ಗುರುವಾರ , ನವೆಂಬರ್ 21, 2019
21 °C
ಕ್ರಿಕೆಟ್: ರಾಯಲ್ ಚಾಲೆಂಜರ್ಸ್-ಸೂಪರ್ ಕಿಂಗ್ಸ್ ನಡುವೆ ಇಂದು ಹಣಾಹಣಿ

ಹ್ಯಾಟ್ರಿಕ್ ಗೆಲುವಿನ ಮೇಲೆ ಆರ್‌ಸಿಬಿ ಕಣ್ಣು

Published:
Updated:

ಚೆನ್ನೈ: ಸತತ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ, ಬಲಿಷ್ಠ ಆಟಗಾರರನ್ನು ಒಳಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್‌ಸಿಬಿ ಗೆಲುವಿನ ಓಟಕ್ಕೆ ತಡೆಯೊಡ್ಡುವ ಲೆಕ್ಕಾಚಾರ ಹೊಂದಿದೆ.ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸೂಪರ್ ಕಿಂಗ್ಸ್ ಸಾರಥ್ಯ ವಹಿಸಿಕೊಂಡಿರುವ ಮಹೇಂದ್ರ ಸಿಂಗ್ ದೋನಿ ನಡುವಿನ ಪ್ರತಿಷ್ಠೆಯ ಪಂದ್ಯಕ್ಕೆ ಎಂ. ಎ. ಚಿದಂಬರಂ ಕ್ರೀಡಾಂಗಣ ವೇದಿಕೆಯಾಗಲಿದೆ. ಶನಿವಾರ ನಡೆಯಲಿರುವ ಈ ಪಂದ್ಯದಲ್ಲೂ ವಿಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವ ಗುರಿ ಆರ್‌ಸಿಬಿ ತಂಡದ್ದಾಗಿದೆ.ವಿಶ್ವಾಸದ ಗಣಿ: ಬೆಂಗಳೂರಿನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಣಿಸಿತ್ತು. ಅದರ ಹಿಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಗೆಲುವು ಸಾಧಿಸಿತ್ತು. ನಾಲ್ಕು ಪಂದ್ಯಗಳಿಂದ ಆರು ಅಂಕಗಳನ್ನು ಕಲೆ ಹಾಕಿ ಅಗ್ರಸ್ಥಾನದಲ್ಲಿದೆ. ಇದು ಆರ್‌ಸಿಬಿ ವಿಶ್ವಾಸವನ್ನು ಇಮ್ಮಡಿಸಿದೆ.ದೈತ್ಯ ಬ್ಯಾಟಿಂಗ್ ಶಕ್ತಿ ಕ್ರಿಸ್ ಗೇಲ್ (ನಾಲ್ಕು ಪಂದ್ಯಗಳಿಂದ 191) ಹಾಗೂ ಕೊಹ್ಲಿ (ಒಟ್ಟು 198) ಆರ್‌ಸಿಬಿ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು. ಈ ಇಬ್ಬರನ್ನು ನಿಯಂತ್ರಿಸುವುದು ಸೂಪರ್ ಕಿಂಗ್ಸ್ ಮುಂದಿರುವ ಬಹುದೊಡ್ಡ ಸವಾಲು.ಮಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಆರ್ಭಟಿಸಿದ್ದ ಗೇಲ್, ನೈಟ್ ರೈಡರ್ಸ್ ವಿರುದ್ದವೂ ಅಜೇಯ 85 ರನ್ ಗಳಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡೆಸಿದ್ದಾರೆ. ಚಿದಂಬರಂ ಕ್ರೀಡಾಂಗಣದಲ್ಲೂ ಕೊಹ್ಲಿ ಹಾಗೂ ಗೇಲ್ ಗರ್ಜಿಸಿದರೆ ಅವರನ್ನು ಕಟ್ಟಿ ಹಾಕುವುದು ಸೂಪರ್ ಕಿಂಗ್ಸ್‌ಗೆ ಸುಲಭದ ಮಾತಲ್ಲ. ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಇವರಿಬ್ಬರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಎ.ಬಿ. ಡಿವಿಲಿಯರ್ಸ್ ಹಾಗೂ ಮಯಂಕ್ ಅಗರ್‌ವಾಲ್ ಕೂಡ ಆರ್‌ಸಿಬಿ ತಂಡದ ಬ್ಯಾಟಿಂಗ್ ಬಲ ಎನಿಸಿದ್ದಾರೆ.ಆರನೇ ಆವೃತ್ತಿಯಲ್ಲಿ ಹೆಚ್ಚು ವಿಕೆಟ್ ಪಡೆದು `ಪರ್ಪಲ್ ಕ್ಯಾಪ್' ಹೊಂದಿರುವ ಆರ್. ವಿನಯ್ ಕುಮಾರ್ (7 ವಿಕೆಟ್) ಈ ಪಂದ್ಯದಲ್ಲೂ ತಮ್ಮ ಸಾಮರ್ಥ್ಯ ಮೆರೆಯಬೇಕಿದೆ. ವೇಗಿಗಳಾದ ಆರ್.ಪಿ. ಸಿಂಗ್, ಜಯದೇವ್ ಉನದ್ಕತ್ ಕೂಡಾ ಆರ್‌ಸಿಬಿ ತಂಡದ ಬೌಲಿಂಗ್ ಅಸ್ತ್ರ ಎನಿಸಿದ್ದಾರೆ.ತಮಿಳುನಾಡಿನಲ್ಲಿ ಶ್ರೀಲಂಕಾದ ಆಟಗಾರರಿಗೆ ಆಡಲು ಅವಕಾಶವಿಲ್ಲದ ಕಾರಣ ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಹಾಗೂ ತಿಲಕರತ್ನೆ ದಿಲ್ಶಾನ್ ಕಣಕ್ಕಿಳಿಯುವುದಿಲ್ಲ. ಮುರಳೀಧರನ್ ಬದಲು ಆರ್‌ಸಿಬಿ ತಂಡದ ಮಾಜಿ ನಾಯಕ ಡೇನಿಯಲ್ ವೆಟೋರಿಗೆ ಅವಕಾಶ ಲಭಿಸುವ ಸಾಧ್ಯತೆಯಿದೆ.ಮತ್ತೊಂದು ಜಯದ ನಿರೀಕ್ಷೆ: ಹಿಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಪಡೆದಿರುವ ಅಮೋಫ ಗೆಲುವು ಸೂಪರ್ ಕಿಂಗ್ಸ್ ತಂಡದ ವಿಶ್ವಾಸವನ್ನು ವೃದ್ಧಿಸಿದೆ. ದೋನಿ ಬಳಗ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋಲು ಕಂಡಿತ್ತು.2010 ಹಾಗೂ 2011ರಲ್ಲಿ ಟ್ರೋಫಿ ಎತ್ತಿ ಹಿಡಿದಿರುವ ಸೂಪರ್ ಕಿಂಗ್ಸ್ ಮೊದಲ ಪಂದ್ಯದ ಸೋಲಿನಿಂದ ಚೇತರಿಸಿಕೊಂಡು ಈಗ ಆರ್‌ಸಿಬಿಗೆ ಸವಾಲೊಡ್ಡಲು ಸಜ್ಜುಗೊಂಡಿದೆ.ಸೂಪರ್ ಕಿಂಗ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮುರಳಿ ವಿಜಯ್ ಹಾಗೂ ಮೈಕ್ ಹಸ್ಸಿ ಕಿಂಗ್ಸ್ ಇಲೆವನ್ ವಿರುದ್ಧ ಮೊದಲ ವಿಕೆಟ್ ಜೊತೆಯಾಟದಲ್ಲಿ 139 ರನ್‌ಗಳನ್ನು ಗಳಿಸಿ ಗೆಲುವು ತಂದುಕೊಟ್ಟಿದ್ದರು. ಹಸ್ಸಿ 54 ಎಸೆತಗಳಲ್ಲಿ ಔಟಾಗದೆ 86 ರನ್ ಗಳಿಸಿದ್ದರು.ಈ ತಂಡದ ಆರಂಭಿಕ ಜೋಡಿ ಬಲಿಷ್ಠವಾಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಇನ್ನುಳಿದಂತೆ ಸುರೇಶ್ ರೈನಾ, ಎಸ್. ಬದರೀನಾಥ್, ನಾಯಕ ದೋನಿ, ಆಲ್‌ರೌಂಡರ್ ಡ್ವೇನ್ ಬ್ರಾವೊ ಅವರನ್ನೂ ನಿಯಂತ್ರಿಸುವ ಸವಾಲು ಆರ್‌ಸಿಬಿ ಬೌಲರ್‌ಗಳ ಮುಂದಿದೆ.

ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಆ್ಯಂಡ್ರ್ಯೂ ಮೆಕ್ ಡೂನಾಲ್ಡ್, ಚೇತೇಶ್ವರ ಪೂಜಾರ, ಕ್ರಿಸ್ಟೋಫರ್ ಬಾರ್ನ್‌ವೆಲ್, ಡೇನಿಯಲ್ ವೆಟೋರಿ, ಹರ್ಷಲ್ ಪಟೇಲ್, ಕೆ.ಪಿ. ಅಪ್ಪಣ್ಣ, ಮೊಯ್ಸಿಸ್ ಹೆನ್ರಿಕ್ಸ್, ಕ್ರಿಸ್ ಗೇಲ್, ಮಯಂಕ್ ಅಗರ್‌ವಾಲ್, ಡೇನಿಯನ್ ಕ್ರಿಸ್ಟಿಯನ್, ಕರುಣ್ ನಾಯರ್, ಅರುಣ್ ಕಾರ್ತಿಕ್, ಜಯದೇವ್ ಉನದ್ಕತ್, ಆರ್. ವಿನಯ್ ಕುಮಾರ್, ಮುರಳಿ ಕಾರ್ತಿಕ್, ಪಂಕಜ್ ಸಿಂಗ್ ಹಾಗೂ ಪಿ. ಪ್ರಶಾಂತ್.ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ದೋನಿ (ನಾಯಕ), ಎಸ್. ಅನಿರುದ್ಧ್, ಬಾಬಾ ಅಪರಾಜಿತ್, ಆರ್. ಅಶ್ವಿನ್, ಎಸ್. ಬದರೀನಾಥ್, ಡ್ವೇನ್ ಬ್ರಾವೊ, ಫಾಫ್ ಡು ಪ್ಲೆಸಿಸ್, ಬೆನ್ ಹಿಲ್ಫೆನೆಸ್, ಜಾಸನ್ ಹೋಲ್ಡರ್, ಮೈಕಲ್ ಹಸ್ಸಿ, ಇಮ್ತಿಯಾಜ್ ಅಹ್ಮದ್, ರವೀಂದ್ರ ಜಡೇಜಾ, ಶಬಾದ್ ಜಕಾತಿ, ಆರ್. ಕಾರ್ತಿಕೇಯನ್, ರೋನಿತ್ ಮೋರೆ, ಅಲ್ಬಿ ಮಾರ್ಕೆಲ್, ಕ್ರಿಸ್ ಮೊರಿಸ್, ಡಿರ್ಕ್ ನ್ಯಾನಸ್, ಸುರೇಶ್ ರೈನಾ, ಅಂಕಿತ್ ರಜಪೂತ್, ವೃದ್ಧಿಮಾನ್ ಸಹಾ, ವಿಜಯ್ ಶಂಕರ್ ಮೋಹಿತ್ ಶರ್ಮಾ ಮತ್ತು ಮುರಳಿ ವಿಜಯ್.

ಸ್ಥಳ: ಚಿದಂಬರಂ ಕ್ರೀಡಾಂಗಣ, ಚೆನ್ನೈ; ಪಂದ್ಯದ ಆರಂಭ: ರಾತ್ರಿ 8.00ಕ್ಕೆ

ಪ್ರತಿಕ್ರಿಯಿಸಿ (+)