ಹ್ಯಾಮಿಲ್ಟನ್‌ರೇಸ್‌ ರಂಗು

7

ಹ್ಯಾಮಿಲ್ಟನ್‌ರೇಸ್‌ ರಂಗು

Published:
Updated:
ಹ್ಯಾಮಿಲ್ಟನ್‌ರೇಸ್‌ ರಂಗು

ಬೆಂಗಳೂರು: ನಿತ್ಯ ಅದೆಷ್ಟೊಂದು ಕಾರು ಓಡುವ ನೈಸ್ ರಸ್ತೆ. ಆದರೆ ಅತ್ತ ತಿರುಗಿ ನೋಡುವವರೆಷ್ಟು? ಆದರೆ ಮಂಗಳವಾರ ಹಾಗೆ ಆಗಲಿಲ್ಲ. ಗುರುಗುಟ್ಟಿದ ಕಾರೊಂದರ ಕಡೆಗೆ ಸಾವಿರಾರು ಕಣ್ಣುಗಳು ನೆಟ್ಟವು. ಕ್ಷಣ ಕ್ಷಣದ ಚಿತ್ರವನ್ನು ಮನದೊಳಗೆ ಇಳಿಸಿಬಿಟ್ಟವು. ಹೌದು; ಅಂಥ ಆಕರ್ಷಣೆ ಇತ್ತಲ್ಲಿ.ಯುವಕ, ಯುವತಿಯರು, ಪುಟಾಣಿ ಮಕ್ಕಳು, ಇಳಿವಯಸ್ಸಿನ ಎಳೆಯರೂ ನಾಮುಂದು, ತಾಮುಂದೆಂದು ಮುನ್ನುಗ್ಗಿ ರಸ್ತೆಯ ಕಡೆಗೆ ನುಗ್ಗಿದರು. ಅದೇ ಫಾರ್ಮುಲಾ ಒನ್ ಮೋಟಾರ್ ರೇಸ್ ಮಾಜಿ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ವೇಗದ ಸೆಳೆತ.ಉದ್ಯಾನ ನಗರಿಯ ರೇಸಿಂಗ್ ಪ್ರೇಮಿಗಳು `ಓ...ನೋಡು ಕಾರ್...ಕಾರ್...~ ಎಂದು ಕಣ್ಣರಳಿಸಿ ಸಂಭ್ರಮಿಸಿದರು. ಕೇವಲ ಟಿವಿ ಪರದೆ ಮೇಲಷ್ಟೇ ನೋಡಿದ್ದ ತಮ್ಮ ರೇಸಿಂಗ್ ಕಣ್ಮಣಿಯನ್ನು ಹತ್ತಿರದಿಂದ ನೋಡುವ ಸಡಗರ ಅವರಿಗೆ. ಟ್ರಾಫಿಕ್ ಜಾಮ್ ಕೂಡ ಲೆಕ್ಕಿಸಲಿಲ್ಲ. ನೈಸ್ ರಸ್ತೆಯುದ್ದಕ್ಕೂ ಹೊಳೆಯಾಗಿ ಹರಿದು ಬಂದರು.ಅವರೆಲ್ಲರ ಆಸೆ ಒಂದೇ ಆಗಿತ್ತು. ತಮ್ಮ ನೆಚ್ಚಿನ ಲೂಯಿಸ್ ಕಾರ್ಲ್ ಡೇವಿಡ್ಸನ್ ಹ್ಯಾಮಿಲ್ಟನ್ ಅವರ ಚಾಲನಾ ಕೌಶಲಕ್ಕೆ ಸಾಕ್ಷಿಯಾಗಬೇಕು ಎನ್ನುವುದು. ವಿಶಿಷ್ಟವಾದ ಪ್ರದರ್ಶನ ರೇಸ್‌ಗೆ `ಕೌಂಟ್ ಡೌನ್~ ಆರಂಭವಾದಾಗ ಯುವಕ- ಯುವತಿಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆಗ ಕೇಳಿ ಬಂದಿದ್ದು `ಹ್ಯಾಮಿಲ್ಟನ್...ಹ್ಯಾಮಿಲ್ಟನ್...~

ಎನ್ನುವ ಘೋಷಣೆ.ಕಾರಿನ ವೇಗವನ್ನು ಆಗಾಗ್ಗೆ ಹೆಚ್ಚು-ಕಡಿಮೆ ಮಾಡುತ್ತಾ ನೆರದವರನ್ನು ರಂಜಿಸಿದ ಹ್ಯಾಮಿಲ್ಟನ್ ಅಭಿಮಾನಿಗಳ ಸಂಭ್ರಮ ರಂಗೇರುವಂತೆ ಮಾಡಿದರು. ಕಾರಿನೊಳಗಿಂದ ಕೈಚಾಚಿ ಕೆಲವರ ಕೈಕುಲುಕಿದರು. ವಿಶ್ವ ಖ್ಯಾತ ಚಾಲಕನ ಸ್ಪರ್ಷದ ಹರ್ಷದಿಂದ ಅನೇಕರ ಕಣ್ಣಲ್ಲಿ ಮಿಂಚಿನ ಸಂಚಲನ.ಮೊದಲ ಸಲ ಮೂರು ಸುತ್ತು ಪ್ರದರ್ಶನ ಮುಗಿಸಿದ ನಂತರ ರಸ್ತೆಯ ಮೇಲೆ ಬಂದು ತಮ್ಮ ಹಸ್ತಾಕ್ಷರದ ಕ್ಯಾಪ್ ಅನ್ನು ಜನರ ಗುಂಪಿನತ್ತ ಎಸೆದರು. ಆಗಲೇ ಭಾರಿ ನೂಕುನುಗ್ಗಲು ಉಂಟಾಯಿತು. ಭದ್ರತೆಯ ದೃಷ್ಟಿಯಿಂದ ಸಂಘಟಕರು ಈ ಉಡುಗೊರೆ ಹಂಚುವ ಪ್ರಕ್ರಿಯೆಗೆ ತಡೆ ಗೋಡೆಯಾದರು. ಆದರೂ ಅಡೆತಡೆಯನ್ನು ಮುರಿದು ಹ್ಯಾಮಿಲ್ಟನ್ ಅವರ ಕಡೆಗೆ ನುಗ್ಗಲು ಯುವಕರ ದಂಡು ಯತ್ನಿಸಿತು.ಇದಕ್ಕೂ ಮುನ್ನ ಆಗಸದಲ್ಲಿ ಹೆಲಿಕಾಫ್ಟರ್‌ವೊಂದು ಹಾರಾಡುತ್ತಿತ್ತು. `ಓ.. ಅಲ್ಲಿ ನೋಡಿ ಹ್ಯಾಮಿಲ್ಟನ್ ಬರುತ್ತಿದ್ದಾನೆ~ ಎಂದು  ಮುಗಿಲತ್ತ ನೋಡಿದವರೇ ಹೆಚ್ಚು. ಆದರೆ ಇಂಗ್ಲೆಂಡ್‌ನ ಚಾಲಕ ಪ್ರತ್ಯಕ್ಷವಾಗಿದ್ದು ಒಮ್ಮೆಲೆ ರಸ್ತೆಯ ನಡುವೆ. ಆನಂತರ ಅವರತ್ತ ಕೇಂದ್ರಿತವಾದ ರೇಸ್ ಪ್ರೇಮಿಗಳ ಚಿತ್ತ ಅತ್ತಿತ್ತ ಆಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry