‘ಅಂಗವಿಕಲರಿಗೆ ರೂ 60 ಲಕ್ಷ ಅನುದಾನ’

7

‘ಅಂಗವಿಕಲರಿಗೆ ರೂ 60 ಲಕ್ಷ ಅನುದಾನ’

Published:
Updated:

ಬೀದರ್‌: ‘ಜಿಲ್ಲೆಯ ಅಂಗವಿಕಲರ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಿಗೆ ಮಂಜೂರಾದ ಒಟ್ಟು ಅನುದಾನದಲ್ಲಿ ಶೇ 3 ರಷ್ಟು ಮೀಸಲಿಡಲಾಗಿದ್ದು, ಜಿಲ್ಲಾಮಟ್ಟದಲ್ಲಿ ಈವರೆಗೆ ಸುಮಾರು ₨ 60 ಲಕ್ಷಕ್ಕೂ ಅಧಿಕ ಅನುದಾನ ಕ್ರೋಡೀಕರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್‌ ತಿಳಿಸಿದರು.ಜಿಲ್ಲಾಡಳಿತ ನಗರದ ಜಿಲ್ಲಾ ರಂಗ­ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ‌ ತಾಲ್ಲೂಕಿನ ಅಂಗವಿಕಲರಿಗೆ ಮಾಸಾಶನ ಮತ್ತು ಇತರೆ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ  ಮಾತನಾಡಿದರು.ಸರ್ಕಾರ ಅಂಗವಿಕಲರಿಗೆ ಅನೇಕ ಯೋಜನೆ­ಗಳನ್ನು ಜಾರಿಗೆ ತಂದಿದೆ. ಅರ್ಹ ಫಲಾ­ನುಭವಿಗಳಿಗೆ ಅವುಗಳನ್ನು ತಲುಪಿಸಲು ವಿಫಲರಾಗಿದ್ದೇವೆ. ಅಂಗವಿಕಲರ ಕುಂದು­ಕೊರತೆಗಳನ್ನು ಬಗೆಹರಿಸಲು ವಿಶೇಷ ಕಾರ್ಯಕ್ರಮ ನಡೆಸಲು ಎಲ್ಲ ಇಲಾಖೆಗಳಿಂದ ಶೇ 3 ರಷ್ಟು ಅನುದಾನ ಮೀಸಲಿಡ­ಲಾಗಿದೆ ಎಂದು ಹೇಳಿದರು.ಪ್ರತಿಯೊಂದು ಇಲಾಖೆಯಲ್ಲಿ ಮೀಸಲಿಡುವ ಅನುದಾನವನ್ನು ಜಿಲ್ಲಾಮಟ್ಟದಲ್ಲಿ ಕ್ರೋಡಿೀಕರಿಸಿ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಮೂಲಕ ಅಂಗವಿಕಲರ ಬೇಡಿಕೆಗಳು ಈಡೇರಿಸು­ವುದಕ್ಕೆ ವಿಶೇಷ ಕಾರ್ಯಕ್ರಮಗಳು ನಡೆಸಲು ತೀರ್ಮಾನಿಸಲಾಗಿದೆ ಎಂದರು.ಅನೇಕ ಅರ್ಹ ಅಂಗವಿಕಲರ ಪಿಂಚಣಿಯೂ ರದ್ದು ಆಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸಲು ಒತ್ತು ನೀಡಲಾಗಿದೆ. ಗರಿಷ್ಠ ಅಂಗವಿಕಲತೆ ಉಳ್ಳವರಿಗೂ ಪರಿಶೀಲನೆ ನಡೆಸಿ ಅವರಿಗೂ ಸರ್ಕಾರದ ಯೋಜನೆಗಳು ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಅಧಿಕಾರಿಗಳ ಜವಾಬ್ದಾರಿ: ಅಂಗವಿಕಲರಿಗೆ ಮಾಸಾಶನ ಸೇರಿ ಸರ್ಕಾರದ ಸವಲತ್ತು ತಲುಪಿಸುವಲ್ಲಿ ಅನ್ಯಾಯ ಆಗಲು ಅವಕಾಶ ನೀಡಬಾರದು. ಇದು ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಹೇಳಿದರು.ಜಿಲ್ಲಾ ಪಂಚಾಯಿತಿ ಸಿಇಒ ಉಜ್ವಲ್‌­ಕುಮಾರ್ ಘೋಷ್‌ ಮಾತನಾಡಿದರು. ಸಹಾಯಕ ಆಯುಕ್ತ ಕನಕವಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈಜನಾಥ ಮದನಾ, ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿ ಜಿಲ್ಲಾ ಅಧ್ಯಕ್ಷ ಸಂತೋಷ್‌ ಭಾಲ್ಕೆ, ಅನಿಲ್‌ ಬೆಲ್ದಾರ್‌, ದಾಸ ಸೂರ್ಯವಂಶಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry