​ಕ್ರಿಸ್‌ಮಸ್‌ ನೆಪದಲ್ಲಿ

7

​ಕ್ರಿಸ್‌ಮಸ್‌ ನೆಪದಲ್ಲಿ

Published:
Updated:

 


ಡಿಸೆಂಬರಲ್ಲವೆ ಈಗ!

ಇರುಳು ಚೆಲ್ಲಿದ ಹಾಲು ಬೆಳ್ದಿಂಗಳಲ್ಲಿ

ಕಣ್ಣಿಗೆ ಬೀಳುವುದಿಲ್ಲವೇ

ಬೆಳೆದ ಮರಗಳ ತುದಿಯ

ಬೆಳ್ಳಿಯಲೆಗಳ ಮೇಲೆ 

ಗೋಪುರದಲ್ಲಿ ಶಿಲುಬೆ 

-ಪು.ತಿ.ನ. 

 

`ಪ್ರೀತಿಯೇ ದೇವರೆಂದವನ ನೆನೆಯಬೇಕು' ಎಂಬ ಪದ್ಯದ ಈ ಕೊನೆಯ ಸಾಲುಗಳನ್ನು ಓದುವಾಗ `ಕ್ರಿಸ್ತ'ನ ಜೊತೆಗೆ ಬೈಬಲ್ ಉಲ್ಲೇಖಿಸಿರುವ ಮಹಿಳೆಯರನ್ನೂ ನೆನಪಿಸಿಕೊಳ್ಳಬೇಕು ಎನಿಸುತ್ತದೆ. `ಪ್ರೀತಿಯೇ ದೇವರು, ಎಲ್ಲರನ್ನೂ ಪ್ರೀತಿಸಿ, ಒಂದು ಕೆನ್ನೆಗೆ ಹೊಡೆದವನಿಗೆ ಇನ್ನೊಂದು ಕೆನ್ನೆ ಒಡ್ಡಿರಿ' ಎಂದ ಏಸುವಿನ ಕಥೆ ಹೇಳುವ ಬೈಬಲ್‌ನ್ನು ಓದುವಾಗ ಈವ್- ಮಾತೆ ಮೇರಿ ಹಾಗೂ ಮೇರಿ ಮಗ್ದಲೀನಾ ಮೂವರೂ ನಮ್ಮ ಮನಸ್ಸಿನಲ್ಲಿ ಉಳಿಯುತ್ತಾರೆ.

ಇವರಲ್ಲಿ ಮೊದಲನೆಯವಳು `ಈವ್'. ಆಡಂ ಅಥವಾ ಆದಿಮನಿಗೆ ಜೊತೆಯಾಗಿ ಇರಲೆಂದು ಆತನ ಪಕ್ಕೆಲುಬಿನಿಂದ ಭಗವಂತ ಸೃಷ್ಟಿಸಿದ ಸ್ತ್ರೀ ಆಕೆ.  



ಆಡಂನ ತಲೆಯಿಂದಾಗಲೀ, ಈವ್‌ಳ ಕಾಲಿನಿಂದಾಗಲೀ ಪರಸ್ಪರರನ್ನು ಸೃಷ್ಟಿಸಲಿಲ್ಲ ದೇವರು. ಒಬ್ಬರನ್ನೊಬ್ಬರು ಆಳದೆ, ಇನ್ನೊಬ್ಬರನ್ನು ತುಳಿಯದೇ ಇರಲೆಂಬ ಲಿಂಗ ಸಮಾನತೆಯ ಪಾಠವೂ ಈ ಸೃಷ್ಟಿಯ ಹಿಂದೆ ಇದೆ ಅಲ್ಲವೇ? ಆದರೆ ನಂತರ ಆದದ್ದಾದರೂ ಏನು? ಭಗವಂತ ಮುಟ್ಟಬಾರದು ಎಂದಿದ್ದ `ನಿಷಿದ್ಧ ಫಲ'ವನ್ನು ತಿನ್ನುವ `ಈವ್'ಳನ್ನು ಹಾಗೆ ಮಾಡುವಂತೆ ಪ್ರಚೋದಿಸಿದ್ದಾದರೂ ಏನು? ಮನಸ್ಸಿನ ಒಳದನಿಯಂತಿದ್ದ, ನಮ್ಮದೇ ದುರ್ಗುಣ ಆಗಿರಬಹುದಾಗಿದ್ದ, ಇಂದ್ರಿಯ ಆಕಾಂಕ್ಷೆಯ ಸಂಕೇತವಾದ `ಸರ್ಪ' ಅಂತಹ ಕೆಲಸ ಮಾಡಿಬಿಡುತ್ತದೆ.

