗೋಕಾವಿ, ಅಮರೇಶ ಕಡಗದ, ಸೈಯದ ಸುಭಾನ್, ಫಕೀರಮ್ಮ, ಬಾಳಪ್ಪ ಹುಲಿಹೈದರ್ ನೇತೃತ್ವ ವಹಿಸಿದ್ದರು.ಆಗ್ರಹ: ಹ್ಯಾಟಿ ಗ್ರಾಮದಲ್ಲಿ ಹನುಮವ್ವ ಎಂಬ ಯುವತಿಯ ಸಂಶಯಾಸ್ಪದ ಆತ್ಮಹತ್ಯೆ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನಾಗರಿಕ ಹಕ್ಕುಗಳಿಗಾಗಿ ಜನರ ಹೋರಾಟ (ಪಿಯುಸಿಎಲ್) ಸಂಘಟನೆಯ ಜಿಲ್ಲಾ ಘಟಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದೆ.ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಹಾಂತೇಶ ಕೊತಬಾಳ, ಶಿವಾನಂದ ಹೊದ್ಲೂರು ಹಾಗೂ ಇತರ ಪದಾಧಿಕಾರಿಗಳು ಈ ಸಂಬಂಧ ಮನವಿಯನ್ನು ಸಲ್ಲಿಸಿ, ಘಟನೆ ಕುರಿತಂತೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷಿಸುವ ಮೂಲಕ ಆತ್ಮಹತ್ಯೆ ಮಾಡಿಕೊಂಡ ಯುವತಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.