ಭಾನುವಾರ, ಮಾರ್ಚ್ 7, 2021
29 °C
ಜಯಕರ್ನಾಟಕ ಸಂಘಟನೆ ಕಾರ್ಯಕರ್ತರಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಸನ್ನ ಅವರಿಗೆ ಮನವಿ

‘ಅಕ್ರಮ ಕಟ್ಟಡ ತೆರವುಗೊಳಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಕ್ರಮ ಕಟ್ಟಡ ತೆರವುಗೊಳಿಸಿ’

ಕಾರವಾರ: ನಗರದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಬಹು ಮಹಡಿ ಕಟ್ಟಡಗಳನ್ನು ಹಾಗೂ ಫುಟ್‌ಪಾತ್‌ನ ಅತಿಕ್ರಮಣವನ್ನು ತೆರವು ಗೊಳಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದರು.ನಗರಸಭೆ ವ್ಯಾಪ್ತಿಯಲ್ಲಿ 30 ಅಕ್ರಮ ಕಟ್ಟಡಗಳನ್ನು ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ಅಕ್ರಮ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಸಮಿತಿ ರಚಿಸಿದ್ದರು. ಆದರೆ, ಆ ಸಮಿತಿ ಈವರೆಗೆ ಯಾವುದೇ ಕೆಲಸ ಮಾಡಿಲ್ಲ ಎಂದು ದೂರಿದರು.ಕೆಲವರು ನಕ್ಷೆಗೆ ವಿರುದ್ಧವಾಗಿ ಬಹುಮಹಡಿ ಕಟ್ಟಡ ಕಟ್ಟುತ್ತಿದ್ದಾರೆ. ಕಟ್ಟಡದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿಲ್ಲ ಹಾಗೂ ಶೌಚಾಲಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ನೇರವಾಗಿ ಒಳಚರಂಡಿಗೆ ಸಂಪರ್ಕ ನೀಡಿದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.ಅಕ್ರಮ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ನಗರಸಭೆ ಸಾಮಾನ್ಯ ಹಾಗೂ ವಿಶೇಷ ಸಭೆಗಳಲ್ಲೂ ಚರ್ಚಿಸಲಾಗಿದೆ. ಆದರೆ, ಅಧಿಕಾರಿಗಳು ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗುತ್ತಿಲ್ಲ. ನಗರಸಭೆ ಪೌರಾಯುಕ್ತರು ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಪರಿಶೀಲನೆ ನಡೆಸದೇ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಫುಟ್‌ಪಾತ್‌ ಅತಿಕ್ರಮಣ: ಕೆಲವು ಅಂಗಡಿಕಾರರು ಫುಟ್‌ಪಾತ್‌ ಜಾಗ ಅತಿಕ್ರಮಿಸಿದ್ದಾರೆ. ಬಡ ವ್ಯಾಪಾರಿಗಳು ರಸ್ತೆ ಪಕ್ಕದಲ್ಲಿ ನಿತ್ಯದ ವ್ಯವಹಾರವನ್ನು ಮಾಡಲಾಗುತ್ತಿಲ್ಲ. ತಕ್ಷಣ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಹಾಗೂ ಫುಟ್‌ಪಾತ್‌ ಅತಿಕ್ರಮಣಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೇ ನಗರಸಭೆ ಮುಂಭಾಗ ಧರಣಿ ನಡೆಸಲಾಗುವುದು ಎಂದು ಪದಾಧಿಕಾರಿಗಳು ಎಚ್ಚರಿಸಿದರು.ಗ್ಯಾಸ್‌ ಬಂಕ್‌ ಸ್ಥಾಪಿಸಿ:ಕಾರವಾರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಾವಿರಕ್ಕೂ ಹೆಚ್ಚು ಆಟೊರಿಕ್ಷಾಗಳಿವೆ. ಆದರೆ ವಾಹನಕ್ಕೆ ಬಳಸುವ ಎಲ್‌ಪಿಜಿ ಗ್ಯಾಸ್‌ ಬಂಕ್‌ ಮಾತ್ರ ನಗರದಲ್ಲಿ ಇಲ್ಲ. ಜಿಲ್ಲೆಯ ಅಂಕೋಲಾ, ಕುಮಟಾ, ಭಟ್ಕಳ ತಾಲ್ಲೂಕಿನಲ್ಲಿ ಗ್ಯಾಸ್‌ ಬಂಕ್‌ಗಳಿವೆ. ಹಾಗಾಗಿ ನಗರದಲ್ಲಿ ಬಂಕ್‌ ಸ್ಥಾಪಿಸುವ ಮೂಲಕ ಆಟೊ ಚಾಲಕರ ಸಮಸ್ಯೆಯನ್ನು ಪರಿಹಾರಿಸಬೇಕು ಎಂದು ಮನವಿ ಮಾಡಿದರು. ಸಂಘಟನೆಯ ಸುಭಾಷ್‌ ಗುನಗಿ, ನೀಲೇಶ್‌, ರೋಷನ್ ತಾಂಡೇಲ್, ನಾಗಪ್ರಸಾದ ರಾಯ್ಕರ ಮೊದಲಾದವರು ಇದ್ದರು.***

ಬಡ ವ್ಯಾಪಾರಿಗಳು ನಿತ್ಯ ತರಕಾರಿ ಮಾರಾಟ ಮಾಡಲು ಸೂಕ್ತ ಸ್ಥಳದ ವ್ಯವಸ್ಥೆ ಕಲ್ಪಿಸಬೇಕಿದೆ.

-ದಿಲೀಪ್‌ ಅರ್ಗೇಕರ, 
ಜಿಲ್ಲಾ ಘಟಕದ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.