 

`ಈವ್' ನಿಷಿದ್ಧ ಫಲವನ್ನು ತಿಂದಾಕ್ಷಣ, ಅವಳ ಸಂಗಾತಿ ಆದಿಮನೂ ಅದೇ ಫಲವನ್ನು ತಿನ್ನುತ್ತಾನೆ. ಇಬ್ಬರೂ ದೈವತ್ವದಿಂದ ಮನುಷ್ಯತ್ವಕ್ಕೆ ಇಳಿಯುತ್ತಾರೆ.  ಮನುಷ್ಯ ಸಹಜವಾದ ನಾಚಿಕೆ, ಭಯ, ಪ್ರೀತಿ, ಕೋಪ, ಅಸೂಯೆಗಳು ಅವರನ್ನು ಆವರಿಸಿಕೊಳ್ಳುತ್ತವೆ. ಅದು ಮನುಷ್ಯ ಕುಲದ ಬೆಳವಣಿಗೆಗೆ ಮೊದಲ ಮೆಟ್ಟಿಲಾಗುತ್ತದೆ. ತನ್ನ ಒಳದನಿಗೆ ಮನಸ್ಸು ಕೊಟ್ಟು `ಈವ್' ತೋರಿದ ಅವಿಧೇಯತೆಯು ಕ್ರಿಯಾಶೀಲ ಧೈರ್ಯಕ್ಕೆ ಸ್ಫೂರ್ತಿ ಎನಿಸುತ್ತದೆ. ನೋವು- ನಲಿವು, ಸುಖ- ದುಃಖ, ಜನನ- ಮರಣ ಎಲ್ಲವೂ ಇರುವ ಮಾನವ ಜಗತ್ತಿನ ಸೃಷ್ಟಿಗೆ `ಈವ್'ಳೇ ಕಾರಣಳಾಗುತ್ತಾಳೆ. 

 

ಇನ್ನು ಮಾತೆ ಮೇರಿ. ಮದುವೆಯಾಗುವ ಮುನ್ನವೇ ಗರ್ಭಿಣಿ ಆಗಬೇಕಾದ ಸಂದರ್ಭಕ್ಕೆ ಸಿಲುಕುವ ಕನ್ಯಾಮಣಿ. ಈವ್ ಮತ್ತು ಮಗ್ದಲೀನಾರಿಗಿಂತ ಹೆಚ್ಚು ಜನಪ್ರಿಯೆ. ಎಲ್ಲರೂ ಸ್ತುತಿಸುವವಳು. ತನ್ನ ನಿಶ್ಚಿತಾರ್ಥವಾದ ವರ ಜೋಸೆಫ್‌ನೊಡನೆಯೂ ಧೈರ್ಯದಿಂದ ತನಗಾದ ಅನುಭವವನ್ನು ಹೇಳಿಕೊಳ್ಳುವವಳು.



ತನ್ನಲ್ಲಿ ತಪ್ಪಿಲ್ಲ ಎಂಬುದನ್ನು ದೃಢವಾಗಿ ನಂಬಿ `ಏಸು'ವಿನ ಸಲುವಾಗಿ ಎಲ್ಲವನ್ನೂ ಸಹಿಸುವವಳು. ತನ್ನ ಕಣ್ಮುಂದೆಯೇ ತನ್ನ ಪ್ರೀತಿಯ ಮಗನನ್ನು ಶಿಲುಬೆಗೆ ಏರಿಸಿದಾಗ ಶೋಕದಿಂದ ಅದನ್ನು ಹಲ್ಲು ಕಚ್ಚಿ ಸಹಿಸಿ, ಮಗನ ಪರವಾಗಿ ದೃಢವಾಗಿ ನಿಂತು, ಆತನ ಪುನರುತ್ಥಾನವನ್ನು ಸಂತಸದಿಂದ ಸ್ವೀಕರಿಸುವವಳು. ಮಾತೆ ಮೇರಿಯ ಈ ಎಲ್ಲ ಜೀವನ ಘಟನೆಗಳು ಎಂಥ ಸಂದರ್ಭವನ್ನಾದರೂ ಧೈರ್ಯದಿಂದ, ಸಮಾಧಾನಚಿತ್ತದಿಂದ ಎದುರಿಸುವ ಸಾಮರ್ಥ್ಯದ ಪರಿಚಯವನ್ನು ಇಂದಿನ ತಾಯಂದಿರಿಗೆ ಮಾಡಿಸುತ್ತವೆ.

 

ಇವರಿಬ್ಬರ ನಂತರ ಬರುವ ಮರಿಯಾ ಮಗ್ಧಲೀನಾ ಅಪಾರ ಸೌಂದರ್ಯ ರಾಶಿ. ಹಲವು ವಿವಾದಗಳನ್ನು ಹುಟ್ಟು ಹಾಕಿದಂತಹ ಸ್ತ್ರೀ. ವಿವಾದಗಳೇನೇ ಇರಲಿ, ಮರಿಯಾ ಮಗ್ದಲೀನಾ ತಾನು ಪಾಪಿ, ವ್ಯಭಿಚಾರಿ ಎಂಬೆಲ್ಲ ಆರೋಪಗಳಿಗೆ ಗುರಿಯಾದಾಗ ಏಸುವಿನ ಮೊರೆ ಹೋಗುತ್ತಾಳೆ. ಏಸುವಾದರೂ ಕಲ್ಲನ್ನು ಹೊಡೆಯ ಬಂದ ಜನರ ದೌರ್ಜನ್ಯ ತಡೆದು `ಹೆಣ್ಣಿನಂತೆ ಗಂಡಿಗೂ ಶಿಕ್ಷೆ ಕಟ್ಟಳೆಗಳೇಕೆ ಇಲ್ಲ?' ಎಂದು ಪ್ರಶ್ನಿಸಿ, `ಒಂದು ಪಾಪವನ್ನೂ ಮಾಡದವರು ಬಂದು ಮೊದಲ ಕಲ್ಲನ್ನು ಎಸೆಯಿರಿ' ಎನ್ನುತ್ತಾನೆ. ಉತ್ತರ ಕೊಡಲಾಗದ ಜನಜಂಗುಳಿ, ಕಲ್ಲನ್ನು ಎಸೆಯದೆ ಮಾಯವಾಗುತ್ತದೆ. ಮುಗ್ಧೆ ಮಗ್ದಲೀನಾ ಪಾರಾಗುತ್ತಾಳೆ.



ಅಷ್ಟೇ ಅಲ್ಲ ಏಸುವಿನ ನಿಷ್ಠ ಅನುಯಾಯಿಗಳಲ್ಲಿ ಒಬ್ಬಳಾಗುತ್ತಾಳೆ. ಮುಂದೆ ಏಸುವಿನ ಪುನರುತ್ಥಾನದ ಸಮಯದಲ್ಲೂ, ಅವನ ಮೊದಲ ದರ್ಶನ ಮಗ್ದಲೀನಾಳಿಗೇ. ಇಡೀ ಜಗತ್ತಿಗೇ ಈ ಸುದ್ದಿಯನ್ನು ಹೇಳುವಂತೆ ಕೂಗುತ್ತಾ ಓಡುವ ಮಗ್ದಲೀನಾ, ಶುಭ ಸುದ್ದಿಯ ಸಂದೇಶ ವಾಹಕಳಾಗುತ್ತಾಳೆ. `ಧರ್ಮ ಪ್ರವರ್ತಕರಲ್ಲಿ ಧರ್ಮ ಪ್ರವರ್ತಕಳು' ಎಂದು ಕರೆಸಿಕೊಳ್ಳುತ್ತಾಳೆ.

 

ಈವ್- ಮೇರಿ- ಮಗ್ಧಲೀನಾರ ಈ ವೃತ್ತಾಂತಗಳು ಈಗೇಕೆ ಬೇಕು? ಏಕೆಂದರೆ, ಇಂದಿನ ಮಹಿಳೆಯರಿಗೂ ಪ್ರಸ್ತುತ ಎನಿಸುವಂತಹ ಸೂಕ್ಷ್ಮ ಭಾವನೆಗಳಿಂದ ತುಂಬಿದ ಅವರ ಮನಸ್ಸು, ಯಾವುದೇ ಸಂದರ್ಭವನ್ನೂ ಎದುರಿಸಬಲ್ಲ ಸ್ಥಿರತೆ, ಮುಂದಾಳತ್ವದ ಸಾಮರ್ಥ್ಯ ಎಲ್ಲವನ್ನೂ ಒಳಗೊಂಡ ಮನೋವೈಜ್ಞಾನಿಕ ಅಂಶಗಳು ನಮಗೆ ಸ್ಫೂರ್ತಿಯಾಗುತ್ತವೆ. ಯಾವುದೇ ಧರ್ಮವಾದರೂ ಮಾನವೀಯತೆಯನ್ನೇ ತಳಹದಿಯಾಗಿ ಇರಿಸಿಕೊಂಡಿರುತ್ತದೆ. ಹೀಗಾಗಿ ಧರ್ಮ ಕಟ್ಟಳೆಗಳನ್ನು ತಿರುಚುವುದು, ನಿರ್ದೇಶಿಸುವುದು ಮನುಷ್ಯರೇ ಹೊರತು ದೇವರಲ್ಲ. ಧರ್ಮದ ಹೆಸರಿನಲ್ಲಿ ಮಹಿಳೆಯರ ಶೋಷಣೆ ಮಾಡುವ ಹಲವರಿಗೆ ಈ ಮೂವರ ವೃತ್ತಾಂತಗಳೂ ಪಾಠ ಆಗಬಲ್ಲವು.

 

ಮಹಿಳೆಯರ ಭಾವನೆಗಳು, ಸಾಮರ್ಥ್ಯ, ಸಮಾನತೆಯ ಸತ್ಯವನ್ನು ನಿರ್ಲಕ್ಷಿಸುವ ಅಸಂಖ್ಯಾತರಿಗೆ ಈವ್- ಮೇರಿ- ಮಗ್ದಲೀನಾರ ಕಥೆಗಳು ತಕ್ಕ ಸಂದೇಶ ನೀಡುತ್ತವೆ. ಕೀಳರಿಮೆಯಿಂದ ನರಳುವ, ಸುಳ್ಳು ಆಪಾದನೆಗಳಿಗೆ ಹೆದರುವ, ಆತ್ಮವಿಶ್ವಾಸ ಇರದ ಎಷ್ಟೋ ಮಹಿಳೆಯರಿಗೆ ಇವರು ಸ್ಫೂರ್ತಿ ನೀಡಬಲ್ಲರು.



ಕ್ರಿಸ್‌ಮಸ್‌ನ ಕೇಕ್, ಸಿಹಿ ತಿಂಡಿ, ಕ್ರಿಸ್‌ಮಸ್ ಮರಗಳ ನಡುವೆ ಇಂತಹ ದಿಟ್ಟೆಯರ ಬಗ್ಗೆ ಚಿಂತನೆ ನಡೆಸಿ ಮಾನವೀಯ ಮೌಲ್ಯಗಳನ್ನು ಪ್ರಾಯೋಗಿಕವಾಗಿ ಅಳವಡಿಸಿ ಕೊಳ್ಳದಿದ್ದರೆ, ಕ್ರಿಸ್ತ ಹುಟ್ಟಿದ ದಿನದಂದು ಮತ್ತೆ ನಾವು ಕ್ರಿಸ್ತನನ್ನು ಶಿಲುಬೆಗೆ ಏರಿಸಿದಂತೆಯೇ ಸರಿ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry